ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Monday, March 16, 2020

ಹಿಮಾಲಯನ್ ಬ್ಲಂಡರ್

ಪುಸ್ತಕ:- ಹಿಮಾಲಯನ್ ಬ್ಲಂಡರ್
ಲೇಖಕರು:- ರವಿ ಬೆಳಗೆರೆ
ಮೂಲ ಬರವಣಿಗೆ:- ಬ್ರಿಗೇಡಿಯರ್ ಜಾನ್.ಪಿ.ದಳವಿ

ಹಿಮಾಲಯನ್ ಬ್ಲಂಡರ್ ಇದು ಕಥೆ-ಕಾದಂಬರಿಯಲ್ಲ, ಪ್ರಬಂಧವಲ್ಲ, ಇತಿಹಾಸವೂ ಅಲ್ಲ, ಇದು ಒಬ್ಬ ಮಹಾ ಯೋಧನ ಕಣ್ಣೀರು..
ಭಾರತ ಕಂಡ ಮಹಾಯೋಧ ಬ್ರಿಗೇಡಿಯರ್ ಜಾನ್ ಪರಶುರಾಮ ದಳವಿ ಅವರು 1962ರ ಭಾರತ ಚೀನಾ ನಡುವಿನ ಯುದ್ಧದ ಸ್ಥಿತಿಗತಿಯನ್ನು ಕುರಿತು ಬರೆದ ವರದಿಯೇ ಹಿಮಾಲಯನ್ ಬ್ಲಂಡರ್..
ಇಂತಹ ಅದ್ಭುತ ವಿಚಾರವನ್ನು ಕನ್ನಡಿಸಿ ಎಲ್ಲ ಕನ್ನಡಾಭಿಮಾನಿಗಳಿಗೆ ಓದಲು ಅನುವು ಮಾಡಿಕೊಟ್ಟ ರವಿ ಬೆಳಗೆರೆಯವರಿಗೆ ತುಂಬು ಹೃದಯದ ಧನ್ಯವಾದಗಳು..

ಭಾರತ ಕಂಡ ಮಹಾಯುದ್ಧಗಳಲ್ಲಿ ಭಾರತ-ಚೀನಾ ನಡುವಿನ 1962ರ ಥಗ್ಲ ಯುದ್ಧವು ಸಹ ಪ್ರಮುಖವಾದದ್ದು; ಯುದ್ಧದಲ್ಲಿ ಭಾರತದ ಸೈನ್ಯಕ್ಕೆ ಸೋಲುಂಟಾಯಿತು ಎಂಬುದು ನಾವು ನೀವು ತಿಳಿದ ಇತಿಹಾಸ.
ಈ ಯುದ್ಧದಲ್ಲಿ ಭಾರತ ಸೋತಿದ್ದೇಕೆ ಎಂಬ ಪ್ರಶ್ನೆಗೆ ಪುಸ್ತಕದಲ್ಲಿ ಉತ್ತರ ಸಿಗುತ್ತದೆ..

"1962ರ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ಕೊಟ್ಟವರಿಗೆ ಈ ಪುಸ್ತಕವೊಂದು ಮುದ್ರಿತ ವೀರಗಲ್ಲು"

