ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Saturday, February 26, 2022

ಮುಂಗಾರಿನ ಕರೆ

 ಪುಸ್ತಕ:- ಮುಂಗಾರಿನ ಕರೆ

ಲೇಖಕರು:- ಗಿರಿಮನೆ ಶ್ಯಾಮರಾವ್


ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕತೆಗಳು ಸರಣಿಯ ಭಾಗ-7ರ  ಪುಸ್ತಕ ಮುಂಗಾರಿನ ಕರೆ..


ಬಯಲು ಸೀಮೆಯವರಾದ ನಮಗೆ ಮಲೆನಾಡು ಎಂದಾಕ್ಷಣ ತಂಪಾದ ವಾತಾವರಣ,ದಟ್ಟವಾದ ಕಾಡು,ಸಹ್ಯಾದ್ರಿ ಪರ್ವತ ಶ್ರೇಣಿ ಇವುಗಳ ಕಲ್ಪನೆ.. ಆದರೆ ಈ ಪುಸ್ತಕ ಮಲೆನಾಡಿನ ತಂಪಾದ ವಾತಾವರಣದಲ್ಲಿ ಬೆಚ್ಚಗೆ ಅಡಗಿರುವ ಅಲ್ಲಿಯ ಜನರ ನೋವು ಮತ್ತು ಅವರ ಧೈರ್ಯವನ್ನು ಅನಾವರಣಗೊಳಿಸುತ್ತದೆ. ಇಲ್ಲಿಯ ಜನರಲ್ಲಿ ಎಷ್ಟೋ ನುಂಗಲಾಗದ ನೋವಿದ್ದರೂ ಮುಂಗಾರು ಅವರಲ್ಲಿ ಹೊಸ ಹುರುಪು ಚೈತನ್ಯ ತುಂಬುತ್ತದೆ, ಕರಿ ಮೋಡಗಳು ಸರಿದ ತಿಳಿ ಬಾನಿನಂತೆ..


ವಿದ್ಯಾವಂತ, ವಿಚಾರವಂತ ಯುವತಿಯು ಕ್ಲಿಷ್ಟ ಸನ್ನಿವೇಶಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಚಿತ್ರಣವಿರುವ ಕಥಾವಸ್ತು ಇಲ್ಲಿದೆ..


ನಿಧಿ ಮಲೆನಾಡಿನಿಂದ ದೂರ ಬೆಂಗಳೂರಿನಲ್ಲಿ ಓದಿ ಬೆಳೆದು ಡಾಕ್ಟರ್ ಆದವಳು. ತಂದೆ ಸುಂದರಗೌಡ 'ಕಾಡುಗುಂಬ ಕಾಫೀ ಎಸ್ಟೇಟ್'ನ ಮಾಲೀಕರು. ತಂದೆಯ ಅನಾರೋಗ್ಯ ಸಾವಿನಿಂದಾಗಿ ಬೆಂಗಳೂರು ಬಿಟ್ಟು ಮಲೆನಾಡಿಗೆ ಬಂದು ನೆಲೆಸುವ ನಿಧಿ, ಇಲ್ಲಿಯ ನಾನಾರೀತಿಯ ಸಮಸ್ಯೆಗಳನ್ನು ಅರಿತು ಅವುಗಳನ್ನು ಬಗೆಹರಿಸುವ ಅವಳ ಜಾಣ್ಮೆಯನ್ನು ಕಾಣಬಹುದು.ಹಾಗೂ ಓದಿ ಪದವಿ ಪಡೆದಿದ್ದರೂ ನಗರದ ಯಾಂತ್ರಿಕ ಬದುಕಿನಿಂದ ದೂರವಾಗಿ ತೋಟ ಮಾಡಿಕೊಂಡು ಪ್ರಕೃತಿಯೊಂದಿಗಿರುವ ಶಶಾಂಕ ಎಂಬುವರ ಗೆಳೆತನ,ಅವರ ಸಲಹೆಗಳೊಂದಿಗೆ ತೋಟದ ಅಕ್ರಮಗಳನ್ನು ಬಯಲಿಗೆಳೆವ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಹಾಗೂ ಇವೆಲ್ಲದರ ಜೊತೆ ಮಲೆನಾಡಿನ ವೈವಿಧ್ಯಮಯವಾದ ಪ್ರಕೃತಿ ಮತ್ತು ಕಾಫಿತೋಟದ ನೈಜಚಿತ್ರಣವಿದೆ ಹಾಗೆಯೇ ಶ್ರೀಮಂತಿಕೆ ಎಷ್ಟೇ ಇದ್ದರೂ ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಗುಣ ಹಾಗೂ ಇತರರಿಗೆ ಮಾದರಿಯಾಗಿ ಹೇಗೆ ಬದುಕಬಹುದು ಎನ್ನುವ ಸೂಕ್ಷ್ಮವನ್ನು ಸಹ ಈ ಕಥೆಯಲ್ಲಿ ಕಾಣಬಹುದು.

ನಮ್ಮ ಬದುಕಿನಲ್ಲಿ ಬರುವ ಸವಾಲು,ಸಮಸ್ಯೆಗಳು ಲೆಕ್ಕವಿಲ್ಲದಷ್ಟು! ಅವನ್ನು ಚಿಂತನೆಯ ಮೂಲಕ ದಿಟ್ಟತನದಿಂದ  ಸರಿಯಾದ ರೀತಿಯಲ್ಲಿ ಪರಿಹರಿಸಿಕೊಳ್ಳುವವರು ಮಾತ್ರ ಬೆರಳೆಣಿಕೆಯಷ್ಟು. ಅದಕ್ಕೆ ಬುದ್ಧಿವಂತಿಕೆ, ತಿಳುವಳಿಕೆಯೂ ಬೇಕು.



No comments: