ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Thursday, June 4, 2020

ರುದ್ರಪ್ರಯಾಗದ ಭಯಾನಕ ನರಭಕ್ಷಕ

ಪುಸ್ತಕ:- ರುದ್ರಪ್ರಯಾಗದ ಭಯಾನಕ ನರಭಕ್ಷಕ
ಮೂಲ ಲೇಖಕರು:- ಜಿಮ್ ಕಾರ್ಬೆಟ್
ಅನುವಾದಕರು:- ಪೂರ್ಣಚಂದ್ರ ತೇಜಸ್ವಿ

ಜಿಮ್ ಕಾರ್ಬೆಟ್‌ರವರ ಸಾಹಸ ಸತ್ಯಕಥೆ 'ರುದ್ರಪ್ರಯಾಗದ ನರಭಕ್ಷಕ' ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಖ್ಯಾತ ಕೃತಿಯಾಗಿದೆ. ಇಂತಹ ಶ್ರೇಷ್ಠ ಕೃತಿಯನ್ನು ಕನ್ನಡಿಸಿ ಕನ್ನಡ ಸಾಹಿತ್ಯಾಸಕ್ತರಿಗೆ ಊಣಬಡಿಸಿದ ಶ್ರೇಯಸ್ಸು ಪೂರ್ಣಚಂದ್ರ ತೇಜಸ್ವಿಯವರಿಗೆ ಸಲ್ಲುತ್ತದೆ.
ಹಿಮಾಲಯದ ತಪ್ಪಲಿನ ಪುಣ್ಯಕ್ಷೇತ್ರಗಳಾದ ಕೇದರನಾಥ,ಬದರೀನಾಥಗೆ ಹೋಗುವ ಮಾರ್ಗದಲ್ಲಿನ ಮಂದಾಕಿನಿ ಅಲಕನಂದಾ ನದಿಗಳ ಸಂಗಮ ಸ್ಥಳವೇ ಈ ರುದ್ರಪ್ರಯಾಗ.. ಹೀಗೆ ಸಂಗಮಗೊಂಡ ನದಿ ಮುಂದೆ ಗಂಗಾನದಿಯಾಗಿ ಹರಿಯುತ್ತದೆ..
ರುದ್ರಪ್ರಯಾಗದ ಸುತ್ತಮುತ್ತಲಿನ ಕಾಡಿನಲ್ಲಿ ವಾಸವಾಗಿದ್ದ ಚಿರತೆಯು ತನ್ನ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡು ನರಮನುಷ್ಯರನ್ನು ಕೊಲ್ಲಲು ಪ್ರಾರಂಭಿಸುತ್ತದೆ. ಹೀಗೆ ರುದ್ರಪ್ರಯಾಗ ಮತ್ತು ಕೇದಾರನಾಥ ಯಾತ್ರಾ ಮಾರ್ಗದ ಅನೇಕರನ್ನು ಕೊಂದು ತಿಂದ ಈ  ಚಿರತೆಯು "ರುದ್ರಪ್ರಯಾಗದ ನರಭಕ್ಷಕ" ಎಂದೇ ಪ್ರಸಿದ್ಧಿಯನ್ನು ಪಡೆಯಿತು.
ಚಿರತೆಗಳು ಸಾಮಾನ್ಯವಾಗಿ ಪ್ರಾಣಿಗಳನ್ನು ಬೇಟೆಯಾಡುವುದರ ಮೂಲಕ ಇಲ್ಲವೇ ಸತ್ತ ಪ್ರಾಣಿಗಳನ್ನು ತಿಂದು ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತವೆ. ಆದರೆ ಈ ಚಿರತೆಯು ನರ ಮಾನವರನ್ನು ಬೇಟೆಯಾಡಲು ಪ್ರಾರಂಭಿಸಿದ ಹಿನ್ನಲೆಗೆ ಮನುಷ್ಯನೇ ಕಾರಣನಾಗಿರುತ್ತಾನೆ..!?
ಈ ಚಿರತೆಯು ರುದ್ರಪ್ರಯಾಗದ ಸುತ್ತಮುತ್ತಲಿನ ಹಳ್ಳಿಯವರಲ್ಲಿ ಎಷ್ಟರಮಟ್ಟಿಗೆ ಭೀತಿಯನ್ನು ಹುಟ್ಟಿಸಿತು ಎಂದರೆ ಇದು ಚಿರತೆಯ ಕೆಲಸವಲ್ಲ ಪಿಶಾಚಿಯ ಕೆಲಸ ಎಂದೇ ಜನರು ನಂಬಿದ್ದರು..

