ಪುಸ್ತಕ:- ಮಹಾಬ್ರಾಹ್ಮಣ
ಲೇಖಕರು:- ದೇವುಡು
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೇವುಡು ಎಂದೇ ವಿಖ್ಯಾತರಾದ ದೇವುಡು ನರಸಿಂಹಶಾಸ್ತ್ರಿಗಳು ಬಹುಮುಖ ಪ್ರತಿಭೆ. ಭಾರತದ ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಏಕೀಕರಣ, ರಂಗಭೂಮಿ, ಸಾಹಿತ್ಯ ಹೀಗೆ ಹಲವು ಕ್ಷೇತ್ರದಲ್ಲಿ ದುಡಿದ ವ್ಯಕ್ತಿ.. ಇವರ ಅರವತ್ತಕ್ಕೂ ಹೆಚ್ಚಿನ ಕೃತಿಗಳಲ್ಲಿ ಮೂರು ಕೃತಿಗಳು ಕನ್ನಡ ಕಾದಂಬರಿ ವಿಭಾಗದಲ್ಲಿ ಹೊಸ ಅದ್ಯಯನವನ್ನೇ ಸೃಷ್ಟಿಸಿದವು. ಅವುಗಳೆಂದರೆ ಮಹಾಬ್ರಾಹ್ಮಣ,ಮಹಾಕ್ಷತ್ರೀಯ,ಮಹಾದರ್ಶನ.. ಈ ಮೂರು ಕೃತಿಗಳು ವೇದಗಳ ಕತೆ, ಪೌರಾಣಿಕ ಕಥಾವಸ್ತುವನ್ನು ಹೊಂದಿವೆ..
ಇವುಗಳಲ್ಲಿ ನಾನು ಓದಿದ ಪುಸ್ತಕ “ಮಹಾಬ್ರಾಹ್ಮಣ”.
ಪುಸ್ತಕದ ಬಗ್ಗೆ ಹೇಳುವ ಮುನ್ನ ನಾನು ಜಾತಿ,ಧರ್ಮ ಇವುಗಳನ್ನು ಧಿಕ್ಕಾರಿಸುವವನು, ಮನುಷ್ಯನ ಜಾತಿ ಹುಟ್ಟಿನಿಂದಲ್ಲ, ಅವನ ಕರ್ಮಗಳಿಂದ ಎಂಬ ಮನಸ್ಥಿತಿಯವನು.. ಮೊದಲಿಂದನು ಪುಸ್ತಕ,ಕತೆ,ಕಾದಂಬರಿ ಓದುವ ತಿಳಿಯುವ ಹುಚ್ಚು. ಅದರೆ ಇತ್ತಿಚೆಗೆ ಕಳೆದೆರಡು ವರುಷದಿಂದ ಪುಸ್ತಕಗಳಿಂದ ದೂರವಿದ್ದೆ. ಮತ್ತೆ ಮರಳಿ ಓದುವ ಬಯಕೆಯದಾಗ ಸಿಕ್ಕ ಪುಸ್ತಕವೇ ಮಹಾಬ್ರಾಹ್ಮಣ.
ಪುಸ್ತಕ ಖರೀದಿಸಲು ಹೆಸರೇ ಸ್ಪೂರ್ತಿ, ಪುಸ್ತಕದ ಕಥಾವಸ್ತು ಯಾವುದೂ ಅರಿಯದೇ ಖರೀದಿಸಿ ಹಾಗೇ ವರ್ಷದವರೆಗೆ ಕಪಾಟಿನಲ್ಲಿ ಬಿದ್ದಿತ್ತು. ಮೊನ್ನೆ ಪುಸ್ತಕ ತೆರೆದು ಓದಲು ಪ್ರಾರಂಭಿಸಿದೆ, ಮುಗಿಸುವವರೆಗೂ ನಾನು ಕೃತಯುಗದಲ್ಲಿ ಜೀವಿಸುವವನಾಗಿದ್ದೆ. ಅಷ್ಟು ಸಾರಾಗವಾಗಿ ರೋಚಕವಾಗಿ ಪುಸ್ತಕ ಓದಿಸಿಕೊಂಡು ಹೋಗುತ್ತದೆ..
