ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Tuesday, November 21, 2017

*ಏನಾದರೂ ಬಿಟ್ಟು ಹೋಗಿದ್ದಾರೆಯೇ?*

*ಏನಾದರೂ ಬಿಟ್ಟು ಹೋಗಿದ್ದಾರೆಯೇ?*

ವಿಚಿತ್ರವೆನಿಸಬಹುದಾದ ಮೇಲಿನ ಶೀರ್ಷಿಕೆಯು ಮೂರು ಘಟನೆಗಳ ನೆನಪು ಮಾಡಿಸುತ್ತದೆ. ಮೂರೂ ಘಟನೆಗಳಲ್ಲಿನ ಪ್ರಶ್ನೆ ಒಂದೇ! ಉತ್ತರ ಮಾತ್ರ ಬೇರೆ-ಬೇರೆ! ಮೊದಲು ಘಟನೆಗಳನ್ನು ನೋಡೋಣ.

ಮೊದಲನೆಯದ್ದು: ಅಮೆರಿಕದ ನಗರ ಸಾರಿಗೆಯ ಬಸ್ಸನ್ನು ಮಹಿಳೆಯೊಬ್ಬರು ಹತ್ತಿದರು. ಚಾಲಕನನ್ನು ಬಸ್ ತಡವಾಗಿ ಏಕೆ ಬಂದಿತೆಂದು ಗದರಿದರು. ಚಾಲಕ ನಸುನಕ್ಕು ಸುಮ್ಮನಾದರು. ಮಹಿಳೆ ಬಸ್ಸಿನಲ್ಲಿ ಖಾಲಿಯಿದ್ದ ಸೀಟೊಂದರಲ್ಲಿ ಕುಳಿತುಕೊಳ್ಳುತ್ತಾ ಪಕ್ಕದಲ್ಲಿದ್ದ ಒಬ್ಬ ಅಜ್ಜಿಯನ್ನು ‘ಬಸ್ಸಿನಲ್ಲಿರುವ ಜನರಿಂದ ದುರ್ವಾಸನೆ ತುಂಬಿದೆ. ಹೇಸಿಗೆಯಾಗುತ್ತದೆ. ಈ ಜನ ಎಷ್ಟು ಗಟ್ಟಿಯಾಗಿ ಮಾತನಾಡುತ್ತಿದ್ದಾರೆ? ತಲೆ ಚಿಟ್ಟು ಹಿಡಿಯುತ್ತದೆ.

ಅದಿರಲಿ, ಮುದಿವಯಸ್ಸಿನಲ್ಲಿ ನಿಮಗೆ ಸುತ್ತಾಡುವ ಚಟವೇ? ಮನೆಯಲ್ಲಿ ಕುಳಿತಿರಬಾರದೆ?’… ಎನ್ನುತ್ತಾ ಏನೇನೋ ಮಾತನಾಡಿದರು. ಅಜ್ಜಿ ಮುಜುಗರಗೊಳ್ಳುತ್ತಲೇ ‘ಏನು ಮಾಡಲಿ ಮೇಡಂ, ನನ್ನ ಮಗಳು ಆಸ್ಪತ್ರೆಯಲ್ಲಿದ್ದಾಳೆ. ಅವಳನ್ನು ನೋಡಲು ಹೋಗುತ್ತಿದ್ದೇನೆ. ಅದಕ್ಕಾಾಗಿ ಬಸ್ ಪ್ರಯಾಣ’ ಎಂದರು. ಆದರೂ ಮಹಿಳೆ ಬಸ್ಸಿನಲ್ಲಿ, ಪ್ರಯಾಣಿಕರಲ್ಲಿ ತಪ್ಪುಗಳನ್ನು ಹುಡುಕುತ್ತಲೇ ಕಿರುಚಾಡುತ್ತಿದ್ದರು.

ಆಕೆ ಇಳಿಯಬೇಕಾದ ಸ್ಟಾಪ್ ಬಂದಿತು. ಆಕೆ ಇಳಿಯುವಾಗಲೂ ಚಾಲಕನನ್ನು ಕುರಿತು ‘ನೀವು ಓಡಿಸುತ್ತಿರುವುದು ಬಸ್ಸೋ ಅಥವಾ ಕುದುರೆ ಗಾಡಿಯೋ? ನಿಮ್ಮ ನಿಧಾನ ಗತಿ ಅಸಮಾಧಾನವನ್ನುಂಟು ಮಾಡುತ್ತದೆ’ ಎಂದು ಹೇಳುತ್ತಿದ್ದರು. ಆಗ ಚಾಲಕ ‘ಮೇಡಂ, ನೀವು ಬಸ್ಸಿನಿಂದಿಳಿದು ಹೋಗುತ್ತಿದ್ದೀರಿ. ಆದರೆ ಏನನ್ನೋ ಬಿಟ್ಟು ಹೋಗುತ್ತಿದ್ದೀರಿ’ ಎಂದರು. ಮಹಿಳೆ ಆಶ್ಚರ್ಯಗೊಂಡರು. ತಮ್ಮ ದೊಡ್ಡ ಕೈಚೀಲವನ್ನು ಮುಟ್ಟಿ ನೋಡಿಕೊಂಡರು. ಆಕೆ ‘ನಾನು ಏನನ್ನೂ ಬಿಟ್ಟು ಹೋಗುತ್ತಿಲ್ಲವಲ್ಲಾ! ನಾನು ಏನನ್ನು ಬಿಟ್ಟು ಹೋಗುತ್ತಿದ್ದೇನೆ?’ ಎಂದು ಕೇಳಿದರು. ಆಗ ಬಸ್ ಚಾಲಕರು ನಗುನಗುತ್ತಲೇ ‘ಕೆಟ್ಟ ಅನುಭವ’! ಎಂದರು. ಮಹಿಳೆ ಮುಖ ಗಂಟಿಕ್ಕಿಕೊಂಡು ಹೋದರು.

