ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Friday, September 18, 2020

ಭಾರತೀಪುರ

 ಪುಸ್ತಕ:- ಭಾರತೀಪುರ

ಲೇಖಕರು:- ಯು.ಆರ್ ಅನಂತಮೂರ್ತಿ



ನವ ಚಳುವಳಿಯ ಪ್ರವರ್ತಕರಲ್ಲಿ ಒಬ್ಬರಾದ,ಚಿಂತಕರೂ,ವಿಮರ್ಶಕರೂ,ಸಾಹಿತಿಗಳಾದ ಯು.ಆರ್ ಅನಂತಮೂರ್ತಿ ಅವರ ಪ್ರಸಿದ್ಧ ಬರಹಗಳಲ್ಲಿ ಪ್ರಮುಖವಾದ ಕಾದಂಬರಿ ಭಾರತೀಪುರ..

ಅನಂತಮೂರ್ತಿಯವರು ಬ್ರಾಹ್ಮಣ ಸಮುದಾಯವನ್ನೇ ಗುರಿಯಾಗಿಸಿಕೊಂಡು ಬರೆಯುತ್ತಾರೆ ಎನ್ನುವ ಪೂರ್ವಗ್ರಹ ಪೀಡಿತವಾಗದೇ ಓದಿದಾಗ ಈ ಕಾದಂಬರಿ ನಮಗೆ ಅತ್ಯುತ್ತಮವಾದ ಕೃತಿಗಳಲ್ಲೊಂದಾಗಿ ಕಾಣುತ್ತದೆ..

೧೯೭೩ ರಲ್ಲಿ ರಚನೆಯಾದ "ಭಾರತೀಪುರ" ಕಾದಂಬರಿ ಅಂದಿನ ಭಾರತೀಯ ಸಾಮಾಜಿಕ ಅಸಮಾನತೆಯನ್ನು ತೋರಿಸುವ ಕೈಗನ್ನಡಿಯಂತಿದೆ..


ಭಾರತೀಪುರ ಕಾದಂಬರಿಯ ನಾಯಕ "ಜಗನ್ನಾಥ".. ಇವನ ಹುಟ್ಟೂರು ಭಾರತೀಪುರ..  ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವನಾಗಿದ್ದು,ತನ್ನ ಉನ್ನತ ವ್ಯಾಸಂಗಕ್ಕಾಗಿ ಲಂಡನ್ನಿಗೆ ಹೋಗಿದ್ದನು. ಅಲ್ಲಿ ತನ್ನ ಆದರ್ಶ ಹಾಗೂ ಬಂಡಾಯ,ಕ್ರಾಂತಿಯ ಮಾತುಗಳಿಂದ ಪ್ರಸಿದ್ಧನಾಗಿದ್ದನು.. 'ಮಾರ್ಗರೇಟ್' ಎನ್ನುವ ಚೆಲುವೆಯ ಪ್ರೇಮ ಪಾಶಕ್ಕೆ ಒಳಗಾಗಿದ್ದನು..

ಉನ್ನತ ವ್ಯಾಸಂಗದ ನಂತರ ಹುಟ್ಟೂರು ಭಾರತೀಪುರಕ್ಕೆ ಮರಳಿ ಬಂದನು..

ಭಾರತೀಪುರ ಎಂಬ ಊರು ಇಲ್ಲಿಯ 'ಮಂಜುನಾಥಸ್ವಾಮಿ' ದೇವಾಲಯದಿಂದ ಪ್ರಸಿದ್ಧಿಯನ್ನು ಪಡೆದಿತ್ತು. ಜಗನ್ನಾಥ ಈ ದೇವಾಲಯದ ಧರ್ಮದರ್ಶಿಗಳ ವಂಶಸ್ಥನಾಗಿದ್ದ ಹಾಗೂ ಊರಿನ ಶ್ರೀಮಂತ.. ಭಾರತೀಪುರ ಮೌಢ್ಯತೆಯ ಸಾಮಾಜಿಕ ಅವ್ಯವಸ್ಥೆಯ ಆಗರವಾಗಿತ್ತು. ಊರಿನಲ್ಲಿದ್ದ ಬ್ರಾಹ್ಮಣರು ಹಾಗೂ ಶೂದ್ರರ, ಹೊಲೆಯರ ನಡುವಣ ಮಹಾ ಕಂದಕವನ್ನು ಜಗನ್ನಾಥ ಕಂಡನು. ಹೇಗಾದರೂ ಮಾಡಿ ಇವರ ನಡುವಿನ ಅಸಮಾನತೆಯನ್ನು ತೊಡೆದು ಹಾಕುವುದೇ ಜಗನ್ನಾಥನ ಮುಖ್ಯ ಧ್ಯೇಯವಾಗಿತ್ತು ಎಂಬುದನ್ನು ಕಾದಂಬರಿಯುದ್ದಕ್ಕೂ ಕಾಣಬಹುದು..

ಬ್ರಾಹ್ಮಣರ ಹೇಲುಚ್ಚೆಯನ್ನು ಹೊತ್ತು ಊರು ಶುದ್ಧಿಗೊಳಿಸುವ ಹೊಲಯರು ದೇವಾಲಯ ಪ್ರವೇಶಿಸಿದರೇ ದೇವಸ್ಥಾನ ಮಲಿನವಾಗುತ್ತದೆ ಎನ್ನುವುದು ಹೇಗೆ ಸರಿ..?!

ಶತ-ಶತಮಾನಗಳಿಂದ ಬಂದ ಈ ಅನಿಷ್ಟವನ್ನು ತೊಡೆದು ಹಾಕಬೇಕೆಂದರೆ ಹೊಲೆಯರನ್ನು ದೇವಸ್ಥಾನಕ್ಕೆ ನುಗ್ಗಿಸಲೇಬೇಕು ಎಂದು ನಿರ್ಧರಿಸಿದನು.

ಮಂಜುನಾಥ ಸ್ವಾಮಿಯ ರಥೋತ್ಸವದ ದಿನವೇ ದೇವಸ್ಥಾನದಲ್ಲಿ ಹೊಲೆಯರನ್ನು ಪ್ರವೇಶಿಸುವುದಾಗಿ ಜಗನ್ನಾಥ ಪತ್ರಿಕೆ ಪ್ರಕಟಣೆಯನ್ನು ನೀಡಿದನು.. ಅಂದಿನಿಂದ ಊರಿನ ಸಂಪ್ರದಾಯಸ್ಥ ಬ್ರಾಹ್ಮಣ ವರ್ಗದವರು ಜಗನ್ನಾಥನನ್ನು ಯಾವ ದೃಷ್ಟಿಯಿಂದ ನೋಡುತ್ತಿರಬಹುದು ಎಂದು ನೀವೇ ಊಹಿಸಿ..


ಹೊಲೆಯರ ದೇವಸ್ಥಾನದ ಪ್ರವೇಶಕ್ಕೂ ಮುನ್ನ ಅವರನ್ನು ಸುಶಿಕ್ಷಿತರನ್ನಾಗಿ ಮಾಡಲು ಪ್ರಯತ್ನಿಸುತ್ತಾನೆ. ತುಂಡುಬಟ್ಟೆ ಉಟ್ಟು ಬೆತ್ತಲೆಯಾಗಿದ್ದವರಿಗೆ ಪಂಚೆ,ಅಂಗಿ ತೊಡುವ ಅಭ್ಯಾಸ ಮಾಡಿಸುತ್ತಾನೆ. ಸಮಾಜದಲ್ಲಿ ಯಾರೂ ಮೇಲಲ್ಲ; ಯಾರೂ ಕೀಳಲ್ಲ.. ಇತರರಂತೆ ನಿಮಗೂ ಬದುಕು ಹಕ್ಕಿದೆ ಎಂದು ತಿಳಿಸಲು ಪ್ರಯತ್ನಿಸುತ್ತಾನೆ..

“ನಿಮ್ಮ ಹೀನತೆಯೇ ನಿಮ್ಮ ಶಕ್ತಿ. ನಿಮ್ಮ ಹೀನತೆಯಲ್ಲಿಯೇ ಈ ಸಮಾಜಕ್ಕೆ ನಿಮ್ಮ ಅನಿವಾರ್ಯತೆ ಇದೆ. ಹೇಲು ಬಾಚಲ್ಲ ಅನ್ನಿ, ಆಗ ಮಂಜುನಾಥಸ್ವಾಮಿಯನ್ನು ನಿತ್ಯ ಆವರಿಸುವ ಊದುಬತ್ತಿ,ಲೋಬಾನಗಳ ಸುಗಂಧವನ್ನು ಊರಲೆಲ್ಲ ದಟ್ಟವಾಗಿ ಹರಡುವ ಹೇಲಿನ ದುರ್ವಾಸನೆಯಿಂದ ನಾಶ ಮಾಡುವ ಶಕ್ತಿ ನಿಮ್ಮಲ್ಲಿದೆ. ” ಎಂದು ಹೊಲೆಯರಲ್ಲಿ ಅರಿವಿನ ದೀಪ ಹಚ್ಚಲು ಪ್ರಯತ್ನಿಸುತ್ತಾನೆ..

