ಪುಸ್ತಕ :- ಮಾಯಾಲೋಕ
ಲೇಖಕರು :- ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ನಾನು ಪೂರ್ಣಚಂದ್ರ ತೇಜಸ್ವಿಯವರ 86ನೇ ಜನ್ಮದಿನದಂದು ತೇಜಸ್ವಿಯವರು ಪ್ರಕೃತಿಯೊಂದಿಗೆ ಬಾಳಿ ಬದುಕಿದ್ದ ಅವರ ಮನೆ ನಿರುತ್ತರಕ್ಕೆ ಭೇಟಿ ನೀಡಿದ್ದೆ, ತೇಜಸ್ವಿಯವರ ಅಭಿಮಾನಿಯಾದ ನನಗೆ ಅವರ ಪ್ರತಿಯೊಂದು ಪುಸ್ತಕಗಳು ತುಂಬಾ ಇಷ್ಟ.. ಅವರ ಪುಸ್ತಕಗಳನ್ನು ಓದಿಕೊಂಡು ನನ್ನದೇ ಆದ ಒಂದು ಕಲ್ಪನಾ ಲೋಕವನ್ನು ಸೃಷ್ಟಿಸಿಕೊಂಡಿದ್ದೆ. ನಾನು ಮೂಡಿಗೆರೆಗೆ ಭೇಟಿ ನೀಡಿದಾಗ ನನಗಾದ ಅನುಭವ ಮರೆಲಾಗದ್ದು, ತೇಜಸ್ವಿಯವರ ಮನೆ,ತೋಟ, ಕೆರೆ, ಕಾಡು ಕಂಡು ಕಲ್ಪನೆಗೆ ಮತ್ತೊಷ್ಟು ರಂಗು ಹಂಚಿದವು. ಅಲ್ಲಿಂದ ಕೊಟ್ಟಿಗೆಹಾರದ ತೇಜಸ್ವಿ ಅವರ ಪ್ರತಿಷ್ಠಾನಕ್ಕೆ ಭೇಟಿ ನೀಡಿದ್ದು ಇವೆಲ್ಲ ಜೀವನದಲ್ಲಿ ಮರೆಯಲಾಗದ ಅನುಭವವನ್ನು ನೀಡಿದೆ.
ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಭೇಟಿ ನೀಡಿದಾಗ ಅಲ್ಲಿ ಎರಡು ಪುಸ್ತಕಗಳನ್ನು ಖರೀದಿಸಿದೆ, ಅದರಲ್ಲೊಂದು ಈ ಮಾಯಾಲೋಕ..
ನಿಜ ನಾನು ಕಲ್ಪಿಸಿಕೊಂಡ ಜಗತ್ತಿಗಿಂತಲೂ ಅಲ್ಲಿನ ಪರಿಸರ ನಿಜಕ್ಕೂ ಮಾಯಾಲೋಕದಂತಿತ್ತು.. ತೇಜಸ್ವಿ ಬಹುತೇಕ ಎಲ್ಲಾ ಪುಸ್ತಕ ಓದಿದ್ದ ನಾನು ಮಾಯಾಲೋಕ & ಹೊಸವಿಚಾರಗಳು ಇವೆರಡೂ ಓದಿರಲಿಲ್ಲ ಏಕೆಂದರೆ ಇವೆರಡರ ಬೆಲೆ ದುಬಾರಿ ಎಂದಷ್ಟೇ..
“ ಮಾಯಾಲೋಕ “ ಪುಸ್ತಕವನ್ನು ತೇಜಸ್ವಿಯವರ ಸರಣಿಕೆಯ ರೂಪದಲ್ಲಿ ತರಬಯಸಿದ್ದರು, ಆದರೆ ಅವರ ಆಕಾಲಿಕ ಅಗಲಿಕೆಯ ಕಾರಣದಿಂದ ಈ ಪುಸ್ತಕ ಒಂದೇ ಸಂಪುಟದಲ್ಲಿ ರಚನೆಯಾಗಿದೆ. ತೇಜಸ್ವಿ ಬದುಕಿದರೇ ?! ಎಂಬ ಒಂದೇ ಮಾತು ಸಾಕು ಮಾಯಾಲೋಕ ಮುಂದಿನ ಭಾಗ ಯಾವ ರೀತಿ ಇರುತ್ತಿರಬಹುದು ಎಂದು ಮೈ ರೋಮಾಂಚನವಾಗುತ್ತದೆ..
ತೇಜಸ್ವಿಯವರ ಮನೆ, ಹ್ಯಾಂಡ್‌ಪೋಸ್ಟ್, ಮೂಡಿಗೆರೆ ನೋಡಿದ ಮೇಲೆ ಈ ಪುಸ್ತಕ ಓದಿದ್ದು ನನ್ನ ಸೌಭಾಗ್ಯ.. ಪುಸ್ತಕದಲ್ಲಿ ಕತೆ ಈ ಸ್ಥಳಗಳಲ್ಲಿ ನಡೆಯುವುದರಿಂದ ಇನ್ನೂ ಖುಷಿ ನೀಡುತ್ತೆ..
ತೇಜಸ್ವಿ ತಾವು ಜೀವಿಸಿದ ಕಂಡ ಮೂಡಿಗೆರೆಯನ್ನು ಅಲ್ಲಿನ ಜನರ ಜೀವನ ಶೈಲಿಯನ್ನು, ದಿನನಿತ್ಯದ ಸಹಜ ಘಟನೆಗಳ ಮೂಲಕ ಮನಸ್ಸಿಗೆ ಮುಟ್ಟುವಂತೆ ಚಿತ್ರಿಸಿದ್ದಾರೆ, ರಾಜಕೀಯ ವರ್ಗದ ದುರಾಸೆ, ಸರ್ಕಾರಿ ಇಲಾಖೆಯ ಅಧಿಕಾರಗಳ ದರ್ಪ, ರೈತರ ಬವಣೆ, ನೀರಿನ ಸಮಸ್ಯೆ ಮುಂತಾದ ವಿಚಾರಗಳನ್ನು ಹಾಸ್ಯಭರಿತ ತಮ್ಮದೇ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ..
ಕತೆಯಲ್ಲಿ ಮೂಡಿಗೆರೆ ಗೊಂದಲಗೇರಿ ಆಗಿದೆ, ಹೆಸರಿಗೆ ತಕ್ಕಂತೆ ಗೊಂದಲದಿಂದ ಗದ್ದಲದಿಂದ ತುಂಬಿದ ಮಾಯಾಲೋಕವಾದು.. ಕತೆಯಲ್ಲಿ ಬರುವ ಕರಾಟೆ ಮಂಜು, ಕುತಂತ್ರಿ ಅಣ್ಣಪ್ಪಣ್ಣ, ಕುಡುಕ ಭಂಡಾರಿ ಬಾಬು, ಜಗ್ಗಣ್ಣ, ಪ್ರಕಾಶವಾಣಿ ಪತ್ರಿಕೆಯ ಸಂಪಾದಕ ಪ್ರಕಾಶ, ತರಕಾರಿ ಅಂಗಡಿ ಜಲೀಲ್ ಸಾಬು, ವಲಸೆ ಕಾರ್ಮಿಕ ತಿಮ್ಮಾಬೋಯಿ, ಗ್ರಾಮೀಣ ನೀರು ಸರಜರಾಜು ವ್ಯವಸ್ಥೆಯನ್ನು ನೋಡಿಕೊಳ್ಳುವ ಇಕ್ಬಾಲ್ ಸಾಬು, ಸೈಕಲ್ ರಿಪೇರಿ ಷಾಪಿನ ಜಾನ್ ಬೆಟ್ಟಯ್ಯ, ಕಾರ್ಮಿಕ ನಾಯಕ ಡೆಲ್ಫಿ, ರೈತಸಂಘ ಕಟ್ಟುವ ಉತ್ಸಾಹದಲ್ಲಿರುವ ಶೇಖರ, ರೈತ ಸಂಘದ ಅಧ್ಯಕ್ಷ್ಯ ಮಿಲ್ ಬಸವೇಗೌಡ, ಎಲೆಕ್ಟ್ರಿಸಿಟಿ ಜೆ.ಇ. ಮಲ್ಲಿಕಾರ್ಜುನ, ಅನಿಯಮಿತ ವಿದ್ಯುತ್ ಸರಬರಾಜಿನಿಂದ ನಿದ್ದೆಗೆಟ್ಟು ಉಗ್ರನಾದ ರೈತ ಉಗ್ರಪ್ಪ, ಎಮ್.ಎಲ್.ಎ. ಮಾರಪ್ಪ ಹೇಳುತ್ತಾ ಹೋದರೆ ಮಾಯಾಲೋಕದ ವಿಸ್ತಾರ ಅಪಾರ. ಸೂರಣ್ಣ, ಜಗ್ಗಣ್ಣ, ಅಬ್ಬೂಸ್ ಬೇರಿ, ಅವನ ಹಳೇಕಾಲದ ವಿಕ್ಕಿ ಮೋಪಡ್, ಮಕ್ಕೀಗದ್ದೆ ಬಾಯಮ್ಮ ಇತ್ಯಾದಿ ಇತ್ಯಾದಿ….
ಮಲೆನಾಡಿನಲ್ಲಿ ಬೇಸಿಗೆ ಬಂತೆಂದರೆ ಮಾಡಲು ಕೆಲಸವಿಲ್ಲದೆ ಜಗಳ ಹೊಡೆದಾಟ ಸಾಮಾನ್ಯದಂತಾಗುತ್ತದೆ. ಊರಳ್ಳಿ - ಮಕ್ಕಿಗದ್ದೆ ನಡುವಿನ ನೀರಿನ ಜಗಳದ ಸನ್ನಿವೇಶಗಳು.
