ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Friday, May 28, 2021

ದ್ಯಾವನೂರು ಹಾಗೂ ಒಡಲಾಳ

 ಪುಸ್ತಕ:- ದ್ಯಾವನೂರು ಹಾಗೂ ಒಡಲಾಳ

ಲೇಖಕರು:- ದೇವನೂರು ಮಹಾದೇವ



ಕನ್ನಡದ ನವೋತ್ತರ ಸಾಹಿತ್ಯದ ಅಗ್ರಗಣ್ಯ ಲೇಖಕರಾದ ದೇವನೂರು ಮಹಾದೇವ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಆಯಾಮ ತೋರಿದವರು.. ತಮ್ಮ ದೇಸಿ ಆಡು ಭಾಷೆ ಶೈಲಿಯ ಬರವಣಿಗೆಯ ಮೂಲಕ ದಲಿತರ ನೊಂದವರ ಧ್ವನಿಯಾಗಿ ಸಮಾಜವನ್ನ ಎಚ್ಚರಿಸವ ಕೆಲಸ ಮಾಡಿದ್ದಾರೆ.

ದೇವನೂರ ಮಹಾದೇವ ಇದುವರೆಗೆ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ದ್ಯಾವನೂರು’ ಎಂಬ ಏಳು ಕತೆಗಳ ಸಂಗ್ರಹ. 

‘ಒಡಲಾಳ’ ಎಂಬ ದೀರ್ಘ ಕಥನ ಮತ್ತು ‘ಕುಸುಮಬಾಲೆ’ಯೆಂಬ ಪ್ರಯೋಗಶೀಲ ಕಾದಂಬರಿ.


" ದ್ಯಾವನೂರು " ಎಂಬುದು ಏಳು ಕತೆಗಳಿರುವ ಕಥಾಸಂಕಲನವಾಗಿದೆ. 

೧. ಮಾರಿಕೊಂಡವರು

೨. ಗ್ರಸ್ತರು

೩. ಒಂದು ದಹನದ ಕಥೆ

೪. ದತ್ತ

೫. ಡಾಂಬರು ಬಂದುದು

೬. ಮೂಡಲ ಸೇಮೇಲಿ ಕೊಲೆಗಿಲೆ ಮೂಂತಾಗಿ

೭. ಅಮಾಸ

ಗ್ರಸ್ತ, ಮಾರಿಕೊಂಡವರು ಇಂತಹ ಪುಟ್ಟ ಕತೆಗಳಲ್ಲಿನ ಕಥಾ ವಿನ್ಯಾಸವೆ ದೊಡ್ಡದಾಗಿದೆ. ಅವುಗಳು ಒಳಗೊಳ್ಳುವ ಪ್ರಪಂಚದ ವಿಸ್ತಾರ ಮತ್ತು ಸಂಕೀರ್ಣತೆ ಸಾಂಪ್ರದಾಯಕ ಸಣ್ಣಕತೆಯ ಅಳವಿಗೆ ಮೀರಿದ್ದೆ. ಗ್ರಸ್ತ ಕತೆಯಲ್ಲಿ ನಿರೂಪಕ ಆತನ ತಾಯಿ, ಆತನನ್ನು ಓದಿಸಿ ಬೆಳೆಸಿದ ಊರ ಗೌಡ-ಎಲ್ಲರೂ ಬರವಣಿಗೆಯಲ್ಲಿ ಸಿಕ್ಕಿಹಾಕಿಕೊಂಡವರೆ, ಅಪೂರ್ಣರೇ, ಅವರೊಳಗೇ ಮತ್ತು ಪರಸ್ಪರರಿಗೆ ಆದರೆ ಇವರೆಲ್ಲರಿಗೂ ಒಬ್ಬರೊಬ್ಬರನ್ನು ತಿಳಿಯುವ ಮತ್ತು ಪ್ರೀತಿಸುವ ಮತ್ತು ಅಷ್ಟೇ ಮುಖ್ಯವಾಗಿ ಸತ್ಯ ಹೇಳುವ ಶಕ್ತಿಯೂ ಇದೆ. ಹೀಗಾಗಿ ಇದು ದಲಿತನೊಬ್ಬನು ತನ್ನ ಸದ್ಯದ ಅವಸ್ಥೆಯನ್ನು ಮೀರಲು ಪ್ರಯತ್ನಿಸುತ್ತಲೇ, ತನ್ನ ಪ್ರತಿಭಟನೆ ಮತ್ತು ಪ್ರೀತಿಯಲ್ಲಿ ಎಲ್ಲರನ್ನು ಒಳಗೊಳ್ಳುವ ಪ್ರಯತ್ನದ ಕತೆಯೂ ಆಗಿದೆ.

