ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Sunday, January 31, 2021

ಹೀಗೊಂದು ಸಮ್ಮೇಳನ

 ದಿನಾಂಕ 31-1-2021

ಭಾನುವಾರ.‌.


ಈ ದಿನ ಶಿವಮೊಗ್ಗದಲ್ಲಿ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ಸಾಹಿತ್ಯ ಸಮ್ಮೇಳನ ಹೇಗೆ ನಡೆಯಬಹುದು ಎಂಬ ಕುತೂಹಲದಿಂದ ನಾನು ಸಹ ಭಾಗವಹಿಸಿದ್ದೆ,ಇದು ನನ್ನ ಮೊದಲ ಸಾಹಿತ್ಯ ಸಮ್ಮೇಳನ.. ನಗರದ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮವಿತ್ತು.ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ಡಾ.ವಿಜಯಾದೇವಿ ಅವರನ್ನು ಬೆಳ್ಳಿ ರಥದಲ್ಲಿ ಸಭಾ ಭವನಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು.. ಪರಿಷತ್ತಿನ ನಿರೀಕ್ಷೆ ಮೀರಿ ಸಾಹಿತ್ಯಾಭಿಮಾನಿಗಳು ಬಂದಿದ್ದರಿಂದಲೇ ಏನೋ ಕುಳಿತುಕೊಳ್ಳಲು ಕುರ್ಚಿಗಳನ್ನು ಹುಡುಕುವವರೆ ಹೆಚ್ಚಿದ್ದರು.. ಸಭೆಯನ್ನೇರಿದ ಅಧ್ಯಕ್ಷರೂ ಆತಿಥಿಗಳು ಮಧ್ಯಾಹ್ನದ ಎರಡರವರೆಗೆ ಭಾಷಣ ಹೊಡೆದರು.. ಯಾರದರೂ ಖಾಲಿ ಹೊಟ್ಟೆಯಲ್ಲಿ ಕುಳಿತು ಇವರ ಕೊರೆತ ಸಹಿಸಿಕೊಳ್ಳುವರುಂಟೇ,! ಊಟ ತಯಾರಾಗಿದೆ ಎಂದು ತಿಳಿದಾಗ ಒಬ್ಬೊಬ್ಬರೇ ಹೊರನಡೆದರು.ಖಾಲಿ ಕುರ್ಚಿ ಕಂಡಂತೆ ವೇದಿಕೆಯ ಭಾಷಣವೂ ನಿಧಾನವಾಗಿ ಮುಕ್ತಾಯಗೊಂಡಿತು..

ಊಟ ಮುಗಿಸಿದ ಬಳಿಕ ಪುಸ್ತಕ ಕೊಳ್ಳುವ ಇಚ್ಚೆಯಿಂದ ಪುಸ್ತಕ ಮಳಿಗೆಗಳೆಡೆಗೆ ಹೋದೆ.. ಇದ್ದದ್ದೇ ಎರಡು ಪುಸ್ತಕದಂಗಡಿಗಳು ಅದರಲ್ಲೇ ಒಂದೆರಡು ಪುಸ್ತಕ ಕೊಂಡುಕೊಂಡೆ..

ಮಳಿಗೆಯಲ್ಲಿ ಪುಸ್ತಕ ಕೊಳ್ಳುವಾಗ ಅಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕೈಯಲ್ಲಿ ನಾಲ್ಕೈದು ಪುಸ್ತಕಗಳನ್ನು ಹಾಗೂ ಕರಿದು ತಿನ್ನುವ ಸೆಂಡಿಗೆ ಪ್ಯಾಕೆಟ್ ಹಿಡಿದುಕೊಂಡು ಮಳಿಗೆ ಒಡತಿಯೊಂದಿಗೆ ಮಾತಾಡುತ್ತಿದ್ದರು..

" ನನ್ನದೊಂದು ಪುಸ್ತಕ ಇಲ್ಲಿ ಇಟ್ಟಿರುತ್ತೇನೆ ಯಾರಾದರೂ ಕೇಳಿದರೆ ಕೊಡಿ " ಎಂದು ಅವರು ಹೇಳುತ್ತಿದ್ದರು..

'ಅಯ್ಯೋ ನಮ್ಮದೇ ಪುಸ್ತಕ ಇಟ್ಟು ಮಾರೋಕೆ ಜಾಗ ಇಲ್ಲ; ನಿಮ್ಮ ಪುಸ್ತಕ ಎಲ್ಲಿ ಇಡೋಣ ಹೋಗಿ ಸ್ವಾಮಿ..' ಎನ್ನುವ  ಅಂಗಡಿ ಓನರ್‌ನ ಮಾತು ಕೇಳಿ ಆ ವ್ಯಕ್ತಿ ಅಲ್ಲಿಂದ ಹೊರನಡೆದರು..

ನಾನು ಪುಸ್ತಕ ಕೊಂಡು ಮತ್ತೊಂದು ಗಂಟೆ ಕೊರೆಸಿಕೊಂಡು ಮನೆಗೆ ಹೊರಡಲು ಭವನದಿಂದ ಹೊರ ಬಂದೆ.ಸಾಹಿತ್ಯ ಭವನದಿಂದ ಬಸ್ ಸ್ಯಾಂಡ್‌ಗೆ ಸುಮಾರು ೩ ಕಿ.ಮೀ ಇದೆ. ಬೆಳಿಗ್ಗೆ ಬರುವಾಗ ಸ್ನೇಹಿತನೊಬ್ಬನ ಬೈಕ್‌ನಲ್ಲಿ ಬಂದಿದ್ದೆ. ಈಗಲೂ ಯಾರಾದರೂ ಲಿಫ್ಟ್‌ಗೆ ಸಿಗಬಹುದು ಎಂದು ಆಲೋಚಿಸುತ್ತಾ ಹೆಜ್ಜೆ ಹಾಕುತ್ತಿದ್ದೆ.. ಬೈಕ್ ಬರುವ ಸದ್ದು ಕೇಳಿ ಲಿಫ್ಟಿಗಾಗಿ ಕೈ ಮಾಡಿದೆ. ಬೈಕ್ ನಿಂತಿತು. ಬೈಕ್‌ನಲ್ಲಿದ್ದ ವ್ಯಕ್ತಿ ಆ ಪುಸ್ತಕ ಮಳಿಗೆಯಲ್ಲಿ ಹೆಂಗಸಿನೊಂದಿಗೆ ವಾದ ಮಾಡುತ್ತಿದ್ದ ವ್ಯಕ್ತಿಯೇ ಆಗಿದ್ದರು.. ಪರಸ್ಪರ ಪರಿಚಯ ಮಾಡಿಕೊಂಡೆವು, ಸಮ್ಮೇಳನದ ಆಯೋಜಕರ ಬಗ್ಗೆ ಬೇಸರದ ಅಸಮಾಧಾನದ ಮಾತುಗಳು ಆಡುತ್ತಿದ್ದರು. ಇವರು ಯಾರ್ರಿರಬಹುದು ಎಂದು ತಿಳಿಯದ ನಾನು ಕೇಳುಗನಾಗಿದ್ದೆ ಅಷ್ಟೇ.. "ಅಲ್ಲ ಮೇಷ್ಟ್ರೇ ನಾನೊಬ್ಬ ಸ್ಥಳೀಯ ಸಾಹಿತಿ ಕಣ್ರೀ,! ಸಮ್ಮೇಳನಕ್ಕೆ ಒಂದು ಆಹ್ವಾನ ಕೊಡುವ ಸೌಜನ್ಯ ಇವ್ರಿಗಿಲ್ಲ ರೀ.. ಯಾರಿಗೆ? ಮೆಚ್ಚಿಸಲು ಇದೆಲ್ಲಾ ಮಾಡ್ತಾರೋ.! " ಎಂದು ಸಿಟ್ಟಿಗೆ ಕಾರಣ,ಬೇಸರ ತೋಡಿಕೊಂಡರು.. ಬೈಕು ಗೋಪಾಳ ಬಸ್ ಸ್ಯಾಂಡ್‌ಗೆ ಸಮೀಪಿಸಿದಾಗ ನನಗೆ ಇಲ್ಲಿಯೇ ಬಿಡಿ ಎಂದು ಬೈಕ್ ನಿಲ್ಲಿಸಿದೆ..

ಬೈಕ್‌ನಿಂದ ಇಳಿದು ಹೊರಡಲು ಸಿದ್ದನಾದ ನನಗೆ ಅವರು ಮತ್ತೆ ತಡೆದು ನಿಲ್ಲಿಸಿ ಮಾತಿಗೇಳೆದರು..

ಮೊದಲೇ ಐದು ತಾಸಿನ ಕೊರೆತ ಕೇಳಿದ್ದ ನನಗೆ ಯಾಕೋ ಕಿರಿಕಿರಿ ಎನ್ನಿಸಿದರೂ ಅಲ್ಲಿಂದ ಇಲ್ಲಿಯವರೆಗೂ ಬಂದ ಲಿಫ್ಟ್ ಋಣ ನನ್ನ ಮೇಲಿದೆ ಎಂದು ಅವರ ಮಾತಿಗೆ ತಲೆಹಾಕುತ್ತಾ ನಿಂತೆ.. ಮೂಕನಿಗೆ ಬಾಯಿ ಬಂದಾಗ ಬಡಬಡಿಸುವಂತೆ ಕಿವಿ ಸಿಕ್ಕಿತೆಂದು  ಮಾತನಾಡಲು ಪ್ರಾರಂಭಿಸಿದರು..

ಅಲ್ಲಿಯವರೆಗೂ ಮಾಸ್ಕಧರಿಯಾಗಿದ್ದವರು ಮಾಸ್ಕ್ ತೆಗೆದು ಮುಖ ದರ್ಶನ ಕೊಟ್ಟರು..

ತೆಳು ದೇಹ, ತುದಿಯಲ್ಲಿ ಕಪ್ಪು ಬುಡದಲ್ಲಿ ಬಿಳಿ ಕೂದಲಿರುವ ತಲೆ, ಹುಡುಕಿದರೂ ಒಂದೂ ಬಿಳಿ ಹಲ್ಲು ಸಿಗದಂತೆ ಕೆಂಪಾದ ದಂತ ಪಂಕ್ತಿಗಳು,ವೃತ್ತಿಯಲ್ಲಿ ಹೋಮಿಯೊಪತಿ ವೈದ್ಯರು, ಪ್ರವೃತ್ತಿಯಲ್ಲಿ ಸಾಹಿತಿಗಳು,ನಾಲ್ಕೈದು ಪುಸ್ತಕ ಬರೆದಿರುವರು.. ಇವರ ಹೆಸರು ಡಾ.ನಾರಾಯಣ ರಾವ್ ಎಂದು..

ಸಾಹಿತಿಗಳು ಸ್ವಲ್ಪ ಭಿನ್ನ ಮನೋಭಾವದವರಾಗಿರುತ್ತಾರೆ ಎಂದು ಭಾವಿಸಿದ್ದ ನನಗೆ ಇವರು ಒಂದಕ್ಕೊಂದು ಸಂಬಂಧವಿಲ್ಲದೇ ವಿಚಿತ್ರವಾಗಿ ಮಾತಾಡುವುದು ಕಂಡು ಇದು ಗಾನ್ ಕೇಸು¿ ಇವರ ತಲೆಗಿಲೆ ಸರಿ ಇಲ್ಲವೆನ್ನೋ ಅನ್ನಿಸುತ್ತಿತ್ತು...

ಮೊದ ಮೊದಲು ಕಿರಿಕಿರಿ ಅನ್ನಿಸುತ್ತಿದ್ದ ಅವರ ಮಾತುಗಳು ಎಷ್ಟೊಂದು ಅರ್ಥಪೂರ್ಣ ಎಂದು ಅನ್ನಿಸಲು ಪ್ರಾರಂಭವಾಯಿತು.. ಹತ್ತು ಹಲವು ವಿಚಾರಗಳ ಬಗ್ಗೆ ಅವರ ವಾಗ್ಝರಿ ಹರಿಯುತ್ತಿತ್ತು..

ಗೋಪಾಳ ಬಸ್ ನಿಲ್ದಾಣದಲ್ಲಿದ್ದ ಮೆಡಿಕಲ್‌ ಶಾಪ್ ತೋರಿಸುತ್ತಾ..

"ನೋಡಿ ಮೆಷ್ಟ್ರೇ ಇದು ಮೆಡ್‌ಪ್ಲೇಸ್; ಅಲ್ನೋಡಿ ಅದು ಅಪೋಲೊ.. !? ಪಕ್ಕದಲ್ಲಿರುವ ಇನ್ನೊಂದು ಚಿಕ್ಕ ಮೆಡಿಕಲ್ ಶಾಪ್ ತೋರಿಸುತ್ತಾ ಇವೆರಡೂ ಅಂಗಡಿ ಬರುವುದಕ್ಕೆ ಮುಂಚೆ ಈ ಅಂಗಡಿಗೆ ಭಾರೀ ವ್ಯಾಪಾರವಾಗುತ್ತಿತ್ತು,ಈಗ ನೋಡಿ ಅವರ ಪರಿಸ್ಥಿತಿ.. ಎಲ್ಲಾ ವಿದೇಶಿ ಕಂಪನಿಗಳು ನಮ್ಮನ್ನು ಲೂಟಿ ಮಾಡ್ತಿದ್ದವೆ ಕಣ್ರೀ.. ಹೊಲಸು ರಾಜಕಾರಣಿಗಳೇ ಇದಕ್ಕೆಲ್ಲ ಕಾರಣ ಗೊತ್ತಾ " ಎಂದರು..  ನಾನು ಹೂಂ! ಎಂದೆ..


ನಿಮಗೆ ಗೊತ್ತ ಅಲ್ಲಿ ಪುಸ್ತಕದ ಮಳಿಗೆಲಿ ನನ್ದೊಂದು ಪುಸ್ತಕ ಇಡೋಕೆ ಜಾಗ ಇಲ್ಲ ಅಂತರೆ ರೀ.. ಯಾರಾದರೂ ಕೇಳಿದರೆ ಪುಸ್ತಕ ಫ್ರೀ ಆಗಿ ಕೊಡಿ ನಿಮ್ಮ ಅಂಗಡಿಲಿ ಇಟ್ಕೊಳ್ಳಿ ಎಂದರೆ ಅದಕ್ಕೂ ಅವಕಾಶವಿಲ್ಲ ಕಣ್ರೀ.. ಅಲ್ರೀ ಅವರೇನು ದೊಡ್ಡ ಸಾಹಿತಿಗಳ ಅವರು ಹತ್ತು ಪುಸ್ತಕ ಬರೆದಿದ್ದರೇ ನಾವು ನಾಲ್ಕು ಬರೆದಿಲ್ವಾ ಸ್ವಲ್ಪ ಗೌರವ ಇಲ್ಲ ಬಿಡ್ರಿ.. ಅವರ ಮಾತುಗಳನ್ನು ಕೇಳಿ ನಿಜಕ್ಕೂ ನಮ್ಮ ಸಾಹಿತಿಗಳ ಪರಿಸ್ಥಿತಿ ನೆನೆದು ಬೇಸರವಾಗುತ್ತದೆ..


