'ಕಾಂತಾರ ಒಂದು ದಂತಕಥೆ'
ವಿಮರ್ಶೆಯಲ್ಲ; ವಿವೇಚನೆ ಅಷ್ಟೆ..?!
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಸಿನಿಮಾ. ಅದ್ಭುತ ಪ್ರದರ್ಶನ ಕಾಣುತ್ತಾ ಜನಮನ್ನಣೆ ಗಳಿಸುತ್ತಿರುವುದು ಹೆಮ್ಮೆಯ ವಿಚಾರ.. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾದ ಕ್ಲೈಮಾಕ್ಸ್ ಬಗ್ಗೆ ರಿಷಬ್ ಅವರ ಅಭಿನಯದ ಬಗ್ಗೆ ಭಾರಿ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. ಆದರೆ ಸಿನಿಮಾದಲ್ಲಿ ನನಗೆ ಇಷ್ಟವಾದದ್ದು ಸಿನಿಮಾದ ಕಥಾವಸ್ತು ಹಾಗೂ ಅದನ್ನು ತೋರಿಸುವ ರೀತಿ.. ಸಿನಿಮಾದಲ್ಲಿ ಒಂದೊಳ್ಳೆ ಸಂದೇಶವಿದೆ ಅದೇನೆಂದರೆ ದುಷ್ಟರ ಸಂಹಾರ ಶಿಷ್ಟರ ರಕ್ಷಣೆ, ದೈವ (ದೇವರು) ಒಳ್ಳೆಯವರನ್ನು ಕೈ ಬಿಡುವುದಿಲ್ಲ ಎನ್ನುವುದು...
ಸಿನಿಮಾದಲ್ಲಿ ಯಾರು ದುಷ್ಟರು ಯಾರು ಒಳ್ಳೆಯವರು ??
ಕೇವಲ ಮೇಲ್ನೋಟಕ್ಕೆ ಒಳ್ಳೆಯವರ ರೀತಿ ನಟಿಸುವುದರಿಂದ ಪ್ರಯೋಜನವಿಲ್ಲ ಎಂಬುದು ಸಾಹುಕಾರನ ಪಾತ್ರದಿಂದ ಕಾಣಬಹುದು. ಸಾಹುಕಾರ ದೈವದ ಆಚರಣೆಗೆ ಹಣದ ಸಹಾಯ ಮಾಡುತ್ತಾನೆ ಹಾಗೂ ಊರಿನ ಜನರಿಗೂ ಸಹ ನೆರವಾಗುತ್ತಾನೆ. ಆದರೆ ಅವನ ಉದ್ದೇಶ ಕೆಟ್ಟದಾಗಿರುತ್ತದೆ. ಸಿನಿಮಾದ ಕೊನೆಯಲ್ಲಿ ಅವನ ಅಂತ್ಯ ಕಾಣುತ್ತೇವೆ..
ಸಿನಿಮಾದಲ್ಲಿ ಇನ್ನೊಂದು ಪಾತ್ರ ಅರಣ್ಯಾಧಿಕಾರಿ ಮುರುಳಿ ಎಂಬುದು.. ಇವನು ಮೇಲ್ನೋಟಕ್ಕೆ ಒರಟು, ಊರ ಜನರ ವಿರೋಧಿ ಹಾಗೂ ದೈವದ ಆಚರಣೆಗಳನ್ನು ನಿಲ್ಲಿಸುವ ಬೆದರಿಕೆಯನ್ನೂ ಹಾಕುತ್ತಾನೆ. ಆದರೆ ಇವನ ಉದ್ದೇಶ ಒಳ್ಳೆಯದಾಗಿರುತ್ತದೆ..
ದೇವರ ಆಚರಣೆ ಭೂತ ಕೋಲಕ್ಕೆ ಹಣ ನೀಡುವ ಸಾಹುಕಾರನ ಉದ್ದೇಶ ಕೆಟ್ಟದ್ದು; ಅದೇ ಕೋಲ ನಿಲ್ಲಿಸುತ್ತೇನೆ ಎನ್ನುವ ಅಧಿಕಾರಿಯ ಉದ್ದೇಶ ಒಳ್ಳೆಯದ್ದು..
ದೇವರು ಶಿಷ್ಟರನ್ನು ರಕ್ಷಿಸುತ್ತಾನೆ ಎನ್ನುವುದನ್ನು ಸಿನಿಮಾದುದ್ದಕ್ಕೂ ಕಾಣಬಹುದು. ಅರಣ್ಯಾಧಿಕಾರಿಯ ಕಾರಿನ ಮೇಲೆ ಮರ ಬೀಳುತ್ತದೆ ಆದರೆ ಅವನಿಗೆ ಅಂತಹ ಅಪಾಯವೇನು ಆಗುವುದಿಲ್ಲ. ಮತ್ತೊಂದು ಸನ್ನಿವೇಶದಲ್ಲಿ ಮುರುಳಿಯ ಕೈಯಿಂದ ಹಾರಿದ ಬಂದೂಕಿನ ಗುಂಡು ಹಿಮ್ಮುಖವಾಗಿ ಸಿಡಿದರೂ ಸಹ ಅವನು ಪ್ರಾಣಾಪಾಯದಿಂದ ಪಾರಾಗುತ್ತಾನೆ. ಇವೆಲ್ಲಾ ದೃಶ್ಯಗಳು ಒಳ್ಳೆಯವರನ್ನು ದೇವರು ಕಾಯುವನು ಅನ್ನುವುದಕ್ಕೆ ಸಾಕ್ಷಿ..
ಸಿನಿಮಾದ ಕೊನೆಯಲ್ಲಿ ದೈವ ಸ್ವತಃ ಮುರುಳಿಯನ್ನು ನಮಸ್ಕರಿಸಿ ತಬ್ಬಿಕೊಳ್ಳವುದು ತೋರಿಸಲಾಗಿದೆ.. ನೀನು ದೇವರಿಗೆ ದೇಣಿಗೆ ಬಲಿ ಕೊಡುವುದು ಉದ್ದಂಡ ಬೀಳುವುದು ಮುಖ್ಯವಲ್ಲ ಬದಲಾಗಿ ನೀ ಮಾಡುವ ಕೆಲಸ ಹಾಗೂ ಅದರ ಹಿಂದಿನ ಉದ್ದೇಶ ಒಳ್ಳೆಯದಾಗಿರಬೇಕು ಎಂದು ಸಿನಿಮಾ ಸಂದೇಶ ಕೊಡುತ್ತದೆ.. ಕಥೆ ಹಾಗೂ ಅದನ್ನು ಜನರ ಮನಸ್ಸಿಗೆ ಮುಟ್ಟುವ ಹಾಗೆ ತೋರಿಸುವ ಕಲೆ ಶೆಟ್ರಿಗೆ ಕರಗತವಾಗಿದೆ, ಅದೇ ಕಾರಣಕ್ಕಾಗಿ ಪರಭಾಷಿಕರು ಸಹ ಸಿನಿಮಾ ನೋಡಿ ಹಾಡಿ ಹೊಗಳುತ್ತಿದ್ದಾರೆ.. ಬೇಗ ನೀವೂ ನೋಡಿ..