ಬ್ರಾಹ್ಮಣರನ್ನು ಮುಟ್ಟುವುದು ದೂರದ ಮಾತು; ಅವರ ನೆರಳು ಕಂಡರೂ ಸಹ ದೂರ ಸರಿದು ನಿಲ್ಲುವ ಹೊಲೆಯರ ಭೀತಿಯನ್ನು ತೊಡಗಿಸಲು ಪ್ರಯತ್ನಿಸುತ್ತಾನೆ. ತನ್ನನ್ನೂ ಮುಟ್ಟಲು ಹೆದರುವ ಹೊಲೆಯರಿಗೆ ತನ್ನ ಮನೆತನದಲ್ಲಿ ತಲೆತಲಾಂತರದಿಂದ ಬಂದ ದೇವರ ಕೋಣೆಯಲ್ಲಿದ್ದ ಶಾಲಿಗ್ರಾಮವನ್ನು (ಪೂಜಿಸುವ ಕಪ್ಪು ವರ್ಣದ ಕಲ್ಲು) ಮುಟ್ಟಿಸುತ್ತಾನೆ..

ಹೊಲೆಯರು ದೇವಸ್ಥಾನ ಪ್ರವೇಶಿಸುವ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆ ಭಾರತೀಪುರ ರಾಜಕೀಯ ರಣರಂಗದ ವೇದಿಕೆಯಂತೆ ಕಾಣುತ್ತಿತ್ತು.. ದೂರದೂರದಿಂದ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಹಲವು ಮುಖಂಡರು ಭಾರತೀಪುರದ ಅಖಾಡಕ್ಕಿಳಿದರು..

ಸೋಶಿಯಲಿಸ್ಟ್ ಪಕ್ಷದ ಪ್ರಮುಖರು ಜಗನ್ನಾಥನ ನಿರ್ಧಾರವನ್ನು ಸಮರ್ಥಿಸಿ ಅಬ್ಬರದ ಪ್ರಚಾರವನ್ನು ಪ್ರಾರಂಭಿಸುತ್ತಾರೆ..

ಹೊಲೆಯರ ಪ್ರವೇಶವನ್ನು ವಿರೋಧಿಸುತ್ತಿದ್ದ ಊರಿನ ಬಣ ಹೊಲೆಯರಿಗೆ ನಾನಾ ತೊಂದರೆಗಳನ್ನು ಉಂಟುಮಾಡುತ್ತದೆ.. ಹೊಲೆಯರಿಗೆ ಪೊಲೀಸ್ ಠಾಣೆಗೆ ಅಟ್ಟುವುದು.. ಹೊಲೆಯರ ಗುಡಿಸಲುಗಳಿಗೆ ಬೆಂಕಿ ಇಡುವ ಕೆಲಸವೂ ಸಹ ನಡೆಯುತ್ತದೆ. ಹೀಗೆ ನಾನಾ ವಿಘ್ನಗಳ ನಡುವೆಯೂ ಸಹ ಜಗನ್ನಾಥನು ತನ್ನ ಕಾರ್ಯದಲ್ಲಿ ಸಫಲನಾಗುತ್ತಾನೆ..


ಮಂಜುನಾಥಸ್ವಾಮಿ ಜಾತ್ರೆಯ ದಿನದಂದು ಹೊಲೆಯರು ದೇವಾಲಯವನ್ನು ಪ್ರವೇಶಿಸುತ್ತಾರೆ. ಆದರೆ ದೇವಾಲಯದ ಗರ್ಭಗುಡಿಯಲ್ಲಿ ದೇವರೇ ಇರಲಿಲ್ಲ‌‌‌‌...!!!???? ಹಾಗಾದರೆ ದೇವರ ಮೂರ್ತಿ ಎಲ್ಲಿಗೆ ಹೋಗಿತ್ತು?! ಇದರ ಹಿಂದಿನ ಮರ್ಮವನ್ನು ತಿಳಿಯಲು ನೀವು ಕಾದಂಬರಿಯನ್ನು ಓದಲೇಬೇಕು..