ರುದ್ರಪ್ರಯಾಗದ ನರಭಕ್ಷಕನ ಮೊದಲ ನರಬಲಿ ಸರ್ಕಾರಿ ದಾಖಲೆಗಳ ಪ್ರಕಾರ 1918 ಜೂನ್ 9 ನೇ ತಾರೀಕು.ಇದರ ಕೊನೆಯ ನರಬಲಿ 1924 ಏಪ್ರಿಲ್ 14.. ಈ ಕಾಲಾವಧಿಯಲ್ಲಿ ಸರ್ಕಾರಿ ದಾಖಲೆಗಳ ಪ್ರಕಾರ ಈ ನರಭಕ್ಷಕ ಕೊಂದು ತಿಂದಿರುವ ಮನುಷ್ಯರು ಒಟ್ಟು 124.. ದಾಖಲೆಗಳೇ ಇಲ್ಲದೆ ಅದೆಷ್ಟೋ ಜನರನ್ನು ಮತ್ತು ಪ್ರಾಣಿಗಳನ್ನು ಇದು ಬಲಿ ಪಡೆದಿತ್ತು..
ಈ ನರಭಕ್ಷಕ ಚಿರತೆಯ ಕಾರ್ಯಕ್ಷೇತ್ರ ರುದ್ರಪ್ರಯಾಗ ಒಳಗೊಂಡಂತೆ ಸುಮಾರು ಐದುನೂರು ಚದುರ ಮೈಲು ಪ್ರದೇಶವನ್ನು ಹೊಂದಿತ್ತು. ಇದರಲ್ಲಿ ಬರುವ ಹತ್ತಾರು ಹಳ್ಳಿಗಳಲ್ಲಿ ಇದು ನರ ಬೇಟೆಯನ್ನು ಮಾಡುತ್ತಿತ್ತು.
ಸರ್ಕಾರ ಎಷ್ಟೇ ಪ್ರಯತ್ನವನ್ನು ಪಟ್ಟರೂ ಸಹ ಈ ಚಿರತೆಯನ್ನು ಕೊಲ್ಲಲು ಸಾಧ್ಯವಾಗುತ್ತಿರಲಿಲ್ಲ ಕಾರಣ ಇದರ ವಿಶಾಲ ಕಾರ್ಯಕ್ಷೇತ್ರವಾಗಿತ್ತು.
ನೈನಿತಾಲ್‌ನಲ್ಲಿ ವಾಸವಾಗಿದ್ದ ಜಿಮ್ ಕಾರ್ಬೆಟ್ ತನ್ನ ಮಿತ್ರರೊಡನೆ ಸೇರಿ ಹೇಗಾದರೂ ಮಾಡಿ ನರಭಕ್ಷಕನನ್ನು ಬೇಟೆಯಾಡಲು ನಿರ್ಧರಿಸುತ್ತಾರೆ. ಚಿರತೆ ಎಷ್ಟು ಚಾಣಾಕ್ಷತೆ ಹೊಂದಿತ್ತು ಎಂದರೆ ಹಲವು ಶಿಕಾರಿ ಮಾಡುವವರಿಗೆ ಚಳ್ಳೆಹಣ್ಣು ತಿನ್ನಿಸಿ ಪಾರಾಗುತ್ತಿತ್ತು..

ಈ ನರಭಕ್ಷಕನನ್ನು ಕೊಲ್ಲುವ ಉದ್ದೇಶದಿಂದ ಜಿಮ್ ಕಾರ್ಬೆಟ್ ರುದ್ರಪ್ರಯಾಗದ ಸುತ್ತಮುತ್ತಲಿನ ಕಾಡಿನಲ್ಲಿ ನೂರಾರು ಮೈಲಿಗಳನ್ನು ಸುತ್ತುತ್ತಿದ್ದರು. ಚಿರತೆಯು ಕೊಂದು ತಿಂದು ಉಳಿದುಬಿಟ್ಟ ಪ್ರಾಣಿ,ಮನುಷ್ಯರ ದೇಹದ ಬಳಿಯಲ್ಲಿ ಮಚಾನು (ಬೇಟೆಯಾಡಲು ಅಡಗಿ ಕುಳಿತುಕೊಳ್ಳವ ಸ್ಥಾನ) ಕಟ್ಟಿಕೊಂಡು ಹಲವಾರು ರಾತ್ರಿಗಳನ್ನು ನಿದ್ದೆ ಇಲ್ಲದೆ ಚಿರತೆಗಾಗಿ ಕಾಯುತ್ತಿದ್ದರು. ಪ್ರತಿಸಲವೂ ನಿರಾಸೆ ಉಂಟಾಗುತ್ತಿತ್ತು. ಚಿರತೆಯ ಅದೃಷ್ಟವೋ ಅಥವಾ ಕಾರ್ಬೆಟ್‌ರ ದುರಾದೃಷ್ಟವೋ
ಚಿರತೆಯನ್ನು ಕೊಲ್ಲಲು ಜಿನ್ ಕತ್ತರಿಯನ್ನು,ಸೈನಾಡ್ ಪಾಷಣವನ್ನೂ ಹೀಗೆ ನಾನಾ ಪ್ರಯತ್ನಪಟ್ಟರೂ ಪ್ರತಿ ಬಾರಿ ಚಿರತೆ ತನ್ನ ಚಾಣಾಕ್ಷತನದಿಂದ ಪಾರಾಗಿ ನರಬೇಟೆ ಮುಂದುವರೆಸುತ್ತಿತ್ತು..

ಕೊನೆಗೆ ಯಾವ ರೀತಿ ಚಿರತೆಯನ್ನು ಕೊಂದು ಜನರಿಗೆ ನೆಮ್ಮದಿ ಬದುಕನ್ನು ಕಟ್ಟಿಕೊಳ್ಳಲು ನೆರವು ಮಾಡಿದರು ಎಂಬ ರೋಚಕ ಘಟನೆಗಳನ್ನು ಪುಸ್ತಕ ಓದಿಯೇ ಸವಿಯಬೇಕು..

ನೂರಾರು ಜನರನ್ನು ಕೊಂದು ತಿಂದ ಚಿರತೆಯ ಅಂತ್ಯವಾದಾಗ ನನಗೆನ್ನಿಸಿದ್ದು ಅದು ಮಾಡಿದ ಒಂದೇ ತಪ್ಪೆಂದರೆ ತನ್ನ ಆಹಾರವನ್ನು ಪ್ರಾಣಿಗಳ ಮಾಂಸದಿಂದ ಮನುಷ್ಯರ ಮಾಂಸಕ್ಕೆ ಬದಲಿಸಿಕೊಂಡಿದ್ದು ಮಾತ್ರ..

1 comment:

shobha said...

Great Book...ur Inspiration Imam ji