ಪುಸ್ತಕ:- ಮಹಾಯುದ್ಧ-೨ (ಮಿಲನಿಯಮ್-೭)
ಲೇಖಕರು:- ಪೂರ್ಣಚಂದ್ರ ತೇಜಸ್ವಿ
ಪೂಚಂತೇ ಅವರ ಮಿಲನಿಯಮ್ ಸರಣಿಕೆಯಲ್ಲಿ ಏಳನೇ ಪುಸ್ತಕವೇ ಮಹಾಯುದ್ಧ-೨.. ತೇಜಸ್ವಿ ಅವರ ಪ್ರತಿ ಪುಸ್ತಕಗಳಲ್ಲಿ ಅದೆಂತಹ ಆಕರ್ಷಣೆ ಇದೆ ಎಂದರೆ ಒಂದೇ ಉಸಿರಿನಲ್ಲಿ ಓದಿ ಮುಗಿಸುವ ಹಾಗಿವೆ.. ಈ ಪುಸ್ತಕವೂ ಸಹ ಅಷ್ಟೇ ಅತ್ಯುತ್ತಮವಾಗಿದೆ..
ಪುಸ್ತಕದ ಹೆಸರೇ ಹೇಳುವಂತೆ ಇದು ಜಗತ್ತು ಕಂಡ ಭೀಕರ ಮಹಾಯುದ್ಧದ ಸಮಯದಲ್ಲಿನ ರೋಚಕ ಘಟನೆಗಳನ್ನು ಒಳಗೊಂಡಿದೆ..
ಕೇವಲ ಐದಾರು ಸ್ವಾರಸ್ಯಕರ ಘಟನೆ ವಿವರಿಸುವ ಈ ಪುಸ್ತಕ ನಿಮ್ಮ ಮನದಲ್ಲಿ ಯುದ್ಧದ ಭೀಕರತೆ, ಹಿಟ್ಲರನ ಮನಸ್ಥಿತಿ ಅಣುಬಾಂಬ್‌ನ ಸ್ವರೂಪ ಕಣ್ಣ ಮುಂದಿರಿಸುತ್ತದೆ..
ಪುಸ್ತಕದಲ್ಲಿರುವ ಜರ್ಮನ್ ಷಪರ್ಡ್ ಎಂಬ ಅಧ್ಯಾಯ ಮಹಾಯುದ್ಧದಲ್ಲಿ ತನ್ನ ಸಾಹಸ ಪರಾಕ್ರಮದಿಂದ ಮನೆ ಮಾತಾಗಿದ್ದ 'ಆಂಟಿಸ್' ಎಂಬ ನಾಯಿಯದ್ದು.. ಯುದ್ಧ ಭೂಮಿಯ ಹಾಳು ಮನೆಯೊಂದರಲ್ಲಿ ಫ್ರಾನ್ಸ್ ಸೈನಿಕನಿಗೆ ಸಿಕ್ಕ ಪುಟ್ಟ ನಾಯಿ ಮರಿ ಮುಂದೆ ಅವನ ಮತ್ತು ಅವನ ಸಂಗಡಿಗರ ಜೀವವನ್ನು ಉಳಿಸುವ ಘಟನೆ ಹಾಗೂ ತನ್ನ ಅಸಾಧಾರಣ ಶಕ್ತಿಯಿಂದ ಶತ್ರುಗಳ ಯುದ್ಧ ವಿಮಾನಗಳನ್ನು ರೇಡಾರ್ ಉಪಕರಣಗಳಿಗಿಂತ ಮುಂಚೆ ಗುರುತಿಸುತ್ತಿದ್ದ ಅದರ ಜಾಣ್ಮೆ ಹಾಗೂ ಕೊನೆಯ ಘಳಿಗೆಯವರೆಗೂ ತನ್ನ ಒಡೆಯನೊಂದಿಗೆ ಇದ್ದ ನಾಯಿಗೆ ನಮ್ಮ ' ಪರಮವೀರಚಕ್ರ ' ಪ್ರಶಸ್ತಿಗೆ ಸಮಾನವಾದ ಪ್ರಶಸ್ತಿ ನೀಡಿ ಗೌರವಿಸಲಾಯಿತು..
ಫ್ರಾನ್ಸಿನ ಸಾಹಸಿ ತರುಣರು ಜರ್ಮನಿಯ ಜನರಲ್‌ನ್ನು ಅಪಹರಿಸುವ ರೋಚಕ ಘಟನೆ ಹಾಗೂ ಜರ್ಮನ್ ಕೆಟ್ಟ ಅವ್ಯವಸ್ಥೆ ಬಿಂಬಿಸುವ ಹಿಟ್ಲರ್‌ನ ಕೌರ್ಯ ತೋರುವ ತಮ್ಮದೇ ಸೇನೆಯ ಜನರಲ್ ರೊಮೆಲ್‌ನ ರಹಸ್ಯವಾಗಿ ಕೊಲೆಗೈಯುವ ಘಟನೆ..
ಕ್ರೂರಿ ಹಿಟ್ಲರ್ ಸಾಯುವ ಆ ದಿನದಂದು ನೆಡೆದ ಪ್ರಮುಖ ವಿದ್ಯಮಾನಗಳಿರುವ ಹಿಟ್ಲರ್‌ನ ಕೊನೆಯ ದಿನಗಳು ಎಂಬ ಅಧ್ಯಾಯ.. ಹಾಗೂ ಎರಡನೇ ಮಹಾಯುದ್ಧದ ಮುಕ್ತಾಯಗೊಳಿಸಿದ ಭಯಾನಕ ಅಣುಬಾಂಬ್...!!!
ಅಮೇರಿಕಾ ಅಣುಬಾಂಬ್ ತಯಾರಿಸುವ ಪೂರ್ವ ಸಿದ್ಧತೆಗಳು ಹಾಗೂ ಅದನ್ನು ಪ್ರಯೋಗ ಮಾಡಲು ಆಯ್ಕೆ ಮಾಡಿದ ಸ್ಥಳ ಹಾಗೂ ಅಣುಬಾಂಬ್ ಹೊತ್ತೊಯ್ಯುವ ಪೈಲಟ್‌ನ ಮನಸ್ಥಿತಿ ಮತ್ತು ಅಣುಬಾಂಬಿನ ಅರಿವೇ ಇಲ್ಲದ ಜಪಾನಿನ ಮುಗ್ಧ ಜನ ಆಕಾಶದಿಂದ ಬೀಳುವ ಬಾಂಬನ್ನು ನೋಡುತ್ತಾ ಅದರ ಪ್ರಖರತೆ ಬಲಿಯಾಗುವ ಸನ್ನಿವೇಶ ಹೀಗೆ ಹಲವಾರು ರೋಚಕ ಮೈನವಿರೇಳಿಸುವ ಘಟನೆಗಳ ಈ ಪುಸ್ತಕದಲ್ಲಿವೆ..
ನಮಗೆ ಸುಲಭವಾಗಿ ಸಿಗುವ ವಸ್ತುವಿನ ಬೆಲೆ,ಮಹತ್ವ ನಮಗೆ ತಿಳಿಯುವುದಿಲ್ಲ ಸ್ವಾತಂತ್ರ್ಯ ಸಹ ಅಷ್ಟೇ; ಅದರ ಮಹತ್ವ ಅರಿಯಬೇಕೆಂದರೆ ಯುರೋಪಿನಲ್ಲಿ ಯುದ್ಧ ಖೈದಿಗಳನ್ನು, ಯಹೂದಿಗಳನ್ನು ಹಾಗೂ ಸ್ವತಂತ್ರ ಪ್ರಿಯಾರನ್ನು ಯಮಯಾತನೆ ನೀಡಲು ನಿರ್ಮಿಸಿದ ಶ್ರಮ ಶಿಬಿರಗಳ ಕತೆಗಳನ್ನು ಓದಬೇಕು.ಅಲ್ಲಿಂದ ತಪ್ಪಿಸಿಕೊಂಡು ಸ್ವತಂತ್ರರಾಗಲು ಬಯಸುವ ವ್ಯಕ್ತಿಗಳ ಕತೆ ಓದಬೇಕು, ಆಗ ನಾವು ಅನುಭವಿಸುತ್ತಿರುವ ಸ್ವಾತಂತ್ರ ಎಂತಹ ಮಹತ್ವದ್ದು ಎಂದು ತಿಳಿಯುತ್ತದೆ..