ಮೇಷ್ಟ್ರೇ ನಮ್ಮನೆಗೆ ಬನ್ನಿ ಐದೇ ನಿಮಿಷದಲ್ಲಿ ಮತ್ತೆ ನಿಮಗೆ ಇಲ್ಲಿಗೇ ಬಿಡುತ್ತೇನೆ ಎಂದು ಬಲವಂತವಾಗಿಯೇ ಬೈಕ್ ಹತ್ತಿಸಿದರು.. ಇಷ್ಟವಿಲ್ಲದಿದ್ದರೂ ಋಣವಿತ್ತಲ್ವಾ ! ಹೊರಟೆ..

ಬೈಕ್‌ನಲ್ಲಿ ಮತ್ತೆ ಮಾತು ಮುಂದುವರಿಯಿತು..

ಸುಮ್ಮನೇ ಏನೇನೋ ಭಾಷಣ ಮಾಡೋದಲ್ಲ ಈಗಿನ ಪರಿಸ್ಥಿತಿಗೆ ಯಾವ ವಿಚಾರದ ಅಗತ್ಯವಿದೆಯೋ ಅದನ್ನು ಚರ್ಚೆ ಮಾಡಬೇಕು. ಅದನ್ನು ಬಿಟ್ಟು ಪಂಪ ರನ್ನರ ಕಾವ್ಯ ಹಿಡ್ಕೊಂಡು ಕೂತ್ಕೊಂಡ್ರೆ ಅದರಿಂದ ಏನು ಉಪಯೋಗ ಹೇಳಿ.. ನಾನು ಕುವೆಂಪುರವರನ್ನು ತುಂಬಾ ಗೌರವಿಸುತ್ತೇನೆ. ಅದರೆ ಅವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಿಂದ ಇವಾಗ ಏನು ಪ್ರಯೋಜನ ಇದೆ ಹೇಳಿ. ಅದು ಅವರ ಪಾಂಡಿತ್ಯ ತೋರಿಸುವ ಗ್ರಂಥ ಅಷ್ಟೆ;ಸಮಾಜಕ್ಕೆ ಏನ್ ಪ್ರಯೋಜನವಾಗಿದೆ ಸ್ವಾಮಿ..? ಮಲೆಗಳಲ್ಲಿ ಮದುಮಗಳು ಇಷ್ಟು ದಪ್ಪ ಪುಸ್ತಕ ರೀ..! ಅದು ಮಲೆನಾಡಿನ ಚಿತ್ರಣ ನೀಡುವ ಪುಸ್ತಕವಷ್ಟೆ ಕಣ್ರಿ..

ಪ್ರಸ್ತುತ ಪ್ರಪಂಚಕ್ಕೆ ಅಗತ್ಯವಿರುವ ವಿಚಾರ ಬಿಟ್ಟು ಏನೇನೋ ಚರ್ಚೆ ಮಾಡ್ತಾರೆ, ಅದರಿಂದ ಈಗೀನ ಸಮಾಜಕ್ಕೆ ಏನು ಪ್ರಯೋಜನ ಎಂದು ಯೋಚಿಸೊಲ್ಲ..


ಬೈಕು ಒಂದು ಮನೆ ಮುಂದೆ ನಿಂತಿತು..

ಬನ್ನಿ ಮೇಷ್ಟ್ರೇ,, ಇದೇ ನಮ್ಮನೆ.. ನಾನು ಅವರನ್ನೇ ಹಿಂಬಾಲಿಸಿ ಮನೆಯೊಳಗೆ ಕುಳಿತುಕೊಂಡೆ..

'ನೋಡೇ.. ಮನೆಗೆ ಗೆಸ್ಟ್ ಬಂದಿದ್ದಾರೆ, ಮೊಸರು ಕಡೆದು ಶುಂಠಿ,ಕೊತ್ತಂಬರಿ ಹಾಕಿ ಒಳ್ಳೆ ಮಜ್ಜಿಗೆ ಮಾಡಿಕೊಡೇ.' ಎಂದರು..