ಡಾಂಬರು ಬಂದುದು, ಮೂಡಲ ಸೀಮೆಯ ಕೊಲೆಗಿಲೆ ಮುಂತಾಗಿ, ಮಾರಿಕೊಂಡವರು ಕತೆಗಳ ಪಾತ್ರ ಮತ್ತು ಕಥಾವಿನ್ಯಾಸವೂ ಇದೇ ರೀತಿಯದು.


" ಒಡಲಾಳ " ಎಂಬುದು ಕಿರುಕಾದಂಬರಿ. ನಾಟಕದ ರೂಪದ ನಿರೂಪಣೆ ಹೊಂದಿರುವ ಕಥನ.. ದೇವನೂರು ಮಹಾದೇವ ಅವರು ಬರೆದ ಕಥೆ ಕಾದಂಬರಿಗಳು ಗಾತ್ರದಲ್ಲಿ 50 ಪುಟಗಳ ಆಸುಪಾಸಿನ ಚಿಕ್ಕ ಕೃತಿಗಳು.. ವಿಷಯ ವಸ್ತುವಿನಲ್ಲಿ ಸಮುದ್ರದಷ್ಟು ಆಳ ವಿಸ್ತಾರತೆ ಹೊಂದಿರುವ ಕಾವ್ಯಗಳು..

ಒಡಲಾಳ’ ಕಥಾನಕವನ್ನು ಈಗಾಗಲೇ ಕನ್ನಡ ಸಾಹಿತ್ಯ ಲೋಕ ಕ್ಲಾಸಿಕ್ ಎಂದು ಗುರುತಿಸಿಬಿಟ್ಟಿದೆ. ಎಷ್ಟರ ಮಟ್ಟಿಗೆಂದರೆ ಈ ಕೃತಿಯ ಸಾರಾಂಶ ಅಥವಾ ಮಹತ್ವವನ್ನು ಮತ್ತೆ ಹೇಳುವುದು ಅನಗತ್ಯ ಎನಿಸುವಷ್ಟು.

ಸಾಕವ್ವ ಕಥಾನಕದ ನಾಯಕಿ ಎಂದೇ ಹೇಳಬಹುದು. ಸಾಕವ್ವ ಜೀವನದ ಸಂಧ್ಯಾಕಾಲದಲ್ಲಿರುವ ಇಳಿವಯಸ್ಸಿನ ಮುದುಕಿ. ಸಾಕವ್ವ ಕಳೆದು ಹೋದ ಕೋಳಿ ಹುಡುಕುವ ಮೂಲಕ ಕಥೆ ಪ್ರಾರಂಭವಾಗುತ್ತದೆ. ಸಾಕವ್ವನಿಗೆ ಮೂವರು ಗಂಡು ಮಕ್ಕಳು,ಇಬ್ಬರು ಹೆಣ್ಣು ಮಕ್ಕಳು‌‌. ಕೋಳಿಯ ಜೊತೆ ಜೀವನದ ನೆಮ್ಮದಿಯನ್ನು ಕಳೆದುಕೊಂಡ ಸಾಕವ್ವ ಓದುಗನ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಾಳೆ..

ಸಾಕವ್ವನ ಪರಿವಾರದ ಸದಸ್ಯರೆಲ್ಲ ಒಟ್ಟಿಗೇ ಕುಳಿತು ಕದ್ದ ಕಡ್ಲೆಕಾಯಿ ತಿನ್ನುವುದು, ಪುಟ್ಟಗೌರಿ ನವಿಲು ಬಿಡಿಸುವುದು, ಇಂತಹ ಪ್ರಕರಣಗಳಲ್ಲಿ ಈಗಾಗಲೇ ಕನ್ನಡ ಓದುಗರ ಸಂವೇದನೆಯಲ್ಲಿ ಶಾಶ್ವತ ಸ್ಥಾನ ಪಡೆದಿವೆ.


