ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Sunday, December 15, 2019

ಪ್ಯಾಪಿಲಾನ್ (ಭಾಗ೧,೨,೩)

ಪುಸ್ತಕ:- ಪ್ಯಾಪಿಲಾನ್ (೧-೨-೩)
ಮೂಲ ಲೇಖಕರು:- ಹೆನ್ರಿ ಶಾರಾರೇ
ಕನ್ನಡಕ್ಕೆ:- ಪೂರ್ಣಚಂದ್ರತೇಜಸ್ವಿ & ಪ್ರದೀಪ್ ಕೆಂಜಿಗೆ
ಹೆನ್ರಿ ಶಾರಾರೇ ಅಲಿಯಾಸ್ ಪ್ಯಾಪಿಲಾನ್‌ ಈ ಪುಸ್ತಕವನ್ನು ಪ್ರಕಟಿಸುವ ಮೊದಲು ಪ್ರಕಾಶನ ಸಂಸ್ಥೆಯು ಈ ಕೃತಿಯ ಪ್ರತಿಯೊಂದು ಘಟನೆಗಳು ಕಾಲ್ಪನಿಕವೇ ಸತ್ಯವೇ ಎಂದು ಆಯಾ ಸ್ಥಳಗಳಿಗೆ ಭೇಟಿ ನೀಡಿ ತಾಳೆ ನೋಡಿ ಸತ್ಯ ಸಂಗತಿಗಳೆಂದು ದೃಢಪಡಿಸಿಕೊಂಡ ಮೇಲೆ ಈ ಪುಸ್ತಕವನ್ನು ಪ್ರಕಟಿಸಿದೆ.. 
ಇಂತಹ ಅದ್ಭುತ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರದೀಪ್ ಕೆಂಜಿಗೆ ಅವರಿಗೆ ನಾನು ಚಿರಋಣಿ.ನಾನು ಓದಿದ ಅತ್ಯದ್ಭುತ ಸಾಹಸ ಕತೆಗಳಲ್ಲಿ ಮೊದಲನೇ ಸ್ಥಾನ ಪ್ಯಾಪಿಲಾನ್ ಪುಸ್ತಕಕ್ಕೆ .. ಪುಸ್ತಕ ಓದಿ ಮುಗಿಸುವವರೆಗೂ ನಾನು ಸಂಪೂರ್ಣವಾಗಿ ಪ್ಯಾಪಿಲಾನ್ ಜಗತ್ತಿನಲ್ಲಿಯೇ ಮುಳುಗಿ ಹೋಗಿದ್ದೆ.ಅವನು ನಡೆಸುವ ಸತತ ಪ್ರಯತ್ನಗಳು ನನ್ನಲ್ಲಿ ಹೊಸ ಚೈತನ್ಯ ಮೂಡಿಸುತ್ತಿದ್ದವು ಹಾಗೂ ಅವನ್ನು ಅನುಭವಿಸುತ್ತಿದ್ದ ವಿಫಲತೆಗಳು ನನ್ನನ್ನು ಅಷ್ಟೇ ಕುಗ್ಗಿಸುತ್ತಿದ್ದವು.



ಪ್ಯಾಪಿಲಾನ್ ಜಗತ್ತಿನ ಮಹೋನ್ನತ ಸಾಹಸ ಕತೆ.
ಇದು ಇಪ್ಪತ್ತನೆ ಶತಮಾನದ ಸರ್ವಶ್ರೇಷ್ಠ ಸಾಹಸದ ಸತ್ಯಕತೆ.
ಮೂಲತಃ ಸ್ವಾತಂತ್ರ್ಯಕ್ಕಾಗಿ ಮನುಷ್ಯನೊಬ್ಬನ ಅದಮ್ಯ ಹೋರಾಟದ ಸತ್ಯಕಥೆ..

