ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Sunday, May 9, 2021

ಹುಡುಗಾಟ ಹುಡುಕಾಟ (ಭಾಗ-6)

 ಪುಸ್ತಕ:- ಹುಡುಗಾಟ ಹುಡುಕಾಟ (ಭಾಗ-6)

ಲೇಖಕರು:- ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕತೆಗಳು ಸರಣಿಕೆಯ ಭಾಗ-೬ ನೇ ಪುಸ್ತಕವೇ ಹುಡುಗಾಟ ಹುಡುಕಾಟ..


ಹೆಸರೇ ಹೇಳುವಂತೆ ಹುಡುಗಾಟವಾಡಲು ಹೋದ ಹದಿಹರೆದವರು ಪಶ್ಚಿಮಘಟ್ಟದ ಕಾಡಿನಲ್ಲಿ ದಾರಿ ತಪ್ಪಿ ಕಳೆದು ಹೋಗಿ, ಬದುಕಿ ಬಂದ ಮೂವರು ಉತ್ಸಾಹಿಗಳ ಕಥಾವಸ್ತುವಿರುವ ಕಾದಂಬರಿ ಇದು.. ಕತೆ ಕಾಲ್ಪನಿಕ ಆದರೆ ಇದರಲ್ಲಿ ಬರುವ ಪ್ರಕೃತಿಯ ವರ್ಣನೆ ನೈಜವಾದದ್ದು..

ಬೆಂಗಳೂರಿನಿಂದ ರಜೆಯ ಕಳೆಯಲು ಸಕಲೇಶಪುರ ಮಾವನ ಮನೆಗೆ ಬರುವ ಅಣ‌್ಣ-ತಂಗಿ  ವಿಕ್ಕಿ &  ನಿಮ್ಮಿ.. ವಿಕ್ಕಿ ಉತ್ಸಾಹಿ ಆತುರ ದುಡುಕಿನ ಸ್ವಭಾವದವನು ಆದರೆ ನಿಮ್ಮಿ ಜಾಣೆ ತಾಳ್ಮೆ ಸ್ವಭಾವದವಳು.. ಮಾವನ ಮಗನಾದ ಚಿಂಟು ಇವರು ಮೂವರು ಸಮಾನವಯಸ್ಕರು.. ಚಿಂಟು ಹಳ್ಳಿಯಲ್ಲಿ ಬೆಳೆದ ಹುಡುಗ. ಕಾಡಿನ ಬಗ್ಗೆ ಇಲ್ಲಿನ ಮಳೆ ಪ್ರಾಣಿಗಳ ಅನುಭವವಿರುವವನು, ತಂದೆಯಿಂದ ಪಶ್ಚಿಮ ಘಟ್ಟಗಳ ಬಗ್ಗೆ ಕೇಳಿ ತಿಳಿದಿದ್ದ ಉತ್ಸಾಹಿ ಧೈರ್ಯಶಾಲಿ ಹಾಗೂ ಅಷ್ಟೇ ತಾಳ್ಮೆಇದ್ದವನು‌..


ಪಶ್ಚಿಮ ಘಟ್ಟದ ಪ್ರಕೃತಿಯ ಸೌಂದರ್ಯವನ್ನು ಕ್ಯಾಮರದಲ್ಲಿ ಸೆರೆ ಹಿಡಿದು ಒಳ್ಳೆಯ ಫೋಟೋಗ್ರಾಫರ್ ಎನ್ನಿಸಿಕೊಳ್ಳವ ಬಯಕೆ ವಿಕ್ಕಿದ್ದು, ಹಾಗಾಗಿ ಒಂದು ಡಿಜಿಟಲ್‌ ಕ್ಯಾಮರದೊಂದಿಗೆ ಬಂದಿದ್ದ..

ಸಕಲೇಶಪುರದ ಮುಂಜ್ರಾಬಾದ್ ಕೋಟೆ ನೋಡಲು ಸಿದ್ದರಾಗಿ ಹೊರಟ ಇವರು ದಾರಿ ಮಧ್ಯದಲ್ಲಿ ವಿಕ್ಕಿಯ ಹಠದಿಂದ ಕೋಟೆಯ ಬದಲಾಗಿ ದಟ್ಟವಾದ ಕಾಡಿನ ಎಡಕುಮೇರಿ ಎಂಬಲ್ಲಿಗೆ ಹೋಗಲು ನಿರ್ಧರಿಸುತ್ತಾರೆ. ಇಷ್ಟವಿಲ್ಲದಿದ್ದರೂ ಬಲವಂತವಾಗಿ ಚಿಂಟು ನಿಮ್ಮಿ ಒಪ್ಪಲೇ ಬೇಕಾಯಿತು.. ಎಡಕುಮೇರಿ ನೋಡಿ ಹಿಂದಿರುಗಿ ಬರುವಾಗ ದಾರಿಯಲ್ಲಿ ಕಾಡನೆಗಳಿಂದ ದಾರಿ ತಪ್ಪಿ ಘೋರ ಅರಣ್ಯ ಹೊಕ್ಕುತ್ತಾರೆ..

ಕಾಡೆಂದರೇನು ಎಂದು ತಿಳಿಯದ ವಿಕ್ಕಿ, ಚಿಂಟು ಎಚ್ಚರಿಸಿದರೂ ಕೇಳದೆ ಹುಡುಗಾಟ ಮಾಡಲು ಹೋಗಿ ಕಾಡಿನಲ್ಲಿ ಅಲೆಯುತ್ತಾ  ಹುಡುಕಾಟ ನೆಡೆಸುವಂತ ಪರಿಸ್ಥಿತಿ ಬರುತ್ತದೆ..

ಪಶ್ಚಿಮಘಟ್ಟಗಳನ್ನು ದೂರದಿಂದ ವಿಹಂಗಮ ನೋಟ ಹರಿಸಿದಾಗ ಕಾಣುವ ಪ್ರಕೃತಿಯ ಸೌಂದರ್ಯವೇ ಬೇರೆ; ಅದರೊಳಗಿಳಿದಾಗ ಆಗುವ ಕಾಣುವ ಚಿತ್ರಣವೇ ಬೇರೆ. ಕಾಡಿನ ಅನುಭವವಿರುವ ದಾರಿ ತಿಳಿದಿರುವ ಚಾರಣಿಗರೇ ದಾರಿ ತಪ್ಪುವಂತಹ ಅರಣ್ಯವದು.. ದಾರಿಯ ಪರಿಚಯವೇ ಇಲ್ಲದವರು ಅದರಲ್ಲಿ ಹೋದರೆ ಕಾಡಿನಿಂದ ಜೀವಸಹಿತ ಹೋರಬರುವುದು ಅಸಾಧ್ಯ ಎನ್ನುವಷ್ಟು ನಿಗೂಢ ಈ ಪಶ್ಚಿಮಘಟ್ಟಗಳ ಅರಣ್ಯ..

ಹದಿಹರೆಯದವರ ಮನಸ್ಸು ಹೇಗೆ ಕೆಲಸ ಮಾಡುತ್ತಿರುತ್ತದೆ.? ಅವರಲ್ಲೆಷ್ಟು ಹುಂಬ ಧೈರ್ಯವಿರುತ್ತದೆ.? ಕಷ್ಟ ಬಂದಾಗ ಎದೆಗುಂದದೆ ಅದನ್ನು ಎದುರಿಸುವವರು ಲಕ್ಷಣ ಹೇಗಿರುತ್ತದೆ.?! ಸರಿಯಾದ ಚಿಂತನೆ ಕಷ್ಟವನ್ನು ದೂರಮಾಡುತ್ತದೆ.?! ಎನ್ನುವ ಹಲವು ವಿಚಾರಗಳು ಪುಸ್ತಕದಲ್ಲಿವೆ..

ಚಿಂಟುವಿನ ಜಾಣ್ಮೆ ಸರಿಯಾದ ನಿರ್ಧಾರದಿಂದ ಮೂವರು ಕಾಡಿನಲ್ಲಿ ಬದುಕಿ ಬರುವ ರೋಚಕ ಕಥಾಹಂದರವಿದೆ..



No comments: