ಅವಿನಾಶನಿಗೆ ತನ್ನ ಪತ್ನಿ ಗರ್ಭಿಣಿಯೆಂದು ತಿಳಿದಾಗ ತುಂಬಾ ಸಂತೋಷವಾಯ್ತು. ದಿನ ಕಳೆದ ಹಾಗೆ ಕೆಲಸದ ಒತ್ತಡದಲ್ಲಿ ಆಕೆಯೆಡೆ ಗಮನ ಕಮ್ಮಿಯಾಗ್ತಿದೆ ಅನ್ನೋ ಆತಂಕ ಶುರುವಾಯ್ತು. ಯಾವಾಗಲೂ ತನ್ನೆಲ್ಲ ಸಮಸ್ಯೆಗಳಿಗೆ ಪರಿಹಾರಗಳನ್ನ ಸೂಚಿಸುತ್ತಿದ್ದ ವಿನಾಯಕ ಮಾಸ್ತರ ಹತ್ತಿರ ಬಂದು ತನ್ನ ಅಳಲನ್ನ ಹೇಳಿಕೊಂಡ....
"ಸರ್ ನನ್ನ ಪತ್ನಿ ಗರ್ಭಿಣಿ. ಆರನೆಯ ತಿಂಗಳು... ನನಗೆ ರಜೆ ಇಲ್ಲ...
ಆಕೆ ಬಹಳಷ್ಟು ಸಮಯ ಒಂಟಿಯಾಗಿರಬೇಕಾಗ್ತಿದೆ... ನನಗದೇ ಆತಂಕವಾಗಿದೆ..."
ಅವಿನಾಶನಿಗೆ ಮಾಸ್ತರರೆಂದರು...
'ಹೆದರಬೇಡ ಒಂದು ಪ್ಯಾಕೇಜ್ ಇದೆ. ಏಳನೆಯ ತಿಂಗಳು ನೀನು ಆಕೆಯನ್ನ ಅಡ್ಮಿಟ್ ಮಾಡಬೇಕು. ಪ್ರಸವಾನಂತರದ ಚಿಕಿತ್ಸೆ, ಆರೈಕೆಗಳೆಲ್ಲಾ ಮುಗಿದ ಮೇಲೆ ಮನೆ ತಲುಪಿಸುತ್ತಾರೆ. ಅಡ್ರೆಸ್ ಮತ್ತು ಫೋನ್ ನಂಬರ್ ಬರೆದಿಟ್ಕೋ...'
ಅವಿನಾಶ್ ಅಡ್ರೆಸ್ ಮತ್ತು ಫೋನ್ ನಂಬರ್ ಬರೆದುಕೊಂಡು ಮಾಸ್ತರರಿಗೆ ಧನ್ಯವಾದಗಳನ್ನ ಹೇಳಿ ಹಿಂತಿರುಗಿದ...
ಕೆಲವು ತಿಂಗಳುಗಳ ನಂತರ ಪುನಃ ಮಾಸ್ತರರನ್ನ ಭೇಟಿಯಾದ.
''ಸರ್ ಮಗುವಿಗೆ ನಾಲ್ಕು ತಿಂಗಳು. ಪತ್ನಿಗೆ ರಜೆ ಮುಂದುವರಿಸಲು ಆಕೆಯ ಬಾಸ್ ಒಪ್ಪುತ್ತಿಲ್ಲ... ನನಗೆ ಪ್ರಮೋಷನ್ ಆಗಿರೋದ್ರಿಂದ ದಿನದ ಬಹುವೇಳೆ ಕಂಪನಿಯಲ್ಲೇ ಇರಬೇಕಾಗಿ ಬಂದಿದೆ..."
ಮಾಸ್ತರರಿಗೆ ವಿಷಯ ಅರ್ಥವಾಯಿತು.
"ಹೆದರಬೇಡ. ಒಂದು ಪ್ಯಾಕೇಜ್ ಇದೆ. ಮಗುವಿಗೆ ಮೂರು ವರುಷವಾಗುವವರೆವಿಗೆ ನೋಡಿಕೊಳ್ಳುವ ಒಂದು ಪ್ಯಾಕೇಜ್... ಬೆಳಿಗಿನಿಂದ ಸಂಜೆಯವರೆಗೂ ನೋಡಿಕೊಳ್ತಾರೆ'....