ಕಥಾವಸ್ತು:-  ತಾನು ಮಾಡಿರದ ತಪ್ಪಿಗಾಗಿ ಜೀವಾವಧಿ ಶಿಕ್ಷೆಗೆ ಒಳಗಾದ ಒಬ್ಬ ವ್ಯಕ್ತಿ ಸೆರೆಮನೆಯಿಂದ ತಪ್ಪಿಸಿಕೊಳ್ಳಲು ನಡೆಸುವ ಪ್ರಯತ್ನಗಳು ಹಾಗೂ ಪರಾರಿಯಾದ ಮೇಲೆ ಸ್ವಾತಂತ್ರ್ಯಾ ಜೀವನಕ್ಕಾಗಿ ಅವನು ನಡೆಸುವ ಹೋರಾಟ..
ಮೂರು ಭಾಗಗಳಲ್ಲಿರುವ ಈ ಪುಸ್ತಕದ ಮೊದಲೆರಡು ಭಾಗಗಳು ಜೈಲಿನಿಂದ ಪಲಾಯನದ ರೋಚಕ ಸನ್ನಿವೇಶಗಳನ್ನು ಒಳಗೊಂಡಿದೆ. ಮೂರನೇ ಭಾಗದಲ್ಲಿ ಪ್ಯಾಪಿಲಾನ್ ಪಲಾಯನದ ನಂತರದ ಜೀವನದ ಬಗ್ಗೆ ಹೇಳಲಾಗಿದೆ..

ಕಥೆಯ ನಾಯಕ:-  ಪ್ಯಾಪಿಲಾನ್

ಕಥೆಯ ಪರಿಚಯ:- ಈ ಕತೆ ಆರಂಭವಾಗುವುದು ಫ್ರಾನ್ಸಿನ ರಾಜಧಾನಿ ಪ್ಯಾರಿಸ್ ನಿಂದ. ಯಾವ ತಪ್ಪನ್ನು ಮಾಡಿಲ್ಲದ ತನಗೆ ಸಂಬಂಧವೇ ಇಲ್ಲದ ಕೊಲೆ  ಪ್ರಕರಣದಲ್ಲಿ ಪ್ಯಾಪಿಲಾನ್ನನ್ನು  ಫ್ರೆಂಚ್ ಪೊಲೀಸರು ಲಾಯರುಗಳು ಸೇರಿ ಜೀವಾವಧಿ ಶಿಕ್ಷೆಗೆ ವಿಧಿಸುವಂತೆ ಮಾಡುತ್ತಾರೆ. ಫ್ರೆಂಚ್ ಗಯಾನ ದ್ವೀಪಗಳಲ್ಲಿರುವ ಕಾರಾಗೃಹಕ್ಕೆ ತಳ್ಳುತ್ತಾರೆ..ಈ ದ್ವೀಪಗಳಿಗೆ ಹೋದ ಯಾರೂ ಸಹ  ಕಾರಾಗೃಹದ ಅವಧಿ ಮುಗಿಸಿ ಜೀವ ಸಮೇತ ಹಿಂದಿರುಗುವುದಿಲ್ಲ..
ಈ ದ್ವೀಪಗಳಿಂದ ತಪ್ಪಿಸಿಕೊಳ್ಳಲು ಪ್ಯಾಪಿಲಾನ್ ಹದಿಮೂರು ವರ್ಷಗಳ ನಿರಂತರ ಹೋರಾಟ ಆರಂಭವಾಗುತ್ತದೆ.ಸೆರೆಮನೆಯಿಂದ ತಪ್ಪಿಸಿಕೊಂಡು ಪಲಾಯನ ಮಾಡಿ ತನ್ನ ಈ ಸ್ಥಿತಿಗೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಳ್ಳುವುದು ಪ್ಯಾಪಿಲಾನ್‌ನ್ನ ಮುಖ್ಯ ಉದ್ದೇಶವಾಗಿತ್ತು.

