'ತೇಜಸ್ವಿ'
•••••••••••••••••••••••••••••••••••••••••••
ಲಿಂಗಬಂದ
"""""""""""""""""""""
ಯಾರೂ ಅರಿಯದ ವೀರ
"ಲಿಂಗಬಂದ"!
ಮುರುವಿನ ಒಲೆಯ ಮುಂದೆ ಕುಳಿತ
ಮಕ್ಕಳು ಕಂಡ ಕಣ್ಣುಗಳಲ್ಲಿ
"ಲಿಂಗಬಂದ"!
ನೆರೆಬಂದ ನದಿಯಲ್ಲಿ ಕಾಳಕತ್ತಲೆಯಲ್ಲಿ
ಕಾಣದಾಗಿ, ನದಿಗೆ ಹಾರಿದ
"ಲಿಂಗಬಂದ"!
ಕತೆಗಳ ಕಣಜ, ಕಾಡಿನ ಓಜ
"ಲಿಂಗಬಂದ"!
ಕನ್ನಡಸಾಹಿತ್ಯದ ಮಹದಾನಂದ
"ಲಿಂಗಬಂದ"!
ಮುಸುಕಿದ ಮಬ್ಬುಹರಿದು ಪೂರ್ಣಚಂದ್ರನ
ತೇಜೋಬಿಂಬವಾಗಿ ತಾನಾಗಿ
"ಲಿಂಗಬಂದ"!
ಅಬಚೂರಿನ ಪೋಸ್ಟಾಫೀಸಿನಲ್ಲಿ ಬೋಬಣ್ಣನ ಚಿತ್ರಗಳು ಪತ್ರಗಳು: ಗುಪ್ತನೇತ್ರಗಳಲ್ಲಿ ಕುಣಿಯುತ್ತಾ ಕೆನೆಯುತ್ತಾ
"ಲಿಂಗ ಬಂದ"!
ಮಹಾರಾಜರ ಮೈಸೂರು ತೊರೆದು
ನಿಗೂಢ ಮನುಷ್ಯರಾಗಿ, ಮೂಡಿಗೆರೆಯ ಮಾಯಾವಿಯಾಗಿ
"ಲಿಂಗಬಂದ"!
ಕೃಷ್ಣೇಗೌಡನ ಆನೆಯಾಗಿ,
ಮಾಯಾಮೃಗದ ಕಪ್ಪುನಾಯಾಗಿ
"ಲಿಂಗಬಂದ"!
ಕುಬಿ ಮತ್ತು ಇಯಾಲ ಮಾಯಕದ ಹಸ್ತಗುಣದಲ್ಲಿ ಮೋಡಿಕಾರ
"ಲಿಂಗಬಂದ"!
ಸೂರಾಚಾರಿಯ ಕರಕೌಶಲ್ಯದ ಹಸಿರುಕಲೆಯ ನರಕ್ಕೆ ಬರೆಯೆಳೆದು, ತುಕ್ಕೋಜಿಯ ಬುದ್ಧಿಗೆ ತುಕ್ಕು ಹಿಡಿದು, ದಿಕ್ಕುತೋಚದೆ ದಿಕ್ಕೆಟ್ಟವೇಳೆ
"ಲಿಂಗಬಂದ"!
ತಬರನ ಕಥೆಯಲ್ಲಿ ಪಿಂಚಣಿಯ ವ್ಯಥೆಗಳ
ಹೊತ್ತು ಬಾಳಸಂಗಾತಿಯ ಕಾಲು ತೆಗೆಸಲು
ಕಸಾಯಿಖಾನೆ ಹುಡುಕುತ
"ಲಿಂಗಬಂದ"!
ಕರ್ವಾಲೋ ಮಂದಣ್ಣನ ಹೆಗಲಮೇಲೆ
ಕೈಹಾಕುತ್ತಾ , ಹಾರುವ ಓತಿಯ ಬೆನ್ನುಹತ್ತಿದ
ಬೆಳಕಿನ ಹುಳುವಾಗಿ ತಾನಾಗಿ
"ಲಿಂಗಬಂದ"!
ಚಿದಂಬರ ರಹಸ್ಯ ಕೆದಕುತ್ತಾ ವಿನೂತನ ಏಲಕ್ಕಿತಳಿಯ ತೆಕ್ಕೆಗೆ ಬಿದ್ದ ಪತ್ತೆದಾರಿಕೆಗೆ
ಲಂಟಾನ ಜುಗ್ಗಿನಲಿ ನುಗ್ಗುನುರಿಯಾಗಿ
ಓಡುತ್ತಾ ಪೊರೆಕಳಚುತ್ತಾ ಮೇಲೇರುತ್ತಾ
ಜಾತಿಧರ್ಮಗಳ ಹೊಗೆರಕ್ಕಸನಿಂದ ಪಾರಾದ ಜಯಂತಿರಫೀಕರ ಕಣ್ಣಿಗೆ ಬಿದ್ದ
ಏಲಕ್ಕಿಗಮಲಿನ ತಳಿಯಾಗಿ
"ಲಿಂಗಬಂದ"!