ಎರಡನೆಯ ಘಟನೆ: ಒಂದು ಹೋಟೆಲ್ಲಿಗೆ ವಯೋವೃದ್ಧ ಅಪ್ಪ ಮತ್ತು ಅವರ ಮಧ್ಯ ವಯಸ್ಸಿನ ಮಗ ಬಂದರು. ಮಗನೇ ಒಳ್ಳೆಯ ಮೇಜು-ಕುರ್ಚಿ ಹುಡುಕಿ ತಂದೆಯವರನ್ನು ಕೂರಿಸಿದರು. ತಂದೆಯವರು ಹೇಳಿದ ತಿಂಡಿ-ತಿನಿಸುಗಳನ್ನೇ ತರಿಸಿದರು. ಅದನ್ನು ತಿನ್ನಲು ತಂದೆಗೆ ಸಹಾಯ ಮಾಡಿದರು. ಊಟ ಮುಗಿದ ನಂತರ ತಂದೆಯವರನ್ನು ಕೈಹಿಡಿದು ಎಬ್ಬಿಸಿ ನಿಧಾನವಾಗಿ ಹೊರಕ್ಕೆ ಕರೆದುಕೊಂಡು ಹೋದರು. ಆಗ ಹೋಟೆಲ್ಲಿನಲ್ಲಿ ಕುಳಿತಿದ್ದ ಹಿರಿಯ ಗ್ರಾಹಕರೊಬ್ಬರು ಬಂದು ಮಗನಿಗೆ ‘ನೀವು ಏನೋ ಬಿಟ್ಟು ಹೋಗುತ್ತಿದ್ದೀರಿ’ ಎಂದರು. ಮಗ ಆಶ್ಚರ್ಯದಿಂದ ‘ಏನು ಬಿಟ್ಟು ಹೋಗುತ್ತಿದ್ದೇನೆ?’ ಎಂದು ಕೇಳಿದಾಗ ಹಿರಿಯರು ‘ಮಕ್ಕಳಿಗೆಲ್ಲಾ ಒಳ್ಳೆಯ ಪಾಠವನ್ನು ಬಿಟ್ಟು ಹೋಗುತ್ತಿದ್ದೀರಿ!’ ಎಂದರಂತೆ.

ಮೂರನೆಯ ಘಟನೆ: ಒಬ್ಬ ತಂದೆ ಸತ್ತು ಹೋದರು. ಅವರ ಮಗನಿಗೆ ಸಾಂತ್ವನ ಹೇಳಲು ಅವರ ಸ್ನೇಹಿತರು ಬಂದರು. ಸಂದರ್ಭೋಚಿತವಾದ ಮಾತುಗಳನ್ನಾಡಿದರು. ಆನಂತರ ‘ನಿಮ್ಮ ತಂದೆ ಏನಾದರೂ ಬಿಟ್ಟು ಹೋಗಿದ್ದಾರೆಯೇ?’ ಎಂದು ಕೇಳಿದರು. ಮಗ ‘ಏನನ್ನೂ ಬಿಟ್ಟು ಹೋಗಿಲ್ಲ’ ಎಂದರು. ಆಗ ಸ್ನೇಹಿತರು ‘ಅವರು ಬದುಕಿನಲ್ಲಿ ಬಹಳಷ್ಟು ಹಣವನ್ನು ಗಳಿಸಿದ್ದರಂತೆ?’ ಎಂದು ಕೇಳಿದರು. ಮಗ ‘ನಿಮ್ಮ ಮಾತು ನಿಜ. ಆದರೆ ನಮ್ಮ ತಂದೆ ಹಣ ಗಳಿಸುವ ಅವಸರದಲ್ಲಿ ಆರೋಗ್ಯ ಕಳೆದುಕೊಂಡರು. ಕೊನೆಗೆ ಆರೋಗ್ಯವನ್ನು ಮರಳಿ ಗಳಿಸಲು ಹಣವನ್ನೆಲ್ಲಾ ಕಳೆದುಕೊಂಡರು. ಆದರೂ ಸತ್ತು ಹೋದರು. ಹಾಗಾಗಿ ಅವರು ಏನನ್ನೂ ಬಿಟ್ಟು ಹೋಗಿಲ್ಲ’ ಎಂದರಂತೆ.

ಮೊದಲ ಎರಡು ಘಟನೆಗಳನ್ನು ಅಂತರ್ಜಾಲದಲ್ಲಿ ಯಾರೋ ಪುಣ್ಯಾತ್ಮರು ಹಾಕಿದ್ದುದನ್ನು ಓದಿದ್ದು. ಮೂರನೆಯ ಘಟನೆಯನ್ನು ಹಿರಿಯ ವಿದ್ವಾಂಸರಾದ ಡಾ.ಗೊ.ರು.ಚನ್ನಬಸಪ್ಪನವರ ಉಪನ್ಯಾಸವೊಂದರಲ್ಲಿ ಕೇಳಿದ್ದು. ಅವರೆಲ್ಲರಿಗೂ ಪ್ರಣಾಮಗಳು. ನಮ್ಮೆಲ್ಲರ ಬದುಕೂ ಒಂದು ರೀತಿಯ ಬಸ್ ಪ್ರಯಾಣವೇ ಅಲ್ಲವೇ? ನಾವು ನಮ್ಮ ಬದುಕಿನ ಬಸ್ಸಿನಿಂದಿಳಿದು ಹೋಗುವಾಗ ಏನಾದರೂ ಬಿಟ್ಟು ಹೋಗಿದ್ದಾರೆಯೇ? ಎಂದು ಕೇಳಿದರೆ, ಉತ್ತರ ಏನು ಸಿಗಬಹುದು? ಕೆಟ್ಟ ಅನುಭವವೋ? ಒಳ್ಳೆಯ ಪಾಠವೋ? ಅಥವಾ ಏನೂ ಇಲ್ಲವೋ?

Monday, November 6, 2017

ಇದು ನನ್ನ ಕನ್ನಡದ ಗ್ರುಪ್ follow ಮಾಡಿ

https://plus.google.com/collection/kNyzu

📖 *ಮಂಕುತಿಮ್ಮನ ಕಗ್ಗ* 📖

📖 *ಮಂಕುತಿಮ್ಮನ ಕಗ್ಗ* 📖

ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು? |
ಚಂಡಚತುರೋಪಾಯದಿಂದಲೇನಹುದು ? ||
ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು |
ಅಂಡಲೆತವಿದಕೇನೋ? – ಮಂಕುತಿಮ್ಮ ||

ಸಾರಾಂಶ:

ಚಂಡ = ಉಗ್ರ, ಚತುರೋಪಾಯ = ನಾಲ್ಕು ವಿಧವಾದ ಉಪಾಯಗಳು, ಮುಗಿದೇನಹುದು = ಮುಗಿದು ಏನು ಅಹುದು= ಮುಗಿದರೆ ಏನಾಗುತ್ತದೆ. ತಂಡುಲ = ಅಕ್ಕಿ, ಅಂಡಲೆತ = ಸುಮ್ಮನೆ ಸುತ್ತಾಟ.

ಅಂದಿನ ಮತ್ತು ಇಂದಿನ ವಾಸ್ತವಿಕ ಚಿತ್ರಣವನ್ನು ನಮಗೆ ಗುಂಡಪ್ಪನವರು ಕೊಟ್ಟಿದ್ದಾರೆ ಈ ಕಗ್ಗದಲ್ಲಿ. ನಮ್ಮಲ್ಲಿ ಅನೇಕ ದೇವರುಗಳು. ಆ ದೇವರುಗಳ ಸಂಖ್ಯೆ ಎಷ್ಟಿದೆಯಂದರೆ ಎಣಿಸಲೂ ಸಾಧ್ಯವಿಲ್ಲ. ಒಂದುಕಡೆ ತಿರುಪತಿ ತಿಮ್ಮಪ್ಪನಾದರೆ, ಇನ್ನೊಂದು ಕಡೆ, ಬದರಿಯ ಬದರೀನಾಥ, ಒಂದುಕಡೆ ಮಧುರೆಯ ಮೀನಾಕ್ಷಿಯಾದರೆ, ಇನ್ನೊಂದುಕಡೆ ಕಾಶಿಯ ವಿಶಾಲಾಕ್ಷಿ, ಒಂದುಕಡೆ ಪೂರಿಯ ಜಗನ್ನಾಥನಾದರೆ ಇನ್ನೊಂದುಕಡೆ ತಿರುವನಂತಪುರದ ಅನಂತಪದ್ಮನಾಭ, ಒಂದುಕಡೆ ವಿನಾಯಕನಾದರೆ, ಇನ್ನೊಂದುಕಡೆ ಷಣ್ಮುಖ, ಹೀಗೇ ಬರೆಯುತ್ತಹೋದರೆ ಪಟ್ಟಿ ಬಹಳ ಉದ್ದ ಆದೀತು. ದೇಶ ಕಾಲ ಸಂಧರ್ಭಕ್ಕನುಗುಣವಾಗಿ ನಮಗೆ ನಾವು ಪೂಜಿಸುವ ದೇವತೆಗಳು ಬದಲಾಗುತ್ತ ಹೋಗುತ್ತಾರೆ. ಇದನ್ನೇ ಗುಂಡಪ್ಪನವರು “ಕಂಡ ದೈವಕ್ಕೆಲ್ಲ” ಎಂದಿರಬೇಕು.

