ಹೌದು ಮತ್ತೊಮ್ಮೆ ಆ ಹುಡುಗಿಯ ಬಗ್ಗೆಯ ಬರೆಯುವ ಮನಸ್ಸಾಗಿದೆ. ಇವಳೂ ಅವಳೆ, ಅದೇ ಕಾಲೇಜಿನ ಅಪ್ಸರೆ.. ಜಡಿಮಳೆ.. ಕರಿಸೀರೆ.. ಲೈಬ್ರೆರಿ.. ನೆನಪಾಯಿತೇ..
ಕಾಲೇಜಿನಲ್ಲಿ ನಮ್ಮದೊಂದು ಗ್ಯಾಂಗ್. ಗ್ಯಾಂಗ್ ಅಂದರೆ ಸಾಮಾನ್ಯದಲ್ಲ; ಗುಂಪಿನಲ್ಲಿದ್ದದ್ದು ಐವರು.. ಇಡೀ ಕಾಲೇಜಿನಲ್ಲಿ ಪೋಲಿ,ಟಪೋರಿಗಳು ಎಂದು ಹೆಸರು ಪಡೆದವರು. ಪ್ರತಿದಿನ ಕಾಲೇಜಿಗೆ ಲೇಟು;ಏಕೆ ತಡವೆಂದು ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಲೆಕ್ಚರ್‌ಗೇ ಮಾತಿನ ತಿರುಗೇಟು ಕೊಡುವವರು.. ಕಾಲೇಜಿನಲ್ಲಿ ನಮ್ ಗ್ಯಾಂಗ್‌ನ ಹಾವಳಿ ಎಷ್ಟಿತ್ತೆಂದರೆ ಕಾಲೇಜಿನ ಘನತೆ ಗೌರವಕ್ಕೆ ದಕ್ಕೆ ತರುತ್ತಿರುವ ಕಾರಣದಿಂದ ಇವರನ್ನು ಕಾಲೇಜಿನಿಂದ ಹೊರದೂಡುವ ಬಗ್ಗೆ ನೋಟಿಸ್ ಬೋರ್ಡ್‌ನಲ್ಲಿ ನಮ್ಮ ಹೆಸರುಗಳು.. ಆ ವರ್ಷದ ಬ್ಯಾಚ್‌ನಲ್ಲಿನ ವಿದ್ಯಾರ್ಥಿಗಳಲ್ಲಿಯೇ ಮೊದಲು ನೌಕರಿ ಗಿಟ್ಟಿಸಿಕೊಂಡು ಕಾಲೇಜಿನ ಘನತೆ ಉಳಿಸಿದವರೂ ಸಹ ನಾವೇ… ನಮ್ಮ ಗ್ಯಾಂಗ್‌ನಲ್ಲಿರುವರೆಲ್ಲಾ ಯುವರಾಜರು, ಕಿಲಾಡಿಗಳು,ಪ್ರವೀಣರೂ,ಪ್ರಶಾಂತ ಸ್ವಭಾವದವರು ಜೊತೆಗೆ ನನ್ನಂತ ಸುನಾಮಿ… ಇದೇನು ಅವಳ ಬಗ್ಗೆ ಹೇಳ್ತೀನಿ ಅಂತ ಹೇಳಿ ಯಾವುದೋ ಗ್ಯಾಂಗ್ ಬಗ್ಗೆ ಹೇಳುತ್ತಿದ್ದಾನೆ ಎನ್ನುತ್ತಿದ್ದಿರಾ.. ನಾನು ಕಾಲೇಜಿನಲ್ಲಿ ಹೇಗಿದೆ ಎನ್ನಲು ಇದೊಂದು ಪೀಠಿಕೆ ಅಷ್ಟೇ. ನಮ್ ಜೊತೆ ಹುಡಗರೇ ಮಾತಾಡಲೂ ಭಯಪಡುವಾಗ ಪಾಪ ಅವಳಿಗೆ ಹೇಗೆ ಧೈರ್ಯ ಬಂದೀತು.. ನಮ್ಹುಡಗರ ಬಗ್ಗೆ ಮತ್ತೊಮ್ಮೆ ಬರೆಯುವೆ..
ಕಾಲೇಜಿನಲ್ಲಿ ದಿನಗಳು ಉರುಳಿ ಕೊನೆಗೆ ಪ್ರಿಪರೇಟರಿ ಪರೀಕ್ಷೆ ಬಂದಂತ ಸಮಯ.. ನನಗೆ ಪ್ರತಿದಿನ ಅವಳನ್ನು ನೋಡುವುದೇ ಒಂದು ಕಾಯಕವಾಗಿತ್ತು ಒಮ್ಮೆಯೂ ಮಾತಾಡಿರಲ್ಲಿಲ್ಲ, ನಿಜ ಒಪ್ಪಿಕೊಳ್ಳುವೆ ನನ್ನಲ್ಲೂ ಭಯವಿತ್ತು.. ನಾ ಅವಳಿಗಾಗಿ ನೋಡುವುದು ಅವಳಿಗೆ ಗೊತ್ತಿದೆಯೋ ಇಲ್ಲಯೋ ಅದೂ ಕನ್ಫರ್ಮ್ ಇರಲ್ಲಿಲ್ಲ.. ಪರೀಕ್ಷೆಯ ದಿನ ಅವಳು ಓದುತ್ತಾ ಕುಳಿತುಕೊಂಡಿದ್ದಳು. ನಾನು ಅವಳನೇ ನೋಡುತ್ತಾ ಕುಳಿತ್ತಿದ್ದೆ.. ಆಹಾ ಎಂತಹ ಚೆಲುವೆ ಅವಳು, ನನಗಿಂತ ತುಸು ಎತ್ತರವೇ ಎನ್ನುವಂತೆ ತೆಳು ಮೈಯ ಸುಂದರಿ ಅವಳು.. ಆ ಹಾಳು ನೀಲಿ ಸಮವಸ್ತ್ರದಲ್ಲಿಯೂ ಇವಳು ದೇವಲೋಕದ ಅಪ್ಸರೆ ಅಂತೆ ಕಾಣುತ್ತಿದ್ದಳು. ಸದಾ ನನ್ನನ್ನೇ ಹುಡುಕುವಂತಿತ್ತು ಅವಳ ಕಣ್ನೋಟ. ಬಟ್ಟಲುಗಣ್ಣಿನ ಚೆಲುವೆಯ ದೊಡ್ಡದಾದ ಹಾರ್ಟ್ ಶೇಪಿನ ಕಿವಿಯೋಲೆಗಳು ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದವು. ನಾನು ಅವಳನ್ನೇ ನೋಡುತ್ತಾ ಅವಳ ಮುಗ್ಧ ಮುಖದಲ್ಲಿ ಮುಳುಗಿದ್ದೆ.. ಅವಳು ನಾ ನೋಡುವ ಅರಿವಿಲ್ಲದೆ ಓದುತ್ತಿದ್ದಳು. ಅದೇ ಸಮಯಕ್ಕೆ ನಮ್ಮ ಗ್ಯಾಂಗ್‌ನವರು 'ಬೇಗಾ ಬಾರೋ' ಎಂದು ನನ್ನ ಹೆಸರಿನಿಂದ ಕೂಗಿದರು. ಹೆಸರು ಕೇಳಿ ಅವಳು ನನ್ನನ್ನು ಹುಡುಕುವಂತೆ ಅತ್ತಿತ್ತ ನೋಡುತ್ತಿದ್ದಳು. "ಏನ್ರೋ ನಿಮ್ ಗೋಳು ನೆಮ್ಮದಿಯಾಗಿ ನನ್ ಹುಡ್ಗಿಗೆ ನೋಡಲೂ ಸಹ ನೀವು ಬಿಡುವುದಿಲ್ಲ" ಎಂದ್ಹೇಳುತ್ತಾ ಕೂಗಿದೆ.. ನನ್ನ ಧ್ವನಿ ಕೇಳಿದ ತಕ್ಷಣ ನನ್ನೆಡೆಗೆ ನೋಡಿದಳು.. ಆ ಕ್ಷಣದ ಅವಳ ಮುಖ ಭಾವನೆ ಈಗಲೂ ನನಗೆ ಚೆನ್ನಾಗಿ ನೆನಪಿದೆ.. ಇವನು "ನನ್ ಹುಡ್ಗಿ" ಎಂದಿದ್ದು ನನಗೆಯೇ! ಎಂದು ಆಶ್ಚರ್ಯ,ಭಯದಿಂದ ನೋಡುತ್ತಿದ್ದಳು ಅವಳು..
ಜೊತೆಯಲ್ಲಿ ಖುಷಿಯೂ ಇತ್ತೆನೋ….??!!!

No comments:
Post a Comment