ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Thursday, May 28, 2020

ಕಾರ್ಗಿಲ್‌ನಲ್ಲಿ ಹದಿನೇಳು ದಿನಗಳು

ಪುಸ್ತಕ:- ಕಾರ್ಗಿಲ್‌ನಲ್ಲಿ ಹದಿನೇಳು ದಿನಗಳು
ಲೇಖಕರು:- ರವಿ ಬೆಳಗೆರೆ

ರೌಡಿಗಳಲ್ಲಿ ಮನುಷ್ಯತ್ವವನ್ನು, ಪ್ರೇಮಿಗಳಲ್ಲಿ ದೈವತ್ವವನ್ನೂ, ಸೈನಿಕರಲ್ಲಿ ಸಂತರನ್ನೂ, ಪುಟ್ಟ ಹುಡುಗಿಯಲ್ಲಿ ತಾಯ್ತನವನ್ನೂ ಹುಡುಕಿಕೊಂಡು ಅಲೆಯುವ ಪತ್ರಕರ್ತರಾದ ಹಾಗೂ ನನ್ನ ನೆಚ್ಚಿನ ಬರಹಗಾರರಾದ ರವಿ ಬೆಳಗೆರೆ ಅವರು ಕಾರ್ಗಿಲ್ ಯುದ್ಧಭೂಮಿಗೆ ಹೋಗಿ ಅಲ್ಲಿನ ವಸ್ತುಸ್ಥಿತಿಯ ಬಗ್ಗೆ ಬರೆದುಕೊಟ್ಟ War Report ಈ ಪುಸ್ತಕ..

ಜುಲೈ 26.. ಇದು ನಮ್ಮೆಲ್ಲಾ ಭಾರತೀಯರಿಗೆ ಹೆಮ್ಮೆಯ ದಿವಸ ಕಾರಣ ನಮ್ಮ ಭಾರತೀಯ ಸೈನಿಕರು ಕಾರ್ಗಿಲ್ ಯುದ್ಧದಲ್ಲಿ  ಜಯಮಾಲೆ ಧರಿಸಿದ ದಿನ..
ಕಾರ್ಗಿಲ್ ಯುದ್ಧ ನಮ್ಮದೇ ರಕ್ತ ಹಂಚಿಕೊಂಡು ಹುಟ್ಟಿದ ದೇಶ ಪಾಕಿಸ್ತಾನದೊಂದಿಗೆ 1999 ರಲ್ಲಿ ನೆಡೆಯಿತು..
ಭಾರತದ ಎಂದಕೂಡಲೇ ಚಿಕ್ಕಂದಿನಿಂದಲೂ ಕಲ್ಪಿಸಿಕೊಂಡು ಬಂದ ಒಂದು ಸುಂದರ ಚಿತ್ರ ನಮ್ಮ ಭೂಪಟ ಕಣ್ಣೆದುರಿಗೆ ಕುಣಿದಾಡುತ್ತದೆ.. ಶಾಲಾ ದಿನಗಳಲ್ಲಿ ಭಾರತದ ನಕ್ಷೆ ಬಿಡಿಸುವಾಗ ಮುಕುಟಪ್ರಾಯವಾದ ಜಮ್ಮು&ಕಾಶ್ಮೀರ ಅಂದವಾಗಿ ಕಾಣಲೆಂದು ಹಲವಾರು ಬಾರಿ ತಿದ್ದಿತೀಡಿ ಬಿಡಿಸಿರುತ್ತಿರಿ ಅಲ್ಲವೇ.. ಜಮ್ಮು ಮತ್ತು ಕಾಶ್ಮೀರದ ಮಧ್ಯಭಾಗದಲ್ಲಿ ಕುಂಕುಮದ ಬೊಟ್ಟಿನಂತೆ ಕಾರ್ಗಿಲ್ ಎಂಬ ಸ್ಥಳವಿದೆ. ಕಾರ್ಗಿಲ್ ಆಚೆಗಿನದು ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಚೀನಾ ಕಬಳಿಸಿರುವ ಭಾಗವಿದೆ. ನಮ್ಮದೇ ಭೂಭಾಗವನ್ನು ಎರಡು ದೇಶಗಳು ತಮ್ಮದೆಂದು ಆಕ್ರಮಿಸಿಕೊಂಡು ಕುಳಿತಿವೆ.

 ಯುದ್ಧ ಮೂರು ಹಂತದಲ್ಲಿ ನಡೆದಂತಹ ಯುದ್ಧ.. ಮೊದಲ ಭಾಗದಲ್ಲಿ ವೈರಿ ಪಾಕಿಸ್ತಾನಿಗಳು ಕಾರ್ಗಿಲ್ ಸೆಕ್ಟರ್‌ನ ಹಲವು ಪರ್ವತಗಳ ಆಯಕಟ್ಟಿನ ಸ್ಥಳಗಳಲ್ಲಿ ತಮ್ಮ ಬಂಕರುಗಳನ್ನು ಸ್ಥಾಪಿಸಿಕೊಂಡರು(1998). ಎರಡನೇ ಭಾಗ ಪಾಕಿಗಳು ಆಕ್ರಮಿಸಿಕೊಂಡು ಅಡಗಿ ಕುಳಿತ ಸ್ಥಳಗಳನ್ನು ಹುಡುಕಿ ಆ ಪರ್ವತಗಳನ್ನು ಪುನಃ ಆಕ್ರಮಿಸಿ ಭಾರತಕ್ಕೆ ಸೇರಿಸುವುದು ನಮ್ಮ ಸೈನಿಕರ ಮಹತ್ವದ ಜವಾಬ್ದಾರಿಯಾಗಿತ್ತು.
ಮೂರನೇ ಭಾಗ ಪಾಕ್ ಆಕ್ರಮಿತ ಪ್ರದೇಶದ ಮೇಲೆ ಹಿಡಿತ ಸಾಧಿಸುವುದು..
ಈ ಕಾರ್ಯ ಹೇಳಿದಷ್ಟು ಸುಲಭವಾಗಿರಲಿಲ್ಲ, ಪ್ರಪಂಚದ ಅತ್ಯಂತ ದುರ್ಗಮ ಕಠಿಣ ಗಡಿ ಎಂದರೆ ಕಾರ್ಗಿಲ್ ಗಡಿ. ಸುಮಾರು 147 ಉದ್ದದ ಈ ಗಡಿ ಕಾವಲು ಸುಲಭದ ಮಾತಲ್ಲ..
ಪ್ರಪಂಚದ ಎತ್ತರದ ಗಡಿಯಾದ ಸಿಯಾಚಿನ್ ಕಾವಲಿಗೆ ನಮ್ಮ ದೇಶ ದಿನಕ್ಕೆ 7 ಕೋಟಿ ರೂಪಾಯಿ ಖರ್ಚು ಮಾಡಿದರೆ ಅದೇ ಈ  ಕಾರ್ಗಿಲ್ ಗಡಿ ಕಾಯಲು 12 ಕೋಟಿ ರೂಪಾಯಿ ಖರ್ಚು ಮಾಡುತ್ತದೆ..! ಎಂದರೆ ಇದೆಷ್ಟು ಕಠಿಣದ ಗಡಿಭಾಗವೆಂದು ಅಂದಾಜಿಸಬಹುದು..
ನಮ್ಮ ಹೆಮ್ಮೆಯ ಯೋಧರು ಪ್ರಾಣದ ಹಂಗನ್ನು ತೊರೆದು ಪರ್ವತದ ಶಿಖರದ ತುದಿಯಲ್ಲಿರುವ ವೈರಿಗಳ ಹೊಡೆದೋಡಿಸುವ ಕಾರ್ಯಕ್ಕೆ ಸಿದ್ಧರಾದರು. ವಶಪಡಿಸಿಕೊಳ್ಳಬೇಕಾಗಿರುವುದು ಕೇವಲ ಒಂದು ಪರ್ವತವಲ್ಲ ಟೋಲೋಲಿಂಗ್, ದ್ರಾಸ್,ಬಟಾಲಿಕ್,ಟೈಗರ್ ಹಿಲ್ಸ್, ಹಾಗೂ ಕಾರ್ಗಿಲ್ನ ಸುತ್ತಲೂ ಹೆಸರೇ ಇಲ್ಲದ ಹಲವು ಪರ್ವತಗಳನ್ನು ಗೆಲ್ಲಬೇಕಾಗಿತ್ತು..
ಈ ಪರ್ವತಗಳಲ್ಲಿ ಅತ್ಯಂತ ಮಹತ್ವದ್ದು ಟೈಗರ್ ಹಿಲ್ಸ್ ಪರ್ವತ. ಈ ಪರ್ವತ ಗೆಲ್ಲದೇ ಇದ್ದರೆ ಇಡೀ ಕಾಶ್ಮೀರ ಪಾಕಿಸ್ತಾನದ ಪಾಲಾಗುತ್ತದೆ ಅಷ್ಟು ಮಹತ್ವದ ಪರ್ವತ ಟೈಗರ್ ಹಿಲ್ಸ್ ಆಗಿತ್ತು. ಇದಕ್ಕೆ ಇಷ್ಟೊಂದು ಮಹತ್ವ ಬರಲು ಕಾರಣ ಅದು ಇದ್ದಂತಹ ಆಯಕಟ್ಟಿನ ಸ್ಥಳ. ಪರ್ವತದ ಮೇಲಿನಿಂದ ಸುಲಭವಾಗಿ ಭಾರತೀಯ ರಸ್ತೆಗಳನ್ನು ಗುರಿಯಾಗಿಸಬಹುದಿತ್ತು ಹಾಗೂ ಇಲ್ಲಿನ ವಿವರವನ್ನು ಆಚೆ ಇರುವ ಪಾಕಿಸ್ತಾನಕ್ಕೆ ನೀಡಬಹುದಾಗಿತ್ತು..
ಈ ಟೈಗರ್ ಹಿಲ್ಸ್ ಅನ್ನು ಜೂನ್ 28ರ ರಾತ್ರಿ ನಮ್ಮ ಸೈನಿಕರು ವಶಪಡಿಸಿಕೊಂಡರು ಇಲ್ಲಿಗೆ ಅರ್ಧ ಯುದ್ಧ ಗೆದ್ದಂತೆ..
ಹೀಗೆ ಹಲವು ಪರ್ವತ ಭಾಗಗಳನ್ನು ಗೆಲ್ಲುತ್ತಾ ವೈರಿ ಪಾಕಿಸ್ತಾನಿಗಳನ್ನು ಹಿಮ್ಮೆಟ್ಟಿಸಿ ಭಾರತ ವಿಜಯ ಮಾಲೆಯನ್ನು ಧರಿಸುತ್ತದೆ..
ಕಾರ್ಗಿಲ್ ಯುದ್ಧದಲ್ಲಿ ನಮ್ಮ ಹಲವು ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡು ಅಮರರಾಗಿದ್ದರೆ ಅದರಲ್ಲಿ ಕೆಲವು  ಸೈನಿಕರು ನಮ್ಮ ಕನ್ನಡಿಗರಾಗಿದ್ದರು..
ಕಾರ್ಗಿಲ್ ಯುದ್ಧಭೂಮಿಯಲ್ಲಿದ್ದ ಏಕೈಕ ಮಹಿಳೆ ಕನ್ನಡತಿ ಕ್ಯಾಪ್ಟನ್ ಮಂಗಳ ನಮ್ಮ ದಾವಣಗೆರೆಯವರು ಎಂಬುದು ಹೆಮ್ಮೆ ಎನ್ನಿಸುತ್ತದೆ. ಯುದ್ಧ ಭೂಮಿಯಲ್ಲಿ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆ ಮಾಡುತ್ತಾರೆ. ಅವರ ಕಾರ್ಯಕ್ಕೆ ನನ್ನದೊಂದು ಸಲಾಂ..
ದೇಶಕ್ಕಾಗಿ ಹೋರಾಡುವ ಯೋಧರಿಗೆ ಹಾಗೂ ಯೋಧರನ್ನು ನೀಡಿದ ಕುಟುಂಬಗಳಿಗೆ ಕೋಟಿ ಕೋಟಿ ಪ್ರಣಾಮಗಳು..
"ಭಾರತ್ ಮಾತಾ ಕೀ ಜಯ್"