ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Saturday, November 12, 2022

ಕಲ್ಲು ಹೇಳಿತು

 ಪುಸ್ತಕ:- ಕಲ್ಲು ಹೇಳಿತು

ಲೇಖಕರು:- ಬೀChi

ಸಮಯ ಕಳೆಯಲು ಏನಾದರೂ ಓದಬೇಕು ಎಂದು ತಡಕಾಡುವಾಗ ಸಿಕ್ಕ ಪುಸ್ತಕವೇ ‘ಕಲ್ಲು ಹೇಳಿತು'. ಇದು ಕನ್ನಡ ಸಾಹಿತ್ಯದಲ್ಲಿ ವಿಡಂಬನಾತ್ಮಕ ಹಾಸ್ಯದಿಂದಲೇ ಖ್ಯಾತರಾದ ರಾಯಸಂ ಭೀಮಸೇನ ರಾವ್ (ಬೀChi) ಅವರ ಕಾದಂಬರಿ. ನನಗೆ ಸಾಹಿತ್ಯ ಓದಲು ಪ್ರೇರಣೆ ಸ್ಪೂರ್ತಿ ಈ ಬೀChi.. ನನ್ನ ಪ್ರಕಾರ ಬೀChiಯವರ ವ್ಯಕ್ತಿತ್ವ, ಕನ್ನಡದಾಭಿಮಾನ ಮೆಚ್ಚದವರು ನಿಜವಾದ ಕನ್ನಡಿಗರೆ ಅಲ್ಲ. ಅಂತಹ ಕನ್ನಡದ ಚೇತನ ನಮ್ಮ ಬೀChi..


“ಕಲ್ಲು ಹೇಳಿತು” ಕಾದಂಬರಿ ಜಾತೀಯತೆ,ಅಸಮಾನತೆ,ಸ್ತ್ರೀಯರ ಶೋಷಣೆಯನ್ನು ಹಾಸ್ಯಭರಿತವಾಗಿ ಬಿಂಬಿಸುವ ಕತೆ ಹೊಂದಿದೆ..

ಕಾದಂಬರಿ ಪ್ರಾರಂಭವಾಗುವುದೇ ಒಂದು ಜೂಜಿನಿಂದ.. ಅಂದೆನೇಂದರೆ ದೆವ್ವದ ಮನೆ ಎಂದೇ ಕುಖ್ಯಾತವಾದ ಊರ ದೊಡ್ಡ ಮನೆಯಲ್ಲಿ ರಾತ್ರಿ ವೇಳೆಗೆ ಹೋಗಿ ಮೊಳೆ ಹೊಡೆದು ಬರಬೇಕು. ಈ ಪಂದ್ಯ ಗೆದ್ದವರಿಗೆ ಹೊಟ್ಟೆ ತುಂಬುವಷ್ಟು ಖಾಲಿ ದೋಸೆಯ ಬಹುಮಾನ.. 

ಖಾಲಿ ದೋಸೆಯ ಆಸೆಗೆ ಮೊಳೆ ಹೊಡೆಯಲು ಹೋದ ಭೀಮಸೇನ ಕತ್ತಲಿನಲ್ಲಿ ಕಾಣದೇ ತನ್ನ ಅಂಗಿಯನ್ನೂ ಸೇರಿಸಿ ಮೊಳೆ ಹೊಡೆದನು, ದೆವ್ವವೇ ಹಿಡಿಯಿತೆಂದು ರಕ್ತಕಾರಿ ಅಲ್ಲೇ ಸಾಯುತ್ತಾನೆ. ಇದರಿಂದ ಈ ಮನೆ ಕಂಡರೆ ಮೊದಲೆ ಭಯಪಡುತ್ತಿದ್ದ ಜನಕ್ಕೆ ಇದು ದೆವ್ವದ ಕೆಲಸವೆಂದೇ ಖಾತ್ರಿಯಾಗಿ ಇತ್ತ ಮನೆ ಕಡೆ ಒಬ್ಬರೂ ಸುಳಿಯುತ್ತಿರಲ್ಲಿಲ್ಲ.

ಕೊನೆಗೆ ಈ ದೆವ್ವದ ಮನೆಯನ್ನು ಒಬ್ಬ ವ್ಯಾಪಾರಿ ಕಡಿಮೆ ದುಡ್ಡಿಗೆ ಗಿಟ್ಟಿಸಿಕೊಂಡನು. ಆ ಹಳೆ ಮನೆ ಕೀಳಿಸಿ ಹೊಸ ಮನೆ ಕಟ್ಟಿಸಲು ನಿರ್ಧರಿಸುತ್ತಾನೆ. ಮನೆಯ ಬುನಾದಿ ಸಮೇತ ಕಿತ್ತರೆ ದೆವ್ವವು ಓಡಿಹೋಗುತ್ತದೆ ಎಂದು ಬುನಾದಿ ಕಲ್ಲು ಕೀಳಿಸಿ ರಾಶಿ ಹಾಕಿದರು. ಹಳೆ ಕಲ್ಲಿನ ಪಕ್ಕ ಹೊಸ ಕಲ್ಲುಗಳ ರಾಶಿವೂ ಬಂದಿತು.. ಹಳೆ ಬುನಾದಿಯ ದೊಡ್ಡ ಕಲ್ಲುಗಳನ್ನು ಕಂಡ ಹೊಸ ಕಲ್ಲುಗಳಿಗೆ ಆಶ್ಚರ್ಯ..?!

 ಬುನಾದಿಯಿಂದ ಬಂದ ಹಳೆ ಕಲ್ಲೇ ಈ “ಕಲ್ಲಜ್ಜಿ”…


ಕಲ್ಲಜ್ಜಿ ತಾನು ಈ ಮನೆಗೆ ಬಂದ ಕತೆ ಹಾಗೂ ಈ ಭವ್ಯವಾದ ಮನೆಯ ಅಂದಿನ ಚರಿತ್ರೆಯನ್ನು ಮರಿ ಕಲ್ಲುಗಳಿಗೆ ಹೇಳಲು ಪ್ರಾರಂಭಿಸುತ್ತದೆ..  ಆ ಮನೆ ಚಿನ್ನದ ವ್ಯಾಪರಿಯೊಬ್ಬರ ಮನೆಯಾಗಿತ್ತು.ಮನೆ ಒಡೆಯ ಅವನ ಸಂಸಾರದ ಕತೆ, ತಾನು ಕಂಡ ಕತೆಯನ್ನು ವ್ಯಥೆಯನ್ನು ಹೇಳುತ್ತದೆ. ಪತಿ-ಪತ್ನಿ ಬಾಂದವ್ಯ, ಪತಿವ್ರತೆ, ಸುಖ ಸಂಸಾರದಲ್ಲಿನ ವಿರಸ,ಮಾಜಿ ಪತಿವ್ರತೆ, ಗಂಡನ ಮೋಜು, ಅತ್ತೆ-ಸೊಸೆಯ ಆತ್ಮೀಯತೆ ಹೀಗೆ ನಾನಾ ಮಜಲುಗಳಲ್ಲಿ ಕತೆ ತೆರೆದುಕೊಳ್ಳುತ್ತದೆ. ಕತೆಯನ್ನು ಎಷ್ಚು ಸಂದರವಾಗಿ ಹೆಣೆದು ನಿರೂಪಿಸಲಾಗಿದೆ ಎಂದರೆ ಇತ್ತೀಚಿನ ಆಧುನಿಕ ಸಿನಿಮಾಗಳೂ ಸಹ ಇದರ ಮುಂದೆ ಸಪ್ಪೆ ಎನ್ನಿಸುತ್ತವೆ.ಎಲ್ಲೂ ಸಹ ಬೇಸರ ತರಿಸದೇ ಓದಿಸಿಕೊಂಡು ಹೋಗವ ಶಕ್ತಿ ಈ ಕಾದಂಬರಿಗಿದೆ..

ಹಾಸ್ಯದ ಮೂಲಕವೇ ಸಮಾಜದ ಮೌಡ್ಯಗಳನ್ನು ಕಟುವಾಗಿ ಟೀಕಿಸಲಾಗಿದೆ. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ ಸಹ ಆ ಜಾತಿಯ ಹೆಸರಿಂದಾದ ಅನ್ಯಾಯವನ್ನು ನೇರವಾಗಿ ಹೇಳಲಾಗಿದೆ. ಇದು  ಜಾತಿವಾದಿಗಳ ಕೆಂಗಣ್ಣಿಗೆ ಗುರಿಯಾಗಲುಬಹುದು.. ಕಲ್ಲಜ್ಜಿ ಹೇಳುವ ಎರಡು ತಲೆಮಾರಿನ ಸುಂದರ ಕತೆ ಕೇಳಲು ಪುಸ್ತಕವನ್ನು ಓದಿ..🙏🏻

ಕನ್ನಡ ಸಾಹಿತ್ಯ ಓದಿ ಬೆಳಸಿ..