ಆದರೆ ಇದು ಸರಿಯೇ ಅಲ್ಲವೇ ಎಂದು ಸ್ವಲ್ಪ ವಿಶ್ಲೇಷಿಸೋಣವೇ? ಭಾರತೀಯರಾದ ನಮಗೆ ಎಲ್ಲವೂ ದೈವವೇ? ಗಿಡ ಮರ ಬಳ್ಳಿ ನದಿ ಗುಡ್ಡ ಬೆಟ್ಟ, ಆಕಾಶ ಸೂರ್ಯ ಚಂದ್ರ ಎಲ್ಲ ಗ್ರಹಗಳು, ಪಕ್ಷಿ ಮೀನು ಪ್ರಾಣಿಗಳು ಎಲ್ಲವೂ ದೇವರೇ. ಅಷ್ಟೇ ಅಲ್ಲ ಎಲ್ಲದರಲ್ಲೂ ದೈವವನ್ನು ಕಾಣುವ ಸಂಸ್ಕೃತಿ ನಮ್ಮದು. ಅವುಗಳನ್ನೆಲ್ಲ ಕಾಪಾಡುವ ಕಾರಣದಿಂದ ಅವುಗಳಿಗೆಲ್ಲ ದೈವತ್ವವನ್ನು ಆರೋಪಿಸಿದ್ದಾರೆ ನಮ್ಮ ಪೂರ್ವಜರು. ಒಂದು ರೀತಿಯಲ್ಲಿ ಇದು ಒಳ್ಳೆಯದೇ ಅಲ್ಲವೇ ವಾಚಕರೆ? ಆದರೆ ವ್ಯಕ್ತಿ ಆಂತರ್ಯದಲ್ಲಿ ಬೆಲ್ಯುತ್ತಾ ಹೋದಂತೆಲ್ಲ ಅನೇಕದಿಂದ ಏಕಕ್ಕೆ ಬರುವುದೇ ಅಧ್ಯಾತ್ಮಸಾಧನೆಯ ಗುರಿ. ಆಕಾರದಿಂದ ನಿರಾಕಾರಕ್ಕೆ ಬರುವುದೇ ಎಲ್ಲ ಸಾಧನೆಯ ಫಲ.

ಆದರೆ ನಾವು ಏಕೆ ಈ ದೈವಕ್ಕೆ ಕೈ ಮುಗಿಯುತ್ತೇವೆ? ಇದಕ್ಕೆ ನನ್ನ ಅರಿವಿನ ಪರಿಮಿತಿಯಲ್ಲಿ ವಿವರಿಸುತ್ತೇನೆ. ನಮಗೆ ಆಸೆಗಳುಂಟು. ಆಸೆಗಳು ನಾವು ಈ ಬದುಕಿಗೆ ಅಂಟಿಕೊಂಡಿರುವುದರಿಂದ ಉಂಟು. ಈ ಆಸೆಯ ಪಕ್ಕ ಪಕ್ಕದಲ್ಲೇ ಒಂದು ಭಯವೂ ಉಂಟು. ಮಾನವರಿಗೆ ಎರಡು ರೀತಿಯ ಭಯಗಳುಂಟು. ಒಂದು ತನ್ನಲ್ಲಿರುವ ವಸ್ತು, ವಿಷಯ ಅಥವಾ ವ್ಯಕ್ತಿ ಯನ್ನು ಕಳೆದುಕೊಳ್ಳುವ ಭಯ. ಎರಡು, ತಾನು ಆಸೆ ಪಟ್ಟ ವಸ್ತು, ವ್ಯಕ್ತಿ, ವಿಷಯಗಳು ಸಿಗದೆಹೋಗುವ ಭಯ. ಮಾನವನ ಎಲ್ಲ ಭಯಗಳನ್ನೂ ಈ ಎರಡು ಅಂದರೆ ಎರಡೇ ವಿಭಾಗಗಳಲ್ಲಿ ಸೇರಿಸಬಹುದು. ಮೂರನೆಯದು ನನಗೆ ಗೋಚರಿಸುತ್ತಿಲ್ಲ.

ಆದರೆ ಈ ಭಯ ಸಹಜವಾದದ್ದೇ. ಮನುಷ್ಯನಿಗೆ ತನ್ನ ಜೀವನದಲ್ಲಿ ತನಗೆ ಸಂಬಂಧಿಸಿದ ಎಲ್ಲ ವ್ಯಕ್ತಿ, ವಿಷಯ ಮತ್ತು ವಸ್ತುವಿನ ಮೇಲೆ ಮಮಕಾರವಿರುತ್ತದೆ. ಈ ಮಮಕಾರವೇ ಈ ಭಯಕ್ಕೆ ಕಾರಣ. ಈ ವ್ಯಕ್ತಿ, ವಿಷಯ ಮತ್ತು ವಸ್ತುಗಳು ಹಲವಿಧದಲ್ಲಿ ಇರಬಹುದು, ತನ್ನವರು, ಅವರಿಗೆ ಸಂಬಂಧಿಸಿದ ವಿಷಯಗಳಾದ, ಆರೋಗ್ಯ, ವಿದ್ಯೆ, ಪರಸ್ಪರ ಸಬಂಧಗಳು, ವಿವಾಹಕ್ಕೆ, ಪ್ರೇಮಕ್ಕೆ, ಉದ್ಯೋಗ, ಹಣಕಾಸು, ಹೀಗೆ ಹತ್ತು ಹಲವಾರು ವಿಷಯಗಳಿಗೆ ನಾವು ಅಂಟಿಕೊಂಡಿರುತ್ತೇವೆ. ಅವುಗಳಲ್ಲಿ ಇರುವುದು ಕಳೆದು ಹೋಗುವ ಭಯ ಅಥವಾ ಬಯಸಿದ್ದು ಆಗದೆ ಹೋಗಬಹುದಾದ ಭಯ. ಕಳೆದು ಹೋಗುವುದು ಏಕೆ? ಬಯಸಿದ್ದು ಆಗದೆ ಹೋಗುವುದು ಏಕೆ? ಎಂದು ಖಚಿತವಾಗಿ ನಮಗೆ ಅರಿಯದಾದಾಗ ಮತ್ತು ಸಂಶಯಗಳಿದ್ದಾಗ, ನಮಗರಿಯದ ಯಾವುದೋ ಶಕ್ತಿ ಅಥವಾ ನಮ್ಮನ್ನು ಕಾಯುವ ಯಾವುದೋ ಶಕ್ತಿಗೆ ನಾವು ಕೈಮುಗಿದು, ಬೇಡುವುದೋ ಅಥವಾ ಶರಣಾಗುವುದೋ ಮಾಡುತ್ತೇವೆ. ಅದನ್ನೇ ಗುಂಡಪ್ಪನವರು ” ಆ ವಿಚಿತ್ರಕೆ ಶರಣಾಗೋ ” ಎನ್ನುತ್ತಾರೆ.

ಭಾರತೀಯರಾದ ನಮಗೆ ಎಲ್ಲವೂ ದೇವರೇ ಆದ್ದರಿಂದ, ಇಷ್ಟೊಂದು ಬಗೆಬಗೆಯ ದೇವರುಗಳು ನಮ್ಮಲ್ಲಿ, ಹಣಕ್ಕೊಬ್ಬ, ಗುಣಕ್ಕೊಬ್ಬ, ವಿದ್ಯೆಗೊಬ್ಬ, ಆರೋಗ್ಯಕ್ಕೊಬ್ಬ, ಪಾಪನಾಶನಕ್ಕೊಬ್ಬ, ಪರಮಾರ್ಗಕ್ಕೊಬ್ಬ. ಮತ್ತು ಈ ದೇವತೆಗಳನ್ನು ಒಲಿಸಿಕೊಳ್ಳಲು ಹಲವಾರು ವಿಧಾನಗಳು. ದರ್ಶನ, ಅರ್ಚನೆ, ಅಭಿಷೇಕ, ದಾನ,ಧ್ಯಾನ, ಭಜನೆ, ಆನ್ನ ಸಂತರ್ಪಣೆ, ಸಮಾರಾಧನೆ, ಪರೋಪಕಾರದ ಕೆಲಸಗಳು, ಹೋಮ, ಹವನ, ಯಜ್ಞ, ಯಾಗಾದಿಗಳು, ಹೀಗೆ ನಮಗೆ ತೋಚಿದ್ದು, ಮತ್ತು ಪರರಿಂದ ಸೂಚಿಸಲ್ಪಟ್ಟ, ಸಾಮ, ದಾನ , ಬೇಧ, ದಂಡದಂತ ತುರೋಪಾಯಗಳನ್ನೂ ಉಪಯೋಗಿಸಿ, ನಮ್ಮ ಕಾರ್ಯ ಸಾಧನೆಗೆ ಆ ದೇವರನ್ನು ಸದಾಕಾಲ ಒಲಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ಒಂದು ಮಾನಸಿಕ ಸ್ವಯಂ ಚಿಕಿತ್ಸೆ. ನಮ್ಮ ಮನಸ್ಸುಗಳಲ್ಲಿ ಉದ್ಭವಿಸುವ ಹಲವಾರು ಪ್ರಶ್ನೆ ಮತ್ತು ಸಂದೇಹಗಳಿಗೆ ನಾವೇ ಕಂಡುಕೊಳ್ಳುವ ಸಮಾದಾನ.