ಹೆಚ್ಚಿನ ಹಣ ನೀಡಿದರೆ ಫುಲ್ ಟೈಮ್ ಮಗುವನ್ನ ನೋಡಿಕೊಳ್ಳುವ ವ್ಯವಸ್ಥೆಯೂ ಇದೆ. ಫೋನ್ ನಂಬರ್ ಬರೆದುಕೋ..."
ಆತ ಸಂತೋಷದಿಂದ ಮಾಸ್ತರರಿಗೆ ನಮಿಸಿ ಹಿಂತಿರುಗಿದ.....
ಮೂರು ವರ್ಷಗಳ ನಂತರ ಪುನಃ ಅವಿನಾಶ್ ಮಾಸ್ತರನ್ನ ಕಾಣಲು ಹೋಗ್ತಾನೆ.
"ಸರ್ ಮಗುವಿಗೆ ನಾಲ್ಕು ವರ್ಷವಾಗ್ತಿದೆ. ನಾವಿಬ್ಬರೂ ತುಂಬಾ ಬ್ಯುಸಿಯಾಗಿಬಿಟ್ಟಿದೀವಿ. ಮಗುವನ್ನ ಮನೆಗೆ ಕರೆದೊಯ್ದರೆ ಅದರ ಆರೈಕೆ, ಶಾಲೆಗೆ ಕಳಿಸುವುದು, ವಿದ್ಯಾಭ್ಯಾಸ ಇವೆಲ್ಲಾ ನಮ್ಮಿಂದ ಸಾಧ್ಯವೇ ಅಂತ ಯೋಚಿಸಿ ಚಿಂತೆಯಾಗ್ಬಿಟ್ಟಿದೆ..."
ಮಾಸ್ತರರೆಂದರು... "
'ಅವಿನಾಶ್ ಚಿಂತಿಸಬೇಡ. ಒಂದು ಪ್ಯಾಕೇಜ್ ಇದೆ... ಇದು ಸ್ವಲ್ಪ ದೊಡ್ಡ ಪ್ಯಾಕೇಜ್. ಡಿಗ್ರಿ ಮುಗಿಯೋವರೆಗೂ ನೋಡ್ಕೋತಾರೆ. ಮಗುವನ್ನ ತಿಂಗಳಿಗೊಮ್ಮೆ ಹೋಗಿ ನೋಡ್ಕೊಂಡು ಬರಬಹುದು. ಅಡ್ರೆಸ್ ಬರೆದುಕೋ...'
ಅವಿನಾಶ್ ಮನದಲ್ಲಂದುಕೊಂಡ.
'ನನ್ನ ಜೀವನದ ಪ್ರತಿ ಹಂತದಲ್ಲೂ ನೆರವಾಗಿದ್ದಾರೆ. ದೇವರಂಥಾ ಮಾಸ್ತರರಿವರು!' ಅಡ್ರೆಸ್ ಬರೆದುಕೊಂಡು ಅವರಿಗೆ ನಮಸ್ಕರಿಸಿ, ಧನ್ಯವಾದಗಳನ್ನ ಹೇಳಿ ಅಲ್ಲಿಂದ ಹಿಂತಿರುಗಿದ...
ಅನೇಕ ವರ್ಷಗಳು ಉರುಳಿದವು....
ವಿನಾಯಕ ಮಾಸ್ತರನ್ನ ಹುಡುಕಿಕೊಂಡು ಒಬ್ಬ ಯುವಕ ಬರ್ತಾನೆ... ಮಾಸ್ತರರ ಕಣ್ಣುಗಳು ಇತ್ತೀಚೆಗೆ ಮಂಜಾಗತೊಡಗಿವೆ. ನೆನಪಿನ ಶಕ್ತಿಯೂ ಕುಂದಿದೆ.
ಯುವಕ ತನ್ನನ್ನ ಅವಿನಾಶನ ಮಗ ವಿಕಾಸನೆಂದು ಪರಿಚಯಿಸಿಕೊಂಡ.
"ಓ... ಅವಿನಾಶನ ಮಗನೇ... ಹೇಗಿದೀಯ ಮಗೂ...?"
"ಚೆನ್ನಾಗಿದೀನಿ ಮಾಸ್ತರ್... ಪಪ್ಪ ತಮ್ಮ ಬಗ್ಗೆ ಮಾತಾಡದ ದಿನವಿಲ್ಲ.
'"ಸರ್ ನಾನು ತಮ್ಮಲ್ಲಿಗೆ ಬಂದಿರೋ ಉದ್ದೇಶವೆಂದರೆ ಪಪ್ಪನಿಗೂ, ಮಮ್ಮಿಗೂ ನೆನಪಿನ ಶಕ್ತಿ ತುಂಬಾ ಕಡಿಮೆಯಾಗಿದೆ. ಏನೇನೋ ಮಾತಾಡ್ತಾರೆ... ಮಕ್ಕಳ ಹಾಗೆ ಹಟ ಮಾಡ್ತಾರೆ. ವಯಸ್ಸು ಕೂಡಾ ಹೆಚ್ಚಾಗಿದೆ. ನನ್ನದು ತುಂಬಾ ದೊಡ್ಡ ಹುದ್ದೆ. ಪತ್ನಿಯದೂ ದೊಡ್ಡ ಹುದ್ದೆ. ನಮಗೆ ಅವರನ್ನ ನೋಡಿಕೊಳ್ಳಲು ಸಮಯವೇ ಇಲ್ಲ. ಅಲ್ಲದೇ ಆಕೆ ಇವನ್ನೆಲ್ಲಾ ಸುಧಾರಿಸಿಕೊಂಡು ಹೋಗುವ ಹಳ್ಳಿಯ ಹುಡುಗಿಯಲ್ಲ..."
ಮಾಸ್ತರರಿಗೆ ಎಲ್ಲವೂ ಅರ್ಥವಾಗಿಬಿಡ್ತು.
'ಹೆದರಬೇಡ ವಿಕಾಸ್. ಒಂದು ಪ್ಯಾಕೇಜ್ ಇದೆ... ಒಳ್ಳೆಯ ಪರಿಚರಣೆಯಿಂದ ನೋಡಿಕೊಳ್ಳುವ ಒಂದು ಪ್ಯಾಕೇಜ್..... ಸಾವನ್ನಪ್ಪಿದರೆ ಅವರವರ ಮತಪ್ರಕಾರ ಶವಸಂಸ್ಕಾರವನ್ನೂ ಮಾಡುತ್ತಾರೆ.... ಸಾಧಾರಣ ವೃದ್ಧಾಶ್ರಮ ಎಂದೇ ಹೇಳಬಹುದು..... ಅಡ್ರೆಸ್ ಮತ್ತು ಫೋನ್ ನಂಬರ್ ಬರೆದುಕೋ..."
ವಿಕಾಸ್ ಸಂತೋಷದಿಂದ ಅಡ್ರೆಸ್ ಮತ್ತು ಫೋನ್ ನಂಬರನ್ನ ಬರ್ಕೊಂಡ. ನಂಬರನ್ನ ಮತ್ತೊಮ್ಮೆ ಮಾಸ್ತರರ ಎದುರಿಗೆ ಓದಿ ಕೇಳಿಸಿ ಖಚಿತ ಪಡಿಸಿಕೊಂಡ... ಅವರಿಗೆ ನಮಿಸಿ ಅಲ್ಲಿಂದ ಹಿಂತಿರುಗಿದ ಅವನು ಕಣ್ಮರೆಯಾದ..
ಕೂಡಲೇ ಮಾಸ್ತರರ ಕಣ್ಣಿಂದ ಎರಡು ಹನಿ ಕಣ್ಣೀರುದುರಿತು...
ಮಾಸ್ತರರು ಯೋಚಿಸಿದರು... "ನಾವು ಏನನ್ನು ಕೊಡ್ತೀವೋ ಅದುವೇ ನಮಗೆ ಮರಳಿ ಸಿಗುವುದು..."
ಹೆಚ್ಚಿಗೆ ಬೇಕೆಂದರೆ ಸಿಗುವುದೇ...
ಅದೇ ಅವಿನಾಶ ಮೊದಲು ಮಗುವಿಗೆ ಪ್ರೀತಿ ತೋರಿಸಿದ್ದರೆ
ಈ ರೀತಿಯ ಪರಿಸ್ಥಿತಿ ಬರುತ್ತಾ ಇತ್ತೆ???
No comments:
Post a Comment