ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Thursday, September 23, 2021

ಪೆದ್ದಚೆರುವಿನ ರಾಕ್ಷಸ (ಕಾಡಿನ ಕಥೆಗಳು ಭಾಗ-೨)

 ಪುಸ್ತಕ:- ಪೆದ್ದಚೆರುವಿನ ರಾಕ್ಷಸ (ಕಾಡಿನ ಕಥೆಗಳು ಭಾಗ-೨)

ಲೇಖಕರು:- ಕೆ.ಪಿ.ಪೂರ್ಣಚಂದ್ರ ತೇಜಸ್ವಿ


ತೇಜಸ್ವಿಯವರ ಕಾಡಿನ ಕಥೆಗಳ ಭಾಗ-೨ರಲ್ಲಿ ಪುಸ್ತಕ ಇದಾಗಿದ್ದು. ಇದು ಕೆನೆತ್ ಆಂಡರ್ಸನ್ ಅವರ ಕಥೆಗಳ ಸಂಗ್ರಹ ಭಾವಾನುವಾದವಾಗಿದೆ. ಕೆನೆತ್ ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ಅವರ ಕತೆಗಳು ಭಾರತದಲ್ಲಿ ಬೇಟೆಯಾಡಿದ ನರಭಕ್ಷಕ ಹುಲಿಗಳ ಬಗ್ಗೆ ಇರುತ್ತವೆ. ಇವರಿರ್ವರು ಮಹಾನ್ ಬೇಟೆಗಾರರು, ಜನರಿಗೆ ಉಪದ್ರವ ಕೊಡುವ ಹುಲಿಗಳನ್ನು ಕೊಂದ ಘಟನೆಗಳನ್ನು ಎಷ್ಟೊಂದು ರೋಚಕವಾಗಿ ವರ್ಣಿಸುತ್ತಾರೆಂದರೆ ಇವು ನೈಜ ಘಟಕಗಳೋ ಕಾಲ್ಪನಿಕ ಕಥೆಗಳೋ ಎಂದೆನ್ನಿಸುತ್ತದೆ. ಕಾಂಕ್ರೀಟ್ ಕಾಡಿನ ಯುಗದಲ್ಲಿರುವ ನಮಗೆ ಇವೆಲ್ಲಾ ಕಾಲ್ಪನಿಕ ಎನ್ನಿಸುತ್ತವೆ, ನಾವೆಲ್ಲಾ ಇಂದು ಅಂತಹಾ ದಟ್ಟವಾದ ಕಾಡು ನೋಡೇ ಇಲ್ಲ ಇನ್ನೂ ಹುಲಿಗಳಂತು ದೂರದ ಮಾತು.. ನಾವೀಗ ಹುಲಿಗಳನ್ನು ಬೆರಳೆಣಿಕೆಯಲ್ಲಿ ಎಣಿಸಿ ಬರೆದುಕೊಳ್ಳುವಷ್ಟು ನಾಶಿಸಿ ಹೋಗಿರುವುದು ದುರಂತವೇ ಸರಿ.. ಆದರೆ ಆಂಡರ್ಸನ್ & ಜಿಮ್ ಕಾರ್ಬೆಟ್‌ರ ವರ್ಣನೆಗಳು, ಕಾಡು, ನರಭಕ್ಷಕಗಳ ಘಟನೆಗಳು ನೈಜ ಎಂಬುವುದು ಅಷ್ಟೇ ಸತ್ಯ… 

ಕಥಾವಸ್ತು:- “ ಪೆದ್ದಚೆರುವಿನ ರಾಕ್ಷಸ “ ಎಂಬ ಈ ಪುಸ್ತಕದಲ್ಲಿ ಆಂಡರ್ಸನ್ ಮೂರು ನರಭಕ್ಷಕ ಹುಲಿಗಳ ಬೇಟೆಯಾಡಿದ ರೋಚಕ ಕತೆಗಳಿವೆ.

೧)ಪೆದ್ದಚೆರುವಿನ ರಾಕ್ಷಸ

೨)ತಾಳವಾಡಿಯ ಮೂಕರಾಕ್ಷಸ

೩)ಲಕ್ಕವಳ್ಳಿಯ ಹೆಬ್ಬುಲಿ

“ ಪೆದ್ದಚೆರುವಿನ ರಾಕ್ಷಸ “ ಪೆದ್ದಚೆರು ಎಂಬುದು ಶ್ರೀಶೈಲ ಮತ್ತು ಮರಕಪುರ ರಸ್ತೆಯಲ್ಲಿ ಬರುವ ಚಿಕ್ಕ ಹಳ್ಳಿ.ಹಳ್ಳಿ ಸಮೀಪ ಒಂದು ಕೆರೆ,ಕೆರೆ ಪಕ್ಕದಲ್ಲಿ ದಟ್ಟವಾದ ಕಾಡು. ಇಲ್ಲಿ ಹುಲಿಗಳ ಸಂಖ್ಯೆ ಯಥೇಚ್ಛವಾಗಿತ್ತು. ಹುಲಿಗಳ ಗರ್ಜನೆ ಸದ್ದು ಹಳ್ಳಿಗಳ ಜನರಿಗೆ ಸಾಮಾನ್ಯವಾಗಿ ಕೇಳುತ್ತಿತ್ತು. ಎಲ್ಲಾ ಹುಲಿಗಳು ನರಭಕ್ಷಕ ಆಗಿರುವುದಿಲ್ಲ ತಮ್ಮ ಪಾಡಿಗೆ ತಾವು ಕಾಡು ಪ್ರಾಣಿಗಳ ಬೇಟೆಯಾಡಿಕೊಂಡು ವಾಸಿಸುತ್ತವೆ. ಆದರೆ ಹುಲಿಗಳು ನರಭಕ್ಷಕರಾಗಲು ಪರೋಕ್ಷವಾಗಿ ಮನುಷ್ಯನೇ ಕಾರಣನಾಗಿರುತ್ತಾನೆ ಎಂಬುದಂತು ಸತ್ಯ.. ಆದರೆ ಇಲ್ಲಿ ಹುಲಿ ನರಭಕ್ಷಕನಾಗಲು ಮನುಷ್ಯನ ಕಾರಣನಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಒಮ್ಮೆ ಕಾಡಿನಲ್ಲಿ ಎರಡು ಬಲಿಷ್ಠ ಹುಲಿಗಳ ನಡುವೆ ಭೀಕರ ಕಾಳಗ ನಡೆದಿತ್ತು ಇದರಲ್ಲಿ ಗಂಭೀರವಾಗಿ ಗಾಯಗೊಂಡ ಹುಲಿ ಪ್ರಾಣಿಗಳ ಶಿಕಾರಿ ಮಾಡುವ ಶಕ್ತಿ ಕಳೆದುಕೊಳ್ಳುತ್ತದೆ. ಆಗ ಅದು ಮೊಲ ಮೇಕೆ ದನಕರುಗಳನ್ನು ತಿನ್ನಲು ಪ್ರಾರಂಭಿಸುತ್ತದೆ, ಒಮ್ಮೆ ಕಾಡಿನಲ್ಲಿ ಗಾಡಿಹೊಡೆದುಕೊಂಡು ಹೋಗುವವನು ಹಿಡಿದು ಮೊದಲ ನರಬಲಿ ಪಡೆಯುವುದು, ಯಾವುದೇ ಪ್ರತಿರೋಧವಿಲ್ಲದೆ ಸುಲಭವಾಗಿ ಶಿಕಾರಿಗೆ ಸಿಗುವ ಜೀವಿ ಎಂದರೆ ಮನುಷ್ಯನೇ ಎಂದು ತಿಳಿದಾಗ ನರಭಕ್ಷಕನಾಗಿ ರೂಪುಗೊಳ್ಳುತ್ತದೆ.ಈ ಹುಲಿಯನ್ನು ಕೊಂದ ರೋಚಕ ಕತೆಯೇ ಪೆದ್ದಚೆರುವಿನ ರಾಕ್ಷಸ..

“ ತಾಳವಾಡಿಯ ಮೂಕರಾಕ್ಷಸ “ ಕೊಯಮತ್ತೂರು ಜಿಲ್ಲೆಯ ನೀಲಗಿರಿ ಹತ್ತಿರದಲ್ಲಿರುವ ಹಳ್ಳಿ‌ ತಾಳವಂಡಿ.ಇಲ್ಲಿ ಆಂಡರ್ಸನ್ ಅವರ ಸ್ನೇಹಿತನೊಬ್ಬನ ತೋಟವಿತ್ತು. ಅವನ ತೋಟಕ್ಕೆ ಬಂದಿದ್ದ ಹುಲಿಯೊಂದನು ಗುಂಡಿಟ್ಟು ಹೊಡೆದಿದ್ದ, ಗುಂಡು ಹುಲಿಯ ದವಡೆಯ ಹತ್ತಿರ ತಗುಲಿತು ಇದರಿಂದ ಹುಲಿಯ ಜೀವವೇನೂ ಹೋಗಲಿಲ್ಲ ಆದರೆ ಹುಲಿಗೆ ಬೇಟೆ ಹಿಡಿಯುವುದು, ಘರ್ಜಿಸುವುದು ಕಷ್ಟವಾಯಿತು. ಆಗ ಹುಲಿ ಗರ್ಜಿಸದೇ ನಿಶಬ್ದವಾಗಿ ನರಬಲಿ ಪಡೆಯಲು ಪ್ರಾರಂಭಿಸಿತು, ಹೀಗೆ ತಾಳವಾಡಿಯಲ್ಲಿ ಮೂಕರಾಕ್ಷಸ ರೂಪುಗೊಂಡಿತು.. ಆಂಡರ್ಸನ್ ಕಾಡಿನಲ್ಲಿ ಕಾಣುವ ಎಲ್ಲಾ ಹುಲಿಗಳನ್ನು ಕೊಲ್ಲುತ್ತಿರಲಿಲ್ಲ ಅದು ನರಭಕ್ಷಕ ಹೌದು ಎಂದಾದರೆ ಮಾತ್ರ ಹೊಡೆದುರುಳಿಸುತ್ತಿದ್ದ.. ಅರ್ಧ ತಿಂದು ಹೋದ ಕಳೆಬರಗಳ ಬಳಿ ಅಡಗಿ ಕುಳಿತು ಹುಲಿ ಬಂದ ಮೇಲೆ ಅದನ್ನು ಹೊಡೆಯುವ ಕೆಲಸ ನಿಜಕ್ಕೂ ಗಂಡೆದೆಯ ಇರುವವರಿಗೆ ಸಾಧ್ಯ..

“ ಲಕ್ಕವಳ್ಳಿ ಹೆಬ್ಬುಲಿ ” ಲಕ್ಕವಳ್ಳಿ ತರೀಕೆರೆ ಮಾರ್ಗವಾಗಿ ಶಿವಮೊಗ್ಗ ಹೋಗುವ ರಸ್ತೆಯಲ್ಲಿನ ಹಳ್ಳಿ. ಇಲ್ಲಿ ವಯಸ್ಸಾದ ಹೆಬ್ಬುಲಿಯೊಂದು ನರಭಕ್ಷಕನಾಗಿ ರೂಪುಗೊಳ್ಳುವ ಮತ್ತು ಅದನ್ನು ಹೊಡೆದ ರೋಚಕ ಕತೆ ಇದೆ.. ಈ ಹುಲಿ ಮೊದಲು ದನಕರುಗಳ ಹಿಡಿದು ತನ್ನ ಹೆಗಲ ಮೇಲೆ ಹೊತ್ತು ಕಾಡಿನ ನಿರ್ಜನ ಪ್ರದೇಶದವರೆಗೆ ಹೋಗಿ ತಿಂದು ತೆಗುತ್ತಿತ್ತು. ಕ್ರಮೇಣ ನರಮನುಷ್ಯನ ಮಾಂಸದ ರುಚಿಸಿ ನರಭಕ್ಷಕವಾಯಿತು. ಇದನ್ನು ಕೊಂದ ಕತೆ ಇಲ್ಲಿದೆ..

ಇಂತಹ ರೋಚಕ ಕತೆಗಳನ್ನು ಕನ್ನಡಕ್ಕೆ ಭಾವಾನುವಾದಿಸಿ ಓದುಗರಿಗೆ ಒದಗಿಸಿದ ತೇಜಸ್ವಿಯವರಿಗೆ ಧನ್ಯವಾದ. ಈ ಪುಸ್ತಕಗಳ ಉದ್ದೇಶ ಬೇಟೆಗಾರಿಕೆ ಉತ್ತೇಜಿಸುವುದಲ್ಲ ಬದಲಾಗಿ ಅಂದಿನ ಕಾಲದಲ್ಲಿದ್ದ ಕಾಡನ್ನೂ ಕಾಡುಪ್ರಾಣಿಗಳನ್ನೂ ಮತ್ತೆ ಪುನರುಜ್ಜೀವನಗೊಳಿಸುವುದು.. 

ತೇಜಸ್ವಿ ಅವರೇ ಹೇಳುವಂತೆ:- " ದೆವ್ವಗಳೇ ಇಲ್ಲದಿದ್ದರೂ ದೆವ್ವದ ಕತೆಗಳನ್ನು ಓದಿ ಆನಂದಿಸುವವರಂತೆ, ಹುಲಿಗಳೇ ಇಲ್ಲದಿದ್ದರೂ ನರಭಕ್ಷಕರ ಕತೆಗಳನ್ನು ಓದಿ ಆನಂದಿಸಬೇಕಾದ ದುಃಸ್ಥಿತಿ ಬರಬಾರದು. "

ಪ್ರಾಚೀನ ಕಾಲದಲ್ಲಿದ್ದ ಮಹೋರಗಗಳನ್ನು ಪಳೆಯುಳಿಕೆಗಳಲ್ಲಿ ನೋಡುತ್ತಿರುವ ನಾವು ಇಂದಿನ ಕಾಡನ್ನು ಕಾಡುಪ್ರಾಣಿಗಳನ್ನು ಪಳೆಯುಳಿಕೆಗಳಾಗಿ ಪರಿವರ್ತಿಸದೇ ಸಂರಕ್ಷಿಸಿ ಮುಂದಿನ ಪೀಳಿಗೆಗೆ ರವಾನಿಸೋಣ..


Tuesday, September 21, 2021

ಹಿರಣ್ಯಗರ್ಭ - ಇತಿಹಾಸಕ್ಕೊಂದು ಪಾತಾಳಗರಡಿ

 ಪುಸ್ತಕ:-  ಹಿರಣ್ಯಗರ್ಭ- ಇತಿಹಾಸಕ್ಕೊಂದು ಪಾತಾಳಗರಡಿ

ಲೇಖಕರು:- ನವೀನ್ ಶಾಂಡಿಲ್ಯ

ಆಡಿಯೋ ಪುಸ್ತಕದ ಬೆಲೆ 310/-


ಪುಸ್ತಕಗಳು ಓದುವ ಹವ್ಯಾಸವಿದ್ದ ನನಗೆ ಈ ಹಾಳು ಮೊಬೈಲಿಂದ ಸಾಕಷ್ಟು ಸಮಯ ವ್ಯಯವಾಗಿ ಹೋಗುತ್ತಿತ್ತು. ಮೊಬೈಲ್ ಗೀಳಿಂದ ಹೊರಬರಲಾಗದೇ ಮೊಬೈಲ್‌ನಲ್ಲೇ ಇ-ಪುಸ್ತಕ ಓದುವ ಹುಚ್ಚು ಬೆಳೆಸಿಕೊಂಡೆ. ಅದೂ ಕಣ್ಣಿಗೆ ಶ್ರಮದಾಯಕವೇ.. ಹಾಳಾದ ಮೊಬೈಲ್ ಸಹವಾಸವೇ ಬೇಡ ಎಂದು ಶಪಿಸುವಾಗ ಮೈಲ್ಯಾಂಗ್ ಬುಕ್ಸ್ *MyLang app* ಎನ್ನುವ ಆ್ಯಪ್‌ಯಿಂದ ಆಡಿಯೋ ರೂಪದಲ್ಲಿ ಪುಸ್ತಕಗಳು ಬಿಡುಗಡೆಯಾಗುತ್ತವೆ ಎಂದು ತಿಳಿದಾಗ ಕುತೂಹಲ.. ನೆಚ್ಚಿನ ಲೇಖಕರಾದ ಪೂಚಂತೇಯವರ ಹಲವು ಪುಸ್ತಕಗಳನ್ನು ಖರೀದಿಸಿ ಕಣ್ಮುಚ್ಚಿ ಕೇಳಿ ಆನಂದಿಸಿದೆ. ಕಣ್ಣಿಗೆ ರೆಸ್ಟ್; ಪುಸ್ತಕ ಓದಿದಷ್ಟೇ ನೆಮ್ಮದಿ.. ಶಿವಮೊಗ್ಗದಿಂದ ಪ್ರತಿವಾರ ವಿಜಯನಗರ ಜಿಲ್ಲೆಯಲ್ಲಿರುವ ಹುಟ್ಟೂರಿಗೆ ಹೋಗುವ ಅನಿವಾರ್ಯತೆ ಹಾಳಾದ ಈ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಎನ್ನುವುದು ಗಗನಕುಸುಮ.. ಒಂದೆಡೆ ವರ್ಗಾವಣೆ ವಿಷಯದಲ್ಲಿ ಇಲಾಖೆ ಮೇಲೆ ಸ್ವಲ್ಪ ಬೇಸರವಿದ್ದರೂ ಸಹ ನಾನು ಬೇರೊಂದು ಇಲಾಖೆಯಲ್ಲಿದ್ದಿದ್ದರೆ ಖಂಡಿತವಾಗಿಯೂ ಪುಸ್ತಕಗಳನ್ನು ಓದಲು ಸಮಯ ಸಿಗುತ್ತಿರಲಿಲ್ಲವೇನೋ ಎನ್ನಿಸುತ್ತದೆ.. ಪ್ರತಿವಾರ ಬೈಕೇರಿ ಊರಿಗೆ ಹೊರಟಾಗ ಕಿವಿಯಲ್ಲಿ ಹೆಡ್ ಫೋನ್‌ನಲ್ಲಿ ಆಡಿಯೋ ಬುಕ್‌ಗಳನ್ನು‌ ಕೇಳುತ್ತಾ ಹೋಗುತ್ತಿದ್ದೆ, ತೇಜಸ್ವಿ ಪುಸ್ತಕಗಳನ್ನು ಅದೆಷ್ಟು ಬಾರಿ ಕೇಳಿದ್ದೇನೆಂದರೆ ಪುಸ್ತಕದ ಪ್ರತಿ ಸಾಲು ಹೇಳುವಷ್ಟು..

ಇತ್ತೀಚಿಗೆ ಮೈಲ್ಯಾಂಗ್ ಬುಕ್ ಆ್ಯಪ್‌ನಲ್ಲಿ *ಹಿರಣ್ಯಗರ್ಭ* ಎಂಬ ಪುಸ್ತಕವನ್ನು ಖರೀದಿಸಿದೆ, ಪತ್ತೆದಾರಿ ಕಾದಂಬರಿಗಳ ಬಗ್ಗೆ ಸಹಜವಾಗಿಯೇ ಆಸಕ್ತಿ ಹೊಂದಿದ್ದ ನನಗೆ ಇದನ್ನು ಖರೀದಿಸುವ ಮನಸ್ಸಾಯಿತೇ ಹೊರತು ಪುಸ್ತಕದ ಬಗ್ಗೆ ಆಗಲಿ ಅಥವಾ ಲೇಖಕರ ಬಗ್ಗೆ ಆಗಲಿ ಕೊಂಚವೂ ತಿಳಿದಿರಲಿಲ್ಲ..

ಇದರಲ್ಲಿ 21 ಅಧ್ಯಾಯಗಳಿವೆ.ಇದು 11 ಗಂಟೆ 9 ನಿಮಿಷಗಳ ಸುಧೀರ್ಘ ಪುಸ್ತಕ..


ಕಥಾವಸ್ತು:- ವೇದೋಪನಿಷತ್ತುಗಳ ಶ್ಲೋಕದ ಕುರುಹನ್ನು ಭೇದಿಸಿ ನಿಧಿಯನ್ನು ಹುಡುಕಲು ಹೊರಟ ರೋಚಕ ಕತೆ..

ಪಾತ್ರಗಳು:- ನವೀನ್ ಶಾಂಡಿಲ್ಯ, ರಾಮಾನುಜ,ರಾಘವ,ಗಾರ್ಗಿ,ಅಧಿತಿ

ನಿಧಿಶೋಧದ ಕಥೆಗಳು ಯಾವಾಗಲೂ ರೋಚಕವೇ. ಕಡೆಯಲ್ಲಿ ನಿಧಿ ದಕ್ಕುವುದೋ ಇಲ್ಲವೋ ಎಂಬ ಕುತೂಹಲದ ಜೊತೆ‌ಗೆ ಹುಡುಕಾಟದ ಹಾದಿಯ ಪ್ರತಿ ತಿರುವೂ, ಸುಳಿವೂ, ದಿಕ್ಕುತಪ್ಪುವುದು ಸಾಮಾನ್ಯ, ಇಲ್ಲಿಯೂ ಸುಳಿವುಗಳ ಗೂಡಾರ್ಥ ತಿಳಿದು ಅವನ್ನು ಪರಿಹರಿಸುವ ಜಾಣ್ಮೆ , ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯಲ್ಲಿ ಪರಿಶೀಲಿಸಿ ಪರಿಹರಿಸುವ ಪರಿ ಎಲ್ಲಾವೂ ಅದ್ಭುತವಾಗಿವೆ.

ಲೇಖಕರಾದ ನವೀನ್ ಕತೆಯ ಭಾಗವಾಗಿ ನಿರೂಪಣೆ ಮಾಡುತ್ತಾ ನಮಗೆ ಹಿರಣ್ಯಗರ್ಭ ಎಂಬ ಮಾಯಾಲೋಕಕ್ಕೆ ಕೊಂಡೊಯ್ಯುತ್ತಾರೆ.

ವೇದಗಳ ಸಂದೇಶಗಳನ್ನು ವಿಜ್ಞಾನದ ವ್ಯಾಖ್ಯಾನಗಳಿಂದ ವಿಶ್ಲೇಷಿಸಿ, ವಿಸ್ಮಯಕಾರಿ ಗುಟ್ಟೊಂದನ್ನು ಬೇಧಿಸಲು ನಿಧಿಶೋಧಕ್ಕೆ ಹೊರಟ ಯುವಕರ ತಂಡ ಇವರದ್ದು,ಎಲ್ಲಾರೂ ಮೇಧಾವಿಗಳು.. 

ರಾಮಾನುಜ-ರಾಘವ ಸಹೋದರರು; ವೇದಾಂತ ಪಂಡಿತರು ಮಹಾನ್ ಜ್ಞಾನಿಗಳು. ಗಾರ್ಗಿ ಜಿಯೋಲಾಜಿಸ್ಟ್, ಅಧಿತಿ ವೈದ್ಯೆ..

ಬೆಂಗಳೂರಿನ ಮಲ್ಲೇಶ್ವರಂನ ಮಾರುಕಟ್ಟೆಯಿಂದ ಪ್ರಾರಂಭವಾಗುವ ಕಥೆ ಹಂಪೆ, ಮಹಾಕೂಟ ಮುಂತಾದ ಸ್ಥಳಗಳಲ್ಲಿ ಈ ಯುವತಂಡ ನಿಧಿಶೋಧಿಸುತ್ತಾ ಹೋದಂತೆ ನಾವು ಅವರ ಜೊತೆಯಲ್ಲಿ ಐತಿಹಾಸಿಕ ಪ್ರವಾಸ ಮಾಡುತ್ತಿದ್ದೇವೆ ಅನ್ನಿಸುತ್ತದೆ. ಆಡಿಯೋ ಕೇಳುತ್ತಾ ಹೋದಂತೆ ಮೈ ರೋಮಾಂಚನವಾಗಿ ರೋಮಗಳೆಲ್ಲಾ ನಿಮಿರಿ ನಿಲ್ಲುತ್ತವೆ,ನಮಗರಿವಿಲ್ಲದಂತೆ ಕಣ್ಣುಗಳು ನೀರ್‌ತುಂಬಿಕೊಳ್ಳುತ್ತವೆ ಹಾಗೂ ಗಾರ್ಗಿ-ರಾಘವನ ಚೆಷ್ಟೆಗಳು ನಗು ತರಿಸುತ್ತದೆ..

ಹಂಪೆಯ ಅಧ್ಯಾಯಗಳಂತು ಸಂಪದ್ಭರಿತ ಅಂದಿನ ಭವ್ಯ ಹಂಪೆ ಕಣ್ಮುಂದೆ ತರಿಸುವಂತೆ ತುಂಬಾ ಸೊಗಸಾಗಿವೆ. ಬಾಲ್ಯದಿಂದಲೇ ವಿಜಯನಗರದ ಹಂಪಿ ನೋಡಿ ಬೆಳೆದಿದ್ದ ನನಗೆ ಇಲ್ಲಿಯ ಐತಿಹಾಸಿಕ ತಾಣಗಳ ವರ್ಣನೆ ಹಾಗೂ ಅಲ್ಲಿರುವ ಸುಳಿವುಗಳನ್ನು ಹುಡುಕುತ್ತ ಅವುಗಳನ್ನು ವಿಶ್ಲೇಷಿಸುವ ಪರಿ ಅಚ್ಚರಿಗೊಳಿಸುತ್ತದೆ, ನಿಧಿಯನ್ನು ಅರಸುತ್ತಾ ಅಲೆಯುವವರು ಇವರ ಅಲೆದಾಟ ಎಷ್ಟು ಕುತೂಹಲ ಮೂಡಿಸಿತ್ತೆಂದರೆ ಮತ್ತೊಮ್ಮೆ ಹಂಪೆಗೆ ಹೋಗಿ ಅವೆಲ್ಲ ಸ್ಥಳಗಳನ್ನು ಇನ್ನೊಮ್ಮೆ ಕೂಲಂಕುಶವಾಗಿ ವೀಕ್ಷಿಸಿ ಸುಳಿವುಗಳು ಇರುವುದು ನಿಜವೇ ಎಂದು ಪರೀಕ್ಷಿಸಬೇಕು ಎನ್ನುವಷ್ಟು ಆಸಕ್ತಿ ಹುಟ್ಟಿಸಿದೆ.. ಹಂಪೆಯ ಹೇಮಕೂಟ ಪರ್ವತ, ವಿಠ್ಠಲಸ್ವಾಮಿ ದೇವಾಲಯದ ಸಿಮಾಗ್ರಾಫಿಗಳು, ಪಂಪಸಾಗರದ ಕರೆ ಇವೆಲ್ಲಾ ಸ್ಥಳಗಳು ನೋಡಬೇಕು ಎಂದೆನ್ನಿಸುತ್ತದೆ..

ಕತೆಯನ್ನು ಎಷ್ಟೊಂದು ಅದ್ಭುತವಾಗಿ ಹೆಣೆದಿದ್ದಾರೆ ಎಂದರೆ ಪ್ರತಿ ಅಧ್ಯಾಯದ ಕೊನೆಯಲ್ಲಿ ಮುಂದಿನ ಅಧ್ಯಾಯದಲ್ಲಿ ಏನಾಗುತ್ತದೆ ಎಂದು ಆತುರದಿಂದ ಕಾಯುತ್ತಾ ಕೇಳುವಂತೆ ಮಾಡುತ್ತದೆ.. ಕಥೆಯ ಧ್ವನಿ ನಿರೂಪಣೆ ಹಾಗೂ ಹಿನ್ನೆಲೆಯಲ್ಲಿ ಬರುವ ಧ್ವನಿ ಕೂಡ ಕಥೆಯನ್ನು ಇನ್ನೂ ಶ್ರೀಮಂತಗೊಳಿಸಿದೆ.

ರಾಮಾನುಜ ಸಾವು, ಅಣ್ಣನ ಕಳೆದುಕೊಂಡ ರಾಘವನ ಮನಸ್ಸಿನ ವೇದನೆ, ಸತ್ತನೆಂದು ತಿಳಿದಿದ್ದ ಅಣ್ಣ ಸಿಕ್ಕಾಗ ನಿಧಿ ಸಿಕ್ಕಂತೆ ಸಂಭ್ರವಿಸುವ ರಾಘವ.. ನಿಧಿ ಹುಡುಕಿಕೊಂಡು ಹೊರಟ ತಂಡಕ್ಕೆ ಅಂತಿಮವಾಗಿ ನಿಧಿ ಸಿಗುವುದೇ.? ಎಂಬ ಕುತೂಹಲಕವನ್ನು ನಾನು ಅಂತ್ಯಗೊಳಿಸುತ್ತೇನೆ.. ಹೌದು ಇವರಿಗೆ ಭೂಮಿಯ ಗರ್ಭದಲ್ಲಿ ಆಗಾಧ ನಿಧಿ ದೊರೆಯುತ್ತದೆ. ಅದನ್ನು ಸರ್ಕಾರಕ್ಕೆ ಒಪ್ಪಿಸಿದರೆ ನಿಧಿಯ ಒಂದಂಶ ನಿಧಿ ತೋರಿಸುವವರಿಗೆ ಸರ್ಕಾರ ಕೊಡುತ್ತದೆ. ಇವರ ಐದು ಜನರ ತಂಡಕ್ಕೆ ತಲಾ ಒಬ್ಬರಿಗೆ ಹತ್ತುಸಾವಿರ ಕೋಟಿ ಸಿಗಬಹುದು ಎಂದಾದರೆ ಆ ಒಟ್ಟು ನಿಧಿ ಮೌಲ್ಯ ನೀವೆ ಊಹಿಸಿ..

ಅಂತಹ ನಿಧಿ ಎಲ್ಲಿ ಸಿಗುತ್ತದೆ ಕೋಲಾರದಲ್ಲಿಯೇ..!? ಮಹಾಕೂಟವೇ..!!?? ಅಥವಾ ಮುತ್ತು ರತ್ನಗಳ ರಾಶಿ ಹಾಕಿ ಮಾರಿದ ಹಂಪೆಯಲ್ಲಿಯೆ..!!??

ತಿಳಿಯುವ ಕುತೂಹಲವಿದ್ದರೆ ಆಡಿಯೋ ಬುಕ್ ಕೇಳಿ...

ನೀವು Malang App ಡೌನ್‌ಲೋಡ್ ಮಾಡಿಕೊಂಡರೆ ಅದರಲ್ಲಿ ಈ ಪುಸ್ತಕ ಸಿಗುತ್ತದೆ,ಹಾಗೂ ಇದರ ಮೊದಲ ಅಧ್ಯಾಯ FREE ಉಚಿತವಾಗಿಯೇ ಸಿಗುವುದು, ನಿಮಗೆ ಹಿರಣ್ಯ ಗರ್ಭಕ್ಕೆ ಕೊಂಡೊಯ್ಯಲು ಇದೊಂದು ಅಧ್ಯಾಯ ಸಾಕು..

ಟ್ರೈ ಮಾಡಿ..

Tuesday, September 7, 2021

ನಮ್ ತೇಜಸ್ವಿ


 

ತೇಜಸ್ವಿ ಅವರ ಜನ್ಮ ದಿನ

ಪೂರ್ಣಚಂದ್ರ ತೇಜಸ್ವಿಯವರು ಹುಟ್ಟಿದ ದಿನ.


ಕುವೆಂಪುರವರು ‘ಶ್ರೀ ರಾಮಾಯಣ ದರ್ಶನಂ’ ರಚಿಸುತ್ತಿದ್ದ ಕಾಲವದು. ಕಾವ್ಯವನ್ನು ಆಗಷ್ಟೇ ರಚಿಸಲು ಶುರು ಮಾಡಿದ್ದರು. ಒಂದೇ ಸಮನೆ ಬರೆದು ಬರೆದು ಮುಂದಕ್ಕೆ ಸಾಗುತ್ತಿರುವಾಗ ಹಠಾತನೇ ಸ್ಫೂರ್ತಿ ನಿಂತು ಹೋಯಿತು. ವಾರನುಗಟ್ಟಲೆ ಕಾವ್ಯ ಮುಂದಕ್ಕೆ ಹೋಗಲೇ ಇಲ್ಲಾ. ಹೀಗೆ ಕುವೆಂಪುರವರು ಚಡಪಡಿಸುತ್ತಿದ್ದ ಒಂದು ದಿನ ತಮ್ಮ ಮಗು ಕೈಗೂಸು ತೇಜಸ್ವಿ ಊಟ ಮಾಡದೆ ರಚ್ಚೆ ಹಿಡಿದಿದ್ದನ್ನ ಕಂಡ ಸಮಯದಲ್ಲಿ ಹಠಾತ್ತನೆ ಹೊಳೆದ ಸಾಲು “ಏಕೆ ಅಳುವೇ ತೇಜಸ್ವಿಯೇ”. ಇದರಿಂದ ಮಗು ಸಮಾಧಾನಪಟ್ಟಿತೋ ಇಲ್ಲವೋ ಗೊತ್ತಿಲ್ಲ. ಆದರೆ ಕುವೆಂಪುರವರ ಲೇಖನಿ ಅಲ್ಲಿಂದ ನಿಲ್ಲದೆ ಮುಂದೆ ಸಾಗಿ ‘ಶ್ರೀ ರಾಮಾಯಣ ದರ್ಶನಂ’ ರಚಿತವಾಯಿತು. ಮತ್ತು ಅದು ಸಾಕಷ್ಟು ಜನಪ್ರಿಯವಾಗಿದ್ದಷ್ಟೇ ಅಲ್ಲ, ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು.
ಈ ರೀತಿಯಾಗಿ ತಮ್ಮ ತಂದೆಗೇ  ತೇಜಸ್ವಿಯವರು ಸ್ಫೂರ್ತಿಯಾಗಿದ್ದರು.
ತೇಜಸ್ವಿಯವರು ಹುಟ್ಟಿದ್ದು ಸೆಪ್ಟೆಂಬರ್ ೮, ೧೯೩೮  ಶಿವಮೊಗ್ಗದ ಕುಪ್ಪಳ್ಳಿಯಲ್ಲಿ. ತಾವು ಅನುವಾದಿಸಿದ ‘ಮಹಾಯುದ್ಧದ ಕಥೆ’ಗಳಲ್ಲಿ ಆ ಭೀಕರತೆಯ ಕಾಲದಲ್ಲಿ ತಾನು ಜನಿಸಿದ್ದು ಎಂದು ಬರೆದು ಕೊಂಡಿದ್ದಾರೆ. ಅವರು ಶಿಕ್ಷಣಾಭ್ಯಾಸವನ್ನು ಮೈಸೂರಿನಲ್ಲಿ ಮುಗಿಸಿದ್ದರು. ಕನ್ನಡದಲ್ಲಿ ಬಿ.ಎ ಹಾಗೂ ಎಂ.ಎ ಸ್ನಾತಕೋತ್ತರ ಪದವೀಧರರಾಗಿ ಯಾವುದೇ ಸರಕಾರಿ ಹುದ್ದೆಯನ್ನು ಅಪೇಕ್ಷಿಸದೆ ಚಿಕ್ಕಮಂಗಳೂರಿನ ಮೂಡಿಗೆರೆಯಲ್ಲಿ ಕೃಷಿ ಉದ್ಯಮದಲ್ಲಿ ತೊಡಗಿಕೊಂಡರು. ಅದಕ್ಕೆ ಮುಖ್ಯ ಕಾರಣ ಅವರಿಗಿದಿದ್ದ ಅದಮ್ಯ ನಿಸರ್ಗ ಪ್ರೇಮ.
ಆಡು ಮುಟ್ಟದ ಸೊಪ್ಪಿಲ್ಲ. ಹಾಗೆಯೇ ತೇಜಸ್ವಿಯವರು ಕೈಹಿಡಿಯದ ವಿಷಯಗಳಿರಲಿಲ್ಲ. ಮುಂದೆ ಕನ್ನಡ ಓದುಗರಿಗೆ “ಪೂಚಂತೇ” ಎಂದೇ ಜನಪ್ರಿಯರಾದರು. ಅವರು ಎಲ್ಲಾ ಬಗೆಯ ಕೃತಿಯನ್ನು ರಚಿಸುತ್ತಾ ಕನ್ನಡಾಂಭೆಯ ಸೇವೆಯಲ್ಲಿತಮ್ಮನ್ನು ತಾವು ತೊಡಗಿಸಿಕೊಂಡರು. ಅಂತರ್ಜಾಲವಿಲ್ಲದಿದ್ದ ಕಾಲದಲ್ಲಿಯೇ ಅವರು ಅನೇಕ ವಿಷಯಗಳನ್ನುಅನುವಾದಿಸಿ ಅವುಗಳನ್ನು ಕೃತಿಯಾಗಿಸಿದ್ದಾರೆ.’ ಫ್ಲೈಯಿಂಗ್ ಸಾಸರ್’ ನಲ್ಲಿ ಅನ್ಯಜೀವಿಗಳ ಬಗ್ಗೆ ವಿಜ್ಞಾನದ ಕುರಿತಾದ ಮಾಹಿತಿಯನ್ನು ಸಂಗ್ರಹಿಸಿ ಎರಡು ಪುಸ್ತಕಗಳನ್ನು ಪ್ರಕಟಿಸಿದರು. ‘ಏರೋಪ್ಲೇನ್ ಚಿಟ್ಟೆ’ ಎಂಬ ಕಥಾ ಸಂಕಲನದಲ್ಲಿ “ ಚಿಟ್ಟೆಗಳು, ಬಾವಲಿಯ ವಿಚಿತ್ರ ಸಂಗತಿಗಳು, ಕಪ್ಪೆಯನ್ನು ನುಂಗ ಬಯಸಿದ ಹಾವಿನ ಬಗ್ಗೆ ಹಾಗೂ ಇನ್ನು ಅನೇಕ ಕೀಟಗಳ ಬಗ್ಗೆ ಬರೆದಿದ್ದಾರೆ. ತಮ್ಮ ‘ಮಿಸ್ಸಿಂಗ್ ಲಿಂಕ್’ ಪುಸ್ತಕದಲ್ಲಿ ಮಾನವನ ಪೂರ್ವಜರನ್ನು ದಾಖಲೆಗಳ ಸಮೇತ ಪ್ರಕಟಿಸಿ, ಕನ್ನಡದ ಓದುಗರೆಲ್ಲರೂ ಹುಬ್ಬೇರಿಸುವಂತೆ ಮಾಡಿದರು. ಹಾಗೆ ಜೊತೆಗೆ ಪೆಸಿಫಿಕ್ ದ್ವೀಪಗಳು, ನೈಲ್ ನದಿಯ ಬಗ್ಗೆ, ಅಮೇಝೋನ್ ಕಾಡುಗಳ ಭೀಕರತೆಯನ್ನು ಪರಿಚಯಿಸುತ್ತಾ ಒಂದು ಕಡೆ ‘ಕರ್ವಾಲೋ’,’ ಚಿದಂಬರರಹಸ್ಯ’, ‘ಜುಗಾರಿ ಕ್ರಾಸ್’ ಮುಂತಾದ ಕಾದಂಬರಿಗಳನ್ನು ಬರೆದರು. ಕರ್ವಾಲೋ ಕಾದಂಬರಿಯಲ್ಲಿ ಬರುವ ಮಂದಣ್ಣನ ಪಾತ್ರವು ಈಗಿನ ತಲೆಮಾರಿಗೂ ಜನಪ್ರಿಯ. ತಮ್ಮ ಎಲ್ಲಾ ಕೃತಿಗಳಲ್ಲಿಯೂ ತಮ್ಮ ಅಗಾಧ ನಿಸರ್ಗ ಪ್ರೀತಿಯನ್ನು ತನ್ನ ಬುದ್ಧಿಶಕ್ತಿಯ ಜೊತೆ ಬೆರಸಿ ಕನ್ನಡದಲ್ಲಿ ಅನೇಕ ನವ್ಯ ಸಾಹಿತ್ಯ ಕೃತಿಗಳು ಬರಲು ಕಾರಣವಾದರು.
ಶ್ರೀ ತೇಜಸ್ವಿ ಎಂದರೆ ಒಂದು ಜೀವಂತ ವಿಶ್ವಕೋಶ. ಅವರ ಮಿಲೇನಿಯುಮ್ ಸರಣಿ ಈಗಲೂ ಜನಪ್ರಿಯ. ಸರಣಿಯಲ್ಲಿ ಪ್ರಕಟಗೊಂಡ ಪ್ಯಾಪಿಯೊನ್ ( ಭಾಗ ೧, ೨, ೩), ಮಹಾಪಲಾಯನ ಪುಸ್ತಕವು ಮಧ್ಯ ಶತಮಾನದ ಕಮ್ಯುನಿಸಂ ಕ್ರೂರತೆಯನ್ನು ಪರಿಚಯಿಸಿದರೆ, ದೇಶ- ವಿದೇಶ, (ಭಾಗ ೧, ೨, ೩, ೪) ಪಾಶ್ಚಿಮಾತ್ತ್ಯ ದೇಶದ ಸಂಸ್ಕೃತಿ ಹಾಗೂ ವಾಸ್ತವತೆಯನ್ನು ಪರಿಚಯಿಸಿತು. ಮಹಾಯುದ್ಧ (ಭಾಗ ೧, ೨, ೩) ಪುಸ್ತಕಗಳಲ್ಲಿ ಹಿಟ್ಲರ್, ಮಿತ್ರಪಡೆ, ಗ್ರೇಟ್ ಬ್ರಿಟನ್ ಹಾಗೂ ಅಮೇರಿಕಾ ಜಪಾನ್ ಮೇಲೆ ಹಾಕಿದ ಅಣು ಬಾಂಬಿನ ತೀವ್ರತೆಯನ್ನು ಮಾಹಿತಿ ಸಮೇತ ಅನುವಾದಿಸಿದರು. ಹೀಗೆ ಅವರ ಎಲ್ಲಾ ಪುಸ್ತಕಗಳು ಎಲ್ಲ ತಲೆಮಾರುಗಳಿಗೆ ಉಪಯೋಗವಾಗುವಂತದ್ದು, ಮತ್ತೆ ಮತ್ತೆ ಓದಬೇಕೆನಿಸುವುದು.