ಕಥೆಯಲ್ಲಿ ಬರುವ ಪ್ರಮುಖ ಪ್ರಸಂಗಗಳು:-

★ ಕೋಳಿ ಕಳವು ಮತ್ತು ಹುಡುಕಾಟ

★ ಪುಟಗೌರಿ ಬಿಡಿಸಿದ ನವಿಲಿನ ಚಿತ್ರ

★ ಸಾಕವ್ವ ಮತ್ತು ಯಮನ ನಡುವಿನ ಸಂವಾದ

★ ಕಾಳಣ್ಣ ಕಡಲೆಕಾಯಿ ಕದ್ದ ಪ್ರಸಂಗ

★ ಕಡಲೆಕಾಯಿ ತಿಂದ ಪ್ರಸಂಗ

★ ಅಸ್ಪೃಶ್ಯತೆ ವಿರುದ್ಧ ಗುರುಸಿದ್ಧನ ಪ್ರತಿಭಟನೆ

★ ಪೋಲಿಸರ ಜಪ್ತಿ ಮತ್ತು ದೌರ್ಜನ್ಯ


ಸಾಕವ್ವ ಮತ್ತು ಅವಳ ಸಕಲ ಪರಿವಾರವು ದಾರಿದ್ರ್ಯದೊಡನೆಯೇ, ಬದುಕಿನ ಎಲ್ಲ ಚೆಲುವನ್ನು ಅನುಭವಿಸುತ್ತಾ ಸೃಷ್ಟಿಸುತ್ತಾ ಬದುಕುತ್ತಿರುವ ಕತೆಯಿದು. ಅವರ ಪ್ರತಿಭಟನೆ-ಬಂಡಾಯ ಹಾಗೆಂದು ಕಾಣದಷ್ಟು ಅವರು ಬದುಕುವ ಶೈಲಿಯಲ್ಲೆ ಬೆರೆತು ಹೋಗಿದೆ. ಮನುಷ್ಯ ಬದುಕುಳಿಯುವ ಪ್ರಶ್ನೆ ಬಂದಾಗ, ಒಡಲಾಳದ ಆಸೆ-ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವಾಗ ನಾವು ನಂಬಿರುವ ಸತ್ಯ, ನ್ಯಾಯ, ಧರ್ಮದ ಕಲ್ಪನೆಗಳಲ್ಲಿ ಹೇಗೆ ಅಸಂಗತವಾಗಿ  ಈ ಕೃತಿ ಬಳಸುವ ಶೈಲಿಯಲ್ಲಿ ಕಳ್ಳತನ, ಪೋಲೀಸು ವಿಚಾರಣೆ ಪ್ರಕರಣಗಳ ಮೂಲಕ ಸೂಚಿಸುತ್ತದೆ. ಸಾಕವ್ವನಿಗೆ ತನ್ನ ಪರಿವಾರದ, ಕುಟುಂಬದ ಪಾಲನೆಯ ಬಗ್ಗೆ ಇರುವ ಆಸೆ ಯಾವ ಮಹಾಸಾಮ್ರಾಜ್ಞಿಯ ಆಸೆಗೂ ಕಡಿಮೆಯಾದುದಲ್ಲ. ಇಲ್ಲದ ಆಸ್ತಿಯ ಹಂಚಿಕೆ-ವಿಲೇವಾರಿ ಬಗ್ಗೆ ಅವಳು ಅದೆಷ್ಟು ಅರ್ಥಪೂರ್ಣವಾಗಿ ಗೊಣಗಾಡಬಲ್ಲಳು. ಸ್ಥಿತ್ಯಂತರದ ಕಾಲದಲ್ಲಿ ಬದುಕುತ್ತಿರುವ ಸಾಕವ್ವನ ಪರಿವಾರಕ್ಕೆ ಹೊಸಕಾಲದ ಗಾಳಿ ಎತ್ತ ಬೀಸುತ್ತಿದೆ ಎಂಬುದು ಗೊತ್ತಿದೆ. ಆದರೆ ಅದಕ್ಕೆಲ್ಲ ಸ್ಪಂದಿಸಲು ಮೊದಲಿಗೆ ಒಡಲಾಳದ ಅಂತಿಮ ಆಸೆ ಇಂಗಬೇಕಾಗಿದೆ. ಅದು ಇಂಗುವ ತನಕ ಅವರ ಬದುಕುವ ಶೈಲಿ, ಪ್ರತಿಭಟನೆ ಎಲ್ಲವೂ ಇಲ್ಲಿ ಬದುಕುಳಿಯುವುದಕ್ಕೆ ಮಾಡಲೇಬೇಕಾದ ಉಪಾಯವಾಗಿ, ಹುಡುಕಾಟವಾಗಿ ಮಾತ್ರ ಕಾಣುತ್ತದೆ. ಈ ಕೃತಿಯಲ್ಲಿ ಮಹಾದೇವ ಪ್ರತಿಭಟನೆ-ಬಂಡಾಯವೆನ್ನುವುದು ಎಷ್ಟೊಂದು ಪ್ರೀತಿಯ, ಎಷ್ಟೊಂದು ಅಂತಃಕರಣದ ಕ್ರಿಯೆಯೆಂಬುದನ್ನು ಓದುಗರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ.

ಇದೊಂದು ಕೃತಿಯ ಮೂಲಕವೇ ಮಹಾದೇವ ಪರೋಕ್ಷವಾಗಿ ಮುಂದಿನ ದಲಿತ ಲೇಖಕರು ಹೇಗೆ ಕಥಾಸಾಹಿತ್ಯ ರಚಿಸಬೇಕೆಂಬ ಪ್ರಶ್ನೆಯನ್ನು ಎತ್ತಿದರು. ಕುವೆಂಪು, ಕಾರಂತ, ಅಡಿಗ, ಮಾಸ್ತಿ – ಇಂತಹ ದೊಡ್ಡ ಲೇಖಕರ ಹಾಗೇ ಮಹಾದೇವ ಕೂಡ ಈ ಕೃತಿಯ ಮೂಲಕ ಹೊಸ ಸಂವೇದನೆಯೊಂದಕ್ಕೆ ಕಾರಣವಾದರು. ಮುಂದಿನ ದಲಿತ ಲೇಖಕರೇನಿದ್ದರೂ, ಈ ಸಂವೇದನೆಯನ್ನು ತಮ್ಮ ಬೆನ್ನಿಗೆ ಇಟ್ಟುಕೊಂಡು ಹೊಸ ಹೊಸ ವಿವರಗಳನ್ನು, ಹೊಸ ಹೊಸ ಸನ್ನಿವೇಶಗಳನ್ನು ಜೋಡಿಸಿದರಷ್ಟೆ. ಇದನ್ನು ಮಹಾದೇವರ ನಂತರದ ದಲಿತ ಲೇಖಕರ ಸಾಧನೆಯನ್ನು ಉಪೇಕ್ಷೆಯಾಗಿ ಕಾಣಲು ಆಡುವ  ಮಾತೆಂದು ಭಾವಿಸಬಾರದು. ಒಳ್ಳೆಯ ಲೇಖಕರೆಲ್ಲರೂ ಹೊಸ ಸಂವೇದನೆಯ ನಿರ್ಮಾಣಕ್ಕೆ ಕಾರಣರಾಗುವುದಿಲ್ಲ. ಹೊಸ ಸಂವೇದನೆಯ ನಿರ್ಮಾಣದ ಸಂದರ್ಭದಲ್ಲಿ ಲೇಖಕನೊಬ್ಬನ ಪ್ರತಿಭೆ, ಕಾಣ್ಕೆಯಿರುವಂತೆ ಆತ ಬರೆದ ಸಂದರ್ಭದ ಒತ್ತಾಸೆಯೂ ಇರುತ್ತದೆ. ಇವೆಲ್ಲವನ್ನೂ ಹಿನ್ನೆಲೆಯಾಗಿಟ್ಟುಕೊಂಡು ಗಮನಿಸಿದಾಗ, ಮಹಾದೇವ ನಮ್ಮ ಉಳಿದ ಮಹತ್ವದ ಲೇಖಕರಂತೆ ಹೊಸದೊಂದು ಸಂವೇದನೆಯ ನಿರ್ಮಾಣಕ್ಕೆ ಕಾರಣರಾದ ಲೇಖಕರು ಎನಿಸುತ್ತದೆ. ಈ ಹೊಸ ಸಂವೇದನೆ ಕನ್ನಡ ಓದುಗರ ಅರಿವನ್ನೂ, ಕಲ್ಪಕತೆಯನ್ನು ಮತ್ತಷ್ಟು ವಿಸ್ತಾರಗೊಳಿಸಿ, ಸ್ಪೂರ್ತಿಗೊಳಿಸಿದ್ದರಿಂದಲೇ, ಮಹಾದೇವರಿಗೆ ಕನ್ನಡ ಕಥನ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವಿರುವುದು.