ಪುಸ್ತಕದಲ್ಲಿ ನನಗೆ ಇಷ್ಟವಾಗಿದ್ದು, ಅಣ್ಣಪ್ಪಣ್ಣ & ಕರಾಟೆ ಮಂಜು..
ಮಂಜು ಶ್ರಮಜೀವಿ,ಇವನು ಮಾಡದ ಕೆಲಸವಿಲ್ಲ, ಪಾನಿಪೂರಿ,ಎಳನೀರು,ಆಟೋ ಡ್ರೈವರ್, ಪ್ರೆಸ್ ರಿಪೋರ್, ಫೋಟೋಗ್ರಾಫರ್ ಹೀಗೆ ಯಾವುದೇ ಕೆಲಸವಿರಲಿ ಶ್ರದ್ಧೆವಹಿಸಿ ಮಾಡುವನು, ಪೋಲಿ ಹುಡುಗರಿಗೆ ಒದ್ದು ಬುದ್ದಿ ಕಲಿಸ ಹಿರೋ, ತೇಜಸ್ವಿಯವರಿಗೆ ಪೋಟೋ ಸ್ಪಾಟ್ ಹೋಳುವ ಇನ್ಫಾರ್ಮರ್,
ಇನ್ನೂ ಪುಸ್ತಕದ ಉದ್ದಕ್ಕೂ ಬಂದು ಕಾಡುವ,ನಗಿಸುವ, ಅಣ್ಣಪ್ಪಣ್ಣ.. ಊರಳ್ಳಿಯ ರೈತ, ತನ್ನ ಗದ್ದೆಯಲ್ಲಿ ಮೆಣಸಿನಕಾಯಿ ಬೆಳೆಗೆ ನೀರು ಹಾರಿಸುವುದು ಅದನ್ನು ಕಾಪಾಡಿಕೊಂಡು ಬರಲು ಮಾಡುವ ಪ್ರಯತ್ನಗಳು, ಇವನ ಕುತಂತ್ರಿ ಬುದ್ದಿ ತೋರಿಸುತ್ತವೆ.. ಹಂದಿಗಾಗಿ ಮಕ್ಕಿಗದ್ದೆ ಬಾಯಮ್ಮನ ಜೊತೆಗೆ ಜಗಳ, ಏಡಿ ಹಿಡಿಯುವ ಪ್ರಸಂಗ, ಅಬ್ಬೂಸ್ ಬೇರಿಯಿಂದ ತಂದ ಮೀನಿನ ಗೊಬ್ಬರ, ಜಾನ್ ಬೆಟ್ಟಯ್ಯನ ಸಲಹೆ ಮೇರೆಗೆ ಗದ್ದೆಗೆ ಕರೆಂಟ್ ಬೇಲಿ ಹಾಕಿ ಮಾಡಿಕೊಂಡ ತಾಪತ್ರಯಗಳು ಓದುಗರಿಗೆ ನಗೆಗಡಲಿನಲ್ಲಿ ತೇಲಿಸುತ್ತವೆ..
ಮಲೆನಾಡಿನಲ್ಲಿ ಬರಗಾಲದಿಂದ ನೀರಿನ ಸಮಸ್ಯೆ, ಕರೆಂಟ್ ಸರಿಯಾಗಿ ನೀಡುತ್ತಿಲ್ಲ ಎಂದು ಕೆಇಬಿ ಅವರೊಂದಿಗೆ ಜಗಳ, ಇದೇ ಸುಸಂದರ್ಭವೆಂದು ಮುಷ್ಕರ ಹೂಡಿವ ರಾಜಕೀಯ ಮುಖಂಡರು, ಮಂಕಾದ ಪತ್ರಿಕೆ ಜೀವ ಬರಬಹುದೆಂದು ಈ ಸುದ್ದಿಯನ್ನು ಪ್ರಕಟಿಸುವ ಪ್ರಕಾಶ, ಹೀಗೆ ಪ್ರತಿಯೊಂದು ಊರಿನಲ್ಲಿ ಈ ಗೊಂದಲಗೇರಿಯ ಘಟನೆಗಳು ನಡೆಯುತ್ತಿರುತ್ತವೆ.. ಕೊನೆಯದಾಗಿ ಧಾರಾಕಾರವಾಗಿ ಸುರಿಯುವ ಮಳೆ ಎಲ್ಲಾ ಸಮಸ್ಯೆಗಳನ್ನು ಅಂತ್ಯಗೊಳಿಸುತ್ತದೆ.. ಗದ್ದಲ ಗೊಂದಲಗಳನ್ನು ಬಿಟ್ಟು ಜನ ಹೊಲ ಗದ್ದೆಗಳ ಕಾರ್ಯದಲ್ಲಿ ನಿರತರಾಗುತ್ತಾರೆ..