1962 ಜನವರಿಯಲ್ಲಿ ದಳವಿ ತವಾಂಗ್ ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೆವೆನ್ ಇನ್‌ಫೆಂಟ್ರಿ ಬ್ರಿಗೇಡ್‌ನ ಬ್ರಿಗೇಡಿಯರ್ ಆಗಿ ಕಾರ್ಯನಿರ್ವಹಿಸಿದರು. ಒಂದು ಬ್ರಿಗೇಡ್‌ನಲ್ಲಿ 3500 ಸೈನಿಕರು ಇರುತ್ತಾರೆ,ಅದರ ಮುಖ್ಯಸ್ಥರು ಈ ದಳವಿ..
ತವಾಂಗ್ ಎಂಬುದು ಅರುಣಾಚಲ ಪ್ರದೇಶ ಭೂತಾನ್ ಚೀನಾ ಗಡಿಯಲ್ಲಿರುವ ಪ್ರದೇಶ. ಇದು ಹಿಮಾಲಯದ ಸಾವಿರಾರು ಅಡಿ ಎತ್ತರದಲ್ಲಿರುವ ಪರ್ವತ ಸರಣಿಗಳಲ್ಲಿರುವ ಭಾಗ. ಇಲ್ಲಿಯ ಒಂದು ಪ್ರದೇಶ ಧೋಲಾ ಪೋಸ್ಟ್..
ನಮ್ಕಾ ಚು ಎಂಬ ನದಿಯ ದಂಡೆಯಲ್ಲಿ ಈ ದುರ್ಗಮ ದೋಲಾ ಪೋಸ್ಟ್ ಇದೆ.(ನೀವು ಗೂಗಲ್ ಮ್ಯಾಪ್ ನಲ್ಲಿ ಸ್ಥಳವನ್ನು ನೋಡಬಹುದು) ಇದರ ರಕ್ಷಣೆಯ ಜವಾಬ್ದಾರಿಯನ್ನು ಬ್ರಿಗೇಡಿಯರ್ ದಳವಿಯವರಿಗೆ ನೀಡಲಾಗಿತ್ತು.ಇದರ ರಕ್ಷಣೆಗಾಗಿ  ನಡೆದ ಯುದ್ಧವೇ ಥಗ್ಲ ಯುದ್ಧ..
ಯುದ್ಧದಲ್ಲಿ ಭಾರತೀಯರಿಗೆ ಸೋಲಾಯಿತು.. ಸೋಲಾಗಲು ಮುಖ್ಯ ಕಾರಣ ಸೈನಿಕರಲ್ಲ; ದಿಲ್ಲಿಯಲ್ಲಿ ಕೂತು ಆಡಳಿತ ನಡೆಸುತ್ತಿದ್ದ ಪಟ್ಟಬದ್ದ ಹಿತಾಸಕ್ತಿಗಳು, ರಾಜಕೀಯ ಮುಖಂಡರು ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಸೈನ್ಯದ ಹಿರಿಯ ಅಧಿಕಾರಿಗಳು ಇವರು ನಿಜವಾದ ಕಾರಣೀಭೂತರು.
ಯುದ್ಧದ ಸಮಯದಲ್ಲಿ ಸೈನಿಕರ ಸ್ಥಿತಿ ಹೇಗಿತ್ತೆಂದರೆ ಕೊರೆಯುವ ಚಳಿಯಲ್ಲಿ ಧರಿಸಲು ಸರಿಯಾದ ಬೂಟುಗಳಿಲ್ಲ, ತಲೆಮರೆಸಿಕೊಳ್ಳಲು ಚಿಕ್ಕ ಬಂಕರುಗಳು ಸಹ ಇಲ್ಲ, ಹೊಟ್ಟೆ ತುಂಬಾ ತಿನ್ನಲು ಆಹಾರವಿಲ್ಲ, ಯುದ್ಧದಲ್ಲಿ ವೈರಿಗಳೊಂದಿಗೆ ಹೋರಾಡಲು ಸಾಕಾಗುವಷ್ಟು ಮದ್ದುಗುಂಡುಗಳ ಕೊರತೆಯು ಸೈನಿಕರಲ್ಲಿತ್ತು.. ಆದರೂ ನಮ್ಮ ಹೆಮ್ಮೆಯ ಯೋಧರು ಬಂದೂಕಿನಲ್ಲಿ ಕೊನೆಯ ಗುಂಡು ಇರುವವರೆಗೂ ಚೀನಾ ಸೈನಿಕರೊಂದಿಗೆ ವೀರಾವೇಶದಿಂದ ಹೋರಾಟವನ್ನು ನಡೆಸುತ್ತಾರೆ. ಹೋರಾಡಲು ಶಸ್ತ್ರಾಸ್ತ್ರಗಳ ಇಲ್ಲದಾಗ ಸೈನಿಕರು ಹುತಾತ್ಮರಾಗುತ್ತಾರೆ..
ಚೀನಿ ಸೈನಿಕರು ಭಾರತದ 3500ಕ್ಕೂ ಹೆಚ್ಚು ಸೈನಿಕರನ್ನು ನರಮೇಧ ಮಾಡಿದರು. ಇದಕ್ಕೆ ಕಾರಣರಾದ ಅಂದಿನ ಸರ್ಕಾರ ಮತ್ತು ಸೈನ್ಯದ ಭ್ರಷ್ಟ ಅಧಿಕಾರಿಗಳು; ಇಂತಹ ವ್ಯವಸ್ಥೆಗೆ ನನ್ನದೊಂದು ಧಿಕ್ಕಾರ..

ಮನುಷ್ಯ ನೆಮ್ಮದಿಯ ಕಾಲದಲ್ಲಿ ಮೂವರನ್ನು ಮರೆತು ಬಿಡುತ್ತಾನೆ ದೇವರನ್ನು ವೈದ್ಯರನ್ನು ಹಾಗೂ ಸೈನಿಕರನ್ನು. ಅಂದಿನ ಸರ್ಕಾರ ಸೈನಿಕರನ್ನು ಮರೆಯಿತು ಭಾರತಕ್ಕೆ ಹೀನಾಯ ಸೋಲುಂಟಾಯಿತು..
ಯುದ್ಧದಲ್ಲಿ ದಳವಿಯವರು ಚೀನಾದ ಶತ್ರು ಶಿಬಿರದಲ್ಲಿ ಯುದ್ಧ ಬಂಧಿಯಾಗಿ ತಿಂಗಳುಗಟ್ಟಲೆ ಇದ್ದು ಹೊರಬಂದ ಮೇಲೆ ದೇಶವನ್ನಾಳುವವರ ಕೈಗೆ ಬರೆದುಕೊಟ್ಟ ವಾರ್ ರಿಪೋರ್ಟ್ ಈ ಹಿಮಾಲಯನ್ ಬ್ಲಂಡರ್..
ಯುದ್ಧದ ಸ್ಥಿತಿ ಯಾವ ರೀತಿಯದಾಗಿತ್ತು ಹಾಗೂ ನಮ್ಮ ಸೈನಿಕರ ಸ್ಥಿತಿ ಈ ವ್ಯವಸ್ಥೆಯಲ್ಲಿ ಸಿಲುಕಿ ಯಾವ ಮಟ್ಟಕ್ಕೆ ಹಾಳಾಗಿತ್ತು ಎಂಬುದು ನಮಗೆ ತಿಳಿಯುತ್ತದೆ.
ಸೈನಿಕರೇನು ಯಂತ್ರಗಳಲ್ಲ, ಅವರು ಸಹ ನಮ್ಮಂತೆಯೇ ಮನುಷ್ಯರು. "ಯುದ್ಧಭೂಮಿಯಲ್ಲಿ ಸಿಂಹದಂತೆ ಹೋರಾಡಬೇಕು ಅಧಿಕಾರಿಗಳ ಆಜ್ಞೆಯನ್ನು ನಾಯಿಯಂತೆ ಪಾಲಿಸಬೇಕು" ಎಂದರೆ ಯಾವ ಸೈನ್ಯ ತಾನೇ  ಯುದ್ಧವನ್ನು ಗೆಲ್ಲಲು ಸಾಧ್ಯ...
ದಿಲ್ಲಿಯಲ್ಲಿ ಕೂತು ಆಜ್ಞೆ ಮಾಡುವ ಅಧಿಕಾರಿಗೆ ಯುದ್ಧಭೂಮಿಯ ವಾಸ್ತವ ಸ್ಥಿತಿಯ ಅರಿವಿರುವುದಿಲ್ಲ. ಸೈನಿಕರಿಗೆ ಯುದ್ಧಭೂಮಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿರಬೇಕು ಹಾಗೂ ಸಾಕಾಗುವಷ್ಟು ಶಸ್ತ್ರಾಸ್ತ್ರಗಳ ಪೂರೈಕೆಯಾಗಬೇಕು ಆಗತಾನೇ ಸೈನಿಕ ಜಯಮಾಲೆ ಧರಿಸಲು ಸಾಧ್ಯ..