ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Sunday, February 14, 2021

ಮಿಲನಿಯಮ್ -೬ ಮಹಾಯುದ್ಧ-೧

 ಪುಸ್ತಕ:- ಮಹಾಯುದ್ಧ-೧ (ಮಿಲನಿಯಮ್ -೬)

ಲೇಖಕರು:- ಪೂರ್ಣಚಂದ್ರ ತೇಜಸ್ವಿ

ಪೂರ್ಣಚಂದ್ರ ತೇಜಸ್ವಿಯವರ ಮಿಲನಿಯಮ್ ಹೆಸರಿನ ಸರಣಿ ಪುಸ್ತಕಗಳಲ್ಲಿ ಆರನೇ ಪುಸ್ತಕವೇ "ಮಹಾಯುದ್ಧ-೧"..

ತೇಜಸ್ವಿಯವರ ಈ ಸರಣಿ ಪುಸ್ತಕಗಳಿಗೆ ಮಿಲನಿಯಮ್ ಎಂದು ಹೆಸರಿಡಲು ಕಾರಣವೇನೆಂದು ಪ್ರಕಾಶಕರ ಮಾತುಗಳಲ್ಲಿಯೇ ಕೇಳಿ.. ಇಪ್ಪತ್ತನೆಯ ಶತಮಾನವನ್ನು ಪರಿಭಾವಿಸಿದಾಗ ಕಂಡ,ಕೇಳಿದ,ಓದಿದ,ನೋಡಿದ ಕುತೂಹಲಕರ ರೋಚಕ ವಿಚಾರಗಳನ್ನು ತೇಜಸ್ವಿ ಅವರು ತಮ್ಮ ನೆನಪಿನ ಲಹರಿಯ ಅಲೆದಾಟಕ್ಕೆ ಅನುಸಾರವಾಗಿ ಚಿತ್ರಿಸುತ್ತಾ ಹೋಗಿದ್ದಾರೆ. ಇವರ ವಿಚಾರಗಳು ಶತಮಾನವನ್ನೂ ಮೀರಿ ಮಿಲನಿಯಮ್‌ವರೆಗೂ ವ್ಯಾಪಿಸಿರುವುದರಿಂದ ಇದನ್ನು "ಮಿಲನಿಯಮ್ ಸರಣಿ" ಎಂದು ಕರೆದಿದ್ದಾರೆ..


ಮಿಲನಿಯಮ್ ಸರಣಿಯ ಆರನೇ ಗ್ರಂಥವಾದ 'ಮಹಾಯುದ್ಧ-೧' ಇದು ಜಗತ್ತು ಕಂಡ ಭಯನಕ ಎರಡನೇ ಮಹಾಯುದ್ಧದ ಸಮಯದಲ್ಲಿನ ಪ್ರಮುಖ ಘಟನೆಗಳು,ಅಲ್ಲಿ ಸಂಭವಿಸಿದ ಕೆಲ ಹೃದಯವಿದ್ರಾಯಕ ಮಾನವೀಯ ಘಟನೆಗಳನ್ನು ಚಿತ್ರಿಸಲಾಗಿದೆ.. ಇದು ಹಲವು ಗ್ರಂಥಗಳಲ್ಲಿನ ಭಾವನುವಾದದ ಸಂಗ್ರಹ ಎಂದು ಹೇಳಬಹುದು..

ನನಗೆ ಕಾಲೇಜು ದಿನಗಳಿಂದಲೂ ಯುರೋಪಿಯನ್ ಇತಿಹಾಸ ಓದುವುದು ಎಂದರೆ ಬಲು ಹುಚ್ಚು, ಸ್ವಾತಂತ್ರ್ಯಕ್ಕಾಗಿ ಅಲ್ಲಿ ನೆಡೆಸಿದ ಕ್ರಾಂತಿಗಳು, ಅವರ ಹೋರಾಟ ಸ್ಪೂರ್ತಿ ನೀಡುತ್ತಿತ್ತು.. ಆರಂಭದಲ್ಲಿ ನನಗೆ ನಮ್ಮ ದೇಶದ ಇತಿಹಾಸ ಓದಲು ಏನೋ ತತ್ಸಾರವಿತ್ತು.. ಯುರೋಪಿಯನ್ ಇತಿಹಾಸದಲ್ಲಿ ನೆಪೋಲಿಯನ್, ಹಿಟ್ಲರ್, ಮ್ಯಾಜಿನಿ, ಕೌಟ್-ಡಿ-ಕಾವುರ್,ಗ್ಯಾರಿಬಲ್ಡಿ ಇವರ ಬಗ್ಗೆ ಓದಿದಗೆಲ್ಲಾ ಮೈಯಲ್ಲಿ ಮಿಂಚಿನ ಸಂಚಾರವಾಗುತ್ತೆ ಎಂತಹ ವ್ಯಕ್ತಿತ್ವ ಅವರದ್ದು..!

ಇವರಲ್ಲಿ ನನಗೆ ಹಿಟ್ಲರ್ ಬಗ್ಗೆ ಅತೀವ ಆಸಕ್ತಿ, ನಾನು ಕಾಲೇಜಿನಲ್ಲಿದ್ದಾಗ ಇವನನ್ನು ಹೀರೋ ರೀತಿಯಲ್ಲಿ ಆರಾಧಿಸುತ್ತಿದ್ದೆ.. ಒಬ್ಬ ಸಾಮಾನ್ಯ ವ್ಯಕ್ತಿ,ಇಡೀ ದೇಶದ ಸರ್ವಾಧಿಕಾರಿಯಾಗಿದ್ದು ನನಗೆ ಪ್ರೇರಣೆ ನೀಡುತ್ತಿತ್ತು.. ಹೆಚ್ಚು ಓದುತ್ತಾ ಹೋದಂತೆಲ್ಲಾ ಹಿಟ್ಲರನ ಕೌರ್ಯ,ಅಮಾನವೀಯ ಕೃತ್ಯಗಳ ಬಗ್ಗೆ ತಿಳಿದು ವ್ಯಥೆಪಟ್ಟಿದೆ.. ಹಿಟ್ಲರ್ ಮತ್ತು ನಾಜೀಗಳಲ್ಲಿದ್ದ ಅತಿಯಾದ ಜನಾಂಗೀಯತೆ, ಅಂಧಾಭಿಮಾನ ಹಾಗೂ ಯುದ್ಧೊನ್ಮದ ಮನುಕುಲಕ್ಕೆ ಕಂಟಕ ಪ್ರಾಯವಾಗಿ ಕಾಡಿದಂತು ಸತ್ಯ..

ಈ ಪುಸ್ತಕದಲ್ಲಿ ಯುದ್ಧ ಸಮಯದಲ್ಲಿನ ರೋಚಕ ಸಂಗತಿಗಳನ್ನು ಹೇಳಲಾಗಿದೆ..

ಮಹಾಯುದ್ಧದ ರೂಪರೇಷೆಗಳು

→ಭೀಕರ 'ರಹಸ್ಯ ನೌಕೆ'

→ಮುಗ್ಧ ಖೈದಿಗಳು

→ಅನಾಥ ರಕ್ಷಕರ ಭೂಗತ ಜಾಲ

→ಕಳ್ಳನೋಟಿನ ಕದನ

→ಹದಿನೆಂಟು ಸಾವಿರ ಅಡಿ ಎತ್ತರದಿಂದ ನೆಗೆದ

→ಲಂಡನ್ ಉಳಿಸಿದ ವ್ಯಕ್ತಿ

→ಪ್ರತಿರೂಪ

ಎಂಬ ಹೆಸರಿನ ಅಧ್ಯಾಯಗಳಿವೆ.. 

ಅಂಟ್ಲಾಟಿಸ್ ಎಂಬ ನೌಕೆ ಮಿತ್ರರಾಷ್ಟ್ರಗಳ ಸಾವಿರಾರು ನೌಕೆಗಳನ್ನು ಹೊಡೆದುರುಳಿಸಿ ಭೀಕರ ಸ್ವಪ್ನದಂತೆ ಕಾಡಿದ ಘಟನೆ,

ಪುನ್ಜೆಲ್ ಎಂಬ ಜರ್ಮನ್ ಅಧಿಕಾರಿ ಮುಗ್ಧ ಖೈದಿಗಳ ಜೀವ ಉಳಿಸಿದ ಘಟನೆ,

ನಾಜೀಗಳು ಜ್ಯೂ ಜನಾಂಗ ಸರ್ವನಾಶ ಮಾಡುವಾಗ ಅವರ ರಕ್ಷಣೆಗಾಗಿ ಹಲವು ಜನ ಭೂಗತರಾಗಿ ಹೋರಾಡಿದ ಕತೆ,

ಜರ್ಮನಿಯು ಬ್ರಿಟನ್ನಿನ ಆರ್ಥಿಕತೆ ಬುಡಮೇಲು ಮಾಡಲು ಕೋಟ ನೋಟಿನ ಹೊಳೆಯನ್ನೇ ಹರಿಸಿದ ಕತೆ,

೧೮ ಸಾವಿರ ಅಡಿ ಎತ್ತರದಲ್ಲಿದ್ದ ಯುದ್ಧ ವಿಮಾನದಿಂದ ಪ್ಯಾರಾಚೂಟ್ ಇಲ್ಲದೇ ಜಿಗಿದು ಬದುಕಿದ ನಿಕೊಲಸ್ ಎಂಬುವನ ಸಾಹಸದ ಕತೆ,

ಲಂಡನ್ ನಗರವನ್ನೇ ಧ್ವಂಸ ಮಾಡಲು ಸಿದ್ಧತೆ ನೆಡೆಸಿದ್ದ ಜರ್ಮನಿಯ ಯೋಜನೆ ವಿಫಲಗೊಳಿಸಿದ ಸಾಹಸಿ ಹೊಲಾರ್ಡ್‌ನ ಕತೆ.

ಮಿತ್ರರಾಷ್ಟ್ರಗಳು ತಮ್ಮ ಫಿಲ್ಡ್ ಮಾರ್ಷಲ್‌ನ ಪ್ರತಿರೂಪದಂತಿರುವ ವ್ಯಕ್ತಿ ಬಳಸಿ ಜರ್ಮನಿಗೆ ಮಂಕು ಬೂದಿ ಎರಚಿದ ಕತೆ.

ಹೀಗೆ ಹಲವು ಘಟನೆಗಳನ್ನೊಳಗೊಂಡ ಈ ಪುಸ್ತಕ ಒಂದೇ ಉಸಿರಿನಲ್ಲಿ ಓದಿ ಮುಗಿಸುವಷ್ಟು ಕುತೂಹಲಕಾರಿಯಾಗಿದೆ.. ಜಾಗತಿಕ ಯುದ್ಧದ ಬಗ್ಗೆ ಆಸಕ್ತಿ ಇರುವವರು ಈ ಪುಸ್ತಕ ಓದಲೇಬೇಕು.ಹಾಗೂ ಇದರ ಮುಂದಿನ ಭಾಗ 'ಮಹಾಯುದ್ಧ-೨' ಎಂಬ ಮಿಲನಿಯಮ್ ಸರಣಿಯ ಏಳನೇ ಪುಸ್ತಕದಲ್ಲಿ ಇನ್ನೂ ಹಲವು ರೋಚಕ ಸಂಗತಿಗಳಿವೆ..



Tuesday, February 9, 2021

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ

ಪುಸ್ತಕ:- ಪಶ್ಚಿಮ ಘಟ್ಟದ ತಪ್ಪಲಿನಲ್ಲಿ (ಭಾಗ-3)

ಲೇಖಕರು:- ಗಿರಿಮನೆ ಶ್ಯಾಮರಾವ್



ಗಿರಿಮನೆ ಶ್ಯಾಮರಾವ್ ಅವರ ' ಮಲೆನಾಡಿನ ರೋಚಕ ಕತೆಗಳು ' ಎಂಬ ಸೀರಿಯಲ್ ಕತೆಗಳ 3ನೇ ಭಾಗವೇ " ಪಶ್ಚಿಮ ಘಟ್ಟದ ತಪ್ಪಲಿನಲ್ಲಿ " ಪುಸ್ತಕ..

ಇದು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಆಣೆಕಟ್ಟು ಕಟ್ಟುವ ಕೆಲಸದಿಂದ ಅಲ್ಲಿನ ಪರಿಸರ ಮತ್ತು ಜನ ಜೀವನದ ಮೇಲೆ ಉಂಟಾಗುವ ಹಾನಿಯನ್ನು ವಿವರಿಸುವ ಕಾಲ್ಪನಿಕ ಕಥೆ‌.. ಓದುತ್ತಾ ಹೋದಂತೆ ಇದು ಕಾಲ್ಪನಿಕವಲ್ಲ ವಾಸ್ತವವಾಗಿ ನೆಡೆದ ಘಟನೆಗಳು ಎನ್ನುವಷ್ಟು ಸುಂದರವಾಗಿ ಕತೆಯನ್ನು ಹೆಣೆಯಲಾಗಿದೆ.. ಅಣೆಕಟ್ಟುನಿಂದ ಮಲೆನಾಡ ಪರಿಸರ ಹಾನಿ ಮತ್ತು ಇಲ್ಲಿನ ಜನ ಜೀವನದಲ್ಲಿ ಉಂಟಾಗುವ ಅಸಮತೋಲನದ ತಿಳಿಯಬಹುದು..

ಮರಿಯಪ್ಪ ಕಾಡಳ್ಳಿ ಗ್ರಾಮದ ಒಬ್ಬ ಸಾಮಾನ್ಯ ರೈತ. ಊರಿನ ಪಕ್ಕದಲ್ಲಿಯೇ  ಹರಿಯುತ್ತಿದ್ದ ಹೊಳೆಯ ನೀರು ಕಪ್ಪು ಮಣ್ಣಿನಿಂದ ಕಪ್ಪಾಗಿರಲು ಅದಕ್ಕೆ ಕಪ್ಪೊಳೆ ಎಂದೇ ಹೆಸರು.. ಹೊಳೆಯ ಸಮೀಪದಲ್ಲಿದ್ದ ತನ್ನ 3 ಎಕರೆ ಜಮೀನಿನಲ್ಲಿ ಭತ್ತ, ತರಕಾರಿ ಬೆಳೆಯುತ್ತಾ ನೆಮ್ಮದಿ ಜೀವನ ನೆಡೆಸುತ್ತಿದ್ದ.. 

ಕಾಡಳ್ಳಿ ಟಾರು ರಸ್ತೆ ,ಕರೆಂಟು,ಸ್ಕೂಲು ಹೀಗೆ ಅನೇಕ ಸೌಕರ್ಯಗಳಿಲ್ಲದ ಊರು. ಇಲ್ಲಿ ಮರಿಯಪ್ಪ ತನ್ನ ಮೂವರು ಮಕ್ಕಳು ಹೆಂಡತಿಯೊಂದಿಗೆ ಜೀವನ ಸಾಗಿಸುತ್ತಿದ್ದನು.. ಪಶ್ಚಿಮ ಘಟ್ಟದ ಹಳ್ಳಿಯಲ್ಲಿ ಇರುವ ಜನರಿಗೆ ವ್ಯವಸಾಯವೇ ಒಂದು ಮುಖ್ಯ ಆದಾಯ. 



ಸರ್ಕಾರದವರು ಕರೆಂಟ್ ಕೊಡುತ್ತೇವೆ ಇಲ್ಲಿನ ಊರನ್ನು ಜನರನ್ನು ಉದ್ದಾರ ಮಾಡುತ್ತೇವೆ ಎಂದು ಇಲ್ಲಿನ ಕಪ್ಪೊಳೆಗೆ ಡ್ಯಾಮ್ ಕಟ್ಟುವ ನೆಪದಲ್ಲಿ ಕಾಡಿನ ಬುಡಕ್ಕೆ ಕೈ ಹಾಕುತ್ತಾರೆ. ಡ್ಯಾಮ್ ಕಟ್ಟುವ ನೆಪದಲ್ಲಿ ಅಲ್ಲಿ ನಡೆದದ್ದು ಕಾಡಿನ ಮಾರಣ ಹೋಮ..ಕಾಡನ್ನು ಕಡಿದ ಪರಿಣಾಮ ಅಲ್ಲಿನ ಪ್ರಾಣಿಗಳು ಊರಿಗೆ ಬರಲು ಶುರುಮಾಡಿದವು. ಇದೆಲ್ಲದರ ಪರಿಣಾಮ ಬೀರಿದ್ದು , ಅಲ್ಲಿನ ರೈತ ಮರಿಯಪ್ಪನ ಕುಟುಂಬದ ಮೇಲೆ.. ಇದ್ದ ಅಲ್ಪ ಸ್ವಲ್ಪ ಜಮೀನು ಮುಳುಗಡೆಯಾಗಿ ಸರ್ಕಾರದ ಪಾಲಾಗಿತ್ತು. ಅದಕ್ಕೆ ಪರಿಹಾರವಾಗಿ ಬಂದ ಹಣ ನೀರಿನಂತೆ ಖರ್ಚಾಗಿ ಹೋಗಿತ್ತು. ತನ್ನ ಜಮೀನಿನ ಬದಲು ಸರ್ಕಾರ ನೀಡಿದ ಕಲ್ಲು ಭೂಮಿ ನೋಡಿ ಅಲ್ಲಿನ ಜನ ಆಗಲೇ ವ್ಯವಸಾಯದ ಆಸೆ ಬಿಟ್ಟು ಕೈಚೆಲ್ಲಿ ಕುಳಿತಿದ್ದರು.ಅದರಲ್ಲಿ ಬೆಳೆ ಬೆಳೆಯಲು ಹೋಗಿ ಸಾಲ ಮಾಡಿಕೊಂಡು ಕೊರಗುವ ಮುಗ್ದ ರೈತರು..

ಇದರ ನಡುವೆ ಡ್ಯಾಮ್ ಕಟ್ಟುಲು ಬಂದ ಜನರಿಂದ ಮರಿಯಪ್ಪ ತನ್ನ ಎರಡನೇ ಮಗಳನ್ನು ಕಳೆದುಕೊಂಡು ಅನುಭವಿಸಿದ ಯಾತನೆ ನಿಜಕ್ಕೂ ಕಣ್ಣೀರು ತರಿಸಿತು. ದುಡ್ಡಿನ ಆಸೆಗೆ ಮೀಸೆ ಚಿಗುರದ ಮಗ ಭೀಮರಾಜು ಕಳ್ಳ ಸಾಗಾಣಿಕೆ , ಅಲ್ಲಿನ ಪ್ರಾಣಿಗಳನ್ನು ಕೊಂದು ಮಾಂಸ ಸಾಗಾಣಿಕೆ ಮಾಡಿ ಸಿಕ್ಕಿ ಬಿದ್ದು ಜೈಲು ವಾಸವಾದ ಬಳಿಕ ಬುದ್ದಿ ಕಲಿತು ಅದರಿಂದ ಹೊರ ಬಂದರೂ ಸಹ ಒಮ್ಮೆ ಮಾಡಿದ ತಪ್ಪಿನ ಪರಿಣಾಮ ಅನುಭವಿಸಿದ ಶಿಕ್ಷೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ.. ತನ್ನೆರಡು ಮಕ್ಕಳ್ಳನ್ನು ಕಳೆದುಕೊಂಡು ಇತ್ತ ದುಡಿಯಲು ಗದ್ದೆಯಿಲ್ಲದೆ, ದುಡಿಯುವ ಮಗನಿಲ್ಲದೆ ಎಲ್ಲ ಕಳೆದುಕೊಂಡ ಮರಿಯಪ್ಪ ಭ್ರಮನಿರಸಗೊಂಡು ಆತ್ಮಹತ್ಯೆಯ ಮಾಡಿಕೊಳ್ಳಲು ನಿರ್ಧಾರಿಸುತ್ತಾನೆ..

ಇಷ್ಟೆಲ್ಲಾ ಸಂಕಷ್ಟ ತಂದೊಡ್ಡಿದ ಅಣೆಕಟ್ಟಿನ ಕಾರ್ಯದಿಂದ ಕಾಡಳ್ಳಿಗೆ ಕರೆಂಟು, ರಸ್ತೆ ಯಾವುದು ಆಗಲೇ ಇಲ್ಲ. ಉತ್ಪಾದಿಸಿದ ಕರೆಂಟ್ ಬೇರೆಡೆ ಖಾಸಗಿ ವಲಯದಲ್ಲಿ ಮಾರುವ ಸರ್ಕಾರ..ಇದರಿಂದ ಲಾಭ ಯಾರಿಗಾದರೂ ನಷ್ಟ ಅನುಭವಿಸಿದ್ದು ಮಾತ್ರ ಅಲ್ಲಿನ ಮುಗ್ದ ರೈತರು. ಒಂದು ಇಡೀ ಕುಟುಂಬದ ನಾಶ. ಓದುತ್ತಾ ಬೇಜಾರ್ ಆಗಿದ್ದಂತೂ ಸುಳ್ಳಲ್ಲ. 

ಒಂದು ಸುಂದರ ಕಾಡಿನ ಹಿಂದೆ ಏಷ್ಟೆಲ್ಲಾ ಖುಷಿ ಇದೆಯೋ ಮನುಷ್ಯನ ಒಂದು ತಪ್ಪಿನ ನಿರ್ಧಾರದಿಂದ ಅಷ್ಟೇ ಪರಿಣಾಮಕಾರಿಯಾದ ನಷ್ಟವಿದೆ ಎನ್ನುವುದಕ್ಕೆ ಈ ಕಥೆ ಸಾಕ್ಷಿ.



ಅಣೆಕಟ್ಟಿನಿಂದ ಎಲ್ಲವನ್ನೂ ಕಳೆದುಕೊಂಡ ಕಾಡಳ್ಳಿ ಜನತೆಗೆ ಕೊನೆಗೆ ಉಳಿದಿದ್ದು ಗಾಢ ಅಂಧಕಾರ ಮಾತ್ರ..