ಕಿರುಗೂರಿನ ಗಯ್ಯಾಳಿಗಳ ಬಾಯಿಗೆಬಿದ್ದು
ಪುರುಷ ಅಹಂಕಾರದ ಮಹಾದಿಮ್ಮಿ
ದಾನಮ್ಮಹೆಗ್ಗಡತಿಯ ದೋಹದಕ್ಕೆ ಜಂಗಮವಾಗಿ ಉರುಳುತ್ತಾ
"ಲಿಂಗಬಂದ"!
ಜುಗಾರಿ ಕ್ರಾಸ್ ನ ಸ್ಥಳೀಯಭೂಗೋಳಕ್ಕೆ
ವಕ್ಕರಿಸಿದ ವಿಶ್ವಲೀಲಾಜಾಲದ ಬಾಸ್
ಕಣ್ಣಿಗೆ ಬಿದ್ದರೂ ಸಿಕ್ಕಿಬೀಳದ
"ಲಿಂಗಬಂದ"!
ಸಕಲಜೀವರಾಶಿಯ ಕತೆಗಳ ಪರಿಸರದಲ್ಲಿ
ನೀರಲ್ಲಿ ಕರಗಿದಸುಣ್ಣವಾಗಿ
"ಲಿಂಗಬಂದ"!
ವಿಸ್ಮಯದ ಸರಣಿಯ ಬಾಲಸುರುಳಿಯ
ಸಿಂಹಾಸನವ ರಚಿಸಿ ಕುಳಿತ
"ಲಿಂಗಬಂದ"!
ಪಾಕಕ್ರಾಂತಿಯಲ್ಲಿ ನಗೆಗೆ ನಗೆ ಕುಂಟಣಿ;
ಒಂದು ಹುಲ್ಲಿನ ಕ್ರಾಂತಿಯಲ್ಲಿ ತೆನೆಗೆ ತೆನೆ ಕುಂಟಣಿಯಾಗಿ ತೊನೆಯುತ್ತಾ
"ಲಿಂಗಬಂದ"!
ಇಪ್ಪತ್ತೊಂದನೇ ಶತಮಾನದಲ್ಲಿ
ಕನ್ನಡಮಕ್ಕಳ ಮನದಾಕಾಶದಲ್ಲಿ
ಮಿಲೇನಿಯಂ ಸರಮಾಲೆಯ ಬೆಳಕು,
ಬೆಳುದಿಂಗಳಿನ ಮಾಯಾಲೋಕವಾಗಿ
ಪೂರ್ಣಚಂದ್ರತೇಜಸ್ವಿಯಾಗಿ
"ಲಿಂಗಬಂದ"!
ಅಂಬರದಲ್ಲಿರುವ ಸೂರ್ಯಬಿಂಬ ಒಂದಾದರೂ ಜಲತುಂಬಿದ ಕುಂಬಗಳ ಸಹೃದಯದಲ್ಲಿ ಸಾವಿರದ ಬಿಂಬವಾಗಿ
ಅತಿರತಿಗೆ ಗತಿಮತಿಯಾಗಿ
"ಲಿಂಗಬಂದ"!
~~~~~~~~~~~~~~~~~~~~~
* ವಿ.ಚಂದ್ರಶೇಖರ ನಂಗಲಿ, 6.9.2020
ದ್ವಾದಶ ಜ್ಯೋತಿರ್ಲಿಂಗಗಳು:
""""""""""""""""""""""""""""""""""""""""""""
ಕನ್ನಡಸಾಹಿತ್ಯಕ್ಕೆ ಸುಪ್ರಸಿದ್ಧವಾದ ದ್ವಾದಶ ಜ್ಯೋತಿರ್ಲಿಂಗಗಳು ರೀತಿಯಲ್ಲಿ 'ಹಸಿರು ಕಾಳಜಿ' ಕೃತಿರತ್ನಗಳನ್ನು ಕೊಟ್ಟ ಶ್ರೀ ಕೆ.ಪಿ. ಪೂರ್ಣಚಂದ್ರತೇಜಸ್ವಿ ಅವರೇ ನನ್ನ ಬಗೆಗಣ್ಣಿಗೆ "ಲಿಂಗಬಂದ" ಎಂಬಂತೆ ಕಂಡು ಬಂದರು! ಅಂಗಾವಸ್ಥೆಯಲ್ಲಿ ನರಳುತ್ತಿದ್ದ ಕನ್ನಡಸಾಹಿತ್ಯಕ್ಕೆ "ಲಿಂಗಾವಸ್ಥೆ"ಯ ಸಾಹಿತ್ಯ ಕೊಟ್ಟ ತೇಜಸ್ವಿ ಅವರು ಹೊಸ ತಲೆಮಾರಿನ ತವನಿಧಿ. ಈ ಬುದ್ಧಿಭಾವಗಳ ವಿದ್ಯುದಾಲಿಂಗನದಿಂದ ಈ ಕವನವು ಮೂಡಿಬಂದಿದೆ - ನಂಗ್ಲಿ ಜಂಗ್ಲಿ
~~~~~~~~~~~~~~~~~~~~
No comments:
Post a Comment