ಮಹಾಬ್ರಾಹ್ಮಣ ಕೃತಿಯು ವಿಶ್ವಾಮಿತ್ರನ ಜೀವನ ಕುರಿತು ಹೇಳುವ ಕೃತಿ. ಕ್ಷತ್ರೀಯನಾಗಿ ಹುಟ್ಟಿದ ವಿಶ್ವಾಮಿತ್ರ ಮುಂದೆ ಹೇಗೆ ಬ್ರಾಹ್ಮಣನಾಗುವನು, ಮಹಾಬ್ರಾಹ್ಮಣನಾಗುವನು, ಸಪ್ತರ್ಷಿಗಳಲ್ಲೊಬ್ಬನಾಗುವನು, ದೇವತೆಗಳಿಂದ ಬ್ರಹ್ಮರ್ಷಿ ಎನ್ನಿಸಿಕೊಂಡವ ಹಾಗೂ ಲೋಕೋದ್ಧಾರಕ್ಕಾಗಿ ಗಾಯತ್ರಿ ಮಂತ್ರ ಸೃಷ್ಟಿಕರ್ತನಾದ ಎಂಬ ರೋಚಕ ಕಥಾ ಹಂದರವಿದೆ.
ನನಗೆ ವಿಶ್ವಾಮಿತ್ರ ಎಂದರೆ ಮಹಾ ಕೋಪಿಷ್ಠ, ಇಂದ್ರನನ್ನೇ ವಿರೋಧಿಸಿದವ, ಸತ್ಯ ಹರಿಶ್ಚಂದ್ರನನ್ನು ಪರೀಕ್ಷೆಗೆ ಒಳಪಡಿಸಿದವ,ಮೇನಕೆಯಿಂದ ತಪಸ್ಸು ಭಂಗ ಮಾಡಿಕೊಂಡವ ಎಂಬ ಕೆಲ ವಿಚಾರಗಳು ತಿಳಿದಿದ್ದವು ಅದೂ ಸಿನಿಮಾ ನೋಡಿ.. ಆದರೆ ಈ ಪುಸ್ತಕ ಓದಿದ ಬಳಿಕ ವಿಶ್ವಾಮಿತ್ರನ ಮೇಲೆ ಭಕ್ತಿಪೂರ್ವಕ ಗೌರವ ಭಾವ ಮೂಡುತ್ತದೆ, ಸಾಧಿಸುವ ಛಲವಿದ್ದರೆ ವಿಶ್ವಾಮಿತ್ರನಂತಿರಬೇಕು ಅನ್ನಿಸುತ್ತದೆ..
ವಿಶ್ವಾಮಿತ್ರನ ಮೂಲ ಹೆಸರು ಕೌಶಿಕ ಮಹಾರಾಜ. ಇವನು ಕ್ಷತ್ರೀಯನಾಗಿದ್ದ, ಒಮ್ಮೆ ವಸಿಷ್ಠನ ಆಶ್ರಮದ ಹೋಮಧೇನು(ಹಸು- ನಂದಿನಿ) ಕಂಡು ಅದನ್ನು ಪಡೆಯಲು ವಸಿಷ್ಠನ ಆಶ್ರಯದ ಮೇಲೆ ದಾಳಿ ಮಾಡಿ ಸೋತು ಹೋಗುವನು. ವಸಿಷ್ಠನನ್ನು ಸೋಲಿಸಲು ಅಸ್ತ್ರಗಳನ್ನು ಸಂಪಾದಿಸಲು ಹಿಮಾಲಯಕ್ಕೆ ಹೋಗಿ ತಪಸ್ಸನ್ನು ಆಚಾರಿಸಿ ರುದ್ರನನ್ನು,ಅಸ್ತ್ರಗಳನ್ನೂ ಸಂಪಾದಿಸಿಕೊಂಡು ಬಂದು ಮತ್ತೇ ವಸಿಷ್ಠನ ಆಶ್ರಮದ ಮೇಲೆ ದಾಳಿ ಮಾಡಿದನು. ಆಗಲೂ ಸಹ ಸೋತು ಹೋದನು. ನಂತರ ವಸಿಷ್ಠನನ್ನೂ ಮೀರಿಸುವ ತಪಸ್ವಿಯಾಗಲು ಯೋಚಿಸಿ ತಪಸ್ಸನ್ನು ಕೈಗೊಂಡನು. ತಪಸ್ಸಿನ ಪ್ರಭಾವದಿಂದ ವಸಿಷ್ಠರ ಮೇಲಿದ್ದ ದ್ವೇಷ ಕರಗಿ ಹೋಗುತ್ತದೆ.. ಆಗ ಕ್ಷತ್ರೀಯ ಧರ್ಮ ತೊರೆದು ತಾನು ಬ್ರಾಹ್ಮಣನಾಗಲು ತನ್ನನ್ನು ತಾನು ಕೌಶಿಕನ ಬದಲಾಗಿ ವಿಶ್ವಾಮಿತ್ರ ಎಂಬ ಹೆಸರಿನಿಟ್ಟುಕೊಂಡು ನರ್ಮದಾ ತೀರದಲ್ಲಿ ಆಶ್ರಮ ಕಟ್ಟಿಕೊಂಡು ವಾಸಿಸುತ್ತಾನೆ. ತ್ರಿಶಂಕು ಮಹಾರಾಜನನ್ನು ಸದೇಹ ಸಹಿತ ಸ್ವರ್ಗಕ್ಕೆ ಕಳುಹಿಸುವ ಯಾಗ ಯಜ್ಞ ಮಾಡುತ್ತಾನೆ. ಈ ಯಜ್ಞದ ಸಂದರ್ಭದಲ್ಲಿ ವಸಿಷ್ಠ 100 ಮಕ್ಕಳ ಸಾವಿಗೆ ವಿಶ್ವಾಮಿತ್ರನೇ ಕಾರಣನಾಗುತ್ತಾನೆ. ವಸಿಷ್ಠನಿಗೆ ಬಂದ ಪುತ್ರಶೋಕವನ್ನು ತಾನು ಅನುಭವಿಸುದಾಗಿ ಇಂದ್ರನಿಗೆ ಮಾತುಕೊಟ್ಟನು.. ವಸಿಷ್ಠರು ಈಗಾಗಲೇ ಅರ್ಧ ದುಃಖ ಅನುಭವಿಸಿದ್ದು ಉಳಿದರ್ಧ ಅನುಭವಿಸುವುದಾಗಿ ವಿಶ್ವಾಮಿತ್ರ ಒಪ್ಪಿಕೊಳ್ಳುತ್ತಾನೆ.. ಉಳಿದರ್ಧ ಶೋಕವೆಂದರೆ 50 ಮಕ್ಕಳ ಸಾವಿನ ಶೋಕ.. ವಿಶ್ವಾಮಿತ್ರ ತನ್ನ 50 ಮಕ್ಕಳನ್ನು ಆಹುತಿ ನೀಡಿ ಆ ದುಃಖವನ್ನು ಅನುಭವಿಸಬೇಕಾಗುತ್ತದೆ..
ಮುಂದುವರಿದು ವಿಶ್ವಾಮಿತ್ರನ ಆಶ್ರಮಕ್ಕೆ ಮೇನಕೆಯ ಆಗಮನ, ಅವಳು ವಿಶ್ವಾಮಿತ್ರನ ಧರ್ಮಿಣಿಯಾಗಿ ಸಂಸಾರ ನೆಡೆಸುತ್ತಾಳೆ. ಇವರಿಗೆ ಒಂದು ಹೆಣ್ಣು ಮಗು ಜನಿಸಿತ್ತದೆ.. ಮಗುವಾದ ಬಳಿಕ ಮೇನಕೆ ಸ್ವರ್ಗಕ್ಕೆ ಮರುಳುತ್ತಾಳೆ.. ವಿಶ್ವಾಮಿತ್ರ ಆ ಹೆಣ್ಣು ಮಗುವನ್ನು ಕಣ್ವರ ಆಶ್ರಮದಲ್ಲಿ ಬಿಟ್ಟು ತಪಸ್ಸಿಗೆ ತೆರಳುತ್ತಾರೆ. ಮುಂದೆ ಇದೇ ಹೆಣ್ಣು ದುಶ್ಯಾಂತ ಮಹಾರಾಜನಿಗೆ ಮದುವೆಯಾಗುವ ಶಾಕುಂತಲೆ…
ವಿಶ್ವಾಮಿತ್ರನ ತಪಸ್ಸಿನ ಫಲವಾಗಿ ಅವನು ಬ್ರಹ್ಮರ್ಷಿಯಾಗಿ, ಬ್ರಾಹ್ಮಣನಾಗುತ್ತಾನೆ.. ಬ್ರಾಹ್ಮಣತ್ವ ಪಡೆಯುವುದು ಎಷ್ಟೊಂದು ಕಷ್ಟದ ಕಾರ್ಯ, ಇದನ್ನು ಮಾನವರು ಸುಲಭವಾಗಿ ಪಡೆಯುವಂತಹ ಆಚರಣೆ, ಮಂತ್ರವನ್ನು ಕಂಡು ಹಿಡಿಯುವ ಸಂಕಲ್ಪ ಮಾಡುತ್ತಾನೆ.. ಹಾಗೂ ಇಂದ್ರನಿಗೆ ಕೊಟ್ಟ ಮಾತಿನ ಪ್ರಕಾರ 50 ಮಕ್ಕಳ ಬಲಿಕೊಡುವ ಮಹತ್ತರ ಕಾರ್ಯ ವಿಶ್ವಾಮಿತ್ರನ ಮುಂದಿರುತ್ತದೆ.. ಮತ್ತೊಮ್ಮೆ ಸ್ವರ್ಗದಿಂದ ಬಂದ ಘೃತಾಚಿ ಎಂಬ ಅಪ್ಸರೆಯಿಂದ 100 ಮಕ್ಕಳನ್ನು ವಿಶ್ವಾಮಿತ್ರ ಪಡೆಯುತ್ತಾನೆ. ಈ ಮಕ್ಕಳಲ್ಲಿ ಮೊದಲ 50 ಮಕ್ಕಳನ್ನು ಆಹುತಿ ನೀಡುವುದಾಗಿ ಹಾಗೂ ಅಂತಹ ಸಂದರ್ಭ ಯಾವಾಗ ಬಂದಿತೋ ಎಂದು ಕಾದಿರುವಾಗ ಒಮ್ಮೆ ಸತ್ಯಹರಿಶ್ಚಂದ್ರ ವಿಶ್ವಾಮಿತ್ರರ ಆಶ್ರಮಕ್ಕೆ ಬಂದು ತನಗೆ ಬಂದಿರು ಸಮಸ್ಯೆಗೆ ಯಜ್ಞ ಮಾಡಿ ಪರಿಹಾರ ನೀಡಬೇಕೆಂದು ವಿನಂತಿಸಿಕೊಳ್ಳುತ್ತಾನೆ.. ವಸಿಷ್ಠ, ವಿಶ್ವಾಮಿತ್ರ, ವಾಮದೇವ ಮುಂತಾದ ಬ್ರಹ್ಮರ್ಷಿಗಳೇ ಸೇರಿ ಯಜ್ಞ ಕಾರ್ಯ ನೆರವೇರಿಸಿದರು. ಇಲ್ಲಿ ಯಜ್ಞದ ಸಂದರ್ಭದಲ್ಲಿ ನೆಡೆದ ಒಂದು ಘಟನೆಯಿಂದ ವಿಶ್ವಾಮಿತ್ರನ ಮೊದಲು 50 ಮಕ್ಕಳಲ್ಲಿ ಮತ್ಸರ ಭಾವನೆ ಮೂಡಿರುತ್ತದೆ.. ಕೊನೆಗೆ ಆ ಮಕ್ಕಳು ಮಿಂಚಿನ ಹೊಡೆತಕ್ಕೆ ಬಲಿಯಾಗುತ್ತಾರೆ.. ಸತ್ಯಹರಿಶ್ಚಂದ್ರನು ಶಾಪ ಮುಕ್ತನಾಗುತ್ತಾನೆ.. ಮುಂದುವರೆದು ವಿಶ್ವಾಮಿತ್ರರು ಅಗಸ್ತ್ಯರು ಮಾರ್ಗದರ್ಶನದಿಂದ ಗಾಯತ್ರಿ ಮಂತ್ರದ ಸೃಷ್ಟಿಕರ್ತನಾಗುತ್ತಾನೆ.. ಈ ಮಂತ್ರ ಪಠಣೆಯಿಂದ ಅನ್ಯವರ್ಗದವರೂ ಸಹ ಸುಲಭವಾಗಿ ಬ್ರಾಹ್ಮಣನಾಗಹುದು ಎಂದು ಲೋಕಕ್ಕೆ ಸಾರುತ್ತಾನೆ..
ಹೀಗೆ ಮಹಾಬ್ರಾಹ್ಮಣ ಕೃತಿಯು ವಿಶ್ವಾಮಿತ್ರನ ಜೀವನದ ಪ್ರಮುಖಾಂಶಗಳನ್ನು ತಿಳಿಸುತ್ತದೆ.. ಗುರು ಶಿಷ್ಯರ ಬಾಂದವ್ಯ, ಸಾಧನೆಗೆ ಸಾವಿರ ಅಡ್ಡಿಗಳಿಂದರೂ ಸಾಧಿಸುವ ಮನಸ್ಸಿದ್ದರೇ ಅಸಾಧ್ಯವೆಂಬುದು ಇಲ್ಲ ಎಂಬ ಪ್ರೇರಣೆಯನ್ನು ನೀಡುತ್ತದೆ. ನಿಮಗೆ ಪೌರಾಣಿಕ ಕತೆಗಳು ಇಷ್ಟವಾದರೆ ಈ ಪುಸ್ತಕವನ್ನು ಒಮ್ಮೆ ಓದಲೇ ಬೇಕು..



No comments:
Post a Comment