ಪ್ಯಾಪಿಲಾನ್ ಅನೇಕ ಬಾರಿ ಮೈ ನವಿರೇಳಿಸುವಂತಹ ಸಾಹಸ ಮಾಡಿ ಪಲಾಯನ ಮಾಡುತ್ತಾನೆ.
ಶಾರ್ಕಗಳಿಂದ ಕಿಕ್ಕಿರಿದ ಕೆರೆಬಿಯನ್ ಸಮುದ್ರದಲ್ಲಿ ತೇಲುವ ತೆಂಗಿನಕಾಯಿ ಮೂಟೆಯನ್ನು ಸಹ ತಪ್ಪದಂತೆ ಉಪಯೋಗಿಸಿ ಪರಾರಿಯಾಗಲು ಪ್ರಯತ್ನಿಸುತ್ತಾನೆ. ಸಿಕ್ಕಿ ಬಿದ್ದಾಗ ಪರಾರಿ ಪ್ರಯತ್ನಕ್ಕೆ ಏಕಾಂತ ಶಿಕ್ಷೆಯನ್ನು ವಿಧಿಸುತ್ತಾರೆ. ಕರಿ ಕೂಪದ ಶಿಕ್ಷೆ ವಿಧಿಸುತ್ತಾರೆ.ಏನೇ ಶಿಕ್ಷೆಯನ್ನು ಕೊಟ್ಟರೂ ಸಹ ಪಲಾಯನ ಮಾಡುವ ಹಂಬಲ ತೊರೆಯಲು ಪ್ಯಾಪಿಲಾನ್‌ಗೆ ಸಾಧ್ಯವಾಗುವುದೇ ಇಲ್ಲ ಇದಕ್ಕೆ ಮುಖ್ಯ ಕಾರಣ ತನ್ನ ಈ ಸ್ಥಿತಿಗೆ ತಳ್ಳಿದವರು ಮೇಲೆ ಇದ್ದ ರೊಚ್ಚು..
ಎಷ್ಟೋ ಸಾರಿ ಸಾವಿನ ಅಂಚಿಗೆ ಹೋದವನು ಹೇಗಾದರೂ ಬದುಕಿ, ತನ್ನನ್ನು ಸೆರೆಗೆ ಹಾಕಿದವರ ಮೇಲೆ ಮುಯ್ಯಿ ತೀರಿಸಬೇಕೆಂದು ಬದುಕಿ ಬರುತ್ತಾನೆ..
ಸತತವಾಗಿ ಹಲವು ಬಾರಿ ಪ್ರಯತ್ನಗಳನ್ನು ಮಾಡುತ್ತಾನೆ.. ಕೊನೆಗೆ ಗೋಣಿಚೀಲದಲ್ಲಿ ತೆಂಗಿನಕಾಯಿ ತುಂಬಿ ಅದರ ಮೇಲೆ ಸವಾರಿ ಮಾಡುತ್ತಾ ಸಾಗರದಲ್ಲಿ ನೂರಾರು ಮೈಲು ಹೋಗಿ ತಪ್ಪಿಸಿಕೊಂಡು ವೆನಿಜುವೆಲಾ ದೇಶ ತಲುಪುತ್ತಾನೆ.

ತನ್ನ ಸೇಡಿನ ಕನಸನ್ನು ನನಸಾಗಿಸಿಕೊಳ್ಳುವ ಭರದಲ್ಲಿ ಪ್ಯಾಪಿಲಾನ್ ಮತ್ತೊಮ್ಮೆ ಸಾಹಸಗಳ ಸರಣಿಯಲ್ಲಿ ಸಿಕ್ಕಿಕೊಳ್ಳುತ್ತಾನೆ.ಕಳ್ಳರ,ಸುಳ್ಳರ,ಜೂಜುಕೋರರ,ನಿಧಿ ಶೋಧಕರ ರೋಚಕ ಪ್ರಪಂಚವನ್ನು ಪ್ರವೇಶಿಸುತ್ತಾನೆ..

ತನ್ನ ಜೀವನದ ಅಮೂಲ್ಯ ಹದಿಮೂರು ವರ್ಷಗಳನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆಯೇ ?? ಅಥವಾ ಅವರನ್ನು ಕ್ಷಮಿಸುತ್ತಾನೆಯೇ ??? ಎಂಬುದನ್ನು ತಿಳಿಯಲು ಈ ಕಾದಂಬರಿಯನ್ನು ಓದಿ..

No comments: