ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Tuesday, February 9, 2021

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ

ಪುಸ್ತಕ:- ಪಶ್ಚಿಮ ಘಟ್ಟದ ತಪ್ಪಲಿನಲ್ಲಿ (ಭಾಗ-3)

ಲೇಖಕರು:- ಗಿರಿಮನೆ ಶ್ಯಾಮರಾವ್



ಗಿರಿಮನೆ ಶ್ಯಾಮರಾವ್ ಅವರ ' ಮಲೆನಾಡಿನ ರೋಚಕ ಕತೆಗಳು ' ಎಂಬ ಸೀರಿಯಲ್ ಕತೆಗಳ 3ನೇ ಭಾಗವೇ " ಪಶ್ಚಿಮ ಘಟ್ಟದ ತಪ್ಪಲಿನಲ್ಲಿ " ಪುಸ್ತಕ..

ಇದು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಆಣೆಕಟ್ಟು ಕಟ್ಟುವ ಕೆಲಸದಿಂದ ಅಲ್ಲಿನ ಪರಿಸರ ಮತ್ತು ಜನ ಜೀವನದ ಮೇಲೆ ಉಂಟಾಗುವ ಹಾನಿಯನ್ನು ವಿವರಿಸುವ ಕಾಲ್ಪನಿಕ ಕಥೆ‌.. ಓದುತ್ತಾ ಹೋದಂತೆ ಇದು ಕಾಲ್ಪನಿಕವಲ್ಲ ವಾಸ್ತವವಾಗಿ ನೆಡೆದ ಘಟನೆಗಳು ಎನ್ನುವಷ್ಟು ಸುಂದರವಾಗಿ ಕತೆಯನ್ನು ಹೆಣೆಯಲಾಗಿದೆ.. ಅಣೆಕಟ್ಟುನಿಂದ ಮಲೆನಾಡ ಪರಿಸರ ಹಾನಿ ಮತ್ತು ಇಲ್ಲಿನ ಜನ ಜೀವನದಲ್ಲಿ ಉಂಟಾಗುವ ಅಸಮತೋಲನದ ತಿಳಿಯಬಹುದು..

ಮರಿಯಪ್ಪ ಕಾಡಳ್ಳಿ ಗ್ರಾಮದ ಒಬ್ಬ ಸಾಮಾನ್ಯ ರೈತ. ಊರಿನ ಪಕ್ಕದಲ್ಲಿಯೇ  ಹರಿಯುತ್ತಿದ್ದ ಹೊಳೆಯ ನೀರು ಕಪ್ಪು ಮಣ್ಣಿನಿಂದ ಕಪ್ಪಾಗಿರಲು ಅದಕ್ಕೆ ಕಪ್ಪೊಳೆ ಎಂದೇ ಹೆಸರು.. ಹೊಳೆಯ ಸಮೀಪದಲ್ಲಿದ್ದ ತನ್ನ 3 ಎಕರೆ ಜಮೀನಿನಲ್ಲಿ ಭತ್ತ, ತರಕಾರಿ ಬೆಳೆಯುತ್ತಾ ನೆಮ್ಮದಿ ಜೀವನ ನೆಡೆಸುತ್ತಿದ್ದ.. 

ಕಾಡಳ್ಳಿ ಟಾರು ರಸ್ತೆ ,ಕರೆಂಟು,ಸ್ಕೂಲು ಹೀಗೆ ಅನೇಕ ಸೌಕರ್ಯಗಳಿಲ್ಲದ ಊರು. ಇಲ್ಲಿ ಮರಿಯಪ್ಪ ತನ್ನ ಮೂವರು ಮಕ್ಕಳು ಹೆಂಡತಿಯೊಂದಿಗೆ ಜೀವನ ಸಾಗಿಸುತ್ತಿದ್ದನು.. ಪಶ್ಚಿಮ ಘಟ್ಟದ ಹಳ್ಳಿಯಲ್ಲಿ ಇರುವ ಜನರಿಗೆ ವ್ಯವಸಾಯವೇ ಒಂದು ಮುಖ್ಯ ಆದಾಯ. 



ಸರ್ಕಾರದವರು ಕರೆಂಟ್ ಕೊಡುತ್ತೇವೆ ಇಲ್ಲಿನ ಊರನ್ನು ಜನರನ್ನು ಉದ್ದಾರ ಮಾಡುತ್ತೇವೆ ಎಂದು ಇಲ್ಲಿನ ಕಪ್ಪೊಳೆಗೆ ಡ್ಯಾಮ್ ಕಟ್ಟುವ ನೆಪದಲ್ಲಿ ಕಾಡಿನ ಬುಡಕ್ಕೆ ಕೈ ಹಾಕುತ್ತಾರೆ. ಡ್ಯಾಮ್ ಕಟ್ಟುವ ನೆಪದಲ್ಲಿ ಅಲ್ಲಿ ನಡೆದದ್ದು ಕಾಡಿನ ಮಾರಣ ಹೋಮ..ಕಾಡನ್ನು ಕಡಿದ ಪರಿಣಾಮ ಅಲ್ಲಿನ ಪ್ರಾಣಿಗಳು ಊರಿಗೆ ಬರಲು ಶುರುಮಾಡಿದವು. ಇದೆಲ್ಲದರ ಪರಿಣಾಮ ಬೀರಿದ್ದು , ಅಲ್ಲಿನ ರೈತ ಮರಿಯಪ್ಪನ ಕುಟುಂಬದ ಮೇಲೆ.. ಇದ್ದ ಅಲ್ಪ ಸ್ವಲ್ಪ ಜಮೀನು ಮುಳುಗಡೆಯಾಗಿ ಸರ್ಕಾರದ ಪಾಲಾಗಿತ್ತು. ಅದಕ್ಕೆ ಪರಿಹಾರವಾಗಿ ಬಂದ ಹಣ ನೀರಿನಂತೆ ಖರ್ಚಾಗಿ ಹೋಗಿತ್ತು. ತನ್ನ ಜಮೀನಿನ ಬದಲು ಸರ್ಕಾರ ನೀಡಿದ ಕಲ್ಲು ಭೂಮಿ ನೋಡಿ ಅಲ್ಲಿನ ಜನ ಆಗಲೇ ವ್ಯವಸಾಯದ ಆಸೆ ಬಿಟ್ಟು ಕೈಚೆಲ್ಲಿ ಕುಳಿತಿದ್ದರು.ಅದರಲ್ಲಿ ಬೆಳೆ ಬೆಳೆಯಲು ಹೋಗಿ ಸಾಲ ಮಾಡಿಕೊಂಡು ಕೊರಗುವ ಮುಗ್ದ ರೈತರು..

ಇದರ ನಡುವೆ ಡ್ಯಾಮ್ ಕಟ್ಟುಲು ಬಂದ ಜನರಿಂದ ಮರಿಯಪ್ಪ ತನ್ನ ಎರಡನೇ ಮಗಳನ್ನು ಕಳೆದುಕೊಂಡು ಅನುಭವಿಸಿದ ಯಾತನೆ ನಿಜಕ್ಕೂ ಕಣ್ಣೀರು ತರಿಸಿತು. ದುಡ್ಡಿನ ಆಸೆಗೆ ಮೀಸೆ ಚಿಗುರದ ಮಗ ಭೀಮರಾಜು ಕಳ್ಳ ಸಾಗಾಣಿಕೆ , ಅಲ್ಲಿನ ಪ್ರಾಣಿಗಳನ್ನು ಕೊಂದು ಮಾಂಸ ಸಾಗಾಣಿಕೆ ಮಾಡಿ ಸಿಕ್ಕಿ ಬಿದ್ದು ಜೈಲು ವಾಸವಾದ ಬಳಿಕ ಬುದ್ದಿ ಕಲಿತು ಅದರಿಂದ ಹೊರ ಬಂದರೂ ಸಹ ಒಮ್ಮೆ ಮಾಡಿದ ತಪ್ಪಿನ ಪರಿಣಾಮ ಅನುಭವಿಸಿದ ಶಿಕ್ಷೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ.. ತನ್ನೆರಡು ಮಕ್ಕಳ್ಳನ್ನು ಕಳೆದುಕೊಂಡು ಇತ್ತ ದುಡಿಯಲು ಗದ್ದೆಯಿಲ್ಲದೆ, ದುಡಿಯುವ ಮಗನಿಲ್ಲದೆ ಎಲ್ಲ ಕಳೆದುಕೊಂಡ ಮರಿಯಪ್ಪ ಭ್ರಮನಿರಸಗೊಂಡು ಆತ್ಮಹತ್ಯೆಯ ಮಾಡಿಕೊಳ್ಳಲು ನಿರ್ಧಾರಿಸುತ್ತಾನೆ..

ಇಷ್ಟೆಲ್ಲಾ ಸಂಕಷ್ಟ ತಂದೊಡ್ಡಿದ ಅಣೆಕಟ್ಟಿನ ಕಾರ್ಯದಿಂದ ಕಾಡಳ್ಳಿಗೆ ಕರೆಂಟು, ರಸ್ತೆ ಯಾವುದು ಆಗಲೇ ಇಲ್ಲ. ಉತ್ಪಾದಿಸಿದ ಕರೆಂಟ್ ಬೇರೆಡೆ ಖಾಸಗಿ ವಲಯದಲ್ಲಿ ಮಾರುವ ಸರ್ಕಾರ..ಇದರಿಂದ ಲಾಭ ಯಾರಿಗಾದರೂ ನಷ್ಟ ಅನುಭವಿಸಿದ್ದು ಮಾತ್ರ ಅಲ್ಲಿನ ಮುಗ್ದ ರೈತರು. ಒಂದು ಇಡೀ ಕುಟುಂಬದ ನಾಶ. ಓದುತ್ತಾ ಬೇಜಾರ್ ಆಗಿದ್ದಂತೂ ಸುಳ್ಳಲ್ಲ. 

ಒಂದು ಸುಂದರ ಕಾಡಿನ ಹಿಂದೆ ಏಷ್ಟೆಲ್ಲಾ ಖುಷಿ ಇದೆಯೋ ಮನುಷ್ಯನ ಒಂದು ತಪ್ಪಿನ ನಿರ್ಧಾರದಿಂದ ಅಷ್ಟೇ ಪರಿಣಾಮಕಾರಿಯಾದ ನಷ್ಟವಿದೆ ಎನ್ನುವುದಕ್ಕೆ ಈ ಕಥೆ ಸಾಕ್ಷಿ.



ಅಣೆಕಟ್ಟಿನಿಂದ ಎಲ್ಲವನ್ನೂ ಕಳೆದುಕೊಂಡ ಕಾಡಳ್ಳಿ ಜನತೆಗೆ ಕೊನೆಗೆ ಉಳಿದಿದ್ದು ಗಾಢ ಅಂಧಕಾರ ಮಾತ್ರ..

1 comment:

shobha said...
This comment has been removed by the author.