ಕಪಾಟಿನಿಂದ ಒಂದು ಪುಸ್ತಕ ತಂದು ನನ್ನ ಕೈಗಿತ್ತರು.. 

ಪುಸ್ತಕದ ಹೆಸರು "ದೇವರೆಲ್ಲಿದ್ದಾನೆ? ಹೇಗಿದ್ದಾನೆ?"..



ಮೇಷ್ಟ್ರೇ ನೀವು ದೇವರಿಗೆ ನಂಬ್ತೀರಾ.? ಎಂದು ಪ್ರಶ್ನಿಸಿ ನನ್ನ ಉತ್ತರವೂ ನಿರೀಕ್ಷಿಸದೇ ಮಾತು ಮುಂದುವರೆಸಿದರು..

ದೇವರು ಸರ್ವಶಕ್ತ ಅನ್ನೊದು ಸುಳ್ಳು ಕಣ್ರೀ.. ಮಳೆಗೆ ಪ್ರವಾಹವಾದಾಗ ದೇವರು ತನ್ನ ದೇವಸ್ಥಾನ,ಮಸೀದಿ,ಚರ್ಚ್ ಇವುಗಳನ್ನು ಪ್ರವಾಹದಿಂದ ರಕ್ಷಣೆ ಮಾಡ್ಕೊಬಹುದು ಅಲ್ವಾ, ಅಲ್ಲೆಲ್ಲಾ ನೀರು ನುಗ್ಗಿದ್ದು ನೋಡಿಲ್ವಾ..

ದೇವರಿಗೆ ಆಕಾರ ಇಲ್ಲ ಕಣ್ರೀ ಅದೊಂದು ಶಕ್ತಿ ಅಷ್ಟೇ.. ಈಗ ನೋಡಿ ನೀರು,ಗಾಳಿ,ಬೆಳಕು ಇವೆಲ್ಲಾ ಶಕ್ತಿ ಅಲ್ವಾ ಅವುಗಳಿಗೆ ಆಕಾರ ಇದೆ ಏನ್ರೀ..? ಹಾಗೆಯೇ ದೇವರಿಗೂ ಆಕಾರವಿಲ್ಲ ಬಿಡಿ ಅವನು ನಿರಾಕಾರ..

ತಂಪಾದ ಮಜ್ಜಿಗೆ ಕುಡಿಯುತ್ತಾ ಎಲ್ಲೆಲ್ಲಿಗೊ ಹೋಗಿ ಬರುವ ಇವರ ವಿಚಾರಗಳನ್ನು ಕೇಳುತ್ತಾ ಕುಳಿತ್ತಿದ್ದೆ..

ಮೆಷ್ಟ್ರೇ ನನಗೆ ಕನಸಿನಲ್ಲಿ ಕಾಣುವ ದೃಶ್ಯಗಳು ನಿಜ ಜೀವನದಲ್ಲಿ ನೆಡೆಯುತ್ತವೆ ಗೊತ್ತಾ..!? ಕಣ್ಣು ಮುಚ್ಚಿದರೆ ಸಾಕು ದೃಶ್ಯಗಳು ಕಾಣುತ್ತವೆ, ಧ್ವನಿ ಕೇಳಿಸುತ್ತದೆ.. ನೀವು ನನಗೆ ಹುಚ್ಚ ಅಂದುಕೊಳ್ಳತ್ತಿರಬಹುದು ಅಲ್ವಾ.. ನಿಜ; ಧ್ವನಿ ಕೇಳುತ್ತೇ ಅಂದ್ರೆ ಜನ ಹುಚ್ಚ ಅಂತನೇ ತಿಳಿಯೋದು.. ಅಲ್ರೀ ಯೇಸು ತಂದೆ ತಾಯಿಗೆ ಅಶಾರೀರ ವಾಣಿ ಕೇಳ್ಸತು ತಾನೇ ಅವರು ಹುಚ್ಚರಾ..?

