ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Monday, October 21, 2019

ಬೆಟ್ಟದ ಜೀವ

ಬೆಟ್ಟದ ಜೀವ
ಡಾ.ಕೆ.ಶಿವರಾಮ ಕಾರಂತರು

ಬೆಟ್ಟದ ಜೀವ ಕಾರಂತರ ರಚನೆಯಲ್ಲಿ ಮೂಡಿಬಂದ ಅಪೂರ್ವವಾದ ಕೃತಿ..
ಮಗನನ್ನು ಕಳೆದುಕೊಂಡ ವೃದ್ಧ ದಂಪತಿಗಳು ಅವರ ಮಗನಿಗಾಗಿ ಹಂಬಲಿಸುವ ಕಥಾವಸ್ತು ಇಲ್ಲಿದೆ..
 ಶಿವರಾಮರು ಕಾಡಿನಲ್ಲಿ ಹಾದಿ ತಪ್ಪಿದಾಗ ಅವರು ಕಡೆಬೈಲು ಎಂಬಲ್ಲಿ ತಂಗುವ ಪ್ರಸಂಗ ಬರುತ್ತದೆ..
ವೃದ್ಧ ದಂಪತಿಗಳಾದ ಗೋಪಾಲಯ್ಯ ಭಟ್ಟರು & ಶಂಕರ್ರಮ್ಮರ ಆತಿಥ್ಯ ಸವಿಯುವ ಅವರ ಮನೆಯಲ್ಲಿ ಉಳಿದುಕೊಳ್ಳವ ಅವಕಾಶ ದೊರೆಯುತ್ತದೆ..
ಗೋಪಾಲಯ್ಯರು ಅರವತ್ತರ ಆಸುಪಾಸಿನ ಗಟ್ಟಿಗರು..ಇವರೇ ಈ  ಬೆಟ್ಟದ ಜೀವ ಎನ್ನಬಹುದು. ಕಾಡನ್ನು ಕಡಿದು ತೋಟ ಮಾಡಿರುವ ಇವರು ಈ ಪ್ರಾಯದಲ್ಲೂ ತರುಣನ್ನು ನಾಚಿಸುವ ಹುಮ್ಮಸ್ಸು ಅವರದ್ದು..
ಕಾರಂತರೇ ಹೇಳುವಂತೆ " ಬೆಟ್ಟದ ಹೊಟ್ಟೆಯಲ್ಲಿ ಹುಟ್ಟಿದ ಈ ಮನುಷ್ಯ, ಬೆಟ್ಟದಷ್ಟು ಎತ್ತರಕ್ಕೆ ಬೆಳೆದಿದ್ದಾನೆ.ಮನಸ್ಸೂ ಹಾಗೆ;ಮಾನವೂ ಹಾಗೆ.. " ಬಯಸದೇ ಅತಿಥಿಯಾಗಿ ಬಂದ ಶಿವರಾಮರಿಗೆ ಇವರು ತೋರಿಸುವ ಪ್ರೀತಿ ಅಷ್ಟಿಷ್ಟಲ್ಲ.. ಇವರಿಗೆ ಒಬ್ಬ ಮಗಳು & ಮಗನಿರುತ್ತಾನೆ. ಮಗಳು ಅವಳ ಹೆರಿಗೆಯ ಸಮಯದಲ್ಲಿ ತೀರಿಹೋಗುತ್ತಾಳೆ.. ಇದ್ದ ಒಬ್ಬ ಮಗನೂ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿರುತ್ತಾನೆ. ಅವನ ಬರುವ ನಿರೀಕ್ಷೆಯಲ್ಲೇ ದಂಪತಿಗಳು ದಿನ ಕಳೆಯುತ್ತಿರುತ್ತಾರೆ. ಹನ್ನೆರಡು ವರ್ಷಗಳಿಂದ ಮಗನನ್ನು ಕಾಣದ ಶಂಕರಮ್ಮ ಮಗನಿಗಾಗಿ ಹಂಬಲಿಸುವುದು ಅವನು ಎಲ್ಲದರೂ ಕಂಡರೇ ಮನೆಗೆ ಹೋಗುವಂತೆ ತಿಳಿಸಲು ಶಿವರಾಮರಿಗೆ ಬೇಡಿಕೊಳ್ಳವುದು ಅವರು ಮಗನ ಮೇಲಿನ ಪ್ರೀತಿ ತೋರಿಸುತ್ತದೆ..
ಕಾದಂಬರಿ ಇಂದಿನ ಕಾಲಕ್ಕೂ ಪ್ರಸ್ತುತ ಎನ್ನಿಸುತ್ತದೆ. ಹೆತ್ತವರನ್ನು ಬಿಟ್ಟು ಹೋಗುವ ಮಕ್ಕಳು, ತಂದೆ-ತಾಯಿಗಳನ್ನು ಕಡೆಗಣಿಸುವವರ ಇಂದಿಗೂ ಕೂಡ ಇದ್ದರೆ,ಅಂತಹವರು ಇದನ್ನು ಒಮ್ಮೆ ಓದಿದರೇ ಹೆತ್ತವರ ನೋವು ಸಂಕಟಗಳ ಅರಿವಾಗುತ್ತದೆ.
ಬೆಟ್ಟದ ಜೀವ ಕಾದಂಬರಿಯಲ್ಲಿ ಬರುವ ಪಕೃತಿಯ ವರ್ಣನೆ ಹುಲಿ ಬೇಟೆ,ಕುರ್ಪು,ಪಂಜ,ಅಭ್ಯಂಜನ,ಕಾಯಿಹುಳಿ,ಕುಮಾರ ಪರ್ವತದ ವರ್ಣನೆ ಬಣ್ಣಿಸಲಸದಳ, ಅದೆಷ್ಟು ಬಾರಿ ಓದಿದರೂ ಕಾದಂಬರಿಯ ಆ ಅಪೂರ್ವ ಚೆಲುವು ಚಿರ ನೂತನವೇ.
ಈ ಕಾದಂಬರಿ ಆಧಾರಿತ ಚಲನಚಿತ್ರ ಇದೆ.ಓದಲು ಸಮಯ ಇಲ್ಲದಿದ್ದರೆ ಒಮ್ಮೆ ಈ ಸಿನಿಮಾ ನೋಡಿ..

https://youtu.be/Y0u8-Qd-_0s

ನಾನು ಕಾದಂಬರಿ ಓದುವ ಮೊದಲೇ ಹಲವು ಬಾರಿ ಸಿನಿಮಾ ನೋಡಿದ್ದೆ.ಕಾದಂಬರಿಗಿಂತ ಸಿನಿಮಾ ಸ್ವಲ್ಪ ಬದಲಾವಣೆ ಇದೆ.ಆದರೆ ಕಥಾವಸ್ತುವನ್ನು ಸೊಗಸಾಗಿ ತೋರಿಸಿದ್ದರೆ.ಸಿನಿಮಾ ನೋಡುವುದಕ್ಕಿಂತಲೂ ಕಾದಂಬರಿ ಓದಿ ಸವಿಯುವದೇ ಮೇಲು..

Thursday, October 10, 2019

ಕರ್ವಾಲೋ


ಕರ್ವಾಲೋ
ಪೂರ್ಣಚಂದ್ರ_ತೇಜಸ್ವಿ ಅವರ ಅದ್ವಿತೀಯ ಕೃತಿ.

ಕರ್ವಾಲೋ ಎಂದರೆ ನೆನಪಾಗುವುದು ಹಾರುವ_ಓತಿ, ಪ್ರೊಫೆಸರ್_ಕರ್ವಾಲೋ, ಮಂದಣ್ಣ, ಬಿರಿಯಾನಿ_ಕರಿಯಪ್ಪ, ಎಂಗ್ಟ, ಕಿವಿ, ಪ್ಯಾರ, ಮೂರರ_ಮುಂದೆ_ಏಳು_ಸೊನ್ನೆ & ತೇಜಸ್ವಿ...

" ಕರ್ವಾಲೋ ಇದು ಹಾರುವ ಓತಿಕ್ಯಾತನ ಬೆನ್ನತ್ತಿ ಹೋಗುವ ಹೆಸರಾಂತ ವಿಜ್ಞಾನಿ ಮತ್ತು  ಹಳ್ಳಿಯಲ್ಲಿ ನಡೆಯುವ ಈ ಘಟನೆಯ ಸುತ್ತ ಸುತ್ತುವ ಕಥೆ.."

ಕರ್ವಾಲೋ ಎನ್ನುವುದು ಒಬ್ಬ ಜೀವಶಾಸ್ತ್ರಜ್ಞರು ಪ್ರಸಿದ್ಧ ವಿಜ್ಞಾನಿಯ ಹೆಸರು.ಇವರು ಮೂಡಿಗೆರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ..ಇವರ ಪ್ರಿಯಾ ಶಿಷ್ಯ ಹಳ್ಳಿಯ ಗಮಾರ ಮಂದಣ್ಣ.. ಈ ಕಾದಂಬರಿಯ ಕೇಂದ್ರನೇ ಈ ಮಂದಣ್ಣ. ಮಂದಣ್ಣ ಕಾಡುಗೀಡು ಅಲೆಯುತ್ತ ಬೆಳೆದಿರುವ ಅದ್ಭುತ ಯುವಕ..ಇವನಿಗೆ ಕಾಡು-ಕಾಡಿನಲ್ಲಿರುವ ಪ್ರಾಣಿಗಳ ಚಲನವಲನಗಳ ಬಗ್ಗೆ ಅಗಾಧವಾದ ತಿಳುವಳಿಕೆ ಇರುತ್ತೆ.ಈ ಕಾರಣಕ್ಕಾಗಿಯೇ ಕರ್ವಾಲೋ ಇವನನ್ನು ತನ್ನ ಶಿಷ್ಯ ಮಾಡಿಕೊಂಡಿರುತ್ತಾರೆ. ಮೂಡಿಗೆರೆಯ ಜನ ಮಹಾನ್ ವಿಜ್ಞಾನಿ ಕರ್ವಾಲೋ & ದಡ್ಡ ತರ್ಲೆ ಮಂದಣ್ಣನ ನಡುವಿನ ಸಂಬಂಧ ಏನಿರಬಹುದು ಎಂದು ಕುತೂಹಲ ಅನುಮಾನದಿಂದ ನೋಡುತ್ತಿದ್ದರು. ಹೀಗೆ ಆಶ್ಚರ್ಯ ಸಂಶಯ ಕುತೂಹಲದಿಂದ ನೋಡುವವರಲ್ಲಿ ತೇಜಸ್ವಿ ಸಹ ಒಬ್ಬರು..ಇದೇ ಕುತೂಹಲವೇ ತೇಜಸ್ವಿ ಅವರಿಗೆ ಪ್ರೊ||ಕರ್ವಾಲೋ ಪರಿಚಯವಾಗಲು ಕಾರಣವಾಗುತ್ತೇ..

ಈ ಕೃತಿಯಲ್ಲಿ ಮಲೆನಾಡಿನ ಜೀವನದ,ಮಂದಣ್ಣನ ಮದುವೆ, ಜೇನುಸಾಕಾಣಿಕೆಯ, ಕಳ್ಳಭಟ್ಟಿಯ ವ್ಯವಸ್ಥೆ-ಅವ್ಯವಸ್ಥೆ, ವಿಜ್ಞಾನಿಗಳ ಅನ್ವೇಷಣೆಯನ್ನರಿಯದ ಪೋಲೀಸರೂ ಅವರ ಜತೆ ಯಾರ್ಯಾರು ಕೆಲಸ ಮಾಡುತ್ತಿದ್ದಾರೆಂಬುದನ್ನು ಪತ್ತೆಹಚ್ಚಲು ಮುಂದಾಗುವ ಸಂದರ್ಭ, ಅದಕ್ಕಾಗಿ ಜೇನು ಹುಳಿ ಬಂದ ಮಡಕೆಯನ್ನು ತನ್ನದೇ ಎಂದುದಕ್ಕಾಗಿ ಮಂದಣ್ಣ ಕಳ್ಳಭಟ್ಟಿಯನ್ನು ತಯಾರಿಸುತ್ತಿದ್ದನೆಂದು ಕೇಸು ಹಾಕಿ ಅವನನ್ನು ಬಂಧಿಸುವ ಸಂದರ್ಭ, ಏನೇನೋ ಮಾಡಿ ಕಷ್ಟಪಟ್ಟು ಆತನನ್ನು ಬಿಡಿಸಿಕೊಂಡು ಬರುವ ಯೋಜನೆ ಹಾಕಿದ ಕರ್ವಾಲೋ, ಈ ವಿಜ್ಞಾನಿ ಯಾವುದೋ ಒಂದು ಮಹಾತ್ಕಾರ್ಯದ ಸಲುವಾಗಿಯೇ ಆತನನ್ನು ಬಿಡಿಸಿಕೊಂಡು ಬರಲು ಹರಸಾಹಸಪಡುತ್ತಿದ್ದಾರೆ ಎಂಬುದನ್ನರಿತ ತೇಜಸ್ವಿ ತಾನೂ ಧೈರ್ಯಗೊಂಡು ಆತನನ್ನು ಬಿಡಿಸಲು ಕೋರ್ಟಿನಲ್ಲಿ ಸಾಕ್ಷಿ ಹೇಳುವುದಕ್ಕಾಗಿ ಒಪ್ಪಿಕೊಂಡದ್ದು..
ಮೂರರ ಮುಂದೆ ಏಳು ಸೊನ್ನೆಗಳಷ್ಟು ವರ್ಷ ಹಳೆಯದಾದ ಹಾರುವ ಓತಿಯ ಪ್ರಬೇಧವನ್ನರಸಿಕೊಂಡು ಮಲೆನಾಡಿನ ದಟ್ಟ ಕಾಡಿನಲ್ಲಿ ಹೋಗುವ ತಂಡ.. ಮಂದಣ್ಣ, ಛಾಯಾಚಿತ್ರಕಾರ ಪ್ರಭಾಕರ, ಮರ ಹತ್ತುವುದರಲ್ಲಿ ನಿಪುಣನಾಗಿದ್ದ ಬಿರಿಯಾನಿ ಕರಿಯಪ್ಪ, ಕರ್ವಾಲೋ, ತೇಜಸ್ವಿ,ನಾಯಿ ಕಿವಿ, ತಪ್ಪಿಸಿಕೊಂಡ ಎಮ್ಮೆಯನ್ನು ಹುಡುಕುತ್ತಾ ಬಂದು ಇವರ ಜತೆ ಸಿಕ್ಕಿಹಾಕಿಕೊಂಡ ಎಂಗ್ಟ ಹೀಗೆ ಪುಟ್ಟದಾದ ಹಾರುವ ಓತಿಯ ಬೆನ್ನಟ್ಟಿ ಒಂದು ತಂಡವೇ ಹೋಗಿತ್ತು.
ಈ ತಂಡಕ್ಕೆ ಆ ಅಪರೂಪದ ಹಾರುವ_ಓತಿ_ಸಿಕ್ಕಿತೇ!!??? ,ಅದನ್ನು ಪತ್ತೆ ಮಾಡಲು ಏನೆಲ್ಲ ಪ್ರಯತ್ನ ಮಾಡುತ್ತಾರೆ ಎಂಬ ಕುತೂಹಲವಿದ್ದರೆ ಪುಸ್ತಕ ಓದಿ..🙏🏻
ತೇಜಸ್ವಿಯವರ ಕರ್ವಾಲೋ ಪುಸ್ತಕ ಸರಾಗವಾಗಿ ಓದಿಸಿಕೊಂಡು ಹೋಗಿ ಅದರದ್ದೇ ಆದ ಒಂದು ಲೋಕದಲ್ಲಿ ಸುತ್ತು ಹಾಕಿಸಿಕೊಂಡು, ಆ ಲೋಕವನ್ನು ಪರಿಚಯಿಸುತ್ತಾ ಬರುತ್ತದೆ..
ಅದ್ಬುತವಾದ ಕಾದಂಬರಿ..👌