ಇದು ಅಧ್ಯಾತ್ಮ ಪ್ರಯಾಣದ ಒಂದು ಸ್ತರ. ಅವರವರ ಮಟ್ಟಿಗೆ ಸರಿ. ಆದರೆ ಗುಂಡಪ್ಪನವರು ” ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು” ಒಂದು ಹಿಡಿ ಅಕ್ಕಿಗಾಗಿ, ಹೊಟ್ಟೆ ತುಂಬಿಸಿಕೊಳ್ಳಲು, ಗೇಣುದ್ದ ಬಟ್ಟೆಗಾಗಿ, ಮೈಮುಚ್ಚಲು ಮನುಷ್ಯ ಇಷ್ಟೆಲ್ಲಾ ಮಾಡಬೇಕೆ, ಎಂಬ ಭಾವದಲ್ಲಿ ಒಂದು ವೈರಾಗ್ಯದ ವಿಷಯವನ್ನು ಪ್ರಸ್ತಾಪ ಮಾಡುತ್ತಾರೆ. ಆದರೆ ವೈರಾಗ್ಯವು ಅನುಭವದಿಂದ ಮಾತ್ರ ಬರಲು ಸಾಧ್ಯ. ಅಂತಹ ಅನುಭವನ್ನ್ನು ಕೊಡುವುದೇ ಜೀವನ. ಅಂತ ಅನುಭವಗಳನ್ನು ಪಡೆದು ಅನುಭವಿಸಿ, ಇಲ್ಲಿ ಯಾವುದರಿಂದಲೂ ಏನೂ ಆಗುವುದಿಲ್ಲ, ನಾನು ಇಲ್ಲಿನವನಲ್ಲ, ನನ್ನ ಮೂಲ ಬೇರೆ ಇದೆ, ” ಅಲ್ಲಿದೆ ನಮ್ಮ ಮನೆ. ನಾನೇಕೆ ಬಂದೆ ಸುಮ್ಮನೆ” ಎಂದು ಪುರಂದರದಾಸರು ಹೇಳುವಹಾಗೆ, ನಮಗೆ ಈ ಪ್ರಪಂಚದಿಂದ ಏನೂ ಆಗಬೇಕಾಗಿಲ್ಲವೆಂಬ “ನಿಜ” ವೈರಾಗ್ಯದ ಭಾವ ಮನದಲ್ಲಿ ಸ್ಥಿರವಾಗಿ ಮೂಡಿದರೆ…………….. ಆದರೆ ಕೆಲವರು ಹೀಗೂ ಯೋಚನೆ ಮಾಡುತ್ತಾರೆ, ಆ ವೈರಾಗ್ಯ ಬೇಕೆ? ಈ ಜೀವನದಾಚಿನದು ಏನೋ ಗೊತ್ತಿಲ್ಲ. ಗೊತ್ತಿಲ್ಲದ ವಿಷಯದಲ್ಲಿ ಆಸಕ್ತಿ ತೋರಿ, ಇರುವುದನ್ನು ಬಿಡುವುದು ಸರಿಯಲ್ಲ. ಬದುಕಿರುವ ತನಕ ಬದುಕನ್ನು ಅನುಭವಿಸಿ ಬದುಕಬೇಕು, ಎನ್ನುತ್ತಾರೆ.

ಏನಾದರಾಗಲಿ ಒಂದುಕಡೆ ಈ ಜಗತ್ತು ಮತ್ತು ಸಂಸಾರದಲ್ಲಿ ರಕ್ತಿ ಇನ್ನೊಂದುಕಡೆ ವಿರಕ್ತಿ. ಯಾವುದು ಬೇಕೋ ಅದನ್ನು ಆಯ್ದುಕೊಳ್ಳಲು ಎಲ್ಲರಿಗೂ ಸಂಪೂರ್ಣ ಸ್ವಾತಂತ್ರ್ಯ. ನಮ್ಮ ನಮ್ಮ ವಿಚಾರಗಳು ನಮಗೆ ಸಂತೋಷ ನೀಡಬೇಕು ಅಷ್ಟೇ.

Sunday, November 5, 2017

📖*ಮಂಕುತಿಮ್ಮನ ಕಗ್ಗ*📖

📖*ಮಂಕುತಿಮ್ಮನ ಕಗ್ಗ*📖

ಗಾಳಿ ಮಣ್ಣು೦ಡೆಯೊಳಹೊಕ್ಕು ಹೊರಹೊರಳಲದು |
ಆಳೆನಿಪುದಂತಾಗದಿರೆ ಬರಿಯ ಹೆಂಟೆ ||
ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ|
ಕ್ಶ್ವೇಳವೇನಮೃತವೇಂ ? – ಮಂಕುತಿಮ್ಮ ||

ಸಾರಾಂಶ:

ಮಣ್ಣು೦ಡೆಯೊಳಹೊಕ್ಕು = ಮಣ್ಣ + ಉಂಡೆ + ಒಳ + ಹೊಕ್ಕು , ಹೊರಹೊರಳಲದು = ಹೊರ + ಹೊರಳಲು + ಅದು
ಆಳೆನಿಪುದಂತಾಗದಿರೆ = ಆಳು + ಎನಿಪುದು + ಅಂತೆ + ಆಗದಿರೆ, ತಿಕ್ಕಿದುರಿಯ = ತಿಕ್ಕಿದ + ಉರಿಯ, ಕ್ಶ್ವೇಳವೇನಮೃತವೇಂ = ಕ್ಶ್ವೇಳವೇನು + ಅಮೃತವೇನು
ಈ ದೇಹವನ್ನು ಮಣ್ಣು೦ಡೆಗೆ ಹೋಲಿಸಿದ್ದಾರೆ ಮತ್ತು ಈ ದೇಹದಲ್ಲಿ ಆಡುವ ಉಸಿರು (ಗಾಳಿ) ಆಡುತ್ತಿದ್ದರೆ ನಾವುಗಳು “ಆಳು” ಎಂದು ಎನ್ನಿಸಿ ಕೊಳ್ಳುತ್ತೇವೆ. ಇಲ್ಲದಿದ್ದರೆ ಈ ದೇಹ ಬರೀ ಮಣ್ಣಿನ ಹೆಂಟೆ ಎಂದು ಒಂದು ಅತ್ಯುತ್ತ್ತಮ ಸತ್ಯವನ್ನು ಪ್ರತಿಪಾದಿಸುತ್ತಾರೆ. ಇಂದು ನಮ್ಮ ಸ್ನೇಹಿತರೊಬ್ಬರು ಇದಕ್ಕೆ ಸರಿಯಾಗಿ” ಬಡಿತ ನಿಂತರೆ ಬಡಿವಾರ ಬಂದ್ ” ಎಂದು ಹಿಂದಿನ ಕಗ್ಗಕ್ಕೆ ಪ್ರತಿಕ್ರಿಯೆ ನೀಡಿ, ಬಹಳ ಸೂಕ್ತವಾಗಿ ಹೇಳಿದರು. ಬಹುಶಃ ಅವರಿಗೆ ಇಂದಿನ ಕಗ್ಗದ ಪರಿಚಯವಿತ್ತೇನೋ ಎಂದು ಅನ್ನಿಸುತ್ತದೆ. ಇರಲಿ ಗುಂಡಪ್ಪನವರು ಈ ಬಾಳನ್ನು ದೂಳ ಸುಳಿ ಎಂದು ಕರೆಯುತ್ತಾರೆ. ಇದು ಬಹಳ ಸೂಕ್ತವಾಗಿದೆ. ಏಕೆಂದರೆ,

ನಾನು ಹಿಂದೆ ಒಮ್ಮೆ ಈ ಬ್ರಹ್ಮಾಂಡದ ವಿವರಣೆಯನ್ನು ಮಾಡುವಾಗ, ಇಡೀ ಬ್ರಹ್ಮಾಂಡವು ಎಷ್ಟು ದೊಡ್ಡದೆಂದರೆ, ಇದರೆದುರು ನಾವು ಒಂದು ದೂಳ ಕಣವೂ ಅಲ್ಲ ಎಂದು ಹೇಳಿದ್ದೆ. ಈಗ ಮಣ್ಣಿಂದ ಆದ, ಮತ್ತು ಈ ಸಮಸ್ತ ಭೂಮಂಡಲವನ್ನು ನಿವಾಸಸ್ಥಾನವನ್ನಾಗಿಸಿಕೊಂಡ ಪ್ರಾಣಿಗಳೆಲ್ಲವೂ ಧೂಳ ಕಣಗಳೇ ಎಂದು ಗುಂಡಪ್ಪನವರು ಹೇಳುತ್ತಾರೆ.

ಮಣ್ಣಿಂದ ಆದ ಜೀವಕಣಗಳು ಮತ್ತು ಈ ಜೀವಕಣಗಳಿಂದಾದ ಈ ದೇಹವೂ ಮಣ್ಣಲ್ಲವೇ? “ಮಣ್ಣಿಂದ ಕಾಯ ಮಣ್ಣಿಂದ” ಎಂದು ನಾವು ಕೇಳಿಲ್ಲವೇ? ಹಾಗೆ ಮಣ್ಣಿಂದ ಆದ ಈ ದೇಹವನ್ನು ಮಣ್ಣ ಉಂಡೆ ಎಂದು ಹೇಳಿದ್ದಾರೆ. ಈ ಮಣ್ಣ ಉಂಡೆಯಲಿ ಗಾಳಿ ಆಡುತ್ತಿದ್ದರೆ ನಾವೂ ಸಹ “ಆಳು” ಅಂದರೆ ಮನುಷ್ಯ ಎಂದು ಕರೆಯಲ್ಪಡುತ್ತೇವೆ. ಇಲ್ಲದಿದ್ದರೆ ಬರೇ ಮಣ್ಣ ಉಂಡೆ. ಆಗ ನಮ್ಮನ್ನು ಹೆಣ ಎನ್ನುತ್ತಾರೆ

ಹಾಗಿದ್ದರೆ ಈ ಬಾಳು ಅಂದರೆ ಜೀವನವು ಏನು? ಎಂದರೆ ಮಣ್ಣ ಕಣಗಳ ತಿಕ್ಕಾಟವೆನ್ನುತ್ತಾರೆ ಶ್ರೀ ಗುಂಡಪ್ಪನವರು. ಈ ತಿಕ್ಕಾಟದಲ್ಲಿ ಬೆಂಕಿ ಉಂಟಾಗುತ್ತದೆ ಮತ್ತು ಹೊಗೆಯಾಡುತ್ತದೆ. ದ್ವೇಷದ ಬೆಂಕಿ, ಅಸೂಯೆಯ ಬೆಂಕಿ ಕೋಪದ ಬೆಂಕಿ ಹೀಗೆ ಹಲವಾರು ವಿಧದಲ್ಲಿ ಮನುಜ ಮನುಜರ ಮಧ್ಯೆ ಉಂಟಾಗುವ ತಿಕ್ಕಾಟ. ಆ ತಿಕ್ಕಾಟದ ಪರಿಣಾಮ ಸಾವು ನೋವುಗಳ ಪರಿಣಾಮ. ಅದೇ ಈ ಬೆಂಕಿಯಿಂದ ಬರುವ ಹೊಗೆ. ಇದರಿಂದ ಕೆಲವರಿಗೆ ಸುಖ ಕೆಲವರಿಗೆ ದುಃಖ. ಇದನ್ನೇ “ಕ್ಶ್ವೇಳ “ಅಂದರೆ ವಿಷವೆಂದು, ಸುಖ ಮತ್ತು ಆನಂದವನ್ನು “ಅಮೃತ”ವೆಂದೂ ಕರೆಯುತ್ತಾರೆ ಗುಂಡಪ್ಪನವರು.

ಪರಮಾತ್ಮನೆಂಬ ಮಹಾಜ್ಜ್ವಾಲೆಯಲ್ಲಿ ಉರಿಯುವ ಬೆಂಕಿಯಿಂದ ಸಿಡಿದ ಕೋಟ್ಯಾಂತರ ಕಿಡಿಗಳೇ, ಈ ಜೀವಿಗಳು. ಈ ಜಗತ್ತಿನಲ್ಲಿ, ಮಣ್ಣಿನ ಉಂಡೆಗಳಂತೆ ಇರುವ ನಾವೂ ಮತ್ತು ಈ ಉಂಡೆಯೊಳಗೆ ಗಾಳಿ ಎಂಬಂತೆ ಇರುವ ಆತ್ಮ ಅಥವಾ ಚೇತನದ ಸಮ್ಮಿಲನದಿಂದ ಉಂಟಾದ ಬದುಕೆಂಬ ತಿಕ್ಕಾಟದಲ್ಲಿ ಬೆಂಕಿಯುಗುಳಿ, ವಿಷಕಾರಿ, ಅಮೃತವ ಸವಿದು ಬಾಳ ಸವೆಸಿ ಮತ್ತದೇ ಚೇತನವನ್ನು ಸೇರುವಾಗ, ಇಲ್ಲಿ ಪಡೆದ ಅಮೃತದ ಬೆಲೆಯೇನು ಕುಡಿದ ಅಥವಾ ಕಕ್ಕಿದ ವಿಷದ ಬೆಲೆಯೇನು ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು.

ಈ ಕಗ್ಗದ ಒಟ್ಟಾರೆ ಅಂತರ್ಯವೇನೆಂದರೆ, ಮಣ್ಣಿಂದ ಆಗಿ, ಮಣ್ಣಲ್ಲೇ ಇದ್ದು ಮಣ್ಣಲ್ಲೇ ಸೇರುವ ಈ ಮಾನವನ ಬಾಳು ಕೇವಲ ಉಸಿರಿರುವ ತನಕ. ಹೀಗೆ ಬದುಕಿರುವಾಗ ನಾವು ಪಡೆಯುವ ಸುಖ ದುಃಖ ಅನುಭವಿಸುವ , ಕೋಪ ದ್ವೇಷ, ಅಸೂಯ, ಪ್ರೀತಿ, ಪ್ರೇಮ, ಅನುರಾಗ, ಬಂಧನಗಳಂಥಹ ಭಾವಗಳೆಲ್ಲವೂ, ” ಬಡಿತವಿರುವತನಕ (ಹೃದಯದ)” ಅದು ನಿಂತರೆ ” ಬಡಿವಾರ ಬಂದ್” ಈ ಜೀವನದ ಎಲ್ಲಕ್ಕೂ ಒಂದು ಮಂಗಳವನ್ನು ಹಾಡುವ, ಸಾವನ್ನು ಅಪ್ಪಿ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗುವಾಗುವಂಥಾ ಈ ಜೀವನದಲ್ಲಿ ಪಡೆದ ಸುಖಕ್ಕೆ ಏನು ಬೆಲೆ, ದುಃಖಕ್ಕೆ ಏನು ಬೆಲೆ. ಎಲ್ಲವೂ ಶೂನ್ಯ.

ಇಂತಹ ಭಾವಗಳನ್ನು ವ್ಯಕ್ತಪಡಿಸುವ ಈ ಕಗ್ಗದ ಅಂತರ್ಯವನ್ನು ವಾಚಕರು ಅವರದೇ ಅನುಭವದ ಮೂಸೆಯಲ್ಲಿ ಹಾಕಿ ನೋಡಿದಾಗ, ಪ್ರತಿಯೊಬ್ಬರಿಗೂ ಅವರವರದೇ ಅನುಭವದ ಭಾವ ಸಿಗುತ್ತದೆ.