Sunday, May 9, 2021

ಹುಡುಗಾಟ ಹುಡುಕಾಟ (ಭಾಗ-6)

 ಪುಸ್ತಕ:- ಹುಡುಗಾಟ ಹುಡುಕಾಟ (ಭಾಗ-6)

ಲೇಖಕರು:- ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕತೆಗಳು ಸರಣಿಕೆಯ ಭಾಗ-೬ ನೇ ಪುಸ್ತಕವೇ ಹುಡುಗಾಟ ಹುಡುಕಾಟ..


ಹೆಸರೇ ಹೇಳುವಂತೆ ಹುಡುಗಾಟವಾಡಲು ಹೋದ ಹದಿಹರೆದವರು ಪಶ್ಚಿಮಘಟ್ಟದ ಕಾಡಿನಲ್ಲಿ ದಾರಿ ತಪ್ಪಿ ಕಳೆದು ಹೋಗಿ, ಬದುಕಿ ಬಂದ ಮೂವರು ಉತ್ಸಾಹಿಗಳ ಕಥಾವಸ್ತುವಿರುವ ಕಾದಂಬರಿ ಇದು.. ಕತೆ ಕಾಲ್ಪನಿಕ ಆದರೆ ಇದರಲ್ಲಿ ಬರುವ ಪ್ರಕೃತಿಯ ವರ್ಣನೆ ನೈಜವಾದದ್ದು..

ಬೆಂಗಳೂರಿನಿಂದ ರಜೆಯ ಕಳೆಯಲು ಸಕಲೇಶಪುರ ಮಾವನ ಮನೆಗೆ ಬರುವ ಅಣ‌್ಣ-ತಂಗಿ  ವಿಕ್ಕಿ &  ನಿಮ್ಮಿ.. ವಿಕ್ಕಿ ಉತ್ಸಾಹಿ ಆತುರ ದುಡುಕಿನ ಸ್ವಭಾವದವನು ಆದರೆ ನಿಮ್ಮಿ ಜಾಣೆ ತಾಳ್ಮೆ ಸ್ವಭಾವದವಳು.. ಮಾವನ ಮಗನಾದ ಚಿಂಟು ಇವರು ಮೂವರು ಸಮಾನವಯಸ್ಕರು.. ಚಿಂಟು ಹಳ್ಳಿಯಲ್ಲಿ ಬೆಳೆದ ಹುಡುಗ. ಕಾಡಿನ ಬಗ್ಗೆ ಇಲ್ಲಿನ ಮಳೆ ಪ್ರಾಣಿಗಳ ಅನುಭವವಿರುವವನು, ತಂದೆಯಿಂದ ಪಶ್ಚಿಮ ಘಟ್ಟಗಳ ಬಗ್ಗೆ ಕೇಳಿ ತಿಳಿದಿದ್ದ ಉತ್ಸಾಹಿ ಧೈರ್ಯಶಾಲಿ ಹಾಗೂ ಅಷ್ಟೇ ತಾಳ್ಮೆಇದ್ದವನು‌..


ಪಶ್ಚಿಮ ಘಟ್ಟದ ಪ್ರಕೃತಿಯ ಸೌಂದರ್ಯವನ್ನು ಕ್ಯಾಮರದಲ್ಲಿ ಸೆರೆ ಹಿಡಿದು ಒಳ್ಳೆಯ ಫೋಟೋಗ್ರಾಫರ್ ಎನ್ನಿಸಿಕೊಳ್ಳವ ಬಯಕೆ ವಿಕ್ಕಿದ್ದು, ಹಾಗಾಗಿ ಒಂದು ಡಿಜಿಟಲ್‌ ಕ್ಯಾಮರದೊಂದಿಗೆ ಬಂದಿದ್ದ..

ಸಕಲೇಶಪುರದ ಮುಂಜ್ರಾಬಾದ್ ಕೋಟೆ ನೋಡಲು ಸಿದ್ದರಾಗಿ ಹೊರಟ ಇವರು ದಾರಿ ಮಧ್ಯದಲ್ಲಿ ವಿಕ್ಕಿಯ ಹಠದಿಂದ ಕೋಟೆಯ ಬದಲಾಗಿ ದಟ್ಟವಾದ ಕಾಡಿನ ಎಡಕುಮೇರಿ ಎಂಬಲ್ಲಿಗೆ ಹೋಗಲು ನಿರ್ಧರಿಸುತ್ತಾರೆ. ಇಷ್ಟವಿಲ್ಲದಿದ್ದರೂ ಬಲವಂತವಾಗಿ ಚಿಂಟು ನಿಮ್ಮಿ ಒಪ್ಪಲೇ ಬೇಕಾಯಿತು.. ಎಡಕುಮೇರಿ ನೋಡಿ ಹಿಂದಿರುಗಿ ಬರುವಾಗ ದಾರಿಯಲ್ಲಿ ಕಾಡನೆಗಳಿಂದ ದಾರಿ ತಪ್ಪಿ ಘೋರ ಅರಣ್ಯ ಹೊಕ್ಕುತ್ತಾರೆ..

ಕಾಡೆಂದರೇನು ಎಂದು ತಿಳಿಯದ ವಿಕ್ಕಿ, ಚಿಂಟು ಎಚ್ಚರಿಸಿದರೂ ಕೇಳದೆ ಹುಡುಗಾಟ ಮಾಡಲು ಹೋಗಿ ಕಾಡಿನಲ್ಲಿ ಅಲೆಯುತ್ತಾ  ಹುಡುಕಾಟ ನೆಡೆಸುವಂತ ಪರಿಸ್ಥಿತಿ ಬರುತ್ತದೆ..

ಪಶ್ಚಿಮಘಟ್ಟಗಳನ್ನು ದೂರದಿಂದ ವಿಹಂಗಮ ನೋಟ ಹರಿಸಿದಾಗ ಕಾಣುವ ಪ್ರಕೃತಿಯ ಸೌಂದರ್ಯವೇ ಬೇರೆ; ಅದರೊಳಗಿಳಿದಾಗ ಆಗುವ ಕಾಣುವ ಚಿತ್ರಣವೇ ಬೇರೆ. ಕಾಡಿನ ಅನುಭವವಿರುವ ದಾರಿ ತಿಳಿದಿರುವ ಚಾರಣಿಗರೇ ದಾರಿ ತಪ್ಪುವಂತಹ ಅರಣ್ಯವದು.. ದಾರಿಯ ಪರಿಚಯವೇ ಇಲ್ಲದವರು ಅದರಲ್ಲಿ ಹೋದರೆ ಕಾಡಿನಿಂದ ಜೀವಸಹಿತ ಹೋರಬರುವುದು ಅಸಾಧ್ಯ ಎನ್ನುವಷ್ಟು ನಿಗೂಢ ಈ ಪಶ್ಚಿಮಘಟ್ಟಗಳ ಅರಣ್ಯ..

ಹದಿಹರೆಯದವರ ಮನಸ್ಸು ಹೇಗೆ ಕೆಲಸ ಮಾಡುತ್ತಿರುತ್ತದೆ.? ಅವರಲ್ಲೆಷ್ಟು ಹುಂಬ ಧೈರ್ಯವಿರುತ್ತದೆ.? ಕಷ್ಟ ಬಂದಾಗ ಎದೆಗುಂದದೆ ಅದನ್ನು ಎದುರಿಸುವವರು ಲಕ್ಷಣ ಹೇಗಿರುತ್ತದೆ.?! ಸರಿಯಾದ ಚಿಂತನೆ ಕಷ್ಟವನ್ನು ದೂರಮಾಡುತ್ತದೆ.?! ಎನ್ನುವ ಹಲವು ವಿಚಾರಗಳು ಪುಸ್ತಕದಲ್ಲಿವೆ..

ಚಿಂಟುವಿನ ಜಾಣ್ಮೆ ಸರಿಯಾದ ನಿರ್ಧಾರದಿಂದ ಮೂವರು ಕಾಡಿನಲ್ಲಿ ಬದುಕಿ ಬರುವ ರೋಚಕ ಕಥಾಹಂದರವಿದೆ..