ತೇಜಸ್ವಿಯವರು ನುರಿತ ಸ್ಥಿರ ಚಿತ್ರ ಛಾಯಾಗ್ರಾಹಕರಾಗಿಯೂ ಜನಪ್ರಿಯ. ತಮ್ಮ ‘ಹಕ್ಕಿ ಪುಕ್ಕ’ ಪುಸ್ತಕದಲ್ಲಿ ವರ್ಣಮಯ ಪಕ್ಷಿ ಚಿತ್ರಗಳು ತಮ್ಮ ಕ್ಯಾಮೆರಾದಲ್ಲೇ ತೆಗೆದಿದ್ದು. ಈಗಿನ ತಲೆಮಾರಿಗೆ ಜಿಮ್ ಕಾರ್ಬೆಟ್ ಹಾಗೂ ಕೆನ್ನೆತ್ ಆಂಡರ್ಸನ್ ಆಂಗ್ಲ ಬೇಟೆ ಕಥೆ ಗಳನ್ನು ಅನುವಾದಿಸಿ ಎಷ್ಟೋ ಜನರಲ್ಲಿ ಪ್ರಾಣಿ ಪ್ರೀತಿಯನ್ನು ಹುಟ್ಟು ಹಾಕಿದರು.

ತೇಜಸ್ವಿಯವರ ಜ್ಞಾನ ತುಂಬಿಟ್ಟ ಅಕ್ಕಿ  ಮೂಟೆಯಂತೆ. ಅದರಲ್ಲಿನ ಅಕ್ಕಿ ಲೆಕ್ಕ ಹಾಕುವುದು ಎಷ್ಟು ಕಷ್ಟವೋ, ಅಷ್ಟೇ ಕಷ್ಟ ಅವರ ಜ್ಞಾನ ಭಂಡಾರವನ್ನು ಲೆಕ್ಕ ಹಾಕುವುದು. ಈ ದಿನ ಶ್ರೀ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟಿದ ಹಬ್ಬ. ಅವರ ನೆನಪಲ್ಲಿ ಅವರ ಸಾಹಿತ್ಯ, ನೈಸರ್ಗಿಕ ಪ್ರೀತಿಯನ್ನು ನೆನೆಯೋಣ.