ಮಹಮ್ಮದ್ ಪೈಗಂಬರ್‌ಗೂ ಅಶಾರೀರ ವಾಣಿ ಕೇಳ್ಸತು ಅವರು ಹುಚ್ಚರೂ ಏನ್ರೀ...??



ಪ್ರಸ್ತುತ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಚರ್ಚಿಸಬೇಕು ಎಂದು ಹೇಳುತ್ತಿದ್ದೆ ಅಲ್ವಾ ಆ ವಿಷಯವಾಗಿ ಒಂದು ಪುಸ್ತಕ ಬರೆಯುತ್ತಿದ್ದೇನೆ. "ವಿಪತ್ತಿನಲ್ಲಿ ವಿಶ್ವ ಮತ್ತು ಪರಿಹಾರ" ಎಂದು ಹೇಳುತ್ತಾ ಪುಸ್ತಕದ ಕಚ್ಚಾ ಪ್ರತಿಗಾಗಿ ಹುಡುಕಿ ಸಿಗದೇ ಸುಮ್ಮನಾಗಿ ಮತ್ತೆ ಮಾತು ಮುಂದುವರೆಯಿತು..

ಜಾಗತಿಕ ತಾಪಮಾನ, ವೈರಲ್ ಡಿಸೀಸ್ ಇವುಗಳಿಗೆ ಕಾರಣ ಪರಿಹಾರವಾಗಿ ನಮ್ಮ ಆಹಾರ ಪದ್ದತಿ ಬದಲಾಯಿಸುವ ಅಗತ್ಯತೆ,ಇಕೋ ಪ್ಲಾಂಟ್ ಬಗ್ಗೆ ಹೀಗೆ ಹಲವು ವಿಚಾರವಾಗಿ ಆ ಪುಸ್ತಕದಲ್ಲಿ ಬರೆಯಬೇಕು ಎಂದುಕೊಂಡಿದ್ದೆ, ಅದರೆ ಬರೆದ ಪುಸ್ತಕ ಓದುವರಿಲ್ಲದೇ ಸಾಹಿತಿಗೆ ಮನ್ನಣೆ ನೀಡದ ಇಂತಹ ವ್ಯವಸ್ಥೆ ಕಂಡು ಬೇಸರವಾಗುತ್ತದೆ ಎಂದಾಗ.. ನನ್ನ ಮನಸ್ಸಿಗೂ ಬೇಸರವಾಯಿತು..

ಕೊನೆಗೆ ನಾನು ಅವರ ಮನೆಯಿಂದ ಹೊರಡಲು ಸಿದ್ಧನಾಗಿ ಅವರು ಕೊಟ್ಟ ಪುಸ್ತಕಕ್ಕೆ ಹಣ ನೀಡಲು ಹೋದರೆ ನಯವಾಗಿ ತಿರಸ್ಕರಿಸುತ್ತಾ ತರಹೇವಾರಿಯಾಗಿ ಮಾತನಾಡುತ್ತ ನನಗೆ ಪುನಃ ಬಸ್ ಸ್ಯಾಂಡ್‌‌ವರೆಗೆ ಬಂದು ಬಿಳ್ಕೊಟ್ಟರು..


ನಾನು ನಾರಾಯಣ ರಾವ್ ಅವರೊಂದಿಗೆ ಸುಮಾರು ಅರ್ಧ ಗಂಟೆ ಸಮಯ ಕಳೆದಿರಬಹುದು ಅಷ್ಟೇ.. ಅವರ ಜೊತೆ ಕಳೆದ ಆ ಸಮಯ ಒಳ್ಳೆಯ ಅನುಭವವನ್ನು ಒದಗಿಸಿತು..