ಪುಸ್ತಕ:- ಹಿರಣ್ಯಗರ್ಭ- ಇತಿಹಾಸಕ್ಕೊಂದು ಪಾತಾಳಗರಡಿ
ಲೇಖಕರು:- ನವೀನ್ ಶಾಂಡಿಲ್ಯ
ಆಡಿಯೋ ಪುಸ್ತಕದ ಬೆಲೆ 310/-
ಪುಸ್ತಕಗಳು ಓದುವ ಹವ್ಯಾಸವಿದ್ದ ನನಗೆ ಈ ಹಾಳು ಮೊಬೈಲಿಂದ ಸಾಕಷ್ಟು ಸಮಯ ವ್ಯಯವಾಗಿ ಹೋಗುತ್ತಿತ್ತು. ಮೊಬೈಲ್ ಗೀಳಿಂದ ಹೊರಬರಲಾಗದೇ ಮೊಬೈಲ್‌ನಲ್ಲೇ ಇ-ಪುಸ್ತಕ ಓದುವ ಹುಚ್ಚು ಬೆಳೆಸಿಕೊಂಡೆ. ಅದೂ ಕಣ್ಣಿಗೆ ಶ್ರಮದಾಯಕವೇ.. ಹಾಳಾದ ಮೊಬೈಲ್ ಸಹವಾಸವೇ ಬೇಡ ಎಂದು ಶಪಿಸುವಾಗ ಮೈಲ್ಯಾಂಗ್ ಬುಕ್ಸ್ *MyLang app* ಎನ್ನುವ ಆ್ಯಪ್‌ಯಿಂದ ಆಡಿಯೋ ರೂಪದಲ್ಲಿ ಪುಸ್ತಕಗಳು ಬಿಡುಗಡೆಯಾಗುತ್ತವೆ ಎಂದು ತಿಳಿದಾಗ ಕುತೂಹಲ.. ನೆಚ್ಚಿನ ಲೇಖಕರಾದ ಪೂಚಂತೇಯವರ ಹಲವು ಪುಸ್ತಕಗಳನ್ನು ಖರೀದಿಸಿ ಕಣ್ಮುಚ್ಚಿ ಕೇಳಿ ಆನಂದಿಸಿದೆ. ಕಣ್ಣಿಗೆ ರೆಸ್ಟ್; ಪುಸ್ತಕ ಓದಿದಷ್ಟೇ ನೆಮ್ಮದಿ.. ಶಿವಮೊಗ್ಗದಿಂದ ಪ್ರತಿವಾರ ವಿಜಯನಗರ ಜಿಲ್ಲೆಯಲ್ಲಿರುವ ಹುಟ್ಟೂರಿಗೆ ಹೋಗುವ ಅನಿವಾರ್ಯತೆ ಹಾಳಾದ ಈ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಎನ್ನುವುದು ಗಗನಕುಸುಮ.. ಒಂದೆಡೆ ವರ್ಗಾವಣೆ ವಿಷಯದಲ್ಲಿ ಇಲಾಖೆ ಮೇಲೆ ಸ್ವಲ್ಪ ಬೇಸರವಿದ್ದರೂ ಸಹ ನಾನು ಬೇರೊಂದು ಇಲಾಖೆಯಲ್ಲಿದ್ದಿದ್ದರೆ ಖಂಡಿತವಾಗಿಯೂ ಪುಸ್ತಕಗಳನ್ನು ಓದಲು ಸಮಯ ಸಿಗುತ್ತಿರಲಿಲ್ಲವೇನೋ ಎನ್ನಿಸುತ್ತದೆ.. ಪ್ರತಿವಾರ ಬೈಕೇರಿ ಊರಿಗೆ ಹೊರಟಾಗ ಕಿವಿಯಲ್ಲಿ ಹೆಡ್ ಫೋನ್‌ನಲ್ಲಿ ಆಡಿಯೋ ಬುಕ್‌ಗಳನ್ನು ಕೇಳುತ್ತಾ ಹೋಗುತ್ತಿದ್ದೆ, ತೇಜಸ್ವಿ ಪುಸ್ತಕಗಳನ್ನು ಅದೆಷ್ಟು ಬಾರಿ ಕೇಳಿದ್ದೇನೆಂದರೆ ಪುಸ್ತಕದ ಪ್ರತಿ ಸಾಲು ಹೇಳುವಷ್ಟು..
ಇತ್ತೀಚಿಗೆ ಮೈಲ್ಯಾಂಗ್ ಬುಕ್ ಆ್ಯಪ್‌ನಲ್ಲಿ *ಹಿರಣ್ಯಗರ್ಭ* ಎಂಬ ಪುಸ್ತಕವನ್ನು ಖರೀದಿಸಿದೆ, ಪತ್ತೆದಾರಿ ಕಾದಂಬರಿಗಳ ಬಗ್ಗೆ ಸಹಜವಾಗಿಯೇ ಆಸಕ್ತಿ ಹೊಂದಿದ್ದ ನನಗೆ ಇದನ್ನು ಖರೀದಿಸುವ ಮನಸ್ಸಾಯಿತೇ ಹೊರತು ಪುಸ್ತಕದ ಬಗ್ಗೆ ಆಗಲಿ ಅಥವಾ ಲೇಖಕರ ಬಗ್ಗೆ ಆಗಲಿ ಕೊಂಚವೂ ತಿಳಿದಿರಲಿಲ್ಲ..
ಇದರಲ್ಲಿ 21 ಅಧ್ಯಾಯಗಳಿವೆ.ಇದು 11 ಗಂಟೆ 9 ನಿಮಿಷಗಳ ಸುಧೀರ್ಘ ಪುಸ್ತಕ..
ಕಥಾವಸ್ತು:- ವೇದೋಪನಿಷತ್ತುಗಳ ಶ್ಲೋಕದ ಕುರುಹನ್ನು ಭೇದಿಸಿ ನಿಧಿಯನ್ನು ಹುಡುಕಲು ಹೊರಟ ರೋಚಕ ಕತೆ..
ಪಾತ್ರಗಳು:- ನವೀನ್ ಶಾಂಡಿಲ್ಯ, ರಾಮಾನುಜ,ರಾಘವ,ಗಾರ್ಗಿ,ಅಧಿತಿ
ನಿಧಿಶೋಧದ ಕಥೆಗಳು ಯಾವಾಗಲೂ ರೋಚಕವೇ. ಕಡೆಯಲ್ಲಿ ನಿಧಿ ದಕ್ಕುವುದೋ ಇಲ್ಲವೋ ಎಂಬ ಕುತೂಹಲದ ಜೊತೆಗೆ ಹುಡುಕಾಟದ ಹಾದಿಯ ಪ್ರತಿ ತಿರುವೂ, ಸುಳಿವೂ, ದಿಕ್ಕುತಪ್ಪುವುದು ಸಾಮಾನ್ಯ, ಇಲ್ಲಿಯೂ ಸುಳಿವುಗಳ ಗೂಡಾರ್ಥ ತಿಳಿದು ಅವನ್ನು ಪರಿಹರಿಸುವ ಜಾಣ್ಮೆ , ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯಲ್ಲಿ ಪರಿಶೀಲಿಸಿ ಪರಿಹರಿಸುವ ಪರಿ ಎಲ್ಲಾವೂ ಅದ್ಭುತವಾಗಿವೆ.
ಲೇಖಕರಾದ ನವೀನ್ ಕತೆಯ ಭಾಗವಾಗಿ ನಿರೂಪಣೆ ಮಾಡುತ್ತಾ ನಮಗೆ ಹಿರಣ್ಯಗರ್ಭ ಎಂಬ ಮಾಯಾಲೋಕಕ್ಕೆ ಕೊಂಡೊಯ್ಯುತ್ತಾರೆ.
ವೇದಗಳ ಸಂದೇಶಗಳನ್ನು ವಿಜ್ಞಾನದ ವ್ಯಾಖ್ಯಾನಗಳಿಂದ ವಿಶ್ಲೇಷಿಸಿ, ವಿಸ್ಮಯಕಾರಿ ಗುಟ್ಟೊಂದನ್ನು ಬೇಧಿಸಲು ನಿಧಿಶೋಧಕ್ಕೆ ಹೊರಟ ಯುವಕರ ತಂಡ ಇವರದ್ದು,ಎಲ್ಲಾರೂ ಮೇಧಾವಿಗಳು..
ರಾಮಾನುಜ-ರಾಘವ ಸಹೋದರರು; ವೇದಾಂತ ಪಂಡಿತರು ಮಹಾನ್ ಜ್ಞಾನಿಗಳು. ಗಾರ್ಗಿ ಜಿಯೋಲಾಜಿಸ್ಟ್, ಅಧಿತಿ ವೈದ್ಯೆ..
ಬೆಂಗಳೂರಿನ ಮಲ್ಲೇಶ್ವರಂನ ಮಾರುಕಟ್ಟೆಯಿಂದ ಪ್ರಾರಂಭವಾಗುವ ಕಥೆ ಹಂಪೆ, ಮಹಾಕೂಟ ಮುಂತಾದ ಸ್ಥಳಗಳಲ್ಲಿ ಈ ಯುವತಂಡ ನಿಧಿಶೋಧಿಸುತ್ತಾ ಹೋದಂತೆ ನಾವು ಅವರ ಜೊತೆಯಲ್ಲಿ ಐತಿಹಾಸಿಕ ಪ್ರವಾಸ ಮಾಡುತ್ತಿದ್ದೇವೆ ಅನ್ನಿಸುತ್ತದೆ. ಆಡಿಯೋ ಕೇಳುತ್ತಾ ಹೋದಂತೆ ಮೈ ರೋಮಾಂಚನವಾಗಿ ರೋಮಗಳೆಲ್ಲಾ ನಿಮಿರಿ ನಿಲ್ಲುತ್ತವೆ,ನಮಗರಿವಿಲ್ಲದಂತೆ ಕಣ್ಣುಗಳು ನೀರ್‌ತುಂಬಿಕೊಳ್ಳುತ್ತವೆ ಹಾಗೂ ಗಾರ್ಗಿ-ರಾಘವನ ಚೆಷ್ಟೆಗಳು ನಗು ತರಿಸುತ್ತದೆ..
ಹಂಪೆಯ ಅಧ್ಯಾಯಗಳಂತು ಸಂಪದ್ಭರಿತ ಅಂದಿನ ಭವ್ಯ ಹಂಪೆ ಕಣ್ಮುಂದೆ ತರಿಸುವಂತೆ ತುಂಬಾ ಸೊಗಸಾಗಿವೆ. ಬಾಲ್ಯದಿಂದಲೇ ವಿಜಯನಗರದ ಹಂಪಿ ನೋಡಿ ಬೆಳೆದಿದ್ದ ನನಗೆ ಇಲ್ಲಿಯ ಐತಿಹಾಸಿಕ ತಾಣಗಳ ವರ್ಣನೆ ಹಾಗೂ ಅಲ್ಲಿರುವ ಸುಳಿವುಗಳನ್ನು ಹುಡುಕುತ್ತ ಅವುಗಳನ್ನು ವಿಶ್ಲೇಷಿಸುವ ಪರಿ ಅಚ್ಚರಿಗೊಳಿಸುತ್ತದೆ, ನಿಧಿಯನ್ನು ಅರಸುತ್ತಾ ಅಲೆಯುವವರು ಇವರ ಅಲೆದಾಟ ಎಷ್ಟು ಕುತೂಹಲ ಮೂಡಿಸಿತ್ತೆಂದರೆ ಮತ್ತೊಮ್ಮೆ ಹಂಪೆಗೆ ಹೋಗಿ ಅವೆಲ್ಲ ಸ್ಥಳಗಳನ್ನು ಇನ್ನೊಮ್ಮೆ ಕೂಲಂಕುಶವಾಗಿ ವೀಕ್ಷಿಸಿ ಸುಳಿವುಗಳು ಇರುವುದು ನಿಜವೇ ಎಂದು ಪರೀಕ್ಷಿಸಬೇಕು ಎನ್ನುವಷ್ಟು ಆಸಕ್ತಿ ಹುಟ್ಟಿಸಿದೆ.. ಹಂಪೆಯ ಹೇಮಕೂಟ ಪರ್ವತ, ವಿಠ್ಠಲಸ್ವಾಮಿ ದೇವಾಲಯದ ಸಿಮಾಗ್ರಾಫಿಗಳು, ಪಂಪಸಾಗರದ ಕರೆ ಇವೆಲ್ಲಾ ಸ್ಥಳಗಳು ನೋಡಬೇಕು ಎಂದೆನ್ನಿಸುತ್ತದೆ..
ಕತೆಯನ್ನು ಎಷ್ಟೊಂದು ಅದ್ಭುತವಾಗಿ ಹೆಣೆದಿದ್ದಾರೆ ಎಂದರೆ ಪ್ರತಿ ಅಧ್ಯಾಯದ ಕೊನೆಯಲ್ಲಿ ಮುಂದಿನ ಅಧ್ಯಾಯದಲ್ಲಿ ಏನಾಗುತ್ತದೆ ಎಂದು ಆತುರದಿಂದ ಕಾಯುತ್ತಾ ಕೇಳುವಂತೆ ಮಾಡುತ್ತದೆ.. ಕಥೆಯ ಧ್ವನಿ ನಿರೂಪಣೆ ಹಾಗೂ ಹಿನ್ನೆಲೆಯಲ್ಲಿ ಬರುವ ಧ್ವನಿ ಕೂಡ ಕಥೆಯನ್ನು ಇನ್ನೂ ಶ್ರೀಮಂತಗೊಳಿಸಿದೆ.
ರಾಮಾನುಜ ಸಾವು, ಅಣ್ಣನ ಕಳೆದುಕೊಂಡ ರಾಘವನ ಮನಸ್ಸಿನ ವೇದನೆ, ಸತ್ತನೆಂದು ತಿಳಿದಿದ್ದ ಅಣ್ಣ ಸಿಕ್ಕಾಗ ನಿಧಿ ಸಿಕ್ಕಂತೆ ಸಂಭ್ರವಿಸುವ ರಾಘವ.. ನಿಧಿ ಹುಡುಕಿಕೊಂಡು ಹೊರಟ ತಂಡಕ್ಕೆ ಅಂತಿಮವಾಗಿ ನಿಧಿ ಸಿಗುವುದೇ.? ಎಂಬ ಕುತೂಹಲಕವನ್ನು ನಾನು ಅಂತ್ಯಗೊಳಿಸುತ್ತೇನೆ.. ಹೌದು ಇವರಿಗೆ ಭೂಮಿಯ ಗರ್ಭದಲ್ಲಿ ಆಗಾಧ ನಿಧಿ ದೊರೆಯುತ್ತದೆ. ಅದನ್ನು ಸರ್ಕಾರಕ್ಕೆ ಒಪ್ಪಿಸಿದರೆ ನಿಧಿಯ ಒಂದಂಶ ನಿಧಿ ತೋರಿಸುವವರಿಗೆ ಸರ್ಕಾರ ಕೊಡುತ್ತದೆ. ಇವರ ಐದು ಜನರ ತಂಡಕ್ಕೆ ತಲಾ ಒಬ್ಬರಿಗೆ ಹತ್ತುಸಾವಿರ ಕೋಟಿ ಸಿಗಬಹುದು ಎಂದಾದರೆ ಆ ಒಟ್ಟು ನಿಧಿ ಮೌಲ್ಯ ನೀವೆ ಊಹಿಸಿ..
ಅಂತಹ ನಿಧಿ ಎಲ್ಲಿ ಸಿಗುತ್ತದೆ ಕೋಲಾರದಲ್ಲಿಯೇ..!? ಮಹಾಕೂಟವೇ..!!?? ಅಥವಾ ಮುತ್ತು ರತ್ನಗಳ ರಾಶಿ ಹಾಕಿ ಮಾರಿದ ಹಂಪೆಯಲ್ಲಿಯೆ..!!??
ತಿಳಿಯುವ ಕುತೂಹಲವಿದ್ದರೆ ಆಡಿಯೋ ಬುಕ್ ಕೇಳಿ...
ನೀವು Malang App ಡೌನ್‌ಲೋಡ್ ಮಾಡಿಕೊಂಡರೆ ಅದರಲ್ಲಿ ಈ ಪುಸ್ತಕ ಸಿಗುತ್ತದೆ,ಹಾಗೂ ಇದರ ಮೊದಲ ಅಧ್ಯಾಯ FREE ಉಚಿತವಾಗಿಯೇ ಸಿಗುವುದು, ನಿಮಗೆ ಹಿರಣ್ಯ ಗರ್ಭಕ್ಕೆ ಕೊಂಡೊಯ್ಯಲು ಇದೊಂದು ಅಧ್ಯಾಯ ಸಾಕು..
ಟ್ರೈ ಮಾಡಿ..


No comments:
Post a Comment