ಕಾದಂಬರಿಯ ಕೊನೆಯ ಭಾಗದಲ್ಲಿ ದೇವರಿಲ್ಲದ ಗುಡಿಯನ್ನು ಹೊಲೆಯರು ಪ್ರವೇಶಿಸಿದ್ದರಿಂದ ನಮ್ಮದೇವಾಲಯ ಅಪವಿತ್ರವಾಗಿಲ್ಲ ಎಂದು ಸಂಭ್ರಮಿಸುವ ಬ್ರಾಹ್ಮಣರು.. ಮತ್ತೆ ದೇವಾಲಯವನ್ನು ಶುದ್ಧಿಗೊಳಿಸಿ ಮಂಜುನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಲು ಸಿದ್ಧರಾಗುತ್ತಾರೆ..

ಇದು ಏನನ್ನು ಸೂಚಿಸುತ್ತದೆ ಎಂದರೇ ಎಷ್ಟೇ ಕ್ರಾಂತಿಗಳು ನಡೆದರೂ ನಮ್ಮ ಸಮಾಜ ಈ ಹಾಳು ಜಾತಿವಾದ,ಗೊಡ್ಡು ಸಂಪ್ರದಾಯಗಳಿಂದ,ಮೌಢ್ಯತೆಯಿಂದ ಹೊರಬರಲು ಸಾಧ್ಯವಿಲ್ಲ ಎಂಬುದು ಇದರರ್ಥ..


ಒಟ್ಟಾರೆಯಾಗಿ ಹೇಳುವುದಾದರೆ ಇದೊಂದು ಸಾಮಾಜಿಕ ಕಾದಂಬರಿ. ಸಮಾಜದಲ್ಲಿನ ಮೌಡ್ಯತೆ, ಅಸಮಾನತೆ, ದಬ್ಬಾಳಿಕೆ, ಕುತಂತ್ರ, ದೌರ್ಜನ್ಯಗಳ ಮೇಲೆ ಬೆಳಕು ಚೆಲ್ಲಿದೆ.

ಅವೈಜ್ಞಾನಿಕ ಆಚರಣೆಗಳನ್ನು ಪ್ರಶ್ನಿಸುವಂತಹ, ಕಿತ್ತು ಹಾಕುವಂತಹ ಯೋಚನೆಗಳನ್ನು ನಮ್ಮಲ್ಲಿಯೂ ಹುಟ್ಟು ಹಾಕುತ್ತದೆ..


ಭಾರತೀಪುರ ಕಾದಂಬರಿ ರಚನೆಗೊಂಡು ಅರ್ಧ ಶತಮಾನಗಳೇ ಕಳೆದರೂ ಸಹ ಅನಂತಮೂರ್ತಿಯವರ ವಿಚಾರಗಳು ಇಂದಿಗೂ ಎಷ್ಟೊಂದು ಪ್ರಸ್ತುತವೆನಿಸುತ್ತವೆ.. ಜಾತಿಯ ಹೆಸರಿನಲ್ಲಿ ನೆಡೆಯುವ ಕೋಮುಗಲಭೆಗಳು, ಇದೇ ಸುಸಂದರ್ಭ ಎಂಬಂತೆ  ಜಾತಿಯ ವಿಚಾರವಾಗಿ ಕೆಸರು ಎರಚಾಡುತ್ತ ತಮ್ಮ ವರ್ಚಸ್ಸು ಗಳಿಸಲು ಹೆಣಗುವ ರಾಜಕೀಯ ಮುಖಂಡರುಗಳು ಇಂದು ನಮ್ಮ ಕಣ್ಣೆದುರೇ ಇರುವುದು ವಿಪರ್ಯಾಸ..

ಪ್ರತಿಯೊಬ್ಬರಲ್ಲಿಯೂ ಸಹ ಭಾರತೀಪುರದ ಜಗನ್ನಾಥ ಜಾಗೃತವಾಗುವವರೆಗೂ ನಮ್ಮ ಸಮಾಜ ಹೀಗೆ ಮುಂದುವರೆಯುತ್ತದೆ...😔



1 comment:

Anonymous said...

Super