ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Friday, October 3, 2025

ಕಾಂತರ - ಅಧ್ಯಾಯ ೧

                       ಕಾಂತರದೊಳ ಹೊಕ್ಕಾಗ

ಕಾಂತರ ಎಂಬ ಅದ್ಭುತ ಪ್ರಪಂಚ ಸೃಷ್ಟಿಸಿ, ದೈವ ಆರಾಧನೆ, ದುಷ್ಟ ಸಂಹಾರ ಸಂರಕ್ಷಣೆ ಎಂಬ ಕಥಾಹಂದರದಿಂದ ಮನ್ನಣೆ ಗಳಿಸಿದ ನಂತರ ಮತ್ತೊಮ್ಮೆ ಕಾಂತಾರದ ಹಿಂದಿನ ಕಥೆಯೊಂದಿಗೆ ಹೊಸ ಅವತಾರದಲ್ಲಿ ಬಂದ ಸಿನಿಮಾ ಮತ್ತೆ ದೈವ, ದೈವಾರಾಧನೆ, ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷವನ್ನು ಅದ್ಭುತವಾಗಿ ತೆರೆಯ ಮೇಲೆ ಚಿತ್ರಿಸಿ ಸಿನಿರಸಿಕರಿಗೆ ರಸದೌತಾಣವನ್ನು ಉಣಬಡಿಸಿದ ನಮ್ಮ ರಿಶಬ್ ಶೆಟ್ಟ್ರಿಗೆ ಸಿನಿಮಾ ತುಂಬಾ ಯಶಸ್ಸು ಕಾಣಲಿ ಎಂದು ಹಾರೈಸೋಣ..
ಕಾಂತರ ಸಿನಿಕತೆ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದ ಕತೆ ಹೇಳುತ್ತದೆ..
ಪ್ರಕೃತಿಯೊಂದಿಗೆ ಬಾಳುವ ಜನರೊಂದೆಡೆ ಆದರೆ ಅದೇ ಪ್ರಕೃತಿಯನ್ನು ಗೆಲ್ಲಲು ವಶಪಡಿಸಿಕೊಳ್ಳಲು ಹವಣಿಸುವ ಗುಂಪೊಂದೆಡೆ..
ಪ್ರಕೃತಿಗೆ ಸಮತೋಲನವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಉಂಟು.. ದೈವದ ಭಕ್ತಿ,ಭಯದ ಕಾರಣದಿಂದಲೂ ಸಹ ಪ್ರಕೃತಿಯ ಹಾಳಾದೇ ಉಳಿದಿದೆ ಎನ್ನಬಹುದು..
ಮರ,ಗಿಡ,ಪ್ರಾಣಿ,ಪಕ್ಷಿಗಳನ್ನು ಪೂಜಿಸುವ ಧರ್ಮ ನಮ್ಮದಾಗಿದ್ದು, ಅನೇಕ ದೇವಾನುದೇವತೆಗಳ ವಾಹನದ ರೂಪದಲ್ಲೊ ಆಭರಣದ ರೂಪದಲ್ಲೋ ನಾವು ಪ್ರಾಣಿಗಳನ್ನು ಕಾಣುತ್ತೇವೆ ಇದರ ಹಿನ್ನಲೆ ಆ ದೇವರ ಭಯದಿಂದಾದರೂ ಅವುಗಳನ್ನು ಕೊಲ್ಲದೆ ಅವುಗಳ ಸಂತತಿ ಉಳಿಯಲಿ ಎಂಬ ಆಶಾ ಭಾವನೆ...
ಭೂಮಿಯಲ್ಲಿ ಯಾವಾಗ ಅನಾಚಾರ,ಅಧರ್ಮ ಹೆಚ್ಚಾಗುತೋ ಆಗ ದೇವರು ನಾನಾ ಅವತಾರದಿಂದ ಧರೆಗೆ ಬರುವನು/ತನ್ನ ಗಣವನ್ನು ಕಳುಹಿಸಿ ಇಲ್ಲಿ ಸಮತೋಲನ ಕಾಪಾಡುವನು.. 
ವರಹ,ನಂದಿ,ನರಸಿಂಹ,ವ್ಯಾಘ್ರ ಹೀಗೆ ಹಲವು ಅವತಾರವೆತ್ತ ಕತೆಗಳನ್ನು ನಾವು ಕೇಳಿದ್ದೆವೆ..
ಈ ಸಿನಿಮಾದಲ್ಲೂ ಸಹ ಅರಸನು ಕಾಂತರದಲ್ಲಿರುವ ತೋಟವನ್ನು ವಶಪಡಿಸಿಕೊಳ್ಳಲು ಬಯಸುವನು,ಕಾಂತರದ ಒಳಗಿದ್ದು ಬದುಕುವ ಜನರನ್ನು ಹೊಡೆದು ಆಳಲು ನೋಡುವನು ಅಂತಿಮವಾಗಿ ದೈವ ಕಾಂತರದ ಮುಗ್ಧ ಜನರ ಪರವಾಗಿದ್ದು,ಕಪಟಿ ಮೋಸಗಾರರ ಅಂತ್ಯವಾಗುತ್ತದೆ..
ಸಿನಿಮಾದ ಉದ್ದಕ್ಕೂ ದೃಶ್ಯ ವೈಭವಗಳು ನಮ್ಮನ್ನು ಕಾಂತರ ಲೋಕಕ್ಕೆ ಕರೆದೊಯ್ಯುತ್ತವೆ.. ರಥದ ಮೇಲಿನ ದೃಶ್ಯ, ಮಧ್ಯಂತರದ ಸಮಯದಲ್ಲಿನ ಹುಲಿ ದೃಶ್ಯ, ಗುಳಿಗನ ನಾನಾ ಅವತಾರಗಳ ದೃಶ್ಯ ಮತ್ತೆ ಕ್ಲೈಮಾಕ್ಸ್ ದೃಶ್ಯಗಳು ಹಾಲಿವುಡ್ ಸಿನಿಮಾವನ್ನು ಮೀರಿಸುವ ಮಟ್ಟಕ್ಕಿವೆ ಇದು ಅತೀಶಯೋಕ್ತಿ ಅಲ್ಲ ನೀವು ಸಿನಿಮಾ ನೋಡಿದಾಗ ನಿಮಗೂ ಇದು ಅನುಭವ ಆಗುತ್ತದೆ..
ಒಂದೊಂದು ದೃಶ್ಯ ಅದರ ಹಿನ್ನಲೆಯಲ್ಲಿನ ಮ್ಯುಸಿಕ್ ಅದ್ಬುತವಾಗಿದೆ.. ಸಿನಿಮಾದ ಪ್ರತಿ ಪಾತ್ರಗಳಲ್ಲಿ ಅಭಿನಯಿಸಿದ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ, ಶಟ್ರಿಗೆ ಆಸ್ಕರ್ ಕೊಟ್ರೂ ಕಡಿಮೆನೇ ಹಾಗಿದೆ ಅವರ ಅಭಿನಯ ಮತ್ತು ನಿರ್ದೇಶನ.. ಇನ್ನೊಂದು ಏನು ವಿಶೇಷ ಅಂದರೆ ನೀವು ಶಟ್ರು ಎಲ್ಲಾ ಸಿನಿಮಾ ನೋಡಿದ್ರೆ ಸಾಮಾನ್ಯವಾಗಿ ಕಲಾವಿದರೆಲ್ಲಾರೂ ಅವರೇ ಇರುತ್ತಾರೆ ಈ ಸಿನಿಮಾದಲ್ಲಿ ಅವರಿಗೆ ಹಾಕಿರುವ ಗೆಟಪ್‌ನಲ್ಲಿ ಅವನ್ನು ಗುರುತಿಸವುದು ಕಷ್ಟ ಅಷ್ಟೊಂದು ಚೆನ್ನಾಗಿ ಮೇಕಪ್ ಮಾಡಿದ್ದಾರೆ ಸಿನಿಮದಲ್ಲಿ ಅವನ್ನು ಹುಡುಕಿ ಗುರುತಿಸಿ ನಾನಂತು ಖುಷಿಪಟ್ಟೆ...

ಹಡಗು ತೇಲುಸುವವನಿಗೆ ಮುಳುಗಿಸುದು ಗೊತ್ತು, ಕೋಟೆ ಕಟ್ಟಿದವನಿಗೆ ಅದನ್ನು ಕೇಡುವುದೂ ಸಹ ಗೊತ್ತು, ಈ ಮಾತುಗಳ ಮನುಷ್ಯನ ತಾನು ತನ್ನದು ಅಹಂಕಾರಕ್ಕೆ ಹಿಡಿದ  ಕನ್ನಡಿಯಂತಿವೆ..

ಆದಷ್ಟೂ ಬೇಗ ನಿಮ್ಮ ಹತ್ತಿರದ ಸಿನಿಮಂದಿರಗಳಲ್ಲಿ ಚಿತ್ರ ನೋಡಿ..‌
#kantara #HombaleFilms #shetty_rishab #KantaraChapter1

Tuesday, July 1, 2025

ಜಿಪುಣೆ ಬದಲಾದ ಪಾಠ

 *"ಜಿಪುಣೆ ಬದಲಾದ ಪಾಠ"*

ಒಂದು ದೂರದ ಹಳ್ಳಿಯಲ್ಲೊಂದು ಸರಳ ಶಾಲೆ ಇತ್ತು. ಅಲ್ಲಿ ವಿದ್ಯೆ ನೀಡುತ್ತಿದ್ದವಳು ಶಿಕ್ಷಕಿ ಲಕ್ಷ್ಮಿ. ಚೆನ್ನಾಗಿ ಓದಿದರೂ, ಅವಳು ಬಹಳ ಜಿಪುಣೆ. ಹಣ, ಉಡುಗೆ, ಸಮಯ—ಯಾವುದನ್ನೂ ವ್ಯರ್ಥ ಮಾಡದು. ಮಕ್ಕಳಿಗೆ ಸಹ ಕಡಿಮೆ ಪದಗಳಲ್ಲೆ ಪಾಠ ಮುಗಿಸಿ ಹೊರಡುವಳು.


ಆ ಶಾಲೆಯಲ್ಲಿ ಬಹುತೇಕ ಮಕ್ಕಳು ಬಡವರ ಮಕ್ಕಳು. ಹೊಟ್ಟೆ ತುಂಬ ಊಟವೂ ಲಭ್ಯವಿಲ್ಲದ ಬದುಕು. ಆದರೆ ಅವರ ಮುಖದಲ್ಲಿ ನಗೆಯು ಮರೆಯದ ಚಿತ್ತಾರ. ಅವರು ಲಕ್ಷ್ಮಿ ಮೇಡಂ ಜೊತೆ ಒಂದಿಷ್ಟು ಮಮತೆಯಿಂದ ಮಾತನಾಡಲು ಹವಣಿಸುತ್ತಿದ್ದರು, ಆದರೆ ಅವಳು ಮಾತಾಡಿದರೆ ಖರ್ಚಾದಿತು ಎಂದು ನೋಡುತ್ತಿದ್ದಳು.


ಒಂದು ದಿನ ಲಕ್ಷ್ಮಿ ಮೇಡಂ ಜನ್ಮದಿನ. ಅವಳು ಹಾಗೆಂದು ಯಾರಿಗೂ ತಿಳಿಸಿಲ್ಲ. ಏಕೆಂದರೆ ಶುಭಕೋರಿದವರಿಗೆ ಸಿಹಿ ಹಂಚಲು ದುಡ್ಡು ಖರ್ಚಾಗುತ್ತದೆಂದು. "ಇಲ್ಲಿ ಯಾರು ಆಚರಿಸುತ್ತಾರೆ? ಉಡುಗೊರೆ, ಕೇಕು ಎಲ್ಲವು ವ್ಯರ್ಥ!" ಎಂದುಕೊಂಡಿದ್ದಳು.


ಆ ದಿನ ಬೆಳಗ್ಗೆ, ಮಕ್ಕಳ ಕಣ್ಣಲ್ಲಿ ಒಂದು ನಿರೀಕ್ಷೆಯ ಮಿಂಚು. ಅವಳು ತರಗತಿಗೆ ಬಂದ ತಕ್ಷಣ ಎಲ್ಲಾ ಮಕ್ಕಳು ಗಟ್ಟಿಯಾಗಿ ಕೂಗಿ ಬರೆದ ಪತ್ರಗಳ ಜತೆಯಾಗಿ, "ಹ್ಯಾಪಿ ಬರ್ತ್‌ಡೇ ಮೇಡಂ!" ಎಂದು ಹೇಳಿದರು. ಕೆಲವು ಮಕ್ಕಳ ಕೈಯಲ್ಲಿ ಪುಟಾಣಿ ಹೂಗಳು, ಕೆಲವರು ತಾವು ಕೈಯಿಂದ ಬರೆದ ಕಾರ್ಡ್‌ಗಳು.


ಒಬ್ಬ ಹುಡುಗಿ ತನ್ನ ತಾಯಿ ಮಾಡಿದ ಚೆಲುವಾದ ಲಡ್ಡು ಪೆಟ್ಟಿಗೆಯನ್ನು ನೀಡಿದಳು. ಇನ್ನೊಬ್ಬನು ತಾನು ಬಿಚ್ಚಿದ ಚೀಲದಿಂದ ತನ್ನ ಉಳಿತಾಯದ ಕೆಲವು ರೂಪಾಯಿಗಳಲ್ಲಿ ಕೇಕ್ ತರಿಸಿದನು.  ಮಕ್ಕಳೆಲ್ಲಾ ಮೇಡಂ‌ನಿಂದ ಕೇಕ್ ಕತ್ತರಿಸಿ ಖುಷಿ ಪಟ್ಟರು. ಅವರು ಮೇಡಂನಿಂದ ಚಾಕಲೇಟ್ ಕೂಡ ಬಯಸಿರಲಿಲ್ಲ..


ಲಕ್ಷ್ಮಿ ಮೇಡಂ ಕಣ್ಣಲ್ಲಿ ಆ ಕ್ಷಣ ಕಣ್ಣೀರು ಹರಿದುಬಿಟ್ಟಿತು. ಅವಳು ಒಂದು ಕ್ಷಣ ನಿಶ್ಯಬ್ದವಾಗಿ ಮಕ್ಕಳನ್ನು ನೋಡಿದಳು. ಮಕ್ಕಳ ಮುಂದೆ ತಾನೆಷ್ಟು ಚಿಕ್ಕವಳು ಎಂದು ನಾಚಿಕೆ ಪಟ್ಟಳು.


"ನಾನು ಎಷ್ಟು ಎಡವಿಬಿಟ್ಟೆನು... ಈ ಮಕ್ಕಳ ಬಳಿ ಏನಿಲ್ಲದಿದ್ದರೂ, ಅವರು ಕೊಡುವ ಹೃದಯ ತುಂಬಿದ ಉಡುಗೊರೆ ನನ್ನ ಪಾಲಿಗೆ ಈ ಲೋಕದ ಬೆಸ್ಟ್‌ ಉಡುಗೊರೆ..." ಎಂದು ಮನಸಲ್ಲಿ ಮಾತಾಡಿಕೊಂಡಳು.


ಆ ದಿನದ ನಂತರ ಲಕ್ಷ್ಮಿ ಮೇಡಂ ಬದಲಾಗಿದಳು. ಪಾಠ ಮಾತ್ರವಲ್ಲ, ಪಾಠದ ಜೊತೆಯಲ್ಲಿ ಪ್ರೀತಿ ಬಿತ್ತಲು ಆರಂಭಿಸಿದಳು. ಮಕ್ಕಳಿಗೆ ತೊಡಲು ಬಟ್ಟೆ ಕೊಟ್ಟಳು, ಶಾಲೆಗೆ ಪುಟಾಣಿ ಪುಸ್ತಕಗಳನ್ನ ತರತೊಡಗಿದಳು. ಅವಳು ಕಲಿತ ಪಾಠ ಒಂದೇ—


*"ಉಡುಗೊರೆ ಎಷ್ಟು ದೊಡ್ಡದೋ ಅಲ್ಲ, ಅದು ಎಷ್ಟು ಹೃದಯದಿಂದ ಕೊಡಲಾಗಿದೆ ಅನ್ನೋದು ಮುಖ್ಯ."*

Sunday, May 18, 2025

ಕಂಪನಿ ಆಫ್ ವಿಮೆನ್

 ಪುಸ್ತಕ:- ಕಂಪನಿ ಆಫ್ ವಿಮೆನ್

ಲೇಖಕರು:- ಖುಷ್ವಂತ್ ಸಿಂಗ್

ಅನುವಾದಕರು:- ರವಿ ಬೆಳಗೆರೆ



ವಿ.ಸೂಚನೆ:- “ಇದೊಂದು ಪೋಲಿ ಪುಸ್ತಕ. ಪಕ್ಕಾ ಎ ಗ್ರೇಡ್ ಸಿನಿಮಾ ತರ ಇದೆ. ನೀವು ವಯಸ್ಕರಲ್ಲದಿದ್ದರೆ ಓದಬೇಡಿ, ಓದಿ ರೋಮಾಂಚಿತರಾಗಲಾರದಷ್ಟು ವಯಸ್ಸಾಗಿದ್ದರೆ ಓದಲೇ ಬೇಡಿ.”


ಮೂಲ ಲೇಖಕರಾದ ಖುಷ್ವಂತ್ ಸಿಂಗ್ ಪ್ರಖ್ಯಾತ ಪತ್ರಕರ್ತರು, ಸಂಪಾದಕರು, ವಕೀಲರು, ಚಿಂತಕರು, ಅದ್ಭುತವಾದ ಬರಹಗಾರರಾಗಿದ್ದವರು. ಇವರ ಪ್ರಸಿದ್ಧ ಪುಸ್ತಕಗಳೆಂದರೆ “ದಿ ಟ್ರೈನ್ ಟು ಪಾಕಿಸ್ತಾನ್, ದಿಲ್ಲಿ, “ ಇವರ ಕಂಪನಿ ಆಫ್ ವಿಮೆನ್ ಪುಸ್ತಕವನ್ನು ಕನ್ನಡಿಸಿದವರು ಮೆಚ್ಚಿನ ಲೇಖಕರು ರವಿ ಬೆಳಗೆರೆ.

ಖುಷ್ವಂತ್ ಸಿಂಗ್ ಮತ್ತು ರವಿ ಬೆಳಗೆರೆ ಅವರು ನಡುವಿನ ಬಾಂದವ್ಯ ದ್ರೋಣಾಚಾರ್ಯ – ಏಕಲವ್ಯ ಅಂತಹದು. ಖುಷ್ವಂತ್ ಸಿಂಗ್ ಅವರಿಗೆ ಬೆಳಗೆರೆ ವಯಸ್ಸಿಗಿಂತ ಎರಡು ಪಟ್ಟು ವಯಸ್ಸಾಗಿದ್ದರೂ ತುಂಬಾ ಆತ್ಮೀಯತೆ.‌ ಬೆಳಗೆರೆ ಅವರ  ದಿಲ್ಲಿ ಪುಸ್ತಕವನ್ನು ಅನುವಾದಿಸಿದರು. ನಂತರ ಅನುವಾದಿಸಿದೇ ದಿ ಕಂಪನಿ ಆಫ್ ವಿಮೆನ್..

ಗೆಳೆಯನಿಂದ ಓದಲು ಪ್ರೇರಣೆಯಾದ ಈ ಪುಸ್ತಕದ ಹೆಸರು ಕೇಳಿ ಮಹಿಳೆಯರೆಲ್ಲಾ ಸೇರಿ ನೆಡೆಸುವ ಕಂಪನಿ/ ಸಂಸ್ಥೆ ಇರಬಹುದು ಎಂದು ಊಹಿಸಿದ್ದೆ. ಆದರೆ ಕಂಪನಿ ಪದಕ್ಕೆ ಸಹಚಾರ್ಯ ಸಹವಾಸ ಎಂದೂ ಅರ್ಥೈಸಿಕೊಂಡಾಗ ನಿಮಗೆ ಪುಸ್ತಕದೊಳಗಿರುವ ವಿಷಯಗಳು ಕಲ್ಪನೆಗೆ ಬರಬಹುದು.. ಪ್ರತಿಯೊಂದು ಜೀವಿಗೂ ಆಹಾರ ವಸತಿ ಎಷ್ಟು ಮುಖ್ಯವೋ ಅಷ್ಟೇ ಲೈಂಗಿಕತೆ..


ಪುಸ್ತಕದ ಪ್ರಮುಖ ಪಾತ್ರವೇ ಮೋಹನ್ ಕುಮಾರ್.. ಅವನ ಜೀವನದ ಪ್ರತಿಯೊಂದು ಹಂತದಲ್ಲಿ ಬರುವ ಸ್ತ್ರೀಯರು ಅವರೊಂದಿಗೆ ಅವನು ಅನುಭವಿಸಿದ ಕಷ್ಟಗಿಂತಲೂ ಸುಖದ ಬಗ್ಗೆನೇ ಹೇಳುವ ಪುಸ್ತಕವಿದು. ಪ್ರತಿ ಬಾರಿಯೂ ಹೊಸಬಳು ಅವಳೊಂದಿಗೆ ಆದ ಅನುಭಾವವೂ ಹೊಸದು, ಅದೆಲ್ಲಾ ಓದುತ್ತಾ ತಮ್ಮ ಮನಸ್ಸಿನಲ್ಲಿ ಕಾಮನೆಗಳ ಕಾಮನಬಿಲ್ಲು ಮೂಡದಿದ್ದರೆ ನೀವು ಪುಸ್ತಕ ಓದುವುದು ವ್ಯರ್ಥ ಅನ್ನಿಸಬಹುದು..

ಮೋಹನ್ ಹುಟ್ಟಿನಿಂದಲೇ ಶ್ರೀಮಂತನಲ್ಲ, ಆದರೆ ತನ್ನ ಚೊಚ್ಚಲ ಮಗ ಮೊದಲ ಬಾರಿಗೆ ಮನೆಗೆ ಬರುವನು ಎಂದು ಅವನಿಗಾಗಿ ದಿಲ್ಲಿಯ ಪ್ರತಿಷ್ಟಿತ ಪ್ರದೇಶದಲ್ಲಿ ಎರಡು ಕೋಟಿಯ ಬಂಗಲೆ ಖರೀದಿಸುವ ಶ್ರೀಮಂತ ಉದ್ಯಮಿಯಾಗಿ ಬೆಳೆದವನು.

ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡ ಮೋಹನ್‌ಗೆ ತಾಯಿ ಪ್ರೀತಿ ಸಿಕ್ಕಿದ್ದು ತಂದೆಯಿಂದಲೆ.. ಬಾಲ್ಯದಿಂದಲೇ ಜಾಣನಾಗಿದ್ದ ಮೋಹನ್ ಮುಂದೆ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ ಪ್ರಿನ್ಸ್‌ಟನ್‌ ಹೋಗುವನು ಅಲ್ಲಿದ್ದಷ್ಟು ಕಾಲದಲ್ಲಿ ಅವನು ಲೆಕ್ಕವಿಲ್ಲದಷ್ಟು ಮಹಿಳೆಯರ ಜೊತೆ ಮಲಗಿದ್ದ.. ಮೊದಲನೆಯವಳೇ ಜಾಸ್ಸಿಕಾ ಬ್ರೌನ್.. ಮಂಚದ ಮೇಲೆ ಹೇಗಿರಬೇಕೆಂದು ಕಲಿಸಿದ ಗುರು, ನಂತರ ಪಾಕಿಸ್ತಾನ ಮೂಲದ ಯಾಸ್ಮೀನ್ ವಾಂಚೂ ಎಂಬುವಳು.. ಇವರಾಡುವ ಆಟವನ್ನು ಓದಿಯೇ ಅನುಭವಿಸಬೇಕು.. ಪ್ರಪಂಚದ ನಾನಾ ಭಾಗದ ಹಲವು ಮಹಿಳೆಯರ ಭೇಟಿಯಾಡಿ ಓಳ್ಳೆಯ ನುರಿತ ಆಟಗಾರನಾಗಿದ್ದ ಮೋಹನ್..  ಅಮೆರಿಕದಿಂದ ಮರಳುವ ಮಗನಿಗೆ ಶ್ರೀಮಂತ ಮನೆ ಹುಡುಗಿ ನೋಡಿ ಮದುವೆ ಮಾಡುವ ತಂದೆಗೆ ತನ್ನ ಸೊಸೆಯಿಂದಲೇ ಮನೆಯಿಂದಾಚೆ ಹೋಗುವ ಪ್ರಸಂಗ, ಶ್ರೀಮಂತಿಕೆ ಇದ್ದರೂ ಕೊನೆಯಲ್ಲಿ ಹರಿದ್ವಾರದಲ್ಲಿ ಅನಾಥನಂತೆ ಸಾಯುವ ತಂದೆಯನ್ನು ಕಳೆದುಕೊಂಡ ಮೋಹನ್ ದುಃಖ ಕರಳು ಹಿಂಡುತ್ತದೆ.. ಶಿವಾಲಿಕ್ ಬೆಟ್ಟಗಳ ಮೇಲೆ ಹನಿಮೂನ್‌ನಲ್ಲಿ ಸುಂದರ ಕ್ಷಣಗಳ ನಂತರದಲ್ಲಿ  ಹೆಂಡತಿಯ ಅನ್ಯೋನ್ಯತೆ ಪ್ರೀತಿಯ ಕೊರತೆಯಿಂದ ಇಬ್ಬರು ಮಕ್ಕಳ ನಂತರ ಸಂಸಾರ ಇಬ್ಭಾಗವಾಗುತ್ತದೆ.. ಮನ ಒಪ್ಪದಿದರೂ ತನು ಒಪ್ಪಿತೇ ಎನ್ನುವಂತೆ ಮೋಹನ್‌ನ ಲೈಂಗಿಕ ಬಯಕೆಗಳ ತೃಪ್ತಿಗಾಗಿ ಹಲವಾರ ಜೊತೆ ಸಹವಾಸ ಮಾಡುತ್ತಾನೆ.. ದೈಹಿಕ ಸುಖಕ್ಕಾಗಿ  ಒಂದೆರಡು ತಿಂಗಳಿಗೆ ಜೊತೆಯಲ್ಲಿ ಇರಲು ಬಯಸುವ ಮಹಿಳೆಯರು ಬೇಕಾಗಿದರೆ ಇಚ್ಚೆ ಇರುವವರು ಸಂಪರ್ಕಿಸಿ ಎಂದು ಪತ್ರಿಕೆಯಲ್ಲಿ ಪ್ರಕಟಣೆ ನೀಡುತ್ತಾನೆ.. ದೇಶದ ಮೂಲೆ ಮೂಲೆಯಿಂದ ಬಂದ ಪತ್ರಗಳನ್ನು ಓದಿ ತನಗಿಷ್ಟದವರನ್ನು ಮನೆಗೆ ಕರೆಸಿಕೊಂಡು ಅನುಭವಿಸುತ್ತಾನೆ.. ಮನೆಗೆಲಸದ ಧನೂ.. ಪ್ರೋಪೆಸರ್ ಸರೋಜಿನಿ.. ತಮಿಳುನಾಡು ಮೂಲದ ನರ್ಸ್ ಮೇರಿ ಜೊಸೆಫ್.. ಗೋವಾದ ಮಸಾಜರ್ ಮೋಲಿ ಗೊಮ್ಸ್.. ಶ್ರೀಲಂಕಾದ ಸುಸಾಂತಿಕಾ ಗುಣತಿಲಕೆ.. ಹೀಗೆ ಮೋಹನನ ಜೀವನದಲ್ಲಿ ಬರುವ ಮಹಿಳೆಯರು ಒಬ್ಬರೊಂದಿಗೆ ಕಳೆದ ಆ ಕ್ಷಣಗಳ ವರ್ಣನೆ ಹಾಗೂ ಮಹಿಳೆಯ ತೋಳುಗಳಲ್ಲಿ ಬಂಧಿಯಾಗಿ ಅನುಭವಿಸುವ ಆ ಸುಖದ ಮುಂದೆ ಎಲ್ಲವೂ ಶೂನ್ಯವೆನೋ ಎಂಬುಂತೆ ಬದುಕಿ ಕೊನೆಗಾಲದಲ್ಲಿ ನಿದ್ದೆ ಇಲ್ಲದ ರಾತ್ರಿಗಳ ಕಳೆದು, ನಿದ್ರಾ ಮಾತ್ರೆಗಳಿಂದ ಚಿರನಿದ್ರೆಗೆ ಜಾರುತ್ತಾನೆ..

ಪುಸ್ತಕದಲ್ಲಿ ಮೋಹನನ ರಸಿಕತೆ ಪೋಲಿತನ ನಿಮ್ಮಲ್ಲಿ ಮೋಹವನ್ನು ಜಾಗೃತಗೊಳಿಸುತ್ತದೆ.. ಇದೂ ಪಕ್ಕಾ A+ ಬುಕ್, ಒಮ್ಮೆ ಓದಿ ನೋಡಿ…

Thursday, October 31, 2024

ಮಾಯಾಲೋಕ

ಪುಸ್ತಕ :- ಮಾಯಾಲೋಕ

ಲೇಖಕರು :- ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ನಾನು ಪೂರ್ಣಚಂದ್ರ ತೇಜಸ್ವಿಯವರ 86ನೇ ಜನ್ಮದಿನದಂದು ತೇಜಸ್ವಿಯವರು ಪ್ರಕೃತಿಯೊಂದಿಗೆ ಬಾಳಿ ಬದುಕಿದ್ದ ಅವರ ಮನೆ ನಿರುತ್ತರಕ್ಕೆ ಭೇಟಿ ನೀಡಿದ್ದೆ, ತೇಜಸ್ವಿಯವರ ಅಭಿಮಾನಿಯಾದ ನನಗೆ ಅವರ ಪ್ರತಿಯೊಂದು ಪುಸ್ತಕಗಳು ತುಂಬಾ ಇಷ್ಟ.. ಅವರ ಪುಸ್ತಕಗಳನ್ನು ಓದಿಕೊಂಡು ನನ್ನದೇ ಆದ ಒಂದು ಕಲ್ಪನಾ ಲೋಕವನ್ನು ಸೃಷ್ಟಿಸಿಕೊಂಡಿದ್ದೆ. ನಾನು ಮೂಡಿಗೆರೆಗೆ ಭೇಟಿ ನೀಡಿದಾಗ ನನಗಾದ ಅನುಭವ ಮರೆಲಾಗದ್ದು, ತೇಜಸ್ವಿಯವರ ಮನೆ,ತೋಟ, ಕೆರೆ, ಕಾಡು ಕಂಡು ಕಲ್ಪನೆಗೆ ಮತ್ತೊಷ್ಟು ರಂಗು ಹಂಚಿದವು. ಅಲ್ಲಿಂದ ಕೊಟ್ಟಿಗೆಹಾರದ ತೇಜಸ್ವಿ ಅವರ ಪ್ರತಿಷ್ಠಾನಕ್ಕೆ ಭೇಟಿ ನೀಡಿದ್ದು ಇವೆಲ್ಲ ಜೀವನದಲ್ಲಿ  ಮರೆಯಲಾಗದ ಅನುಭವವನ್ನು ನೀಡಿದೆ.

ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಭೇಟಿ ನೀಡಿದಾಗ ಅಲ್ಲಿ ಎರಡು ಪುಸ್ತಕಗಳನ್ನು ಖರೀದಿಸಿದೆ, ಅದರಲ್ಲೊಂದು ಈ ಮಾಯಾಲೋಕ..

ನಿಜ ನಾನು ಕಲ್ಪಿಸಿಕೊಂಡ ಜಗತ್ತಿಗಿಂತಲೂ ಅಲ್ಲಿನ ಪರಿಸರ ನಿಜಕ್ಕೂ ಮಾಯಾಲೋಕದಂತಿತ್ತು.. ತೇಜಸ್ವಿ ಬಹುತೇಕ ಎಲ್ಲಾ ಪುಸ್ತಕ ಓದಿದ್ದ ನಾನು ಮಾಯಾಲೋಕ & ಹೊಸವಿಚಾರಗಳು ಇವೆರಡೂ ಓದಿರಲಿಲ್ಲ ಏಕೆಂದರೆ ಇವೆರಡರ ಬೆಲೆ ದುಬಾರಿ ಎಂದಷ್ಟೇ..


ಮಾಯಾಲೋಕ “ ಪುಸ್ತಕವನ್ನು ತೇಜಸ್ವಿಯವರ ಸರಣಿಕೆಯ ರೂಪದಲ್ಲಿ ತರಬಯಸಿದ್ದರು, ಆದರೆ ಅವರ ಆಕಾಲಿಕ ಅಗಲಿಕೆಯ ಕಾರಣದಿಂದ ಈ ಪುಸ್ತಕ ಒಂದೇ ಸಂಪುಟದಲ್ಲಿ ರಚನೆಯಾಗಿದೆ. ತೇಜಸ್ವಿ ಬದುಕಿದರೇ ?! ಎಂಬ ಒಂದೇ ಮಾತು ಸಾಕು ಮಾಯಾಲೋಕ ಮುಂದಿನ ಭಾಗ ಯಾವ ರೀತಿ ಇರುತ್ತಿರಬಹುದು ಎಂದು ಮೈ ರೋಮಾಂಚನವಾಗುತ್ತದೆ..

ತೇಜಸ್ವಿಯವರ ಮನೆ, ಹ್ಯಾಂಡ್‌ಪೋಸ್ಟ್, ಮೂಡಿಗೆರೆ ನೋಡಿದ ಮೇಲೆ ಈ ಪುಸ್ತಕ ಓದಿದ್ದು ನನ್ನ ಸೌಭಾಗ್ಯ.. ಪುಸ್ತಕದಲ್ಲಿ ಕತೆ ಈ ಸ್ಥಳಗಳಲ್ಲಿ ನಡೆಯುವುದರಿಂದ ಇನ್ನೂ ಖುಷಿ ನೀಡುತ್ತೆ..


ತೇಜಸ್ವಿ ತಾವು ಜೀವಿಸಿದ ಕಂಡ ಮೂಡಿಗೆರೆಯನ್ನು ಅಲ್ಲಿನ ಜನರ ಜೀವನ ಶೈಲಿಯನ್ನು, ದಿನನಿತ್ಯದ ಸಹಜ ಘಟನೆಗಳ ಮೂಲಕ ಮನಸ್ಸಿಗೆ ಮುಟ್ಟುವಂತೆ ಚಿತ್ರಿಸಿದ್ದಾರೆ, ರಾಜಕೀಯ ವರ್ಗದ ದುರಾಸೆ, ಸರ್ಕಾರಿ ಇಲಾಖೆಯ ಅಧಿಕಾರಗಳ ದರ್ಪ, ರೈತರ ಬವಣೆ, ನೀರಿನ ಸಮಸ್ಯೆ ಮುಂತಾದ ವಿಚಾರಗಳನ್ನು ಹಾಸ್ಯಭರಿತ ತಮ್ಮದೇ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ..

ಕತೆಯಲ್ಲಿ ಮೂಡಿಗೆರೆ ಗೊಂದಲಗೇರಿ ಆಗಿದೆ, ಹೆಸರಿಗೆ ತಕ್ಕಂತೆ ಗೊಂದಲದಿಂದ ಗದ್ದಲದಿಂದ ತುಂಬಿದ ಮಾಯಾಲೋಕವಾದು.. ಕತೆಯಲ್ಲಿ ಬರುವ ಕರಾಟೆ ಮಂಜು, ಕುತಂತ್ರಿ ಅಣ್ಣಪ್ಪಣ್ಣ, ಕುಡುಕ ಭಂಡಾರಿ ಬಾಬು, ಜಗ್ಗಣ್ಣ,  ಪ್ರಕಾಶವಾಣಿ ಪತ್ರಿಕೆಯ ಸಂಪಾದಕ ಪ್ರಕಾಶ, ತರಕಾರಿ ಅಂಗಡಿ ಜಲೀಲ್ ಸಾಬು, ವಲಸೆ ಕಾರ್ಮಿಕ ತಿಮ್ಮಾಬೋಯಿ, ಗ್ರಾಮೀಣ ನೀರು ಸರಜರಾಜು ವ್ಯವಸ್ಥೆಯನ್ನು ನೋಡಿಕೊಳ್ಳುವ ಇಕ್ಬಾಲ್ ಸಾಬು, ಸೈಕಲ್ ರಿಪೇರಿ ಷಾಪಿನ ಜಾನ್ ಬೆಟ್ಟಯ್ಯ, ಕಾರ್ಮಿಕ ನಾಯಕ ಡೆಲ್ಫಿ, ರೈತಸಂಘ ಕಟ್ಟುವ ಉತ್ಸಾಹದಲ್ಲಿರುವ ಶೇಖರ, ರೈತ ಸಂಘದ ಅಧ್ಯಕ್ಷ್ಯ ಮಿಲ್ ಬಸವೇಗೌಡ, ಎಲೆಕ್ಟ್ರಿಸಿಟಿ ಜೆ.ಇ. ಮಲ್ಲಿಕಾರ್ಜುನ, ಅನಿಯಮಿತ ವಿದ್ಯುತ್ ಸರಬರಾಜಿನಿಂದ ನಿದ್ದೆಗೆಟ್ಟು ಉಗ್ರನಾದ ರೈತ ಉಗ್ರಪ್ಪ, ಎಮ್.ಎಲ್.ಎ. ಮಾರಪ್ಪ ಹೇಳುತ್ತಾ ಹೋದರೆ ಮಾಯಾಲೋಕದ ವಿಸ್ತಾರ ಅಪಾರ. ಸೂರಣ್ಣ, ಜಗ್ಗಣ್ಣ, ಅಬ್ಬೂಸ್ ಬೇರಿ, ಅವನ ಹಳೇಕಾಲದ ವಿಕ್ಕಿ ಮೋಪಡ್, ಮಕ್ಕೀಗದ್ದೆ ಬಾಯಮ್ಮ ಇತ್ಯಾದಿ ಇತ್ಯಾದಿ….

 ಮಲೆನಾಡಿನಲ್ಲಿ ಬೇಸಿಗೆ ಬಂತೆಂದರೆ ಮಾಡಲು ಕೆಲಸವಿಲ್ಲದೆ ಜಗಳ ಹೊಡೆದಾಟ ಸಾಮಾನ್ಯದಂತಾಗುತ್ತದೆ. ಊರಳ್ಳಿ - ಮಕ್ಕಿಗದ್ದೆ ನಡುವಿನ ನೀರಿನ ಜಗಳದ ಸನ್ನಿವೇಶಗಳು.

ಪುಸ್ತಕದಲ್ಲಿ ನನಗೆ ಇಷ್ಟವಾಗಿದ್ದು, ಅಣ್ಣಪ್ಪಣ್ಣ & ಕರಾಟೆ ಮಂಜು..

ಮಂಜು ಶ್ರಮಜೀವಿ,ಇವನು ಮಾಡದ ಕೆಲಸವಿಲ್ಲ, ಪಾನಿಪೂರಿ,ಎಳನೀರು,ಆಟೋ ಡ್ರೈವರ್, ಪ್ರೆಸ್‌ ರಿಪೋರ್, ಫೋಟೋಗ್ರಾಫರ್ ಹೀಗೆ ಯಾವುದೇ ಕೆಲಸವಿರಲಿ ಶ್ರದ್ಧೆವಹಿಸಿ ಮಾಡುವನು, ಪೋಲಿ ಹುಡುಗರಿಗೆ ಒದ್ದು ಬುದ್ದಿ ಕಲಿಸ ಹಿರೋ, ತೇಜಸ್ವಿಯವರಿಗೆ ಪೋಟೋ ಸ್ಪಾಟ್ ಹೋಳುವ ಇನ್ಫಾರ್ಮರ್,

ಇನ್ನೂ ಪುಸ್ತಕದ ಉದ್ದಕ್ಕೂ ಬಂದು ಕಾಡುವ,ನಗಿಸುವ, ಅಣ್ಣಪ್ಪಣ್ಣ..‌ ಊರಳ್ಳಿಯ ರೈತ, ತನ್ನ ಗದ್ದೆಯಲ್ಲಿ ಮೆಣಸಿನಕಾಯಿ ಬೆಳೆಗೆ ನೀರು ಹಾರಿಸುವುದು ಅದನ್ನು ಕಾಪಾಡಿಕೊಂಡು ಬರಲು ಮಾಡುವ ಪ್ರಯತ್ನಗಳು, ಇವನ ಕುತಂತ್ರಿ ಬುದ್ದಿ ತೋರಿಸುತ್ತವೆ.. ಹಂದಿಗಾಗಿ ಮಕ್ಕಿಗದ್ದೆ ಬಾಯಮ್ಮನ ಜೊತೆಗೆ ಜಗಳ, ಏಡಿ ಹಿಡಿಯುವ ಪ್ರಸಂಗ, ಅಬ್ಬೂಸ್ ಬೇರಿಯಿಂದ ತಂದ ಮೀನಿನ ಗೊಬ್ಬರ, ಜಾನ್ ಬೆಟ್ಟಯ್ಯನ ಸಲಹೆ ಮೇರೆಗೆ ಗದ್ದೆಗೆ ಕರೆಂಟ್ ಬೇಲಿ ಹಾಕಿ ಮಾಡಿಕೊಂಡ ತಾಪತ್ರಯಗಳು ಓದುಗರಿಗೆ ನಗೆಗಡಲಿನಲ್ಲಿ ತೇಲಿಸುತ್ತವೆ..


ಮಲೆನಾಡಿನಲ್ಲಿ ಬರಗಾಲದಿಂದ ನೀರಿನ ಸಮಸ್ಯೆ, ಕರೆಂಟ್ ಸರಿಯಾಗಿ ನೀಡುತ್ತಿಲ್ಲ ಎಂದು ಕೆಇಬಿ ಅವರೊಂದಿಗೆ ಜಗಳ, ಇದೇ ಸುಸಂದರ್ಭವೆಂದು ಮುಷ್ಕರ ಹೂಡಿವ ರಾಜಕೀಯ ಮುಖಂಡರು, ಮಂಕಾದ ಪತ್ರಿಕೆ ಜೀವ ಬರಬಹುದೆಂದು ಈ ಸುದ್ದಿಯನ್ನು ಪ್ರಕಟಿಸುವ ಪ್ರಕಾಶ, ಹೀಗೆ ಪ್ರತಿಯೊಂದು ಊರಿನಲ್ಲಿ ಈ ಗೊಂದಲಗೇರಿಯ ಘಟನೆಗಳು ನಡೆಯುತ್ತಿರುತ್ತವೆ.. ಕೊನೆಯದಾಗಿ ಧಾರಾಕಾರವಾಗಿ ಸುರಿಯುವ ಮಳೆ ಎಲ್ಲಾ ಸಮಸ್ಯೆಗಳನ್ನು ಅಂತ್ಯಗೊಳಿಸುತ್ತದೆ.‌. ಗದ್ದಲ ಗೊಂದಲಗಳನ್ನು ಬಿಟ್ಟು ಜನ ಹೊಲ ಗದ್ದೆಗಳ ಕಾರ್ಯದಲ್ಲಿ ನಿರತರಾಗುತ್ತಾರೆ..



Monday, March 4, 2024

ಪರೀಕ್ಷೆ -💝- ಫಲಿತಾಂಶ

ಪರೀಕ್ಷೆ -💝- ಫಲಿತಾಂಶ

ಪರೀಕ್ಷೆಯ ಕಾಲ ಎಲ್ಲರಿಗೂ ಬಂದೆ ಬರುತ್ತೇ.. ಯಾವ ಪರೀಕ್ಷೆ ಅನ್ಕೊಂಡ್ರಾ ಮಕ್ಕಳಿಗೆ ಎಸ್ಸೆಲ್ಸಿ ,ಯುವಕರಿಗೆ ಸಿಇಟಿ,‌ ವಧು ಪರೀಕ್ಷೆ, ಸಂಸಾರ ಪರೀಕ್ಷೆ.. ನಾನು ಇಲ್ಲಿ ಹೇಳಲು ಹೋಗುತ್ತಿರುವುದು ಇವೆಲ್ಲಕ್ಕಿಂತ ಭಿನ್ನವಾದ ಪರೀಕ್ಷೆ, ಲವ್ ಪರೀಕ್ಷೆ..

ಅದೇ ಕಾಲೇಜಿನ ಆ ಕನಸಿನ ಹುಡುಗಿಯ ಬಗ್ಗೆ ಮತ್ತೊಂದು ವಿಚಾರ ಹಂಚಿಕೊಳ್ಳೊಣ ಎಂದು ಬರೆಯುತ್ತಿದ್ದೆನೆ.. ಈಗಾಗಲೇ ಅವಳ ಬಗ್ಗೆ ಒಂದೆರೆಡು ಬಾರಿ ಬರೆದಿದ್ದೇನೆ, ಹೌದು ಇವಳು ಅವಳೇ.. ಅದೇ ಕಾಲೇಜಿನ ಗೇಟ್ ಬಳಿ ಕಪ್ಪು ಸೀರೆಯನ್ನುಟ್ಟ ನನ್ನ ಚೆಲುವೆ, ಕಾಲೇಜು ಮುಗಿಯುವ ಕಾಲ ಬಂದಿದ್ದರು ಒಬ್ಬರನ್ನೊಬ್ಬರು ಒಮ್ಮೆಯೂ ಮಾತನಾಡಿಸಲಿಲ್ಲ ನಾವು.. ನಾನು ನಮ್ ಗ್ಯಾಂಗ್‌ನ ಮುಂದೆ ಅವಳೆ ನನ್ ಹುಡ್ಗಿ ಕಣ್ರೋ ಅಂತ ದೊಡ್ಡದಾಗಿ ಬಿಲ್ಡಪ್ ಕೊಡ್ತಿದ್ದೆ.‌ ಅವರೂ ಸಹ ಅವಳು ಬಂದಗೆಲ್ಲಾ ನಿನ್ ಹುಡ್ಗಿ ಬಂದ್ಳು ನೋಡೋ ಅಂತ ಹೇಳ್ದಾಗೆಲ್ಲಾ ತುಂಬಾ ಖುಷಿ ಪಡುತ್ತಿದ್ದೆ.. ಅವಳ ಎದುರಿಗೆ ಬಂದಾಗ ಅವಳ ಕಣ್ನೋಟ ನೋಡಿ ನನಗೆ ಮಾತೇ ಬರುತ್ತಿರಲಿಲ್ಲ.. ಭಯ ಆಗುತ್ತಿತ್ತು ಅಂತ ನಾನು ಒಪ್ಪಿಕೊಳ್ಳುತ್ತೇನೆ.. ಕಾಲೇಜಿನ ಕೊನೆ ಪರೀಕ್ಷೆ ಬಂದೇ ಬಿಟ್ಟಿತ್ತು.. ಪರೀಕ್ಷೆ ಸಿದ್ದತೆಗಾಗಿ ಕಾಲೇಜಿಗೆ ರಜೆಯೂ ಕೊಟ್ಟಾಯಿತು.. ಪರೀಕ್ಷೆ ಮುಗಿಯುದರೊಳಗೆ ನನ್ನಾಕೆಗೆ ಮಾತಾಡಬೇಕು ಅನ್ಸಿಸುತ್ತಿತ್ತು, ಅವಳಿಗೂ ಹಾಗೆಯೇ ಅನ್ಸಿತ್ತಿತ್ತು ಅಂತೆ… ಎಲ್ಲಾರೂ ಹಾಲ್ಟಿಕೇಟ್ ಪಡೆಯಲು ಎಲ್ಲಾರೂ ಕಾಲೇಜಿಗೆ ಹೋಗಿದ್ವಿ. ಅದೃಷ್ಟಕ್ಕೆ ಅವಳು ಸಹ ಅಂದೇ ಬಂದಿದ್ದಳು.. ಸರದಿ ಸಾಲಿನಲ್ಲಿ ನಾನು ಅವಳ ಹಿಂದೆಯೇ ನಿಂತಿದ್ದೆ. ಅದರೆ ಆವತ್ತೂ ಮಾತನಾಡಲಿಲ್ಲ.. ಅವಳು ನನ್ನ ಮುಂದೆ ನಿಂತು ನಾನು ಆಡಿದ ಮಾತುಗಳನ್ನೆಲ್ಲಾ ಕೇಳಿಸಿಕೊಂಡು ಮುಂದೊಂದು ದಿನ ಅದನ್ನೆಲ್ಲಾ ಹೇಳಿದಾಗ ತುಂಬಾ ಖುಷಿ ಪಟ್ಟಿದ್ದೆ..

ಪರೀಕ್ಷೆಗಳು ಪ್ರಾರಂಭವಾದವು ಆದರೆ ನಾನು ಅವಳಿಗೆ ಮಾತನಾಡಿಸಬೇಕೆಂಬ ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ ಎಂದು ತಿಳಿದುಕೊಂಡಿದ್ದೆ.. ಪರೀಕ್ಷೆಯ ಮಧ್ಯದ ಒಂದು ದಿನ ಸಂಜೆ ನಮ್ ತರ್ಲೆ ಗ್ಯಾಂಗ್ನ ಗೆಳೆಯನೊಬ್ಬ ಅವಳ ಪೋನ್ ನಂಬರ್ ಸಿಕ್ಕಿದೆ ಎಂದು ಕಾಡಿಸಲು ಪ್ರಾರಂಭಿಸಿದ.. ನಂಬರ್ ಬೇಕೆಂದರೆ ಒಂದು ಷರತ್ತು.. ಅವಳಿಗೆ ನಮ್ಮ ಮುಂದೆಯೇ ಕರೆ ಮಾಡಿ ಮಾತಾಡಬೇಕು ಅದೂ ಲೌಡ್‌ಸ್ಪಿಕರ್‌ನಲ್ಲಿ ಹಾಗಿದ್ದರೆ ಕೊಡುತ್ತೇನೆ ಎಂದನು.. ಮರುಭೂಮಿಯಲ್ಲಿ ನೀರು ಹುಡುಕುವವನಿಗೆ ಓಯಸಿಸ್ ಸಿಕ್ಕಂತಿತ್ತು ನನ್ನ ಪರಿಸ್ಥಿತಿ.. ಆಯಿತು ಕೊಡ್ರೋ ಏನಾದರೂ ಆಗಲಿ ಮಾತಾಡಿಸೋಣವೆಂದು ನಿರ್ಧರಿಸಿ ಕರೆ ಮಾಡಿದೆ.. ಹಲೋ ನಾನು.. ಹೇಗಿದ್ದಿಯಾ.. ಪರೀಕ್ಷೆ ಚೆನ್ನಾಗಿ ಬರೆದೆಯಾ..‌ ನಾಳೆಯ ಪರೀಕ್ಷೆಯ ಪ್ರಶ್ನೆಗಳು ಸಿಕ್ಕಿವೆ ಅದನ್ನು ನಿನಗೆ ಹೇಳೋಣಂತ ಕಾಲ್ ಮಾಡ್ದೆ ಅಂದೆ.. ಅವಳು ನನ್ನ ಜೊತೆ ಆತ್ಮೀಯವಾಗಿ, ನಿರ್ಭೀತಿಯಿಂದ, ಪರಿಚಯಸ್ಥರ ಜೊತೆ ಮಾತನಾಡುವಂತೆ ಏಕವಚನದಲ್ಲೇ ಮಾತನಾಡಿದಳು.. ಅವಳ ಮಾತುಗಳನ್ನು ಕೇಳಿಸಿಕೊಂಡ ನಮ್ ಗ್ಯಾಂಗ್‌ಗೆ ಖುಷಿಯ ಜೊತೆ ಸಂಶಯ..

ನೀವು ಇದೇ ಮೊದಲ ಬಾರಿಗಾ ಮಾತಾಡತ್ತಿರೋದು..!!? ನೀವು ಮುಂಚೆನೇ ಕಾಂಟ್ಯಾಕ್ಟ್‌ನಲ್ಲಿ ಇದ್ದಿರಿ ಅಲ್ವಾ..!!? ನಿಜ ಹೇಳೊ ಎಂದು ಕಾಡಿಸಿದರು.. ನಿಜ ನಾನು ಅವತ್ತೇ ಮೊದಲು ಅವಳಿಗೆ ಮಾತನಾಡಿಸಿದ್ದು.. ಮೊದಲ ಬಾರಿಗೆನೇ ಇಷ್ಟೊಂದು ಆತ್ಮೀಯವಾಗಿ ಮಾತಾಡೋಕೆ ಹೇಗೆ ಸಾಧ್ಯ. ಅವಳಿಗೂ ನಿನ್ನ ಮೇಲೆ ಪ್ರೀತಿ ಇರಬೇಕೆಂದರು.. ನಾನು ಧ್ವನಿಯಿಂದ ಮಾತಾಡಿದ್ದು ಅವತ್ತಿದ್ದರೂ ಕಣ್ನೋಟದಿಂದ ಅದೆಷ್ಟು ಮಾತಾಡಿದ್ದೆವೋ ಅನ್ಸಿಸುತ್ತಿತ್ತು ಅದಕ್ಕೆ ಇಷ್ಟೊಂದು ಸಲುಗೆ ಬಂದಿರಬಹುದು ಅಂದ್ಕೊಂಡೆ.. ಮಾತಾಡುವ ಪರೀಕ್ಷೆ ಮುಗಿದಾಗಿತ್ತು. ನಾಳೆ ಫಲಿತಾಂಶದ ದಿನ.. ಪರೀಕ್ಷೆ ಬರೆಯಲೂ ಬಂದಾಗ ಅವಳ ಮುಖ ಭಾವ ಹೇಗಿರುತ್ತದೆಯೋ ಎಂದು ನಿದ್ದೆ ಇಲ್ಲದೇ ಬೇಗ ಕಾಲೇಜಿಗೆ ಬಂದು ಗೇಟ್ ಬಳಿಯೇ ಕಾಯುತ್ತಾ ನಿಂತಿದ್ದೆ..‌

ಆ ದಿನ ನಾವಿಬ್ಬರೂ ಎಂದಿಗೂ ಮರೆಯಲೂ ಸಾಧ್ಯವಿಲ್ಲ.. ಅವಳ ಮುಖದಲ್ಲಿ ಆ ನಾಚಿಕೆಯ ನಗು ಕಂಡು ನಾನು ಕಳೆದೋದೆ..

ಸಂಜೆ ಅವಳಿಗೆ ಪ್ರಶ್ನೆಗಳು ಸಿಕ್ಕಿವೆ ಎಂದು ಹೇಳಿದ್ದ ಒಂದೂ ಪ್ರಶ್ನೆಯೂ ಸಹ ಬಂದಿರಲಿಲ್ಲ..

ಆದರೆ ಪರೀಕ್ಷೆಯಲ್ಲಿ ಪಾಸ್‌ ಆಗಿದ್ವಿ….


ಕಾಲೇಜು ಮುಗಿಯಿತು ಮುಂದುವರೆದು ಅವಳ ನಂಬರ್ ಬದಲಾಯಿತು ಮತ್ತೆ ಹೊಸ ತರಹದ ಪರೀಕ್ಷೆ ಪ್ರಾರಂಭವಾಯಿತು.. ಮುಂದೊಂದು ದಿನ ಓಡುವ ಟ್ರಾಫಿಕ್‌ನಲ್ಲಿ ಮನದನ್ನೆಯ ದರ್ಶನದ ಭ್ಯಾಗ ಲಭಿಸಿತು.. ಆ ನೆನಪನ್ನು ಇನ್ನೊಮ್ಮೆ ಹಂಚಿಕೊಳ್ಳುವೆ..

Sunday, March 3, 2024

ಮಹಾಬ್ರಾಹ್ಮಣ

 ಪುಸ್ತಕ:- ಮಹಾಬ್ರಾಹ್ಮಣ

ಲೇಖಕರು:- ದೇವುಡು


ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೇವುಡು ಎಂದೇ ವಿಖ್ಯಾತರಾದ ದೇವುಡು ನರಸಿಂಹಶಾಸ್ತ್ರಿಗಳು ಬಹುಮುಖ ಪ್ರತಿಭೆ. ಭಾರತದ ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಏಕೀಕರಣ, ರಂಗಭೂಮಿ, ಸಾಹಿತ್ಯ ಹೀಗೆ ಹಲವು ಕ್ಷೇತ್ರದಲ್ಲಿ ದುಡಿದ ವ್ಯಕ್ತಿ.. ಇವರ ಅರವತ್ತಕ್ಕೂ ಹೆಚ್ಚಿನ ಕೃತಿಗಳಲ್ಲಿ ಮೂರು ಕೃತಿಗಳು ಕನ್ನಡ ಕಾದಂಬರಿ ವಿಭಾಗದಲ್ಲಿ ಹೊಸ ಅದ್ಯಯನವನ್ನೇ ಸೃಷ್ಟಿಸಿದವು. ಅವುಗಳೆಂದರೆ ಮಹಾಬ್ರಾಹ್ಮಣ,ಮಹಾಕ್ಷತ್ರೀಯ,ಮಹಾದರ್ಶನ.. ಈ ಮೂರು ಕೃತಿಗಳು ವೇದಗಳ ಕತೆ, ಪೌರಾಣಿಕ ಕಥಾವಸ್ತುವನ್ನು ಹೊಂದಿವೆ.‌.

ಇವುಗಳಲ್ಲಿ ನಾನು ಓದಿದ ಪುಸ್ತಕ “ಮಹಾಬ್ರಾಹ್ಮಣ”.


ಪುಸ್ತಕದ ಬಗ್ಗೆ ಹೇಳುವ ಮುನ್ನ ನಾನು ಜಾತಿ,ಧರ್ಮ ಇವುಗಳನ್ನು ಧಿಕ್ಕಾರಿಸುವವನು, ಮನುಷ್ಯನ ಜಾತಿ ಹುಟ್ಟಿನಿಂದಲ್ಲ, ಅವನ ಕರ್ಮಗಳಿಂದ ಎಂಬ ಮನಸ್ಥಿತಿಯವನು.. ಮೊದಲಿಂದನು ಪುಸ್ತಕ,ಕತೆ,ಕಾದಂಬರಿ ಓದುವ ತಿಳಿಯುವ ಹುಚ್ಚು. ಅದರೆ ಇತ್ತಿಚೆಗೆ ಕಳೆದೆರಡು ವರುಷದಿಂದ ಪುಸ್ತಕಗಳಿಂದ ದೂರವಿದ್ದೆ. ಮತ್ತೆ ಮರಳಿ ಓದುವ ಬಯಕೆಯದಾಗ ಸಿಕ್ಕ ಪುಸ್ತಕವೇ ಮಹಾಬ್ರಾಹ್ಮಣ. 

ಪುಸ್ತಕ ಖರೀದಿಸಲು ಹೆಸರೇ ಸ್ಪೂರ್ತಿ, ಪುಸ್ತಕದ ಕಥಾವಸ್ತು ಯಾವುದೂ ಅರಿಯದೇ ಖರೀದಿಸಿ ಹಾಗೇ ವರ್ಷದವರೆಗೆ ಕಪಾಟಿನಲ್ಲಿ ಬಿದ್ದಿತ್ತು. ಮೊನ್ನೆ ಪುಸ್ತಕ ತೆರೆದು ಓದಲು ಪ್ರಾರಂಭಿಸಿದೆ, ಮುಗಿಸುವವರೆಗೂ ನಾನು ಕೃತಯುಗದಲ್ಲಿ ಜೀವಿಸುವವನಾಗಿದ್ದೆ. ಅಷ್ಟು ಸಾರಾಗವಾಗಿ ರೋಚಕವಾಗಿ ಪುಸ್ತಕ ಓದಿಸಿಕೊಂಡು ಹೋಗುತ್ತದೆ..


ಮಹಾಬ್ರಾಹ್ಮಣ ಕೃತಿಯು ವಿಶ್ವಾಮಿತ್ರನ ಜೀವನ ಕುರಿತು ಹೇಳುವ ಕೃತಿ. ಕ್ಷತ್ರೀಯನಾಗಿ ಹುಟ್ಟಿದ ವಿಶ್ವಾಮಿತ್ರ ಮುಂದೆ ಹೇಗೆ ಬ್ರಾಹ್ಮಣನಾಗುವನು, ಮಹಾಬ್ರಾಹ್ಮಣನಾಗುವನು, ಸಪ್ತರ್ಷಿಗಳಲ್ಲೊಬ್ಬನಾಗುವನು, ದೇವತೆಗಳಿಂದ ಬ್ರಹ್ಮರ್ಷಿ ಎನ್ನಿಸಿಕೊಂಡವ ಹಾಗೂ ಲೋಕೋದ್ಧಾರಕ್ಕಾಗಿ ಗಾಯತ್ರಿ ಮಂತ್ರ ಸೃಷ್ಟಿಕರ್ತನಾದ ಎಂಬ ರೋಚಕ ಕಥಾ ಹಂದರವಿದೆ.

