ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Saturday, July 25, 2020

ಆನಂದಮಠ

ಪುಸ್ತಕ:- ಆನಂದಮಠ
ಮೂಲ ಲೇಖಕರು:- ಬಂಕಿಮಚಂದ್ರ
ಅನುವಾದಕರು:- ಎಸ್,ಆರ್,ರಾಮಸ್ವಾಮಿ

ಬಂಕಿಮಚಂದ್ರರೆಂದಾಗ ನಮಗೆ ನೆನಪಾಗುವುದು 'ವಂದೇ ಮಾತರಂ' ಗೀತೆ. ಇವರ ಕಾದಂಬರಿಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿರುವುದು 'ಆನಂದಮಠ' ಕಾದಂಬರಿ..
1770ರ ದಶಕದ ಆರಂಭಕಾಲದಲ್ಲಿ ಬಂಗಾಳದಲ್ಲಿ ಭೀಕರ ಕ್ಷಾಮ ಬಿದ್ದಾಗಲೂ ಜನರ ಮೇಲೆ ನಿರ್ದಯವಾಗಿ ಶೋಷಣೆ ನಡೆಸುತ್ತಿದ್ದ ಮುಸ್ಲಿಂ ಪ್ರಭುತ್ವದ ವಿರುದ್ಧ ಸಂತಾನ-ಸನ್ಯಾಸಿಗಳು ನಡೆಸಿದ ಹೋರಾಟವನ್ನು ವಸ್ತುವನ್ನಾಗಿಸಿಕೊಂಡ ಕಾಲ್ಪನಿಕ ಕಾದಂಬರಿ ಆನಂದಮಠ..
ಇದು ಕಾಲ್ಪನಿಕ ಕಾದಂಬರಿ ಆದರೂ ಸಹ ಬಂಗಾಳದಲ್ಲಿ ನವಾಬರ ವಿರುದ್ಧ ಸಂತಾನ ಸನ್ಯಾಸಿಗಳು ನಡೆಸಿದ ಹೋರಾಟ ನೈಜ ಘಟನೆ.. ಇದರ ಸುತ್ತಲೂ ಕತೆಯನ್ನು ಹೆಣೆಯಲಾಗಿದೆ..

ಭೀಕರ ಬರಗಾಲದಲ್ಲಿ ಎಲ್ಲವನ್ನೂ ಕಳೆದುಕೊಂಡ ಜನತೆ ವಿದೇಶಿಗರಿಂದ(ಮುಸ್ಲಿಂ-ಬ್ರಿಟಿಷ್) ದೇಶಕ್ಕೆ ಬಂದೊದಗಿದೆ ವಿಪತ್ತನ್ನು ತೊಡೆದುಹಾಕಲು ಸನ್ಯಾಸಿಗಳ ವೇಷಧರಿಸಿ ಸಮರಕ್ಕೆ ಸಿದ್ಧರಾಗುತ್ತಾರೆ. ಕಾದಂಬರಿಯಲ್ಲಿ ಬರುವ ಸತ್ಯಾನಂದ,ಮಹೇಂದ್ರಸಿಂಹ,ಜೀವಾನಂದ, ಭವಾನಂದ,ಶಾಂತಿ,ಕಲ್ಯಾಣಿ, ಪಾತ್ರಗಳು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ..
ಕಾದಂಬರಿಗೆ ಅಭೂತಪೂರ್ವ ಪ್ರಸಿದ್ದಿ ದೊರತದ್ದು ಇದರಲ್ಲಿ ಬಂಕಿಮಚಂದ್ರರು ಅಳವಡಿಸಿದ "ವಂದೇಮಾತರಂ" ಗೀತದಿಂದ.. ರಾಷ್ಟ್ರವೇ ತಾಯಿ, ರಾಷ್ಟ್ರವೇ ದುರ್ಗಾಮಾತೆ ಎಂಬ ಭಾವನೆಗೆ ಕಾವ್ಯರೂಪ ನೀಡಿರುವ ವಂದೇಮಾತರಂ ದಶಕಗಳುದ್ದಕ್ಕೂ ಸ್ವಾತಂತ್ರ ಹೋರಾಟದ ರಣಘೋಷವಾಗಿ ಮೆರೆಯಿತು.. ಚಿರಂತನ ಸ್ಪೂರ್ತಿಸ್ತೋತ್ರವಾಗಿದ್ದು ಜನಮಾನಸದಲ್ಲಿ ನೆಲೆನಿಂತಿದೆ..