ಪುಸ್ತಕ:- ಕಾಡು ಮತ್ತು ಕ್ರೌರ್ಯ
ಲೇಖಕರು:- ಪೂರ್ಣಚಂದ್ರ ತೇಜಸ್ವಿ
ಇದು ತೇಜಸ್ವಿ ಅವರ ಮೊಟ್ಟಮೊದಲ ಕಾದಂಬರಿ. ೧೯೬೨ರಲ್ಲಿ ಎಂ,ಎ ಪದವಿ ಮುಗಿದ ನಂತರ ಬರೆದ ಕಾದಂಬರಿ ಇದು.ನಾನಾ ಕಾರಣಗಳಿಂದ ಪ್ರಕಟವಾಗದೆ ತೀರಾ ಈಚೆಗೆ ಅಂದರೆ ೨೦೧೩ರಲ್ಲಿ ಪ್ರಕಶಾನ ಕಂಡ ಪುಸ್ತಕ. ಬರೆದ ಸುಮಾರು ಐವತ್ತು ವರ್ಷಗಳ ನಂತರ ಪ್ರಥಮ ಮುದ್ರಣ ಭಾಗ್ಯ ಕಂಡಿತೆಂದ ಮೇಲೆ ಅದರ ಕುರಿತಾದ ಪರಿಚಯ ಸಾಕಷ್ಟು ಕುತೂಹಲಕಾರಿಯಾದ ವಿಷಯವೇ ಅಲ್ಲವೇ ? ತೇಜಸ್ವಿಯವರು ಪರಮಾಭಿಮಾನಿಗಳಿಗೆ ಈ ಪುಸ್ತಕ ಚಿರಪರಿಚಿತವಾಗಿದೆ ಎನ್ನುವುದು ಸಹ ವಿರಳವೆ.. ಚಿದಂಬರ ರಹಸ್ಯ, ಜುಗಾರಿ ಕ್ರಾಸ್‌ನಂತಹ ಅತ್ಯದ್ಭುತ ಕೃತಿಗಳನ್ನು ನೀಡಿದ ತೇಜಸ್ವಿ ಅವರ ನಿರೂಪಣಾ ಶೈಲಿ ಇಲ್ಲಿ ಮೊಳಕೆ ಒಡೆಯುತ್ತಿರುವುದು ಕಾಣಬಹುದು.. ಈ ಪುಸ್ತಕ ಅವರ ಮೊದಲ ಕಾದಂಬರಿಯಾದ ಕಾರಣ ಹೊಸತಿನ ಆ ಸಂಧಿಕಾಲದ ತೇಜಸ್ವಿಯ ಮನಃಸ್ಥಿತಿ, ಚಿಂತನೆ, ಆಲೋಚನೆ, ದಿಟ್ಟತನ, ಒರಟು ಪ್ರಾಮಾಣಿಕತೆ ಎಲ್ಲವೂ ಇಲ್ಲಿ ಹಸಿಹಸಿಯಾಗಿ ಬಿಂಬಿತವಾಗಿರುವ ಕಾಣುತ್ತದೆ.
ಕಾದಂಬರಿಯ ವಿಷಯವಸ್ತು – ಸೋಮು, ನಳಿನಿ, ಲಿಂಗ, ಗಿರಿಯ, ವೆಂಕ, ಕಾಡು ಮತ್ತು ಹಂದಿಗಳ ಮುಖ್ಯ ಪಾತ್ರಗಳ ಸುತ್ತ ಸುತ್ತುವ ಪತ್ತೆದಾರಿಯ ತರಹದ ಕಥಾನಕ. ಮೊದಲಿಗೆ ಹೆಸರೇ ಹೇಳುವಂತೆ ‘ಕಾಡು ಮತ್ತು ಕ್ರೌರ್ಯ’ ಇಲ್ಲಿನ ಮೂಲವಸ್ತು.
ಕಾಡು ಎನ್ನುವುದು ನಿಗೂಢತೆಯ ಸಂಕೇತ. ಪ್ರಕೃತಿಯ ಪರಮಾವತಾರವಾದ ಅದು ಹೇಗೆ ಪ್ರವರ್ತಿಸುವುದು ಎನ್ನುವುದು ತುಂಬಾ ನಿಗೂಢ. ಚಂಚಲತೆ ಮತ್ತು ಅಸ್ಪಷ್ಟತೆ ಅದರ ಹಾಸುಹೊಕ್ಕಾದ ಸ್ವರೂಪ. ಅಲ್ಲಿ ಪ್ರೀತಿಯಿದ್ದಷ್ಟೆ ಕ್ರೌರ್ಯವೂ ಅಂತರ್ಗತ.. ಆದರೆ ಕಥೆಯ ಅಂತರಾಳಕ್ಕೆ ಹೊಕ್ಕುತ್ತಿದ್ದಂತೆಯೆ ಅರಿವಾಗತೊಡಗುತ್ತದೆ ಇದು ಬರಿ ಪ್ರಕೃತಿಯ ನಿಗೂಢತೆ ಮತ್ತು ಕ್ರೌರ್ಯದ ಕುರಿತಾದ ಕಥೆಯಲ್ಲ ಎಂದು. ಪ್ರತಿಯೊಂದು ಮನಸಿನಲ್ಲೂ ಅಡಗಿ ಅಂತರಂಗದಲ್ಲೇನೋ ಇದ್ದರೂ, ಬಹಿರಂಗದಲ್ಲಿ ಮತ್ತೇನಾಗಿಯೊ ಅನಾವರಣವಾಗುತ್ತ, ತನ್ಮೂಲಕ ತನ್ನ ‘ಕಾಡಿನ ನಿಗೂಢತೆ’ ಮತ್ತು ಅದು ಪ್ರಚೋದಿಸುವ ಸೂಕ್ಷ್ಮವಾದ ಮೇಲ್ತೋರಿಕೆಗೆ ಕಾಣಿಸಿಕೊಳ್ಳದ ‘ಕ್ರೌರ್ಯ’ ವಾಗಿ ಪ್ರಕಟವಾಗುವ ಬಗೆಯನ್ನು ಅದ್ಭುತವಾಗಿ ಚಿತ್ರಿಸುತ್ತ ಸಾಗುತ್ತದೆ ಕಥಾನಕ.
‘ಇನ್ನೇನು ಎಲ್ಲಾ ಮುಗಿದೇಹೋಯಿತು’ ಎನ್ನುವಂತಿದ್ದ ಹಂತದಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು ನೀಡಿ ಕಥಾನಕದ ಹಾದಿಯನ್ನೆ ಬದಲಿಸಿಬಿಡುತ್ತದೆ. ಈ ತಂತ್ರಗಾರಿಕೆಯಲ್ಲಿ ಕಾದಂಬರಿಯಲ್ಲಿ ಚಡಪಡಿಸುತ್ತಿದ್ದ ಪ್ರತಿ ಪಾತ್ರವೂ – ನಳಿನಿಯಾಗಲಿ, ಸೋಮುವಾಗಲಿ, ಲಿಂಗನಾಗಲಿ, ವೆಂಕನಾಗಲಿ ಕಡೆಗೆ ಆ ಹಂದಿಯಾಗಲಿ – ಎಲ್ಲವೂ ತಮ್ಮದೇ ಆದ ರೀತಿಯ ಪರಿಹಾರದ ಮೋಕ್ಷವನ್ನು ಪಡೆದುಕೊಳ್ಳುವುದು ವಿಶಿಷ್ಠವಾಗಿ ಕಾಣುತ್ತದೆ.
‘ಕಾಡು ಮತ್ತು ಕ್ರೌರ್‍ಯ’ದ ಆ ಕಾಲದ ಹಲಬಗೆಯ ಬಿಕ್ಕಟ್ಟುಗಳು, ತೇಜಸ್ವಿಯವರ ಮೂಲ ಕಾಳಜಿಗಳು, ವ್ಯಗ್ರತೆ ಹಾಗೂ ಅವರ ಬರವಣಿಗೆಯ ಮುಂದಿನ ದಿಕ್ಕುಗಳನ್ನು ನಿಖರವಾಗಿ ಬಿಂಬಿಸುತ್ತದೆ. ಈ ಕಾದಂಬರಿಯಲ್ಲಿ ಪ್ರಕೃತಿಲೋಕದ ಅನಿರೀಕ್ಷಿತ ನಡೆಗಳು ತಂದೊಡ್ಡುವ ಕ್ರೌರ್‍ಯ ಒಂದೆಡೆ ಇದೆ; ಮತ್ತೊಂದೆಡೆ ಹಳ್ಳಿಗರನ್ನು ಸಾಂಪ್ರದಾಯಿಕ ನಂಬಿಕೆಗಳ ಭೀಕರ ಲೋಕದಲ್ಲಿರಿಸಿ, ಆ ಮೂಲಕ ಅವರ ಮೇಲೆ ಅಧಿಕಾರ ಚಲಾಯಿಸಿ ಅವರನ್ನು ನಾಶ ಮಾಡುವ ವಾಮಾಚಾರಿಗಳ ಕ್ರೌರ್‍ಯವಿದೆ. ವಾಮಾಚಾರಿಗಳನ್ನು ವಿರೋಧಿಸುವ ತರುಣ ಸೋಮು ಅದೇ ಆಗ ಹೊಸ ವಿದ್ಯಾಭ್ಯಾಸ ಪಡೆದು ಈ ಊರಿಗೆ ಬಂದು, ಜಾತಿ ಮೀರಿ ನಳಿನಿಯನ್ನು ಮದುವೆಯಾಗಬೇಕಾದ ಘಟ್ಟದಲ್ಲಿ ಪ್ರೇಮ, ಕಾಮ, ದೇಹ ಇತ್ಯಾದಿಗಳ ಬಗ್ಗೆ ಗೊಂದಲದಲ್ಲಿದ್ದಾನೆ. ಆದರೆ ನಳಿನಿ ಈ ಬಗ್ಗೆ ಸೋಮುವಿಗಿಂತ ಹೆಚ್ಚು ಸ್ಪಷ್ಟವಾಗಿದ್ದಾಳೆ. ಸೋಮು ಹಾಗೂ ನಳಿನಿ ಇಬ್ಬರಲ್ಲೂ ಆ ಕಾಲದ ನವ್ಯ ಕತೆ, ಕಾದಂಬರಿಗಳಲ್ಲಿ ಹೆಚ್ಚು ಕಾಣಬರುವ ಅಸ್ತಿತ್ವವಾದಿ ತಲ್ಲಣಗಳಿವೆ. ಇಲ್ಲಿ ಸಾವು, ಕಾಮ ಮುಂತಾದ ತೀವ್ರ ಅನುಭವಗಳಿಗೂ ಅಸ್ತಿತ್ವದ ಮೂಲ ಪ್ರಶ್ನೆಗಳಿಗೂ ಇರುವ ಸಂಬಂಧವನ್ನು ಗ್ರಹಿಸುವಲ್ಲಿ ಅಸ್ತಿತ್ವವಾದಿ ಚಿಂತನೆಯ ಪ್ರಭಾವವೂ ಇದೆ.



