ಪುಸ್ತಕ:- ಪೆದ್ದಚೆರುವಿನ ರಾಕ್ಷಸ (ಕಾಡಿನ ಕಥೆಗಳು ಭಾಗ-೨)
ಲೇಖಕರು:- ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ತೇಜಸ್ವಿಯವರ ಕಾಡಿನ ಕಥೆಗಳ ಭಾಗ-೨ರಲ್ಲಿ ಪುಸ್ತಕ ಇದಾಗಿದ್ದು. ಇದು ಕೆನೆತ್ ಆಂಡರ್ಸನ್ ಅವರ ಕಥೆಗಳ ಸಂಗ್ರಹ ಭಾವಾನುವಾದವಾಗಿದೆ. ಕೆನೆತ್ ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ಅವರ ಕತೆಗಳು ಭಾರತದಲ್ಲಿ ಬೇಟೆಯಾಡಿದ ನರಭಕ್ಷಕ ಹುಲಿಗಳ ಬಗ್ಗೆ ಇರುತ್ತವೆ. ಇವರಿರ್ವರು ಮಹಾನ್ ಬೇಟೆಗಾರರು, ಜನರಿಗೆ ಉಪದ್ರವ ಕೊಡುವ ಹುಲಿಗಳನ್ನು ಕೊಂದ ಘಟನೆಗಳನ್ನು ಎಷ್ಟೊಂದು ರೋಚಕವಾಗಿ ವರ್ಣಿಸುತ್ತಾರೆಂದರೆ ಇವು ನೈಜ ಘಟಕಗಳೋ ಕಾಲ್ಪನಿಕ ಕಥೆಗಳೋ ಎಂದೆನ್ನಿಸುತ್ತದೆ. ಕಾಂಕ್ರೀಟ್ ಕಾಡಿನ ಯುಗದಲ್ಲಿರುವ ನಮಗೆ ಇವೆಲ್ಲಾ ಕಾಲ್ಪನಿಕ ಎನ್ನಿಸುತ್ತವೆ, ನಾವೆಲ್ಲಾ ಇಂದು ಅಂತಹಾ ದಟ್ಟವಾದ ಕಾಡು ನೋಡೇ ಇಲ್ಲ ಇನ್ನೂ ಹುಲಿಗಳಂತು ದೂರದ ಮಾತು.. ನಾವೀಗ ಹುಲಿಗಳನ್ನು ಬೆರಳೆಣಿಕೆಯಲ್ಲಿ ಎಣಿಸಿ ಬರೆದುಕೊಳ್ಳುವಷ್ಟು ನಾಶಿಸಿ ಹೋಗಿರುವುದು ದುರಂತವೇ ಸರಿ.. ಆದರೆ ಆಂಡರ್ಸನ್ & ಜಿಮ್ ಕಾರ್ಬೆಟ್‌ರ ವರ್ಣನೆಗಳು, ಕಾಡು, ನರಭಕ್ಷಕಗಳ ಘಟನೆಗಳು ನೈಜ ಎಂಬುವುದು ಅಷ್ಟೇ ಸತ್ಯ…
ಕಥಾವಸ್ತು:- “ ಪೆದ್ದಚೆರುವಿನ ರಾಕ್ಷಸ “ ಎಂಬ ಈ ಪುಸ್ತಕದಲ್ಲಿ ಆಂಡರ್ಸನ್ ಮೂರು ನರಭಕ್ಷಕ ಹುಲಿಗಳ ಬೇಟೆಯಾಡಿದ ರೋಚಕ ಕತೆಗಳಿವೆ.
೧)ಪೆದ್ದಚೆರುವಿನ ರಾಕ್ಷಸ
೨)ತಾಳವಾಡಿಯ ಮೂಕರಾಕ್ಷಸ
೩)ಲಕ್ಕವಳ್ಳಿಯ ಹೆಬ್ಬುಲಿ
“ ಪೆದ್ದಚೆರುವಿನ ರಾಕ್ಷಸ “ ಪೆದ್ದಚೆರು ಎಂಬುದು ಶ್ರೀಶೈಲ ಮತ್ತು ಮರಕಪುರ ರಸ್ತೆಯಲ್ಲಿ ಬರುವ ಚಿಕ್ಕ ಹಳ್ಳಿ.ಹಳ್ಳಿ ಸಮೀಪ ಒಂದು ಕೆರೆ,ಕೆರೆ ಪಕ್ಕದಲ್ಲಿ ದಟ್ಟವಾದ ಕಾಡು. ಇಲ್ಲಿ ಹುಲಿಗಳ ಸಂಖ್ಯೆ ಯಥೇಚ್ಛವಾಗಿತ್ತು. ಹುಲಿಗಳ ಗರ್ಜನೆ ಸದ್ದು ಹಳ್ಳಿಗಳ ಜನರಿಗೆ ಸಾಮಾನ್ಯವಾಗಿ ಕೇಳುತ್ತಿತ್ತು. ಎಲ್ಲಾ ಹುಲಿಗಳು ನರಭಕ್ಷಕ ಆಗಿರುವುದಿಲ್ಲ ತಮ್ಮ ಪಾಡಿಗೆ ತಾವು ಕಾಡು ಪ್ರಾಣಿಗಳ ಬೇಟೆಯಾಡಿಕೊಂಡು ವಾಸಿಸುತ್ತವೆ. ಆದರೆ ಹುಲಿಗಳು ನರಭಕ್ಷಕರಾಗಲು ಪರೋಕ್ಷವಾಗಿ ಮನುಷ್ಯನೇ ಕಾರಣನಾಗಿರುತ್ತಾನೆ ಎಂಬುದಂತು ಸತ್ಯ.. ಆದರೆ ಇಲ್ಲಿ ಹುಲಿ ನರಭಕ್ಷಕನಾಗಲು ಮನುಷ್ಯನ ಕಾರಣನಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಒಮ್ಮೆ ಕಾಡಿನಲ್ಲಿ ಎರಡು ಬಲಿಷ್ಠ ಹುಲಿಗಳ ನಡುವೆ ಭೀಕರ ಕಾಳಗ ನಡೆದಿತ್ತು ಇದರಲ್ಲಿ ಗಂಭೀರವಾಗಿ ಗಾಯಗೊಂಡ ಹುಲಿ ಪ್ರಾಣಿಗಳ ಶಿಕಾರಿ ಮಾಡುವ ಶಕ್ತಿ ಕಳೆದುಕೊಳ್ಳುತ್ತದೆ. ಆಗ ಅದು ಮೊಲ ಮೇಕೆ ದನಕರುಗಳನ್ನು ತಿನ್ನಲು ಪ್ರಾರಂಭಿಸುತ್ತದೆ, ಒಮ್ಮೆ ಕಾಡಿನಲ್ಲಿ ಗಾಡಿಹೊಡೆದುಕೊಂಡು ಹೋಗುವವನು ಹಿಡಿದು ಮೊದಲ ನರಬಲಿ ಪಡೆಯುವುದು, ಯಾವುದೇ ಪ್ರತಿರೋಧವಿಲ್ಲದೆ ಸುಲಭವಾಗಿ ಶಿಕಾರಿಗೆ ಸಿಗುವ ಜೀವಿ ಎಂದರೆ ಮನುಷ್ಯನೇ ಎಂದು ತಿಳಿದಾಗ ನರಭಕ್ಷಕನಾಗಿ ರೂಪುಗೊಳ್ಳುತ್ತದೆ.ಈ ಹುಲಿಯನ್ನು ಕೊಂದ ರೋಚಕ ಕತೆಯೇ ಪೆದ್ದಚೆರುವಿನ ರಾಕ್ಷಸ..
“ ತಾಳವಾಡಿಯ ಮೂಕರಾಕ್ಷಸ “ ಕೊಯಮತ್ತೂರು ಜಿಲ್ಲೆಯ ನೀಲಗಿರಿ ಹತ್ತಿರದಲ್ಲಿರುವ ಹಳ್ಳಿ ತಾಳವಂಡಿ.ಇಲ್ಲಿ ಆಂಡರ್ಸನ್ ಅವರ ಸ್ನೇಹಿತನೊಬ್ಬನ ತೋಟವಿತ್ತು. ಅವನ ತೋಟಕ್ಕೆ ಬಂದಿದ್ದ ಹುಲಿಯೊಂದನು ಗುಂಡಿಟ್ಟು ಹೊಡೆದಿದ್ದ, ಗುಂಡು ಹುಲಿಯ ದವಡೆಯ ಹತ್ತಿರ ತಗುಲಿತು ಇದರಿಂದ ಹುಲಿಯ ಜೀವವೇನೂ ಹೋಗಲಿಲ್ಲ ಆದರೆ ಹುಲಿಗೆ ಬೇಟೆ ಹಿಡಿಯುವುದು, ಘರ್ಜಿಸುವುದು ಕಷ್ಟವಾಯಿತು. ಆಗ ಹುಲಿ ಗರ್ಜಿಸದೇ ನಿಶಬ್ದವಾಗಿ ನರಬಲಿ ಪಡೆಯಲು ಪ್ರಾರಂಭಿಸಿತು, ಹೀಗೆ ತಾಳವಾಡಿಯಲ್ಲಿ ಮೂಕರಾಕ್ಷಸ ರೂಪುಗೊಂಡಿತು.. ಆಂಡರ್ಸನ್ ಕಾಡಿನಲ್ಲಿ ಕಾಣುವ ಎಲ್ಲಾ ಹುಲಿಗಳನ್ನು ಕೊಲ್ಲುತ್ತಿರಲಿಲ್ಲ ಅದು ನರಭಕ್ಷಕ ಹೌದು ಎಂದಾದರೆ ಮಾತ್ರ ಹೊಡೆದುರುಳಿಸುತ್ತಿದ್ದ.. ಅರ್ಧ ತಿಂದು ಹೋದ ಕಳೆಬರಗಳ ಬಳಿ ಅಡಗಿ ಕುಳಿತು ಹುಲಿ ಬಂದ ಮೇಲೆ ಅದನ್ನು ಹೊಡೆಯುವ ಕೆಲಸ ನಿಜಕ್ಕೂ ಗಂಡೆದೆಯ ಇರುವವರಿಗೆ ಸಾಧ್ಯ..
“ ಲಕ್ಕವಳ್ಳಿ ಹೆಬ್ಬುಲಿ ” ಲಕ್ಕವಳ್ಳಿ ತರೀಕೆರೆ ಮಾರ್ಗವಾಗಿ ಶಿವಮೊಗ್ಗ ಹೋಗುವ ರಸ್ತೆಯಲ್ಲಿನ ಹಳ್ಳಿ. ಇಲ್ಲಿ ವಯಸ್ಸಾದ ಹೆಬ್ಬುಲಿಯೊಂದು ನರಭಕ್ಷಕನಾಗಿ ರೂಪುಗೊಳ್ಳುವ ಮತ್ತು ಅದನ್ನು ಹೊಡೆದ ರೋಚಕ ಕತೆ ಇದೆ.. ಈ ಹುಲಿ ಮೊದಲು ದನಕರುಗಳ ಹಿಡಿದು ತನ್ನ ಹೆಗಲ ಮೇಲೆ ಹೊತ್ತು ಕಾಡಿನ ನಿರ್ಜನ ಪ್ರದೇಶದವರೆಗೆ ಹೋಗಿ ತಿಂದು ತೆಗುತ್ತಿತ್ತು. ಕ್ರಮೇಣ ನರಮನುಷ್ಯನ ಮಾಂಸದ ರುಚಿಸಿ ನರಭಕ್ಷಕವಾಯಿತು. ಇದನ್ನು ಕೊಂದ ಕತೆ ಇಲ್ಲಿದೆ..
ಇಂತಹ ರೋಚಕ ಕತೆಗಳನ್ನು ಕನ್ನಡಕ್ಕೆ ಭಾವಾನುವಾದಿಸಿ ಓದುಗರಿಗೆ ಒದಗಿಸಿದ ತೇಜಸ್ವಿಯವರಿಗೆ ಧನ್ಯವಾದ. ಈ ಪುಸ್ತಕಗಳ ಉದ್ದೇಶ ಬೇಟೆಗಾರಿಕೆ ಉತ್ತೇಜಿಸುವುದಲ್ಲ ಬದಲಾಗಿ ಅಂದಿನ ಕಾಲದಲ್ಲಿದ್ದ ಕಾಡನ್ನೂ ಕಾಡುಪ್ರಾಣಿಗಳನ್ನೂ ಮತ್ತೆ ಪುನರುಜ್ಜೀವನಗೊಳಿಸುವುದು..
ತೇಜಸ್ವಿ ಅವರೇ ಹೇಳುವಂತೆ:- " ದೆವ್ವಗಳೇ ಇಲ್ಲದಿದ್ದರೂ ದೆವ್ವದ ಕತೆಗಳನ್ನು ಓದಿ ಆನಂದಿಸುವವರಂತೆ, ಹುಲಿಗಳೇ ಇಲ್ಲದಿದ್ದರೂ ನರಭಕ್ಷಕರ ಕತೆಗಳನ್ನು ಓದಿ ಆನಂದಿಸಬೇಕಾದ ದುಃಸ್ಥಿತಿ ಬರಬಾರದು. "
ಪ್ರಾಚೀನ ಕಾಲದಲ್ಲಿದ್ದ ಮಹೋರಗಗಳನ್ನು ಪಳೆಯುಳಿಕೆಗಳಲ್ಲಿ ನೋಡುತ್ತಿರುವ ನಾವು ಇಂದಿನ ಕಾಡನ್ನು ಕಾಡುಪ್ರಾಣಿಗಳನ್ನು ಪಳೆಯುಳಿಕೆಗಳಾಗಿ ಪರಿವರ್ತಿಸದೇ ಸಂರಕ್ಷಿಸಿ ಮುಂದಿನ ಪೀಳಿಗೆಗೆ ರವಾನಿಸೋಣ..



No comments:
Post a Comment