ನನಗೆ ವಿಶ್ವಾಮಿತ್ರ ಎಂದರೆ ಮಹಾ ಕೋಪಿಷ್ಠ, ಇಂದ್ರನನ್ನೇ ವಿರೋಧಿಸಿದವ, ಸತ್ಯ ಹರಿಶ್ಚಂದ್ರನನ್ನು ಪರೀಕ್ಷೆಗೆ ಒಳಪಡಿಸಿದವ,ಮೇನಕೆಯಿಂದ ತಪಸ್ಸು ಭಂಗ ಮಾಡಿಕೊಂಡವ ಎಂಬ ಕೆಲ ವಿಚಾರಗಳು ತಿಳಿದಿದ್ದವು ಅದೂ ಸಿನಿಮಾ ನೋಡಿ.. ಆದರೆ ಈ ಪುಸ್ತಕ ಓದಿದ ಬಳಿಕ ವಿಶ್ವಾಮಿತ್ರನ ಮೇಲೆ ಭಕ್ತಿಪೂರ್ವಕ ಗೌರವ ಭಾವ ಮೂಡುತ್ತದೆ, ಸಾಧಿಸುವ ಛಲವಿದ್ದರೆ ವಿಶ್ವಾಮಿತ್ರನಂತಿರಬೇಕು ಅನ್ನಿಸುತ್ತದೆ..

ವಿಶ್ವಾಮಿತ್ರನ ಮೂಲ ಹೆಸರು ಕೌಶಿಕ ಮಹಾರಾಜ. ಇವನು ಕ್ಷತ್ರೀಯನಾಗಿದ್ದ, ಒಮ್ಮೆ ವಸಿಷ್ಠನ ಆಶ್ರಮದ ಹೋಮಧೇನು(ಹಸು- ನಂದಿನಿ) ಕಂಡು ಅದನ್ನು ಪಡೆಯಲು ವಸಿಷ್ಠನ ಆಶ್ರಯದ ಮೇಲೆ ದಾಳಿ ಮಾಡಿ ಸೋತು ಹೋಗುವನು. ವಸಿಷ್ಠನನ್ನು ಸೋಲಿಸಲು ಅಸ್ತ್ರಗಳನ್ನು ಸಂಪಾದಿಸಲು ಹಿಮಾಲಯಕ್ಕೆ ಹೋಗಿ ತಪಸ್ಸನ್ನು ಆಚಾರಿಸಿ ರುದ್ರನನ್ನು,ಅಸ್ತ್ರಗಳನ್ನೂ ಸಂಪಾದಿಸಿಕೊಂಡು ಬಂದು ಮತ್ತೇ ವಸಿಷ್ಠನ ಆಶ್ರಮದ ಮೇಲೆ ದಾಳಿ ಮಾಡಿದನು. ಆಗಲೂ ಸಹ ಸೋತು ಹೋದನು. ನಂತರ ವಸಿಷ್ಠನನ್ನೂ ಮೀರಿಸುವ ತಪಸ್ವಿಯಾಗಲು ಯೋಚಿಸಿ ತಪಸ್ಸನ್ನು ಕೈಗೊಂಡನು. ತಪಸ್ಸಿನ ಪ್ರಭಾವದಿಂದ ವಸಿಷ್ಠರ ಮೇಲಿದ್ದ ದ್ವೇಷ ಕರಗಿ ಹೋಗುತ್ತದೆ.. ಆಗ ಕ್ಷತ್ರೀಯ ಧರ್ಮ ತೊರೆದು ತಾನು ಬ್ರಾಹ್ಮಣನಾಗಲು ತನ್ನನ್ನು ತಾನು ಕೌಶಿಕನ ಬದಲಾಗಿ ವಿಶ್ವಾಮಿತ್ರ ಎಂಬ ಹೆಸರಿನಿಟ್ಟುಕೊಂಡು ನರ್ಮದಾ ತೀರದಲ್ಲಿ ಆಶ್ರಮ ಕಟ್ಟಿಕೊಂಡು ವಾಸಿಸುತ್ತಾನೆ. ತ್ರಿಶಂಕು ಮಹಾರಾಜನನ್ನು ಸದೇಹ ಸಹಿತ ಸ್ವರ್ಗಕ್ಕೆ ಕಳುಹಿಸುವ ಯಾಗ ಯಜ್ಞ ಮಾಡುತ್ತಾನೆ. ಈ ಯಜ್ಞದ ಸಂದರ್ಭದಲ್ಲಿ ವಸಿಷ್ಠ 100 ಮಕ್ಕಳ ಸಾವಿಗೆ ವಿಶ್ವಾಮಿತ್ರನೇ ಕಾರಣನಾಗುತ್ತಾನೆ. ವಸಿಷ್ಠನಿಗೆ ಬಂದ ಪುತ್ರಶೋಕವನ್ನು ತಾನು ಅನುಭವಿಸುದಾಗಿ ಇಂದ್ರನಿಗೆ ಮಾತುಕೊಟ್ಟನು.. ವಸಿಷ್ಠರು ಈಗಾಗಲೇ ಅರ್ಧ ದುಃಖ ಅನುಭವಿಸಿದ್ದು ಉಳಿದರ್ಧ ಅನುಭವಿಸುವುದಾಗಿ ವಿಶ್ವಾಮಿತ್ರ ಒಪ್ಪಿಕೊಳ್ಳುತ್ತಾನೆ..  ಉಳಿದರ್ಧ ಶೋಕವೆಂದರೆ 50 ಮಕ್ಕಳ ಸಾವಿನ ಶೋಕ.. ವಿಶ್ವಾಮಿತ್ರ ತನ್ನ 50  ಮಕ್ಕಳನ್ನು ಆಹುತಿ ನೀಡಿ ಆ ದುಃಖವನ್ನು ಅನುಭವಿಸಬೇಕಾಗುತ್ತದೆ..

ಮುಂದುವರಿದು ವಿಶ್ವಾಮಿತ್ರನ ಆಶ್ರಮಕ್ಕೆ ಮೇನಕೆಯ ಆಗಮನ, ಅವಳು ವಿಶ್ವಾಮಿತ್ರನ ಧರ್ಮಿಣಿಯಾಗಿ ಸಂಸಾರ ನೆಡೆಸುತ್ತಾಳೆ. ಇವರಿಗೆ ಒಂದು ಹೆಣ್ಣು ಮಗು ಜನಿಸಿತ್ತದೆ.. ಮಗುವಾದ ಬಳಿಕ ಮೇನಕೆ ಸ್ವರ್ಗಕ್ಕೆ ಮರುಳುತ್ತಾಳೆ.. ವಿಶ್ವಾಮಿತ್ರ ಆ ಹೆಣ್ಣು ಮಗುವನ್ನು ಕಣ್ವರ ಆಶ್ರಮದಲ್ಲಿ ಬಿಟ್ಟು ತಪಸ್ಸಿಗೆ ತೆರಳುತ್ತಾರೆ. ಮುಂದೆ ಇದೇ ಹೆಣ್ಣು ದುಶ್ಯಾಂತ ಮಹಾರಾಜನಿಗೆ ಮದುವೆಯಾಗುವ ಶಾಕುಂತಲೆ…

ವಿಶ್ವಾಮಿತ್ರನ ತಪಸ್ಸಿನ ಫಲವಾಗಿ ಅವನು ಬ್ರಹ್ಮರ್ಷಿಯಾಗಿ‌, ಬ್ರಾಹ್ಮಣನಾಗುತ್ತಾನೆ.. ಬ್ರಾಹ್ಮಣತ್ವ ಪಡೆಯುವುದು ಎಷ್ಟೊಂದು ಕಷ್ಟದ ಕಾರ್ಯ, ಇದನ್ನು ಮಾನವರು ಸುಲಭವಾಗಿ ಪಡೆಯುವಂತಹ ಆಚರಣೆ, ಮಂತ್ರವನ್ನು ಕಂಡು ಹಿಡಿಯುವ ಸಂಕಲ್ಪ ಮಾಡುತ್ತಾನೆ.. ಹಾಗೂ ಇಂದ್ರನಿಗೆ ಕೊಟ್ಟ ಮಾತಿನ ಪ್ರಕಾರ 50 ಮಕ್ಕಳ ಬಲಿಕೊಡುವ ಮಹತ್ತರ ಕಾರ್ಯ ವಿಶ್ವಾಮಿತ್ರನ ಮುಂದಿರುತ್ತದೆ.. ಮತ್ತೊಮ್ಮೆ ಸ್ವರ್ಗದಿಂದ ಬಂದ ಘೃತಾಚಿ ಎಂಬ ಅಪ್ಸರೆಯಿಂದ 100 ಮಕ್ಕಳನ್ನು ವಿಶ್ವಾಮಿತ್ರ ಪಡೆಯುತ್ತಾನೆ. ಈ ಮಕ್ಕಳಲ್ಲಿ ಮೊದಲ 50 ಮಕ್ಕಳನ್ನು ಆಹುತಿ ನೀಡುವುದಾಗಿ ಹಾಗೂ ಅಂತಹ ಸಂದರ್ಭ ಯಾವಾಗ ಬಂದಿತೋ ಎಂದು ಕಾದಿರುವಾಗ ಒಮ್ಮೆ ಸತ್ಯಹರಿಶ್ಚಂದ್ರ ವಿಶ್ವಾಮಿತ್ರರ ಆಶ್ರಮಕ್ಕೆ ಬಂದು ತನಗೆ ಬಂದಿರು ಸಮಸ್ಯೆಗೆ ಯಜ್ಞ ಮಾಡಿ ಪರಿಹಾರ ನೀಡಬೇಕೆಂದು ವಿನಂತಿಸಿಕೊಳ್ಳುತ್ತಾನೆ.. ವಸಿಷ್ಠ, ವಿಶ್ವಾಮಿತ್ರ, ವಾಮದೇವ ಮುಂತಾದ ಬ್ರಹ್ಮರ್ಷಿಗಳೇ ಸೇರಿ ಯಜ್ಞ ಕಾರ್ಯ ನೆರವೇರಿಸಿದರು. ಇಲ್ಲಿ ಯಜ್ಞದ ಸಂದರ್ಭದಲ್ಲಿ ನೆಡೆದ ಒಂದು ಘಟನೆಯಿಂದ ವಿಶ್ವಾಮಿತ್ರನ ಮೊದಲು 50 ಮಕ್ಕಳಲ್ಲಿ ಮತ್ಸರ ಭಾವನೆ ಮೂಡಿರುತ್ತದೆ.. ಕೊನೆಗೆ ಆ ಮಕ್ಕಳು ಮಿಂಚಿನ ಹೊಡೆತಕ್ಕೆ ಬಲಿಯಾಗುತ್ತಾರೆ.. ಸತ್ಯಹರಿಶ್ಚಂದ್ರನು ಶಾಪ ಮುಕ್ತನಾಗುತ್ತಾನೆ.. ಮುಂದುವರೆದು ವಿಶ್ವಾಮಿತ್ರರು ಅಗಸ್ತ್ಯರು ಮಾರ್ಗದರ್ಶನದಿಂದ ಗಾಯತ್ರಿ ಮಂತ್ರದ ಸೃಷ್ಟಿಕರ್ತನಾಗುತ್ತಾನೆ.. ಈ ಮಂತ್ರ ಪಠಣೆಯಿಂದ  ಅನ್ಯವರ್ಗದವರೂ ಸಹ ಸುಲಭವಾಗಿ ಬ್ರಾಹ್ಮಣನಾಗಹುದು ಎಂದು ಲೋಕಕ್ಕೆ ಸಾರುತ್ತಾನೆ..

ಹೀಗೆ ಮಹಾಬ್ರಾಹ್ಮಣ ಕೃತಿಯು ವಿಶ್ವಾಮಿತ್ರನ ಜೀವನದ ಪ್ರಮುಖಾಂಶಗಳನ್ನು ತಿಳಿಸುತ್ತದೆ.. ಗುರು ಶಿಷ್ಯರ ಬಾಂದವ್ಯ, ಸಾಧನೆಗೆ ಸಾವಿರ ಅಡ್ಡಿಗಳಿಂದರೂ ಸಾಧಿಸುವ ಮನಸ್ಸಿದ್ದರೇ ಅಸಾಧ್ಯವೆಂಬುದು ಇಲ್ಲ ಎಂಬ ಪ್ರೇರಣೆಯನ್ನು ನೀಡುತ್ತದೆ. ನಿಮಗೆ ಪೌರಾಣಿಕ ಕತೆಗಳು ಇಷ್ಟವಾದರೆ ಈ ಪುಸ್ತಕವನ್ನು ಒಮ್ಮೆ ಓದಲೇ ಬೇಕು..



Sunday, May 28, 2023

ಬರ್ಮುಡಾ ಟ್ರ್ಯಾಂಗಲ್

 ಪುಸ್ತಕ:- ಬರ್ಮುಡಾ ಟ್ರ್ಯಾಂಗಲ್ಲೇ

ಲೇಖಕರು:- ಪ್ರದೀಪ ಕೆಂಜಿಗೆ


ಪುಸ್ತಕದ ಬಗ್ಗೆ ಮಾತಾನಾಡುವ ಮುನ್ನ ಶ್ರೀಯುತ ಪ್ರದೀಪ್ ಕೆಂಜಿಗೆ ಅವರ ಪರಿಚಯ ಮಾಡಲೇ ಬೇಕು‌‌‌..‌ ಇವರು ಚಿಕ್ಕಮಗಳೂರಿನ ಮೂಡಿಗೆರೆ ಸಮೀಪದ ಕೆಂಜಿಗೆ ಅನ್ನೋ ಊರಿನವರು.. ಮೂಡಿಗೆರೆ ಅಂದಕ್ಷಣ ನೆನಪಾಗೋದು ತೇಜಸ್ವಿ ಅವರು.. ಪ್ರದೀಪ್ ಕೆಂಜಿಗೆ ಅವರು ಕಾಫಿ ತೋಟದ ಕೃಷಿಯ ಜೊತೆ ಸಾಹಿತ್ಯ ಕೃಷಿ ಮಾಡಿ ಜನಪ್ರಿಯ ಗಳಿಸಿದವರು.. ಜಗತ್ತಿನ ಪ್ರಸಿದ್ಧ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡಿಗರ ನೀಡಿದ್ದು ಇವರ ಕೀರ್ತಿ..

ತೇಜಸ್ವಿ ಅವರು ಜೊತೆಗೂಡಿ ಬರೆದ ಪ್ಯಾಪಿಲಾನ್ ಪುಸ್ತಕ ಸರಣಿಗಳಂತು ಅದ್ಭುತವಾಗಿದೆ.. ಪ್ಯಾಪಿ ಹೆಸರು ಕೇಳಿದಕ್ಷಣ ರೋಮಗಳೆಲ್ಲಾ ನೆಟ್ಟಗಾಗುತ್ತವೆ.. ಪ್ಯಾಪಿಲಾನ್ ಪುಸ್ತಕ ಮೂರು ಭಾಗಗಳಲ್ಲಿ ಪ್ರಕಟವಾಗಿದೆ. ಮೊದಲೆರಡು ಪುಸ್ತಕಗಳನ್ನು ತೇಜಸ್ವಿ ಅವರೇ ಅನುವಾದಿಸಿದ್ದಾರೆ ಆಗ ಪ್ರದೀಪ್ ಅವರ ಸಹಾಯಕರಾಗಿದ್ದರು. ಮೂರನೇ ಪುಸ್ತಕದ ವೇಳೆಗೆ ತೇಜಸ್ವಿ ನಮ್ಮನ್ನು ಅಗಲಿದಾಗ ಪ್ರದೀಪ್ ಕೆಂಜಿಗೆ ಅವರೇ ಮೂರನೇ ಪುಸ್ತಕವನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ಆ ಪುಸ್ತಕಗಳಂತು ಅದ್ಭುತವಾಗಿವೆ..‌


" ಬರ್ಮುಡಾ ಟ್ರಿಯಾಂಗಲ್  " ಇದು ಜಗತ್ತಿನ ಅತ್ಯಂತ ನಿಗೂಢ ರಹಸ್ಯಮಯ ಸ್ಥಳಗಳಲ್ಲಿ ಒಂದಾಗಿತ್ತು. ಈ ಸ್ಥಳಗಳಲ್ಲಿ ಜರುಗಿದ ವಿಸ್ಮಯಕಾರಿ ಘಟನೆಗಳನ್ನು ಬೇರೆ ಬೇರೆ ಭಾಷೆಗಳಿಂದ ಸಂಗ್ರಹಿಸಿ ಸರಳ ಸುಲಲಿತ ಕನ್ನಡ ಭಾಷೆಯಲ್ಲಿ ಬರೆದು ಪ್ರಕಟಿಸಿದ್ದಾರೆ.. 

ಬರ್ಮುಡಾ ಅಥವಾ ಡೆವಿಲ್ಸ್ ಟ್ರ್ಯಾಂಗಲ್ ಎನ್ನುವ ಈ ಸಮುದ್ರ ಪ್ರದೇಶ ಅಮೆರಿಕದ ಅಟ್ಲಾಂಟಿಕ್ ತೀರದಲ್ಲಿ ಬರ್ಮುಡಾ, ಮಯಾಮಿ,ಫ್ಲೋರಿಡಾ, ಸಾನ್ ಜುವಾನ್,ಪೋರ್ಟೋರಿಕೋ ದೇಶಗಳ ನಡುವಿನ ತ್ರಿಕೋನ ಪ್ರದೇಶ.. ಇಲ್ಲಿ ಜರುಗಿದ ವಿಸ್ಮಯಕಾರಿ ಘಟನೆಗಳಿಂದ ಈ ಸ್ಥಳಕ್ಕೆ "ಡೆವಿಲ್ಸ್ ಟ್ರ್ಯಾಂಗಲ್", "ಟ್ರ್ಯಾಂಗಲ್ ಆಫ್ ಡೆತ್", "ಅಟ್ಲಾಂಟಿಕ್ ಸಾಗರದ ರುದ್ರಭೂಮಿ" ಎಂದೂ ಸಹ ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಸರ್ಕಾರಿ ದಾಖಲೆಗಳ ಪ್ರಕಾರವೇ ನೂರು ವಿಮಾನಗಳು, ಹಡಗುಗಳು ಯಾವ ಸುಳಿವನ್ನೂ ನೀಡದೇ ಮಾಯವಾಗಿವೆ. ದಾಖಲೆ ಇಲ್ಲದ ಪ್ರಕರಣಗಳೆಷ್ಟೋ…

ಇಲ್ಲಿ ಮಾಯವಾದ ಹಡಗುಗಳು ವಿಮಾನಗಳು ತಾವು ಮಾಯವಾಗುವ ಮುನ್ನ ಕಾಂಪಾಸ್ ಮುಳ್ಳು ಗಡಿಯಾರದಂತೆ ತಿರುಗುವುದಾಗಿ, ಆಕಾಶ ಹಳದಿಯಾಗುತ್ತಿದೆಯೆಂದೋ, ಸಮುದ್ರ ಸಾಮಾನ್ಯದಂತಿಲ್ಲವೆಂದು, ಅರ್ಥವಾಗದ ರೆಡಿಯೋ ಸಂಕೇತಗಳನ್ನು ಕಳಿಸಿ ನಾಪತ್ತೆಯಾಗಿದ್ದಾರೆ..




ಬರ್ಮುಡಾ ಟ್ರ್ಯಾಂಗಲ್‌ನ  ಅದೃಶ್ಯವಾಗುವ ಪ್ರಕರಣಗಳ ಬಗ್ಗೆ ನಾನಾ ತರಹದ ಸಿದ್ದಾಂತ,ವಿವರಣೆ ಕೊಟ್ಟಿದ್ದಾರೆ. ಇಲ್ಲಿನ ಸಾಗರದಲ್ಲಿ ಏಳುವ ದೈತ್ಯಾಕಾರದ ಅಲೆಗಳು ಹಡಗುಗಳ ನಾಶಕ್ಕೆ ಕಾರಣವಾಗಿರಬಹುದು. ಸಮುದ್ರದ ರಾಕ್ಷಸ ಪ್ರಾಣಿಗಳಿಂದ, ಅತಿಪ್ರಬಲವಾದ ಗುರುತ್ವಾಕರ್ಷಣ ಶಕ್ತಿಯಿಂದ ವಿಮಾನಗಳು ಸಾಗರ ತಳ ಸೇರಿರಬಹುದು, ಅಸಾಧಾರಣ ವಿದ್ಯುತ್ಕಾಂತೀಯ ವಲಯದಿಂದ ಎಲೆಕ್ಟ್ರಿಕ್ ಉಪಕರಣಗಳು ನಾಶವಾಗಿ ದುರಂತಗಳಾಗಿರಬಹುದು, ಆಕಾಶದಿಂದ ಅಥವಾ ಸಮುದ್ರ ಲೋಕದಿಂದ ಏಲಿಯನ್‌ಗಳು ಭೂಲೋಕದ ಜನರನ್ನು ತಮ್ಮ ಸಂಶೋಧನೆಗಳಿಗೆ ಪ್ರಯೋಗಪಶುಗಳಾಗಿ ಒಯ್ಯುತ್ತಿದ್ದಾರೆಂದು ಹೀಗೆ ನಾನಾ ರೀತಿಯ ವಿವರಣೆಗಳು ಬರ್ಮುಡಾ ಟ್ರ್ಯಾಂಗಲ್‌ನ ರಹಸ್ಯವನ್ನು ಬಗೆಹರಿಸದೇ ಇನ್ನೂ ನಿಗೂಢತೆ ಭಯ ಹೆಚ್ಚಿಸಿದವು..

ಬರ್ಮುಡಾ ಟ್ರ್ಯಾಂಗಲ್‌ನ ವಿಷಯ ಮುನ್ನಲೆಗೆ ಬರಲು ಕಾರಣ ಅಮೇರಿಕಾ ಪ್ಲೈಟ್-19 ವಿಮಾನ ನಾಪತ್ತೆಯಾದ ಪ್ರಕರಣ.. ಅಟ್ಲಾಂಟಿಕ್ ಸಾಗರದಲ್ಲಿ ಹೊಗುತ್ತಿದ್ದ ವಿಮಾನ ಆಕಸ್ಮಿಕವಾಗಿ ಸಂಪರ್ಕ ಕಡಿತಗೊಳ್ಳುತ್ತದೆ. ಈ ವಿಮಾನದ ಅವಷೇಶ ಹುಡುಕಲು ಹೋದ ಇನ್ನೈದು ವಿಮಾನಗಳು ಸಹ ಅದೃಶ್ಯವಾಗುತ್ತವೆ‌‌. ಈ ಘಟನೆಯ ನಂತರ ಇಂತಹ ಹಲವು ಪ್ರಕರಣಗಳು ದಾಖಲಾದವು..

ಈ ಪ್ರದೇಶದ ಬಗ್ಗೆ ಸಾಹಸಿಗಳು ಹಲವು ಸಂಶೋಧನೆಗಳನ್ನು ಕೈಗೊಂಡರೂ ನಿಖರವಾದ ವಿವರಣೆ ಸಿಗುತ್ತಿರಲಿಲ್ಲ, ಹಡಗುಗಳ ಮುಳುಗಡೆಕ್ಕೆ ಕಾರಣ ನೀಡಿದರೆ ಅದು ವಿಮಾನಗಳ ಪ್ರಕರಣಕ್ಕೆ ತಾಳೆ ಹೊಂದುತ್ತಿರಲ್ಲಿ‌.. ಎರಡನೇ ಮಹಾಯುದ್ಧದ ಸ್ಪೋಟಗಳಾದ ಬಾ‌ಂಬ್‌ಗಳು ಇನ್ನು ಸಾಗರ ತಾಳದಲ್ಲಿ ಇರಬಹುದು ಅವುಗಳ ಸ್ಪೋಟದಿಂದ ಸುನಾಮಿ ರೀತಿಯ ಅಲೆಗಳು ಈ ಭಾಗದಲ್ಲಿ ಬಂದು ಹಡಗುಗಳ ಮುಳಗಿಸಿರಬಹುದು..

ಪ್ರಾಚೀನ ನಾಗರೀಕತೆಯ ಕಾಲದಲ್ಲಿ ಇಲ್ಲೊಂದು ನಾಗರೀಕತೆ ಇದ್ದಿರಬಹುದು ಅವರ ಶಕ್ತಿ ಸ್ಥಾವರಗಳು ( ಅಣು ಶಕ್ತಿ ಸ್ಥಾವರ) ಇನ್ನೂ ಸಾಗರ ತಾಳದಲ್ಲಿ ಕಾರ್ಯ ನಿರ್ವಹಿಸುತ್ತಿರಬಹುದು ಎಂಬುದೂ ಒಂದು ವಾದ..

ವಿಜ್ಞಾನಕ್ಕೆ ಸವಾಲೋಡುವ ಈ ರೀತಿಯ ಹಲವು ಪ್ರದೇಶಗಳಿವೆ. ಜಪಾನ್ ದೇಶ ಬಳಿ ಇದೇ ರೀತಿಯ ನಿಗೂಢವಾಗಿ ಕಣ್ಮರೆಯಾಗುವ ಪ್ರದೇಶಯೊಂದಿದೆ. ಅದರ ಹೆಸರು "ಡ್ರ್ಯಾಗನ್ ಟ್ರ್ಯಾಂಗಲ್", "ಡೇವಿಲ್ಸ್ ಸೀ" ಎಂದು.. ಕಾಕತಾಳೀಯವೆಂಬತೆ ಇದು ಇರುವ ಪ್ರದೇಶ ಮತ್ತು ಬರ್ಮುಡಾ ಟ್ರ್ಯಾಂಗಲ್ ಇರುವ ಒಂದೇ ರೇಖಾಂಶದಲ್ಲಿ ಬರುತ್ತದೆ..

ಬರ್ಮುಡಾ ಟ್ರ್ಯಾಂಗಲ್ 35° ಪೂರ್ವ ರೇಖಾಂಶದಲ್ಲಿದೆ.

ಡ್ರ್ಯಾಗನ್ ಟ್ರ್ಯಾಂಗಲ್ 35° ಪಶ್ಚಿಮ ರೇಖಾಂಶದಲ್ಲಿದೆ.

ಭಾರತದಲ್ಲೂ ಸಹ ಇಂತಹ ಟ್ರ್ಯಾಂಗಲ್ ಇದೆ..‌ ಓಡಿಶಾ ರಾಜ್ಯದಲ್ಲಿ ಅಮಾರ್ಡಾ ಏರ್‌‌ಸ್ಟ್ರಿಪ್ ಎಂಬ ಸ್ಥಳ.. ಇದು ಬ್ರಿಟಿಷ್‌ರಿಂದ ರಚನೆಯಾಗಿದ್ದ ವಿಮಾನದ ರನ್ ವೇ ಆಗಿತ್ತು.. ಇಲ್ಲಿಯೂ ಸಹ ಹಲವು ವಿಮಾನಗಳ ದುರಂತ ಪ್ರಕರಣಗಳಾಗಿವೆ..  ಈ ಎಲ್ಲಾ ಟ್ರ್ಯಾಂಗಲ್‌ಗಳು ಸಹ ಸಮಭಾಜಕ ವೃತ್ತದ ಸಮೀಪದಲ್ಲಿವೆ..

ಈಗ ಈ ಟ್ರ್ಯಾಂಗಲ್‌ನ ಅದೃಶ್ಯ ಶಕ್ತಿಯ ರಹಸ್ಯ ಬಯಲಾಗಿದೆ. ಇಲ್ಲಿ ಯಾವುದೇ ಭೂತ ಪ್ರೇತಗಳ, ದೈವಿಕ ಅತಿಮಾನುಷ ಶಕ್ತಿಗಳಿಲ್ಲ ಎಂಬುದು ಜಗಜಾಹೀರವಾಗಿದೆ..

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಖರವಾದ ಕಾರಣ ಏನಿರಬಹುದು ಎಂದು ತಿಳಿಯಲು ಪ್ರದೀಪ್ ಕೆಂಜಿಗೆಯವರ ಈ ಪುಸ್ತಕ ಓದಿ…





Sunday, May 7, 2023

ಮರೆತುಹೋದ ಸಾಮ್ರಾಜ್ಯ-ವಿಜಯನಗರ

 ಪುಸ್ತಕ :- ಮರೆತುಹೋದ ಸಾಮ್ರಾಜ್ಯ-ವಿಜಯನಗರ ( Forgotten Empire-Vijayanagara )

ಮೂಲ ಲೇಖಕರು :- ರಾಬರ್ಟ್ ಸೆವೆಲ್

ಅನುವಾದ :- ಪ್ರೊ. ವೆಂಕಟಾಚಲ ಶಾಸ್ತ್ರಿ

ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂಬಂತೆ ನಮ್ಮ ಮೂಲ ಅಸ್ಥಿತ್ವದ, ನಮ್ಮ ನೆಲದ ಜ್ಞಾನವಿಲ್ಲದವರ ಸಂಖ್ಯೆ ಹಿಂದೆ ಎಷ್ಟಿತೋ ಇವತ್ತಿಗೂ ಅಷ್ಟೇ ಇದೆ ಎನ್ನಲು ಈ ಪುಸ್ತಕವೇ ಸಾಕ್ಷಿ.. ಕಲೆ,ಸಾಹಿತ್ಯ, ವಾಸ್ತುಶಿಲ್ಪ, ವೈದ್ಯಕೀಯ, ವೈಜ್ಞಾನಿಕ ಎಲ್ಲಾ ಕ್ಷೇತ್ರಗಳಲ್ಲಿ ಪಾಶ್ಚಾತ್ಯರಿಗೂ ಮೀರಿಸುವ ಜ್ಞಾನ ಭಂಡಾರ ನಮ್ಮಲ್ಲಿದ್ದರೂ ಅದನ್ನು ದಾಖಲಿಸುವ ಪ್ರಯತ್ನ ಭಾರತೀಯರಿಂದ ಆಗಿದ್ದು ತೀರ ವಿರಳ. ಭಾರತದ ಇತಿಹಾಸವನ್ನು ವಿದೇಶಿ ಬರವಣಿಗೆಯಲ್ಲಿ ಹುಡುಕಿ ತಿಳಿಯುವ ಪರಿಸ್ಥಿತಿ ನಮ್ಮದಾಗಿದೆ. ನಮ್ಮದೇ ಇತಿಹಾಸವನ್ನು ಓದಿ ಹೊಸ ಆವಿಷ್ಕಾರಗಳನ್ನು ಸೃಷ್ಟಿಸಿದೆ ಎಂದು ಪುರಸ್ಕಾರ ಪಡೆದ ಹಲವು ವಿದೇಶಿಗರ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.. ನಮ್ಮವರಿಂದ ಮರೆತು ಮರೆಯಾಗಿದ್ದ ಇತಿಹಾಸದ ಸುವರ್ಣಯುಗವನ್ನು ನೆನಪಿಸಿ ಕಣ್ ತೆರೆಸಿದ ಸೆವೆಲ್‌ ಅವರಿಗೆ ಧನ್ಯವಾದ..

 ಭಾರತದ ಇತಿಹಾಸದಲ್ಲಿ ಕ್ರಿ.ಶ 1336 ಕಾಲಘಟ್ಟದಲ್ಲಿ ಒಂದು ರೋಚಕ ಘಟನೆ ಜರುಗಿತು. ಇಡೀ ದಕ್ಷಿಣ ಭಾರತದ ರಾಜಕೀಯ ಸ್ಥಿತಿಯಲ್ಲಿ ಬದಲಾವಣೆಯ ಬಿರುಗಾಳಿ ಬೀಸಿದ ಕಾಲ.. ಅದ್ಭುತ ಇತಿಹಾಸ ಸೃಷ್ಟಿಸಿದ ಅಮೋಘ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದ ಅನುಪಮ ವರ್ಷ.. 

ಭಾರತ ಮಧ್ಯಕಾಲೀನ ಇತಿಹಾಸದಲ್ಲಿ ಮುಸ್ಲಿಂ ಆಡಳಿತದ ಪ್ರಾಬಲ್ಯವಿದ್ದ ಸಂದರ್ಭದಲ್ಲಿ ಹಿಂದೂ ಧರ್ಮದ ಉಳಿವಿಗಾಗಿ ಆಖಂಡ ದಕ್ಷಿಣ ಭಾರತದ ಉದ್ದಗಲಕ್ಕೂ ಗಡಿಹೊಂದಿದ ವಿಜಯನಗರ ಸಾಮ್ರಾಜ್ಯ ಬೆಳಕಿಗೆ ಬರುತ್ತದೆ‌. ಸಾಮ್ರಾಜ್ಯ ಸ್ಥಾಪನೆಯ ಬಗ್ಗೆ ಹಲವು ಐತಿಹ್ಯಗಳು ದಂತಕಥೆಗಳಿವೆ. ನಾವೆಲ್ಲ ಕೇಳಿರುವಂತೆ ಮೊಲ ಬೇಟೆನಾಯಿಯ ಅಟ್ಟಿಸಿಕೊಂಡು ಹೋದ ಕತೆ, ವಿದ್ಯಾರಣ್ಯರ ಮಾರ್ಗದರ್ಶನದಂತೆ ಸಾಮ್ರಾಜ್ಯ ಸ್ಥಾಪನೆ, ಮುಸ್ಲಿಂ ಸೇನೆಯಲ್ಲಿದ್ದ ಇಬ್ಬರು ಯುವಕರು ಆನೆಗುಂದಿಗೆ ಬಂದು ನೆಲೆಸಿ ಹೊಸ ಸಾಮ್ರಾಜ್ಯ ಕಟ್ಟಿದ ಕತೆ. ಗುರು ವಿದ್ಯಾರಣ್ಯರ ಸೇವೆ ಮಾಡುತ್ತಿದ್ದ ಕುರುಬರ ಹುಡುಗ ಈ ಸಾಮ್ರಾಜ್ಯ ಸ್ಥಾಪಿಸಿದ ಹೀಗೆ ಹಲವು ಸ್ವಾರಸ್ಯಕರ ಘಟನೆಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.. 

ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ಹಲವು ಇತಿಹಾಸಕಾರರ ಹೇಳಿಕೆಗಳಲ್ಲಿ ಗೊಂದಲಗಳಿರುವುದರಿಂದ ಸ್ಥಾಪನೆಯ ಸ್ಪಷ್ಟವಾಗಿ ಮಾಹಿತಿ ಸಿಗುವುದಿಲ್ಲ.. ಆನೆಗುಂದಿಯಿಂದ ಈ ಸಾಮ್ರಾಜ್ಯ ಬುನಾದಿ ಪ್ರಾರಂಭವಾಗಿ ವಿದ್ಯಾರಣ್ಯರ ಆಶೀರ್ವಾದದಿಂದ ಬೆಳೆಯಿತು ಎಂಬುದು ನಿರ್ವಿವಾದವಾಗಿದೆ…

ವಿಜಯನಗರ ಸಾಮ್ರಾಜ್ಯ ಎಂದಾಕ್ಷಣ ಮುತ್ತು ರತ್ನಗಳನ್ನು ಸಂತೆಗಳಲ್ಲಿ ರಾಶಿ ಹಾಕಿ ಮಾರವಷ್ಟು ಶ್ರೀಮಂತ ಸಾಮ್ರಾಜ್ಯ ಎಂದು ನಾವೆಲ್ಲ ಓದಿದ್ದೇವೆ. ಆ ಸಂಪತ್ತಿನ ಮೂಲದ ಬಗ್ಗೆ ಹಲವು ರೋಚಕ ಘಟನೆಗಳು ಇಲ್ಲಿವೆ.. ಕೋರಮಂಡಲ ಸಮುದ್ರದಲ್ಲಿನ ದ್ವೀಪದಲ್ಲಿಯೊಂದರಲ್ಲಿ ವಜ್ರ ವೈಡೂರ್ಯ ದೊರೆಯಿತೆಂದು ಅಲ್ಲಿಗೆ ಹೋಗಲು ರಾಜ ಕಲ್ಲಿನ ಸೇತುವೆ ಕಟ್ಟಿಸಿದ್ದ ನಂತರ ಅದು ಸಮುದ್ರದಲ್ಲಿ ಮುಳುಗಿತೆಂದು ಹೀಗೆ ಹಲವು ರೋಚಕ ಮಾಹಿತಿಯನ್ನು ನೀಡಲಾಗಿದೆ. ನಮಗೆ ಜಗತ್ ಪ್ರಸಿದ್ಧ ಕೊಹಿನೂರ್ ವಜ್ರದ ಬಗ್ಗೆ ಗೊತ್ತು, ಇದು ವಿಜಯನಗರದ ನೆರೆಯ ರಾಜ್ಯವಾಗಿದ್ದ ಹೈದ್ರಾಬಾದ್ ಸಂಸ್ಥಾನಕ್ಕೆ ಸೇರಿದ್ದ ಗೋಲ್ಕೊಂಡ ಕೋಟೆಯಿಂದ ದೆಹಲಿ ಸುಲ್ತಾನರ ವಶಕ್ಕೆ ಹೋಗುತ್ತದೆ. ಗೋಲ್ಕೊಂಡದ ಸಮೀಪದಲ್ಲಿ ವಜ್ರದ ಬೃಹತ್ ಗಣಿ ಇದ್ದಿತು ಅಲ್ಲಿಂದ ವಿಜಯನಗರಕ್ಕೆ ಬೆಲೆಬಾಳುವ ವಜ್ರ ವೈಡೂರ್ಯಗಳು ಬರುತ್ತಿದ್ದವು, ಹೀಗೇ ಸಂಪತ್ತಿನ ಮೂಲದ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಪ್ರೌಢದೇವರಾಯ,ಕೃಷ್ಣದೇವರಾಯನ ಕಾಲದಲ್ಲಿನ ಸುವರ್ಣಯುಗ ಧಾರ್ಮಿಕ ಸೌಹಾರ್ದತೆ, ಆರ್ಥಿಕ ಪ್ರಗತಿ, ಸಾಮ್ರಾಜ್ಯದ ವಿಸ್ತರಣೆ, ಪೋರ್ಚುಗೀಸ್‌ರ ನಡುವಿನ ಬಾಂದವ್ಯ,ಗೋವ ಹಾಗೂ ಅನ್ಯ ದೇಶಗಳೊಂದಿಗೆ ವಿಜಯನಗರದ ಸಹಸಂಬಂಧ ಹೀಗೆ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ವಿಜಯನಗರ ಸಾಮ್ರಾಜ್ಯದ ಅವನತಿಗೆ ಸಂಬಂಧಿಸಿದ ಹಲವು ಕುತೂಹಲಕಾರಿ ಘಟನೆಗಳು, ಕೃಷ್ಣ ನದಿಯ ಉತ್ತರಕ್ಕಿದ್ದ ಮುಸ್ಲಿಂ ಸಾಮ್ರಾಜ್ಯದೊಂದಿಗಿನ ವೈರತ್ವ, ಗೋವಾದ ವ್ಯಾಪಾರ ಸಂಪರ್ಕ ಕಡಿತದಿಂದ ಆರ್ಥಿಕ ಹಿನ್ನಡೆ ಹಾಗೂ ಸಾಮ್ರಾಜ್ಯ ಅವನತಿಗೆ ಕಾರಣವಾದ ರಕ್ಕಸತಂಗಡಗಿ ( ತಾಳಿಕೋಟೆ ) ಕದನದಲ್ಲಿ ಭಾಗವಹಿಸಿ ಹೋರಾಡಿದ ರೀತಿ ಹಾಗೂ ವಿಜಯನಗರದ ದೇವಾಲಯಗಳ ನಾಶ, ಸಂಪತ್ತಿನ ಲೂಟಿ ಹೀಗೆ ಹಲವು ಘಟನೆಗಳನ್ನು ಇಲ್ಲಿಗೆ ಭೇಟಿ ನೀಡಿದ ವಿದೇಶಿ ಬರಹಗಾರ ಉಲ್ಲೇಖಗಳಿಂದ ಹಾಗೂ ತಾನು ಕಂಡ ಸಾಮ್ರಾಜ್ಯದ ಅವಷೇಶಗಳಿಂದ ವಿಜಯನಗರ ಇತಿಹಾಸವನ್ನು ನಮಗೆ ಪರಿಚಯಿಸುವ ಕಾರ್ಯ ಮಾಡಲಾಗಿದೆ‌‌.. ಇತಿಹಾಸದಲ್ಲಿ ಆಸಕ್ತಿ ಇರುವವರು ಹಾಗೂ ವಿಜಯನಗರ ಸಾಮ್ರಾಜ್ಯದ ಬಗ್ಗೆ ತಿಳಿಯ ಬಯಸುವವರು ಈ ಪುಸ್ತಕ ಓದಲೇ ಬೇಕು. ಇದು ಸಂಕ್ಷಿಪ್ತ ಆವೃತ್ತಿಯಾಗಿದ್ದು, ಇದೇ ಹೆಸರಿಂದ ಸಂಪೂರ್ಣ ಪುಸ್ತಕ ಸಹ ದೊರೆಯುತ್ತದೆ.

Friday, April 28, 2023

ಜಾಲಹಳ್ಳಿಯ ಕುರ್ಕ (ಕಾಡಿನ ಕತೆಗಳು - 3)

 ಪುಸ್ತಕ:- ಜಾಲಹಳ್ಳಿಯ ಕುರ್ಕ (ಕಾಡಿನ ಕತೆಗಳು - 3)

ಲೇಖಕರು:- ಪೂರ್ಣಚಂದ್ರ ತೇಜಸ್ವಿ


ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರೂಪಾಂತರಿಸಿದ ಪುಸ್ತಕ *ಕಾಡಿನ ಕತೆಗಳು*. ಈ ಪುಸ್ತಕದ ಮೂರನೇ ಭಾಗವೇ  "ಜಾಲಹಳ್ಳಿ ಕುರ್ಕ"..

ಕಾಡಿನ ಕತೆಗಳು-೧,೨,೩,೪ ನಾಲ್ಕು ಭಾಗಗಳಲ್ಲಿ ವಿರಚಿತ ಈ ಪುಸ್ತಕ ಕೆನೆತ್ ಆಂಡರ್ಸನ್ ಅವರ ಪುಸ್ತಕಗಳ ಭಾವಾನುವಾದವಾಗಿದೆ. ಕೆನೆತ್ ಆಂಡರ್ಸನ್ ಅವರು ಮೂಲತಃ ಸ್ಕಾಟ್ಲೆಂಡ್ ದೇಶದವನು. ಭಾರತಕ್ಕೆ ಬಂದು ನೆಲಸಿ ನಿಜ ಭಾರತೀಯರಿಗಿಂತ ತುಸು ಹೆಚ್ಚೇ ಭಾರತವನ್ನು ಪ್ರೀತಿಸಿ ಜೀವಿಸಿದ ವ್ಯಕ್ತಿ.. ಅದರಲ್ಲೂ ನಮ್ಮ ದಕ್ಷಿಣ ಭಾರತ ಇವರ ನೆಚ್ಚಿನ ತಾಣ.. ಮೂಲತಃ ಬೇಟೆಗಾರರಾಗಿದ್ದು ಅಷ್ಟೇ ಒಳ್ಳೆಯ ಲೇಖಕ. ತಾನು ಕಂಡ ಭಾರತದ ಸಂಸ್ಕೃತಿ,ಸಂಪ್ರದಾಯ ಇಲ್ಲಿನ ಮುಗ್ಧ ಜನರು ಹಾಗೂ ತಾನು ಹೊಡೆದುರುಳಿಸಿದ ನರಭಕ್ಷಕಗಳ ರೋಚಕ ಘಟನೆಗಳ ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದಾರೆ.. ಇವರ ಪುಸ್ತಕಗಳನ್ನು ಕನ್ನಡ ಭಾಷೆಗೆ ಭಾವಾನುವಾದಿಸಿ ಕೊಟ್ಟ ಕೀರ್ತಿ ತೇಜಸ್ವಿಯವರಿಗೆ ಸಲ್ಲುತ್ತದೆ. ಮೂಲ ಪುಸ್ತಕಗಳಲ್ಲಿನ ರೋಚಕತೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ಅನುವಾದಿಸಿದ್ದಾರೆ. ಕಾಡಿನ ಕತೆಗಳು ಪುಸ್ತಕಗಳನ್ನು ಓದಿದರೆ ನಾವೇ ಸ್ವತಃ ಆಂಡರ್ಸನ್ ಜೊತೆ ಬೇಟೆಗೆ ಹೋಗಿ ಬಂದ ಅನುಭವ ನೀಡುತ್ತವೆ..


ಜಾಲಹಳ್ಳಿಯ ಕುರ್ಕ ಎಂಬ ಪುಸ್ತಕದಲ್ಲಿ ನಾಲ್ಕು ಕತೆಗಳನ್ನು ಕಾಣಬಹುದು.

೧ - ದಿಗುವಮೆಟ್ಟದ ಕೊಲೆಗಡುಕ

೨ - ಮಂಚಿಹಳ್ಳಿಯ ಮುಗ್ಧರು

೩ - ಭಯಾನಕ ಮಮ್ಮಟಿವಾಯನ್

೪ - ಜಾಲಹಳ್ಳಿಯ ಕುರ್ಕ



'ದಿಗುವಮೆಟ್ಟದ ಕೊಲೆಗಡುಕ' ದಿಗುವಮೆಟ್ಟ ಎಂಬುದು ಆಂಧ್ರಪ್ರದೇಶದಲ್ಲಿರುವ ಒಂದು ಸಣ್ಣ ಊರು. ಆಂಧ್ರದ ಗುಂತಕಲ್ಲು ರೈಲ್ವೆ ಜಂಕ್ಷನ್‌ನಿಂದ ಪೂರ್ವಕ್ಕೆ ಹೋದರೆ ಈ ದಿಗುವಮೆಟ್ಟ ಎಂಬ ರೈಲ್ವೆ ನಿಲ್ದಾಣ ಸಿಗುತ್ತದೆ. ಬೆಂಗಳೂರಿನಿಂದ ಕೆಲವೇ ಗಂಟೆಗಳ ದೂರದಲ್ಲಿದ್ದ ಈ ಸ್ಥಳ ನಗರದ ಸದ್ದು ಗದ್ದಲದಿಂದ ದೂರ, ಶಾಂತಿಯ ನೆಮ್ಮದಿ ನೀಡುವಂತಿತ್ತು.. ಇಲ್ಲಿ ಒಂದು ಚಿರತೆ ಅಲ್ಲಿನ ಜನರಿಗೆ ಉಪಟಳ ನೀಡುತ್ತಿರುತ್ತದೆ. ಆ ಚಿರತೆಯಿಂದ ಜನರಿಗೆ ಮುಕ್ತಿ ದೊರಕಿಸಿದ ಘಟನೆ ಇಲ್ಲಿದೆ.. ಆಲೀಂಖಾನ್ ಅಲ್ಲಿನ ಟಿಬಿಯಲ್ಲಿ ಕೆಲಸ ಮಾಡುವವ,ಮೊದಲು ಇವನ ನಾಯಿಯನ್ನು ನಂತರ ತಂಗಿಯ ಮಗಳನ್ನು ಹಾಗೂ ರೈಲ್ವೆ ಸ್ಟೇಷನ್‌ನಲ್ಲಿ ಕಾರ್ಯ ನಿರ್ವಹಿಸುವವರನ್ನು ಹೀಗೆ ಹಲವು ಜನರನ್ನು ಬಲಿ ಪಡೆದ ಆ ಚಿರತೆ ನರಭಕ್ಷಕನಾಗಿ ರೂಪುಗೊಂಡಿರುತ್ತದೆ.

ಆಂಡರ್ಸನ್ ಅವರ ಬೇಟೆಗಾರಿಕೆಯ ಜೊತೆಯಲ್ಲಿ ಅವರು ಇಲ್ಲಿನ ಜನರು,ಸ್ಥಳಗಳ ವರ್ಣನೆ ನಮ್ಮಲ್ಲಿ ಹೆಮ್ಮೆಯ & ಆತ್ಮೀಯ ಭಾವನೆ ಮೂಡಿಸುತ್ತದೆ.


'ಮಂಚಿಹಳ್ಳಿಯ ಮುಗ್ಧರು' ಸೇಲಂ ಜಿಲ್ಲೆಯ ಕಾಡಿನೊಳಗಿದ್ದ ಚಿಕ್ಕ ಹಳ್ಳಿ ಮಂಚಿ.. ಇಲ್ಲಿಯ ಆದಿವಾಸಿಗಳಿಗೆ ಜೀವನಕ್ಕೆ ಕಾಡೇ ಆಧಾರವಾಗಿತ್ತು. ಹೆಜ್ಜೇನು,ಗಿಡಮೂಲಿಕೆ, ಬಿದಿರು ಅರಣ್ಯೋತ್ಪನ್ನಗಳಿಂದಲೇ ಹೊಟ್ಟೆ ಹೊರೆಯುತ್ತಿದ್ದರು. ಈ ಕಾಡಿನ ಹುಲಿ ಭಯಾನಕ ನರಭಕ್ಷಕನಾಗಿ ಇವರ ಅಸ್ತಿತ್ವವನ್ನೇ ನಡುಗಿಸಿತು. ಬೇಟೆಗಾರನಿಗೆ ಕಾಡು ಅಲ್ಲಿನ ಜೀವಿಗಳು ಯಾವ ರೀತಿಯಲ್ಲಿ ಸಹಕಾರಯಾಗಬಲ್ಲವು ಎನ್ನುವುದಕ್ಕೆ ಇಲ್ಲಿ ಬರುವ ಆನೆಯ ಘಟನೆಯೇ ಸಾಕ್ಷಿ..


' ಭಯಾನಕ ಮಮ್ಮಟಿವಾಯನ್ ' ಇದು ಕಾಡಿನ ಢಕಾಯಿತನ ಕತೆ. ಒಂಬತ್ತು ಕೊಲೆ ಮಾಡಿದ ಕೊಲೆಪಾತಕಿ ಅವನು. ಅವನ ಹೆಸರು ಸೆಲ್ವರಾಜ್ ಎಂದು. ಒಂದು ಸಣ್ಣ ಜಗಳ ತಂದೆಯ ಸಾವಿಗೆ ಹಾಗೂ ತಾನು 9 ಕೊಲೆ ಮಾಡಲು ಕಾರಣವಾಗುತ್ತೆ,ನಂತರ ಬದುಕಲು ಅನಿವಾರ್ಯ ಎಂಬಂತೆ ಢಕಾಯಿತಿ ಮಾಡುವ ಸ್ಥಿತಿ ಬರುವುದು. ಇವನು ಜಮೀನ್ದಾರರು,ಶ್ರೀಮಂತರಿಂದ ದೋಚಿ ಬಡಬಗ್ಗರಿಗೆ ಹಂಚುತ್ತಿದ್ದನು ಒಂದು ರೀತಿಯಲ್ಲಿ ರಾಬಿನ್‌ಹುಡ್ ಎಂದೇ ಹೇಳಬಹುದು. ಕಾವೇರಿ ನದಿಯಿಂದ ಚಿನಾರ್ ನದಿವರೆಗೆ ಹಾಗೂ ಕೊಳ್ಳೆಗಾಲ ಸೇಲಂ ಪ್ರದೇಶಗಳು ಇವನ ಕಾರ್ಯಕ್ಷೇತ್ರ.. ಇವನಿಗೆ 36 ವರ್ಷ ವಯಸ್ಸಾಗಿತ್ತು, ತುಟಿಗಳು ಉಬ್ಬಿದ್ದರಿಂದ ಇವನನ್ನು "ಮುಮ್ಮಟಿವಾಯನ್" ಎಂದು ಕರೆಯುತ್ತಿದ್ದರು.

ಮುಮ್ಮಟಿಗೆ ಎಷ್ಟು ಆತ್ಮವಿಶ್ವಾಸವಿತ್ತೆಂದರೆ ಇಂತಹ ಹಳ್ಳಿಯಲ್ಲಿಯೇ ದರೋಡೆ ಮಾಡುವುದಾಗಿ ಒಂದು ವಾರ ಮುಂಚಿತವಾಗಿ ಪೋಲೀಸ್ ಸ್ಟೇಷನ್ ಎದುರಿಗೆ ನೋಟಿಸ್ ಅಂಟಿಸುತ್ತಿದ್ದ. ಇವನ ಇಂತಹ ಹಲವು ರೋಚಕ ಸಾಹಸಗಳು ಇಲ್ಲಿವೆ. ಇವನ ಅತಿರೇಕಗಳಿಂದ ಉದ್ರೇಕಗೊಂಡ ಪೋಲಿಸ್ ಇವನ ಬಂಧಿಸಲು ಹಲವು ಪ್ರಯತ್ನ ಮಾಡಿದರೂ ಇವನು ಕೈಗೆ ಸಿಗುತ್ತಿರಲಿಲ್ಲ. ಹೊಗೆನಕಲ್ ಜಲಾಶಯದ ಮೇಲೆ ಆಣೆಕಟ್ಟು ನಿರ್ಮಿಸುವ ಯೋಜನೆಯಿಂದ ಈ ಭಾಗಕ್ಕೆ ಇಂಜಿನಿಯರ್ ಅಧಿಕಾರಿಗಳು ಭೇಟಿ ನೀಡಿದ್ದರು ಇದೇ ಭಾಗದ ಕಾಡಿನಲ್ಲಿ ನರಭಕ್ಷಕಗಳ ಬೇಟೆಯಾಡುವ ಆಂಡರ್ಸನ್ ಸಹ ಇದ್ದರು. ಮುಮ್ಮಟಿಯ ಕತೆಗಳನ್ನು ಕೇಳಿದ್ದ ಆಂಡರ್ಸನ್‌ಗೆ ಅವನನ್ನು ಬೇಟಿ ಮಾಡಬೇಕೆಂಬ ಆಸೆ ಇತ್ತು. ಇಬ್ಬರ ಭೇಟಿ ಮುಮ್ಮಟಿಯ ಜೀವನವನ್ನೇ ಬದಲಾಯಿಸಿ ಹೊಸ ವ್ಯಕ್ತಿಯಾಗಿ ಮಾಡುತ್ತದೆ. ಮುಮ್ಮಟಿ " ಓಮ್ ಕೃಷ್ಣ " ಆಗಿ ಪರಿವರ್ತನೆ ಹೊಂದುತ್ತಾನೆ.


ಜಾಲಹಳ್ಳಿಯ ಕುರ್ಕ  ಇದು ನರಭಕ್ಷಕ ಹುಲಿ / ಚಿರತೆಯ ಕತೆಯಲ್ಲ. ಇದು ತನ್ನ ಆತ್ಮರಕ್ಷಣೆಗಾಗಿ ಮೂವರನ್ನು ಕೊಂದು ಹಲವರನ್ನು ಗಾಯ ಮಾಡಿದ ಕುರ್ಕನ ಕತೆ. ಕುರ್ಕ ಎಂದರೆ ಇದೊಂದು ಚಿಕ್ಕ ಜಾತಿಯ ಚಿರತೆ. ಇನ್ನೂ ಜಾಲಹಳ್ಳಿ ವಿಚಾರಕ್ಕೆ ಬಂದರೆ ಇದು ನಮ್ಮ ಬೆಂಗಳೂರಿನ ಬಳಿಯ ಜಾಲಹಳ್ಳಿ ಹೌದು.. 1935ರಲ್ಲಿ ನೂರು ಮನೆಗಳಿರುವ ಸಣ್ಣ ಹಳ್ಳಿ ಜಾಲಹಳ್ಳಿ.ಇಲ್ಲಿ ಹಲವು ನೆಡುತೋಪುಗಳಿದ್ದವು. ಕಾಡು ಗಿಡಗಳು ಅಭೇದ್ಯವಾಗಿ ಬೆಳೆದಿದ್ದವು. ಇಂದು ಇಲ್ಲಿ ಮೆಟ್ರೋಪಾಲಿಟನ್ ಪ್ರದೇಶವಾಗಿ ಕಾಂಕ್ರೀಟ್ ಕಾಡು ಬೆಳೆದಿದೆ. ಕುರ್ಕಗಳು ಸಾಮಾನ್ಯವಾಗಿ ಕುರಿ ಆಡು ಮೊಲ ಈ ರೀತಿಯ ಪ್ರಾಣಿಗಳ ಭಕ್ಷಿಸುತ್ತವೆ. ಮನುಷ್ಯರನ್ನು ಕೊಲ್ಲುವ ನರಭಕ್ಷಕ ಆಗುವುದಿಲ್ಲ. ಕುರಿ ಹಿಡಿಯಲು ಬಂದಿದ್ದ ಕುರ್ಕಗೆ ದಫೇದಾರೊಬ್ಬ ಗುಂಡು ಹೊಡೆದನು. ಅದು ಗುರಿ ತಪ್ಪಿ ಹಿಂಗಾಲಿಗೆ ಗಾಯ ಮಾಡಿತು. ಚಿರತೆಯನ್ನು ಹೊಡೆದುರುಳಿಸಲು ಊರನ ಜನರು ಶಿಕಾರಿ ನಾಯಿಗಳೊಂದಿಗೆ ಕಾಡು ಸೋಸಲು ಆರಂಭಿಸುತ್ತಾರೆ‌. ತನ್ನ ರಕ್ಷಣೆಗಾಗಿ ಚಿರತೆ ಗುಂಡು ಹಾರಿಸಿದ್ದ ಒಬ್ಬ ಇಂಗ್ಲಿಷ್ ಬೇಟೆಗಾರನನ್ನು ಪರಚಿ ಕೊಲ್ಲುತ್ತದೆ‌. ಮತ್ತೊಬ್ಬ ಸ್ಥಳೀಯ ಬೇಟೆಗಾರ ಹಾಗೂ ಕುರಿ ಕಾಯುವವ ಹೀಗೆ ಮೂರು ಬಲಿ ಪಡೆಯುತ್ತದೆ. ಬೇಟೆಗಾರರ ಗುಂಡುಗಳಿಂದ ಗಾಯಗೊಂಡಿದ್ದ ಕುರ್ಕ ಒಂದು ವಾರದ ನಂತರ ಮರಣಹೊಂದುತ್ತದೆ. ಹೀಗೆ ಜಾಲಹಳ್ಳಿ ಜನ ಕುರ್ಕನಿಂದ ನಿಟ್ಟುಸಿರು ಬಿಡುವಂತಾಯಿತು..

ಒಂದು ಕಾಲದಲ್ಲಿ ಜಾಲಹಳ್ಳಿಯಲ್ಲಿ ಚಿರತೆ ಓಡಾಡಿಕೊಂಡಿದ್ದವು ಎಂದರೆ ಜನ ಅಚ್ಚರಿಪಡುವಷ್ಟು ಜಾಲಹಳ್ಳಿ ಬದಲಾಗಿಹೋಗಿದೆ.

ಕಾಡು ಕಾಡುಪ್ರಾಣಿಗಳು ಎಷ್ಟು ಮುಗ್ಧವೋ ತಮ್ಮ ಮೇಲೆ ದಾಳಿಯಾದರೆ ಅಷ್ಟೇ ಕ್ರೂರಿಗಳಾಗಬಲ್ಲವು..‌ ಮೈಯ ತುಂಬಾ ಗಾಯಗಳಾಗಿದ್ದರೂ ತನ್ನ ಕೊಲ್ಲಲೂ ಬಂದವರ ಮೇಲೆ ಮುಯ್ಯಿ ತೀರಿಸಿಕೊಳ್ಳಲು ಹೋರಾಡುವ ಚಿಕ್ಕ ಕುರ್ಕನ ಮೇಲೆ ಹೆಮ್ಮೆ ಮೂಡುತ್ತದೆ..

ಕಾಡು ಕಾಡುಪ್ರಾಣಿಗಳು ನಮ್ಮ ಅಸ್ಮಿತೆ, ಪ್ರಾಣಿಗಳಿಲ್ಲದ ಕಾಡು ಸುಡುಗಾಡಿಗೆ ಸಮ.. ಬದುಕಿ ಬದುಕಲು ಬಿಡಿ..